ಮಾನವ ಮತ್ತು ಅವನೊಳಗಿನ ಜೀವತಂತು..!.
ಓ ಜೀವವೇ,
ನೀನೆಷ್ಟು ಮನಮೋಹಕ,
ನೀನೆಷ್ಟು ಹಿತಚಿಂತಕ,
ನೀನೆಷ್ಟು ನಯವಂಚಕ,
ನಿನ್ನೊಳಗೆ ಕಾಣದ ಪ್ರೀತಿಯು ಅಡಗಿದೆ,
ಸ್ನೇಹವು ಅಡಗಿದೆ,
ಅಸೂಯೆಯು ಅಡಗಿದೆ,
ನಿನ್ನೊಳಗಿನ ಅಂತರಾತ್ಮವನ್ನು
ಯಾರಿಂದಲೂ ಅರಿಯಲು ಸಾಧ್ಯವೇ ಇಲ್ಲವೇನೊ?.
ನೀನೊಂದು ಸದಾ ಪುಟಿಯುವ ಜೀವತಂತು,
ನೀನೆಂದು ಸದಾ ಚಟುವಟಿಕೆಯಿಂದಿರುವ ಜಲಪಾತ,
ನೀನೆಂದು ಪರರ ಹಿತಕ್ಕಾಗಿ ದುಡಿಯುವ ಕಾಲಾಳು,
ನೀನೆಂದು ಪರರನ್ನೆ ಕೊಲ್ಲುವುದಕ್ಕಾಗಿ ಕಾಯುವ ಮಾಯಾಮೃಗ,
ಏನೆಲ್ಲ ಅಡಗಿಸಿಕೊಂಡಿರುವೆ ನಿನ್ನಲ್ಲಿ ?
ಮಾನವರೂಪಿಯ ಒಡಲಲ್ಲಿ ಕುಳಿತು,
ಬ್ರಹಾಂಡವನ್ನೆ ಅರಿಯುವ ಕಲ್ಪನಾ ಚಾತುರ್ಯ,
ಗ್ರಹ ಮಂಡಲಗಳನ್ನೆ ಸುತ್ತಿಬಂದ ಶೌರ್ಯ,
ಒಂದೆಡೆ ಕುಳಿತು ವಿಶ್ವವನ್ನೆ ನಿಯಂತ್ರಿಸುತ್ತಿರುವ ನಿನ್ನ ಕ್ರಮಕ್ಕೆ.
ಸಾವಿರ ಸಾವಿರ ಪುಟಗಳನ್ನೇ ಪೋಣಿಸಬಹುದು.
ಹಾರುವ ಪಕ್ಷಿಯು ನೀನೆ,
ಹಾಡುವ ರಾಗವು ನೀನೆ,
ಕುಣಿಯುವ ನಾಟ್ಯವು ನೀನೆ,
ನಡೆದಾಡುವ ವಿಶ್ವಕೋಶವು ನೀನೆ,
ಕಡೆಗೆ ಪರಿತಪಿಸಿ ನೊಂದು ಮರೆಯಾಗುವ ಮಾಣಿಕ್ಯವು ನೀನೆ.
ಓ ಜೀವವೇ,
ಎಲ್ಲವನ್ನು ಅರಿತಿರುವ ಮಾನವನು
ನಿನ್ನನ್ನು ಅರಿಯಲು ಸಾಧ್ಯವಾಗುತ್ತಿಲ್ಲ,
ನಿನ್ನೊಳಗಿನ ಮರ್ಮವನ್ನು ತಿಳಿಯಲಾಗಲಿಲ್ಲ,
ನಿನ್ನ ಚಲನ ವಲನಗಳನ್ನು ಬಿಚ್ಚಿ ತೋರಲಾಗುತ್ತಿಲ್ಲ,
ನಿನ್ನ ಮುಂದೆ ಅವನ ಜೀವನ
ತೃಣ ಮಾತ್ರವಲ್ಲದೆ ಬೇರೇನೂ ಇಲ್ಲ.
ತನ್ನೊಳಗಿನ ಯೋಚನಾ ಲಹರಿಯಿಂದ
ಸಕಲವನ್ನು ಅರಿತುಕೊಂಡರು
ನಿನ್ನ ಗೆಲ್ಲಲು ಸಾಧ್ಯವಾಗಲೇ ಇಲ್ಲ,
ನಿನ್ನಯ ಮರುಹುಟ್ಟನ್ನು ಪಡೆಯಲಾಗಲಿಲ್ಲ.
ಆದರೂ ನಿನ್ನನ್ನು ಗೆಲ್ಲುತ್ತೇನೆಂಬ ಅಹಂಕಾರವಂತು ಇದೆ,
ನಿನ್ನೊಳಗಿನ ಮರ್ಮವನ್ನೆಲ್ಲ ತಿಳಿದು,
ಚಿರಂಜೀವಿಯಾಗುವ ಯೋಚನೆಯಲ್ಲಿ
ಪ್ರಯತ್ನಶೀಲ ಕಾರ್ಯಗಳಂತು ನಡೆಯುತ್ತಲೇ ಇವೆ
ಸಾವಿನ ಬೆನ್ನತ್ತಿ ಸಾಗುತಿರುವ ಪರಾಕ್ರಮಗಳಿಗೇನು ಕೊರತೆಯಿಲ್ಲ.
ಏನೇ ಆಗಲಿ,,
ನಿನ್ನ ತನವನ್ನು ನೀ ಬಿಟ್ಟುಕೊಡದೆ
ಮಾನವನ ಆಯಸ್ಸನ್ನು ನಿಯಂತ್ರಿಸುತ್ತಾ ಬರುತ್ತಿರುವ
ನಿನ್ನ ಕ್ರಮಕ್ಕೆ ಶಿರಬಾಗಿ ವಂದಿಸುತ್ತೇನೆ.
ವಸಂತ್
Comments
ಉ: ಮಾನವ ಮತ್ತು ಅವನೊಳಗಿನ ಜೀವತಂತು..!.
In reply to ಉ: ಮಾನವ ಮತ್ತು ಅವನೊಳಗಿನ ಜೀವತಂತು..!. by kavinagaraj
ಉ: ಮಾನವ ಮತ್ತು ಅವನೊಳಗಿನ ಜೀವತಂತು..!.