ಮಾಯಾದ್ವೀಪ - ಜಾನಪದ ಕಥೆ ಭಾಗ ೪

ಮಾಯಾದ್ವೀಪ - ಜಾನಪದ ಕಥೆ ಭಾಗ ೪

ವೇದಿಕೆಯಲ್ಲಿ ಮೇಘನಂದಿನಿ ಕಾಣದಿದ್ದಾಗ ಎಲ್ಲರೂ ಕಂಗಾಲಾಗಿ ಹುಡುಕತೊಡಗಿದರು. ರಾಜನು ಕೂಡಲೇ ಸ್ವಯಂವರವನ್ನು ನಿಲ್ಲಿಸಿ ಬಂದಿದ್ದ ಅತಿಥಿಗಳಲ್ಲಿ ಕ್ಷಮೆ ಕೋರಿ ಎಲ್ಲರನ್ನೂ ಬೀಳ್ಕೊಟ್ಟು ಅರಮನೆಯ ಒಳಗೆ ಹೋಗಿ ತುರ್ತು ಸಭೆಯಯೊಂದನ್ನು ಕರೆದನು . ಸೇನಾಪತಿಯನ್ನು ಕರೆದು ನಾಲ್ಕು ಗುಂಪುಗಳಾಗಿ ವಿಂಗಡಿಸಿ ನಾಲ್ಕು ದಿಕ್ಕುಗಳಲ್ಲೂ ಮೇಘನಂದಿನಿಯನ್ನು ಹುಡುಕಲು ಹೊರಡಿ ಎಂದು ಆಜ್ಞಾಪಿಸಿದನು. ಅಂಬಿಕಾದೇವಿಯ ರೋದನೆ ಮುಗಿಲು ಮುಟ್ಟುತ್ತಿತ್ತು. ವೀರಪ್ರತಾಪನಿಗೆ ದಿಕ್ಕೇ ತೋಚದೆ ಕುಳಿತಿದ್ದಾಗ ಪಂಡಿತರು ಹೇಳಿದ್ದ ಮಾತು ನೆನಪಿಗೆ ಬಂತು. ಬಹುಷಃ ಇನ್ನು ನಮ್ಮ ಮೇಘನಂದಿನಿ ಮರಳಿ ಬರುವುದಿಲ್ಲವೇನೋ ಎಂದು ಅನಿಸತೊಡಗಿತು. ರಾಜನ ಆಜ್ಞೆಯಂತೆ ಹೋರಾಟ ನಾಲ್ಕು ಗುಂಪುಗಳು ನಾಲ್ಕು ದಿಕ್ಕುಗಳಲ್ಲೂ ಹುಡುಕಿ ನಾಲ್ಕನೇ ದಿವಸದಂದು ರಾಜ್ಯಕ್ಕೆ ಮರಳಿದರು.  ಎಲ್ಲಿಯೂ ಮೇಘನಂದಿನಿಯ ಸುಳಿವು ಸಿಗದಿದ್ದು ಕೇಳಿ ರಾಜನಿಗೆ ಖಚಿತವಾಯಿತು. ಅಲ್ಪಾಯುಷಿಯಾದ ಮೇಘ ನಂದಿನಿ ಇಷ್ಟು ಬೇಗ ನಮ್ಮನ್ನು ಬಿಟ್ಟು ಹೋಗುವಳೆಂದು ಕನಸಿನಲ್ಲಿಯೂ ಊಹಿಸಿರಲಿಲ್ಲ ಎಂದು ಅಂಬಿಕಾದೇವಿ ಕೊರಗುತ್ತಿದ್ದಳು. ಸತ್ಯದ ಅರಿವು ಇದ್ದ ವೀರಪ್ರತಾಪ ಹೆಚ್ಚು ಕೊರಗದೆ ಮೇಘನಂದಿನಿ ಇದ್ದಕ್ಕಿದ್ದಂತೆ ಮಾಯವಾಗಲು ಕಾರಣವೇನು ಎಂದು ಹುಡುಕುತ್ತಿದ್ದ. 

ಮರುದಿನ ಅಮಾವಾಸ್ಯೆ. ಇತ್ತ ದ್ವೀಪದಲ್ಲಿ ವಿಕಟಾಕ್ಷ ಮರುದಿನ ಪೂಜೆಗೆ ಎಲ್ಲವನ್ನೂ ಸಿದ್ಧಪಡಿಸುತ್ತಿದ್ದ.   ಮೇಘನಂದಿನಿ ನಾಲ್ಕು ದಿನಗಳಿಂದ ಅನ್ನಾಹಾರವಿಲ್ಲದೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಮಲಗಿದ್ದಾಳೆ. ವಿಕಟಾಕ್ಷ ಮಾತ್ರ  ನಾಳೆಯಿಂದ ಇಡೀ ಪ್ರಪಂಚ ನನ್ನ ಕೈವಶವಾಗುವುದು, ನಾನೇ ಅಧಿಪತಿ ಎಂದು ಸಂಭ್ರಮದಲ್ಲಿ ಪೂಜೆಗೆ ತಯಾರಾಗುತ್ತಿದ್ದ. ಇನ್ನು ಕೆಲವೇ ಗಂಟೆಗಳು ಬಾಕಿ ಉಳಿದಿದೆ ನನ್ನ ಕನಸು ನನಸಾಗಲು ಎಂದು ಮೇಘನಂದಿನಿಯ ಬಳಿ ಬಂದು ಆಕೆಯ ಮೇಲೆ ಮೂಳೆಯ ಮಂತ್ರದಂಡ ಹಿಡಿದು ಯಾವುದೋ ಮಂತ್ರವನ್ನು ಉಚ್ಚರಿಸುತ್ತಿದ್ದ . ಕೂಡಲೇ ಪ್ರಜ್ಞಾಹೀನ ಸ್ಥಿತಿಯಿಂದ ಎಚ್ಚೆತ್ತುಗೊಂಡ ಮೇಘನಂದಿನಿ ವಿಕಟಾಕ್ಷನ ಮಾಯೆಗೆ ಒಳಗಾಗಿದ್ದಳು. ನೇರವಾಗಿ ನಿಂತು ಅವನ ಆದೇಶದಂತೆ ಸಮುದ್ರದಲ್ಲಿಮಿಂದು ಬಂದು ಅಲ್ಲಿದ್ದ ವಿಗ್ರಹದ ಮುಂದೆ ಕುಳಿತಳು.  ವಿಕಟಾಕ್ಷ ಸುಮಾರು ಹೊತ್ತು ಮಂತ್ರಗಳನ್ನು ಜಪಿಸುತ್ತಾ ಹೋಮ ಕಂಡಕ್ಕೆ ಅರಿಶಿನ ಕುಂಕುಮ ಬೂದಿಯನ್ನು ಎರಚಿ ಪೂಜೆ ಮಾಡುತ್ತಿದ್ದ. ಎಲ್ಲ ಪೂಜೆ ಮುಗಿಸಿ ಕೊನೆಯದಾಗಿ ಬಲಿಯ ಹಂತಕ್ಕೆ ಬಂದು ನಿಂತ. ಮೇಘನಂದಿನಿ ಬಲಿಪೀಠದ ಮೇಲೆ ಸಿದ್ಧಳಾಗಿ ಕುಳಿತಿದ್ದಾಳೆ. ವಿಕಟಾಕ್ಷ ಜೋರಾಗಿ ಗಹಗಹಿಸಿ ನಗುತ್ತಾ ತನ್ನ ಕತ್ತಿಯನ್ನು ಮೇಲಕ್ಕೆ ಎತ್ತಿ ಒಂದೇ ಏಟಿಗೆ ಮೇಘ ನಂದಿನಿಯ ಮುಂಡದಿಂದ ರುಂಡವ ಬೇರ್ಪಡಿಸಿದ್ದ. ದೇವಿಯ ವಿಗ್ರಹಕ್ಕೆ ರಕ್ತವನ್ನು ಅಭಿಷೇಕ ಮಾಡಲು ಮುಂದಾದಾಗ ಅಶರೀರವಾಣಿ ಮೊಳಗಿತು. ಎಲವೊ ಮೂಢ ಅಪಚಾರ ಮಾಡಿದೆಯಲ್ಲೋ ಯಾರನ್ನು ಬಲಿ ಕೊಡಲು ಯಾರನ್ನು ಕೊಟ್ಟೆ? ನಿನ್ನ ಸಂಕಲ್ಪ ಈಡೇರುವುದಿಲ್ಲ ಹ..ಹ..ಹ ಎಂದು ಜೋರಾಗಿ ನಗತೊಡಗಿತು. ವಿಕಟಾಕ್ಷನಿಗೆ ಒಂದು ಕ್ಷಣ ತಾನು ನಿಂತ ಭೂಮಿ ಕುಸಿಯುತ್ತಿರುವಂತೆ ಭಾಸವಾಯಿತು ಹುಚ್ಚನಂತೆ ಕಿರುಚಲು ಶುರುಮಾಡಿದ ಮಾತಾ ಏನು ನೀನು ಹೇಳುತ್ತಿರುವುದು ಹೌದು ಕಣೋ ಮೂಢ ನೀನು ಬಲಿ ಕೊಡಬೇಕಿದ್ದ ಬಾಲೆ ಇವಳಲ್ಲವೋ. ಹಾಗಿದ್ದರೆ ಇನ್ಯಾರು ಮಾತಾ. ಅದೇ ವಸಂತಪುರದ ಅರಮನೆಯಲ್ಲಿ ಇನ್ನೊಬ್ಬಳು ಕನ್ಯೆ ಇದ್ದಾಳೆ ಅವಳು ಅಪ್ರತಿಮ ಸುಂದರಿ ಅವಳನ್ನು ಬಲಿ ಕೊಡಬೇಕಿತ್ತು. ಮಾತಾ ಅದಕ್ಕೇನಂತೆ ಈ ಕೂಡಲೇ ಅವಳನ್ನು ಕರೆತಂದು ನಿನಗೆ ಅರ್ಪಿಸುತ್ತೇನೆ.  ಅದು ಸಾಧ್ಯವಿಲ್ಲ ಮಹೂರ್ತ ಮೀರಿ ಹೋಗಿದೆ. ಮತ್ತೆ ನೀನು ಆಕೆಯನ್ನು ಬಲಿ ಕೊಡಬೇಕೆಂದರೆ ಇನ್ನು ಮೂರು ತಿಂಗಳ ನಂತರ ಬಲಿಪಾಡ್ಯಮಿ ಹಾಗೂ ನರಕ ಚತುರ್ದಶಿ ಮಧ್ಯದಲ್ಲಿ ಬರುವ ಅಮಾವಾಸ್ಯೆಯಂದು ಸೂರ್ಯ ನಡುನೆತ್ತಿಗೆ ಬರುವ ಸಮಯಕ್ಕೆ ಬಲಿ ಕೊಡಬೇಕು. ಅಲ್ಲಿಯವರೆಗೂ ನೀನೇನೂ ಮಾಡಿದರೂ ನಿನ್ನ ಕಾರ್ಯ ಸಿದ್ಧಿಸುವುದಿಲ್ಲ. ಹದಿನೆಂಟು ವರ್ಷಗಳಿಂದ ಕಾದು ಈಗ ತನ್ನ ಕಾರ್ಯ ಸಿದ್ಧಿಸಲಿಲ್ಲ ಎಂದು  ಹುಚ್ಚನಂತಾಗಿದ್ದ ವಿಕಟಾಕ್ಷ. ಎದುರಿಗಿದ್ದ ಮೇಘ ನಂದಿನಿಯ ದೇಹವನ್ನು ಕೋಪದಲ್ಲಿ ಮತ್ತಷ್ಟು ಕಡಿದು ಹಾಕಿ ಜೋರಾಗಿ ಕಿರುಚಿತ್ತಿದ್ದ.

ಮೇಘ ನಂದಿನಿಯ ಆಯುಷ್ಯದ ಬಗ್ಗೆ ಮುಂಚೆಯೇ ತಿಳಿದಿದ್ದರಿಂದ ಅಂಬಿಕಾದೇವಿ ಹಾಗೂ ವೀರಪ್ರತಾಪ ಸುಧಾರಿಸಿಕೊಳ್ಳಲು ಹೆಚ್ಚು ದಿನ ಬೇಕಿರಲಿಲ್ಲ. ಆದರೆ ಮೇಘ ನಂದಿನಿಯ ಕಾಣೆಗೆ ಕಾರಣ ಮಾತ್ರ ಗೊತ್ತಾಗಿರಲಿಲ್ಲ. ಹೀಗಿರಲು ಒಂದು ದಿನ ಪಂಡಿತರು ತಾವಾಗಿಯೇ ಅರಮನೆ ಬಳಿ ಬಂದು ರಾಜನನ್ನು ಕಾಣಬೇಕೆಂದು ತಿಳಿಸಿದರು. ಕೂಡಲೇ ಒಳಗೆ ಹೋದ ದ್ವಾರಪಾಲಕ ವೀರಪ್ರತಾಪನಿಗೆ ಸುದ್ದಿ ತಿಳಿಸಿದ. ಆಶ್ಚರ್ಯಭರಿತವಾಗಿ ವೀರಪ್ರತಾಪನು ತಾನೇ ಹೊರಬಂದು ಪಂಡಿತರನ್ನು ಒಳಗೆ ಕರೆದೊಯ್ದನು. ರಾಜನ ಮುಖದಲ್ಲಿದ್ದ ಚಿಂತೆಯನ್ನು ಕ್ಷಣಮಾತ್ರದಲ್ಲಿ ಗ್ರಹಿಸಿದ ಪಂಡಿತರು ಯಾಕೆ ವೀರಪ್ರತಾಪ ಚಿಂತಾಕ್ರಾಂತನಾಗಿದ್ದೀಯ ಎಂದು ಕೇಳಲು ನಡೆದ ವಿಷಯವನ್ನು ತಿಳಿಸಿದನು. ಪಂಡಿತರು ನನಗೆ ಒಂದು ಖಾಲಿ ಕೋಣೆ ಹಾಗೆಯೇ ನಿಮ್ಮಿಬ್ಬರ ಮಕ್ಕಳ ಜಾತಕವನ್ನು ಕೊಡು ಎಂದು ಕೇಳಿದರು. ಅದರಂತೆಯೇ ಎರಡೂ ಜಾತಕವನ್ನು ತೆಗೆದುಕೊಂಡು ಪಂಡಿತರು ದೇವ ಮಂದಿರಕ್ಕೆ ಹೋಗಿ ಬಾಗಿಲು ಹಾಕಿಕೊಂಡರು. ಕೆಲ ಕಾಲದ ನಂತರ ಆಚೆ ಬಂದ ಪಂಡಿತರು ಗಾಭಾರಿಯಾಗಿದ್ದಂತೆ ಕಂಡುಬಂದಿತು. ವೀರಪ್ರತಾಪನು ಕಾರಣ ಕೇಳಲು ನಿಮ್ಮ ಮಗಳು ಮೇಘ ನಂದಿನಿ ಈ ಲೋಕವನ್ನು ತ್ಯಜಿಸಿದ್ದಾಳೆ. ಅವಳನ್ನು ಹೊತ್ತೊಯ್ದು ಅವಳ ಸಾವಿಗೆ ಕಾರಣನಾದವನು ಒಬ್ಬ ಕ್ಷುದ್ರ ಮಾಂತ್ರಿಕ. ಇನ್ನೊಂದು ವಿಷಯ ಆ ಮಾಂತ್ರಿಕನಿಂದ ನಿಮ್ಮ ಮಗಳು ಹಂಸಾನಂದಿನಿಗೆ ಕೂಡ ಆಪತ್ತಿದೆ

ಸುದ್ದಿಯನ್ನು ಕೇಳಿದ ಕೂಡಲೇ ವೀರಪ್ರತಾಪನಿಗೆ ಕಂಗಾಲಾಯಿತು. ಮಹಾಸ್ವಾಮಿ ಏನಿದು ತಾವು ಹೇಳುತ್ತಿರುವುದು ಈಗಲೆ ಒಬ್ಬ ಮಗಳನ್ನು ಕಳೆದುಕೊಂಡು ದುಖದಿಂದ ಈಗಷ್ಟೇ ಚೇತರಿಸಿಕೊಳ್ಳುತ್ತಿದ್ದೇವೆ ಆಗಲೇ ಇಂತಹ ಆಘಾತಕಾರಿ ಸುದ್ದಿ ಹೇಳುತ್ತಿದ್ದೀರಿ. ಇದಕ್ಕೆ ಪರಿಹಾರವೇ ಇಲ್ಲವೇ? ಯಾರದು ಮಾಂತ್ರಿಕ ? ನನ್ನ ಸೈನ್ಯವನ್ನು ಕಳುಹಿಸಿ ಅವನನ್ನು ನಾಶ ಮಾಡಿಬಿಡುತ್ತೇನೆ ಎಂದು ಹೇಳಿದ. ಅದಕ್ಕೆ ಪಂಡಿತರು ಅವನು ಸಾಮಾನ್ಯನಲ್ಲ. ಅವನು ಕ್ಷುದ್ರ ಶಕ್ತಿಗಳನ್ನು ವಶಪಡಿಸಿಕೊಂಡಿರುವ ದುಷ್ಟ ಮಾಂತ್ರಿಕ. ನಿಮ್ಮ ಮಗಳು ದೀರ್ಘಾಯುಷಿ ಅವನಿಂದ ನಿಮ್ಮ ಮಗಳ ಪ್ರಾಣಕ್ಕೆ ಅಪಾಯವಂತೂ ಇಲ್ಲ. ಆದರೆ ಅವನು ತನ್ನ ಕಾರ್ಯ ಸಿಧ್ಚಿಗಾಗಿ ನಿಮ್ಮ ಮಗಳನ್ನು ಅಪಹರಿಸಲು ಯತ್ನಿಸುವುದಂತೂ ಖಚಿತ. ಅದಕ್ಕೆ ನಾನೊಂದು ಮಂತ್ರವನ್ನು ಉಪದೇಶ ಮಾಡುತ್ತೇನೆ ನಿಮ್ಮ ಮಗಳಿಗೆ ಅವಳು ಸಾಧ್ಯವಾದಷ್ಟು ಹೊತ್ತೂ ದೇವರ ಕೋಣೆಯನ್ನು ಬಿಟ್ಟು ಆಚೆ ಬರದಂತೆ ನೋಡಿಕೊಳ್ಳಿ. ಅವಳು ಅಲ್ಲಿದ್ದ ಹೊತ್ತು ಆ ಮಾಂತ್ರಿಕ ಏನೂ ಮಾಡಲು ಸಾಧ್ಯವಿಲ್ಲ. ಎಂದು ಹಂಸಾನಂದಿನಿಯನ್ನು ಕರೆದು ಮಂತ್ರವನ್ನು ಉಪದೇಶಿಸಿದರು. ಹಾಗೆಯೇ ಒಂದು ವಿಷಯ ವೀರಪ್ರತಾಪ. ಆ ಮಾಂತ್ರಿಕ ತನ್ನ ಪ್ರಾಣವನ್ನು ಒಂದು ಶೀಷೆಯಲ್ಲಿ ಬಂಧಿಸಿ ಸಾಗರದ ಆಚೆ ಇರುವ ಬೆಟ್ಟದ ಗುಹೆಯೊಂದರಲ್ಲಿ ಇರಿಸಿದ್ದಾನೆ. ಒಂದು ಆದೇಶ ಹೊರಡಿಸು ಯಾರು ಆ ಶೀಷೆಯನ್ನು ತಂದು ಕೊಡುತ್ತಾರೋ ಅವರಿಗೆ ನಿನ್ನ ಮಗಳನ್ನು ಕೊಟ್ಟು ಮದುವೆ ಮಾಡುವೆ ಎಂದು. ಏಕೆಂದರೆ ಆ ಶೀಷೆಯನ್ನು ತರುವುದು ಅಷ್ಟು ಸುಲಭವಲ್ಲ. ಅದಕ್ಕೆ ಅಪ್ರತಿಮ ಬಲವಂತನೆ ಬೇಕು. ಅಂತಹ ಬಲವಂತರು ಅಪರೂಪ. ಇದನ್ನೇ ನಿನ್ನ ಮಗಳ ಸ್ವಯಂವರ ಎಂದು ತಿಳಿದುಕೋ . ಇನ್ನು ಮೂರು ತಿಂಗಳು ನಾನು ಇಲ್ಲೇ ಪಕ್ಕದ ಪ್ರಾಂತದಲ್ಲಿ ಇರುತ್ತೇನೆ ಅಗತ್ಯ ಬಿದ್ದಲ್ಲಿ ನನಗೆ ಸಂದೇಶ ಕಳುಹಿಸು ನಾನು ಬಂದುಬಿಡುತ್ತೇನೆ ಎಂದು ಹೇಳಿ ಹೊರಟು ಹೋದರು
Rating
No votes yet

Comments