'ಮಾಯಾವತಿ ವಿಜಯ'ದ ಹಿಂದಿನ ಸತ್ಯಗಳು

'ಮಾಯಾವತಿ ವಿಜಯ'ದ ಹಿಂದಿನ ಸತ್ಯಗಳು

'ಮಾಯಾವತಿ ವಿಜಯ'ದ ಹಿಂದಿನ ಸತ್ಯಗಳು.

ಮೊನ್ನೆ ಉತ್ತರ ಪ್ರದೇಶದಲ್ಲಿ ನಡೆದ ಚುನಾವಣೆಗಳಲ್ಲಿ ಮಾಯಾವತಿಯವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವುದು ಒಂದು ಹೊಸ ರಾಜಕೀಯ ಪರ್ವದ ಆರಂಭ ಎಂದು ರಾಜಕೀಯ ವಿಶ್ಲೇಷಕರು ವ್ಯಾಖ್ಯಾನಿಸುತ್ತಿದ್ದಾರೆ. ಕೇವಲ ಎರಡು ದಶಕಗಳ ಸಕ್ರಿಯ ರಾಜಕಾರಣದಲ್ಲಿ, ಅದೂ ಒಂದು ದಶಕದಿಂದೀಚೆಗೆ ಏಕಾಂಗಿಯಾಗಿ ರಾಜಕಾರಣ ಮಾಡುತ್ತಾ ಬಂದ ದಲಿತ ಮಹಿಳೆಯೊಬ್ಬಳು ಯಾರ ಮುಲಾಜೂ ಇಲ್ಲದೆ, ಸ್ವಂತ ರಾಜಕೀಯ ಶಕ್ತಿಯ ಆಧಾರದ ಮೇಲೆ ರಾಷ್ಟ್ರದ ಅತಿ ದೊಡ್ಡ ಹಾಗೂ ರಾಜಕೀಯವಾಗಿ ಅತಿ ಮಹತ್ವವುಳ್ಳ ರಾಜ್ಯವೊಂದರ ಮುಖ್ಯಮಂತ್ರಿಯಾಗುವುದು ಸಾಮಾನ್ಯ ಸಂಗತಿಯಲ್ಲ. ಈ ದೃಷ್ಟಿಯಿಂದ ಮಾಯಾವತಿಯವರು ಅಭಿನಂದನಾರ್ಹರಷ್ಟೇ ಅಲ್ಲ, ಮುಂದಿನ ದಿನಗಳ ರಾಜಕಾರಣವನ್ನು ಗುಣಾತ್ಮಕವಾಗಿ ಬದಲಾಯಿಸಬಲ್ಲ ರೀತಿಯಲ್ಲಿ ಅವರು ಆಡಳಿತ ನಡೆಸಲಿ ಎಂಬ ಹಾರೈಕೆಗೂ ಬಾಧ್ಯರಾಗಿದ್ದಾರೆ.
ಆದರೆ ಈ ಉತ್ಸಾಹದಲ್ಲಿ ಉತ್ತರ ಪ್ರದೇಶ ಚುನಾವಣಾ ಫಲಿತಾಂಶವನ್ನು ರಾಜಕಾರಣದ ಹೊಸ ಪರ್ವವೆಂದು ಘೋಷಿಸುವಂತಹ ಕ್ರಾಂತಿಕಾರಕ ಬದಲಾವಣೆಯೇನೂ ಈ ಚುನಾವಣೆಯಲ್ಲಿ ಘಟಿಸಿಲ್ಲ ಎಂಬುದನ್ನೂ ನಾವು ಮರೆಯಬಾರದು. ಏಕೆಂದರೆ, ಮಾಯಾವತಿ ಉ.ಪ್ರ. ಮುಖ್ಯಮಂತ್ರಿಯಾಗುತ್ತಿರುವುದು ಇದು ಮೊದಲೇನಲ್ಲ; ಇದು ನಾಲ್ಕನೇ ಬಾರಿ. ಅಂದರೆ, ದಲಿತ ನಾಯಕತ್ವವನ್ನು ನಮ್ಮ ರಾಜಕಾರಣ ಈಗಾಗಲೇ ಒಪ್ಪಿಕೊಂಡಿದೆ. ಆದುದರಿಂದ ಇದೇನೂ ಹೊಸ ಬೆಳವಣಿಗೆಯಲ್ಲ. ಇನ್ನು ಮಾಯಾವತಿ ಈ ಚುನಾವಣೆ ಹೊತ್ತಿಗೆ ರೂಪಿಸಿಕೊಂಡ ಜಾತಿ ಸಮೀಕರಣವೂ ನಮ್ಮ ರಾಜಕಾರಣಕ್ಕೆ ಹೊಸದೇನೂ ಅಲ್ಲ. ಏಕೆಂದರೆ ಪ್ರತಿ ಚುನಾವಣೆಯಲ್ಲೂ ಹಲವು ಜಾತಿ ಸಮೀಕರಣಗಳ ಪ್ರಯೋಗಗಳು ನಡೆದೇ ಇರುತ್ತವೆ. ಕಾಂಗ್ರೆಸ್, ಬಿಜೆಪಿಗಳು ಅಧಿಕಾರ ಗದ್ದುಗೆ ಏರಿದ್ದೂ ಇಂತಹ ಜಾತಿ ಸಮೀಕರಣಗಳ ಯಶಸ್ಸಿನ ಆಧಾರದ ಮೇಲೇ. ಈಗ ಬಿ.ಎಸ್.ಪಿ. ಯಶಸ್ವಿಯಾಗಿ ಸಾಧಿಸಿರುವ ದಲಿತ+ಬ್ರಾಹ್ಮಣ+ಮುಸ್ಲಿಂ ಸಮೀಕರಣ 25 ವರ್ಷಗಳ ಹಿಂದಿನವರೆಗೆ ಕಾಂಗ್ರೆಸ್ ಯಶಸ್ವಿಯಾಗಿ ಪ್ರಯೋಗಿಸುತ್ತಿದ್ದ ಜಾತಿ ಸಮೀಕರಣವೇ ಆಗಿದೆ. ಒಂದು ಬದಲಾವಣೆ ಎಂದರೆ ಈ ಸಮೀಕರಣ ಈಗ ತಲೆಕೆಳಗಾಗಿ ನಿಂತಿದೆಯಷ್ಟೆ: ನಾಯಕತ್ವ ಮೇಲ್ಜಾತಿಯಿಂದ ಅಸ್ಪೃಶ್ಯ ಜಾತಿಗೆ ಹೋಗಿದೆ. ಇದನ್ನು ಬಿ.ಎಸ್.ಪಿ. ಸ್ವಂತ ಬಲದಿಂದ ಸಾಧಿಸಿದೆ ಎಂದು ಹೇಳುವುದೂ ಅರ್ಧ ಸತ್ಯದ ಮಾತು ಮಾತ್ರ ಆಗುತ್ತದೆ.
ಬಿ.ಎಸ್.ಪಿ., ಎಲ್ಲ ದ್ವಿಜ ಜಾತಿಗಳ(ಬ್ರಾಹ್ಮಣ, ಕ್ಷತ್ರಿಯ, ವೈಶ್ಯ) ವಿರುದ್ಧ ರಣಕಹಳೆ ಊದುತ್ತ; ಜಾತಿ ಶ್ರೇಣೀಕರಣದಲ್ಲಿ ಅಂರ್ತಗತವಾಗಿದೆ ಎಂದು ಹೇಳಲಾದ 'ಮನುವಾದಿ' ರಾಜಕಾರಣವನ್ನೇ ತನ್ನ ತಾತ್ವಿಕ ಕೇಂದ್ರವಾಗಿಟ್ಟುಕೊಂಡು ರಾಜಕಾರಣ ಆರಂಭಿಸಿತ್ತು. ಈಗ ಅದು, ತನ್ನ ಚುನಾವಣಾ ಚಿಹ್ನೆ ಆನೆಯನ್ನು 'ಇದು ಆನೆಯಲ್ಲ, ಸಾಕ್ಷಾತ್ ಗಣೇಶ' ಎಂದು ಘೋಷಿಸಿಕೊಂಡು, ಅದೇ ಜಾತಿಗಳ ಓಲೈಕೆಯೊಂದಿಗೆ ರಾಜಕಾರಣ ಮಾಡುವ ಸ್ಥಿತಿಗೆ ಈಡಾಗಿದೆ. ಈ ವಿರೋಧಾಭಾಸವನ್ನು ವಿವರಿಸುವುದಾದರೂ ಹೇಗೆ? ಇದನ್ನು 'ಸಮಕಾಲೀನ ವಾಸ್ತವ ರಾಜಕಾರಣ' ಎಂದು ಕರೆಯುವುದಾದರೆ ಹೊಸ ರಾಜಕೀಯ ಪರ್ವದ ಆರಂಭದ ಮಾತಿಗೇನಿದೆ ಅರ್ಥ? ನಾಯಕತ್ವದ ಜಾತಿ ಬದಲಾವಣೆಯನ್ನೇ ಸಾಮಾಜಿಕ ಕ್ರಾಂತಿಯ ಆರಂಭ ಎಂದು ನಂಬುವ ಕಾಲ ಎಂದೋ ಮುಗಿದು ಹೋಗಿದೆ. ಯಾಕೆಂದರೆ ಒಂದಲ್ಲ ಒಂದು ಹಂತದಲ್ಲಿ ನಮ್ಮ ರಾಷ್ಟ್ರ-ರಾಜ್ಯ ರಾಜಕಾರಣದಲ್ಲಿ ಎಲ್ಲ ಜಾತಿಗಳ ನಾಯಕತ್ವದ ಪ್ರಯೋಗ ಆಗಿ ಹೋಗಿದೆ. ಅವೆಲ್ಲವೂ ರಾಜಕಾರಣದಲ್ಲಿ ಯಾವುದೇ ಮೂಲಭೂತ ಬದಲಾವಣೆ ತರುವಲ್ಲಿ ವಿಫಲವಾಗಿರುವುದನ್ನು ಸಮಕಾಲೀನ ರಾಜಕೀಯ ಚರಿತ್ರೆ ಹೇಳುತ್ತಿದೆ.
ಪಟ್ಟಭದ್ರ ಹಿತಾಸಕ್ತಿಗಳೆಂದು ಸರಿಯಾಗಿಯೇ ಗುರುತಿಸಲ್ಪಟ್ಟಿದ್ದ ಬ್ರಾಹ್ಮಣ-ಬನಿಯಾ ಜಾತಿ ರಾಜಕಾರಣದ ವಿರುದ್ಧ ಅರವತ್ತರ ದಶಕದಲ್ಲಿ ತಾತ್ವಿಕವಾಗಿ ಹೋರಾಟ ಆರಂಭಿಸಿದ ಸಮಾಜವಾದಿ ರಾಜಕಾರಣ ಕಾಲಾಂತರದಲ್ಲಿ ಭ್ರಷ್ಟಗೊಂಡು, ಹಲವು ಪಕ್ಷಗಳ ರೂಪದಲ್ಲಿ ಕೌಟುಂಬಿಕ ಪಾಳೇಗಾರಿ ರಾಜಕಾರಣವಾಗಿ ಅವನತಿಗೊಂಡಿರುವುದನ್ನು ನಾವಿಂದು ನೋಡುತ್ತಿದ್ದೇವೆ. ಯಾವ ಜಾತಿ ಪದ್ಧತಿಯಿಂದಾಗಿ ಅನೇಕ ಅನ್ಯಾಯಗಳಾಗಿದ್ದವೋ ಅವನ್ನು ಸರಿಪಡಿಸಲೆಂದೇ ಆರಂಭವಾದ ರಾಜಕಾರಣ, ಅದೇ ಜಾತಿ ಪದ್ಧತಿಯನ್ನು ಸ್ಥಿರಗೊಳಿಸುವ ಪ್ರಯತ್ನವಾಗಿ ಪರಿವತರ್ಿತವಾಗಿರುವ ವಿಪಯರ್ಾಸವಿದು! ಜಾತಿ ರಾಜಕಾರಣ ಎರಡಲಗಿನ ಕತ್ತಿಯಿದ್ದಂತೆ: ಎಚ್ಚರ ತಪ್ಪಿದರೆ ಅದು ಜಾತೀಯ ರಾಜಕಾರಣವಾಗುತ್ತದೆ. ಈಗ ಆಗಿರುವದೂ ಅದೇ. ಒಂದು ನಿರ್ದಿಷ್ಟ ಅರ್ಥದ ಸಾಮಾಜಿಕ ನ್ಯಾಯವನ್ನೇ ಸಮಾಜವಾದದ ಪರಮ ಮೌಲ್ಯವೆಂದು ಪ್ರತಿಪಾದಿಸುವ ಈ ರಾಜಕಾರಣವನ್ನು ಸಮಾಜವಾದಿ ರಾಜಕಾರಣವೆಂದು ಕರೆಯುವುದು ಸಮಾಜವಾದಕ್ಕೆ ಮಾಡಬಹುದಾದ ದೊಡ್ಡ ಅಪಚಾರವೇ ಆಗುತ್ತದೆ. ಬಿ.ಎಸ್.ಪಿ. ಹುಟ್ಟಿದ್ದೇ ಇಂತಹ ವಕ್ರ ಸಮಾಜವಾದದ ರಾಜಕಾರಣಕ್ಕೆ ಪ್ರತಿಕ್ರಿಯೆಯಾಗಿ.
ಈ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದಲ್ಲಿನ ಮಾಯಾವತಿ ವಿಜಯ; ಅರ್ಧ ಅವರ ವಿಜಯವಾಗಿದ್ದರೆ, ಇನ್ನರ್ಧ ಮುಲಾಯಂ ಸಿಂಗ್ ಯಾದವರ ಅಪಜಯವಾಗಿದೆ. ಸಮಾಜವಾದದ ಹೆಸರು ಹೇಳಿಕೊಂಡೇ ಅಮರ್ ಸಿಂಗ್ರಂತಹ ಅಸಭ್ಯ ಮತ್ತು ಅಮಿತಾಭ್ ಬಚ್ಚನ್ರಂತಹ ಅವಕಾಶವಾದಿ ರಾಜಕೀಯ ದಲ್ಲಾಳಿಗಳ ಸಹವಾಸದಲ್ಲಿ, ಅನಿಲ್ ಅಂಬಾನಿಯಂತಹ ಬಂಡವಾಳಶಾಹಿಗಳ ಜೊತೆ ಶಾಮೀಲಾಗಿ ರಾಜ್ಯಭಾರ ಮಾಡತೊಡಗಿದ್ದ ಮುಲಾಯಂ ಸೃಷ್ಟಿಸಿದ ಆಡಳಿತಾತ್ಮಕ ಅವಾಂತರಗಳೇ ಬಿ.ಎಸ್.ಪಿ.ಗೆ ವರವಾಗಿ ಪರಿಣಮಿಸಿದವು. ಮುಲಾಯಂರ ಜಾತಿ ಬಾಂಧವರು ಗ್ರಾಮಾಂತರ ಪ್ರದೇಶಗಳಲ್ಲಿ ಹಾಗೂ ಅಮರ ಸಿಂಗರ ಬಾಡಿಗೆ ಬಂಟರು ನಗರ ಪ್ರದೇಶಗಳಲ್ಲಿ ನಡೆಸುತ್ತಿದ್ದ ದುಂಡಾವರ್ತಿ;ರಾಜ್ಯದಲ್ಲಿ ಮೊದಲು ಕಾನೂನು ಹಾಗೂ ಶಿಸ್ತು ಪರಿಪಾಲನೆಯಾಗಬೇಕಿದೆ, ನಂತರ ಅಭಿವೃದ್ಧಿಯ ವಿಷಯ ಎಂಬ ಅಭಿಪ್ರಾಯವನ್ನು ಕೆಳಜಾತಿ ಹಾಗೂ ಮೇಲ್ಜಾತಿಗಳೆರಡರಲ್ಲೂ ಗಟ್ಟಿಗೊಳಿಸಿತು. ಇದಕ್ಕೆ ತಕ್ಕುನಾಗಿ, ಈ ಹೊತ್ತಿಗೆ ಮಾಯಾವತಿಗೆ ಹಿಂದಿನ ಚುನಾವಣೆಗಳ ಮತ್ತು ಅಧಿಕಾರಾವಧಿಗಳ ಅನುಭವದ ಆಧಾರದ ಮೇಲೆ, ಬರೀ ದಲಿತರ ಮತಗಳ ಮೇಲೆ ತಮ್ಮ ರಾಜಕೀಯ ಕನಸು ನನಸಗಾದೆಂದು ಮನವರಿಕೆಯಾಗತೊಡಗಿತ್ತು. ತಮ್ಮ ಗುರು ಕಾನ್ಷಿರಾಮರಿಂದ ದಲಿತ ರಾಜಕಾರಣದ ಯಶಸ್ಸಿಗೆ ಯಾವ ರಾಜಕೀಯ ಪರಿಸ್ಥಿಯನ್ನು ಹೇಗೆ ಬಳಸಿಕೊಳಬೇಕು ಎಂಬ ಎಲ್ಲ ಪಾಠಗಳನ್ನು ಕಲಿತಿದ್ದ ಅವರು, ಜಾತಿ ರಾಜಕಾರಣದ ಹೊಸ ಅಧ್ಯಾಯಕ್ಕಾಗಿ ವೇದಿಕೆಯನ್ನು ಸಿದ್ಧಪಡಿಸಿದ್ದರು. ಈಗ ಸತೀಶ್ ಚಂದ್ರ ಮಿಶ್ರ ಎಂಬ ಉತ್ತರ ಪ್ರದೇಶದ ದಕ್ಷ ಮತ್ತು ಸಮ ಚಿತ್ತದ ಬ್ರಾಹ್ಮಣ ಐ.ಎ.ಎಸ್. ಅಧಿಕಾರಿಯನ್ನು ತಮ್ಮ ಆಪ್ತ ಸಲಹೆಗಾರನನ್ನಾಗಿ ಆಯ್ದುಕೊಂಡ ಮಾಯಾವತಿ ರಾಜ್ಯಾದ್ಯಂತ ಸೋದರತಾ ಸಮ್ಮೇಳನಗಳನ್ನು ಏರ್ಪಡಿಸುತ್ತಾ ಹೋದರು. ಆ ಮೂಲಕ ಅವರು, ತಮ್ಮದು ಹೆಸರಿಗೆ ಬಹುಜನ ಪಕ್ಷವಾದರೂ, ಅದು ವಾಸ್ತವವಾಗಿ ಸರ್ವಜನರ ಪಕ್ಷವಾಗಲು ಬಯಸಿದೆ ಎಂಬ ಸಂದೇಶವನ್ನು ಬಿತ್ತರಿಸತೊಡಗಿದರು. ಹಾಗೇ, ಹಿಂದಿನ ಚುನಾವಣೆಯ ಹೊತ್ತಿಗೇ ಆರಂಭಿಸಿದ್ದ ಮೇಲ್ಜಾತಿ ಜನರಿಗೂ ತಮ್ಮ ಪಕ್ಷದ ಟಿಕೆಟ್ ಕೊಡುವ ನೀತಿಯನ್ನು; ಈ ಚುನಾವಣೆಗಳಲ್ಲಿ ಇನ್ನಷ್ಟು ವಿಸ್ತರಿಸಿ, ರಾಜ್ಯದಲ್ಲಿ ಅತ್ಯಂತ ಹೆಚ್ಚು ಮೇಲ್ಜಾತಿ ಜನರಿಗೆ ಟಿಕೆಟ್ ನೀಡಿದ 'ಹೆಗ್ಗಳಿಕೆ'ಯನ್ನು ಬಿ.ಎಸ್.ಪಿ.ಗೆ ತಂದುಕೊಟ್ಟರು!
ಕೆಲವೇ ವರ್ಷಗಳ ಹಿಂದಿನವರೆಗೆ ದ್ವಿಜ ಜಾತಿಗಳ ವಿರುದ್ಧದ ದ್ವೇಷಮಯ ಘೋಷಣೆಗಳ ಮೂಲಕವೇ ರಾಜಕಾರಣ ಮಾಡುತ್ತಿದ್ದ ಬಿ.ಎಸ್.ಪಿ.ಯ ಈ ಉತ್ತರೋತ್ತರ ಬದಲಾವಣೆಯನ್ನು, ದ್ವಿಜ ಜಾತಿಗಳೂ ಸೇರಿದಂತೆ ಮುಲಾಯಂರ ಆಳ್ವಿಕೆಯಲ್ಲಿ ತೊಂದರೆ ಅನುಭವಿಸಿದ್ದ ಎಲ್ಲ ಜಾತಿಗಳು, ರಾಜ್ಯದಲ್ಲಿ ಕುಸಿದು ಬಿದ್ದಿದ್ದ ಕಾನೂನು ಮತ್ತು ಶಿಸ್ತಿನ ಹಿನ್ನೆಲೆಯಲ್ಲಿ ಒಪ್ಪಿಕೊಂಡದ್ದು ಸಹಜವೇ ಆಗಿತ್ತು. ಈ ಸಮುದಾಯಗಳು ಮಾಯಾವತಿ ತಮ್ಮ ಈ ಹಿಂದಿನ ಅಧಿಕಾರಾವಧಿಯಲ್ಲಿ ಕಾನೂನು ಮತ್ತು ಶಿಸ್ತಿನ ವಿಷಯದಲ್ಲಿ ಎಷ್ಟು ಕಟ್ಟುನಿಟ್ಟಾದ ನಿರ್ಧಾರ ಕೈಗೊಳ್ಳಬಲ್ಲರೆಂಬುದನ್ನು ಗಮನಿಸಿದ್ದರು. ಅಲ್ಲದೆ, ರಾಜ್ಯದ ಇನ್ನೊಂದು ಪ್ರಮುಖ ಪಕ್ಷವಾಗಿದ್ದ ಬಿ.ಜೆ.ಪಿ., ಮುಖ್ಯವಾಗಿ ಕ್ಷತ್ರಿಯರ ಹಾಗೂ ಯಾದವೇತರ ಮಧ್ಯಮ ಜಾತಿಗಳ ಪಕ್ಷವಾಗಿ ಪರಿವರ್ತಿತವಾಗಿದ್ದುದರಿಂದ, ಈ ಜಾತಿಗಳಿಗೆ ಅಲ್ಲಿ ಜಾಗವಿಲ್ಲದೇ ಹೋಗಿತ್ತು. ಜೊತೆಗೆ, ಮುಲಾಯಂ ತಮ್ಮ ಕಾಂಗ್ರೆಸ್ ವಿರೋಧಿ ರಾಜಕಾರಣದ ಅಂಗವಾಗಿ ಬಿ.ಜೆ.ಪಿ.ಯೊಂದಿಗೆ ತೆರೆಮರೆಯಲ್ಲಿ ಚೆಲ್ಲಾಟ ನಡೆಸುತ್ತಿದ್ದುದನ್ನು ಗಮನಿಸುತ್ತಿದ್ದ ಮುಸ್ಲಿಮರು, ಚುನಾವಣೆಗಳು ಹತ್ತಿರವಾಗುತ್ತಿದ್ದಂತೆ ಗೆಲ್ಲುವ ಕುದುರೆ ಬಿ.ಎಸ್.ಪಿ.ಯೇ ಎಂದು ಗೊತ್ತಾಗುತ್ತಿದ್ದಂತೆ ತಮ್ಮ ನಿಷ್ಠೆಯನ್ನು ಬದಲಾಯಿಸಿ, ಬಹುಪಾಲು ಮಾಯಾವತಿ ಪಕ್ಷಕ್ಕೇ ಮತ ಹಾಕಿದರು.
ಹೀಗಾಗಿ ಮಾಯಾವತಿ ವಿಜಯ ಒಂದು ಅನುಕೂಲಕರ ರಾಜಕೀಯ ಪರಿಸಿತ್ಥಿಗೆ ತಕ್ಕುನಾಗಿ ಅನುಸರಿಸಿದ ಜಾಣ ರಾಜಕೀಯ ತಂತ್ರದ ಗೆಲುವಾಗಿದೆಯೇ ಹೊರತು, ಯಾವದೇ ರಾಜಕೀಯ ದರ್ಶನ ಅಥವಾ ಒಳನೋಟವನ್ನಾಧರಿಸಿದ ವಿಜಯವಾಗಿಲ್ಲ. ನಿಜ, ನಮ್ಮ ರಾಜಕಾರಣದ ಇತ್ತೀಚಿನ ಎಲ್ಲ ಗೆಲುವುಗಳೂ ಇಂತಹವೇ ಆಗಿವೆ. ಆದರೆ, ಅರವತ್ತು ವರ್ಷಗಳ ರಾಷ್ಟ್ರ ರಾಜಕಾರಣದ ಸಾಮಾಜಿಕ ಸಂರಚನೆಯನ್ನೇ ಬುಡಮೇಲುಗೊಳಿಸಿದ ಈ ವಿದ್ಯಮಾನ, ಯಾವದೇ ತಾತ್ವಿಕ ಬೆನ್ನೆಲುಬಿಲ್ಲದ ಜಾತಿ ಸಮೀಕರಣವೊಂದರ ತಾಂತ್ರಿಕ ಯಶಸ್ಸಿನ ಆಧಾರದ ಮೇಲೆ ಘಟಿಸಿರುವುದು ಭವಿಷ್ಯದ ರಾಜಕಾರಣದ ದೃಷ್ಟಿಯಿಂದ ಆಶಾದಾಯಕ ಸಂಗತಿಯೇನೂ ಅಲ್ಲ. ಮಾಯಾವತಿ ಅಧಿಕಾರ ಸ್ವೀಕರಿಸಿದೊಡನೆ ಮಾಡಿದ ಎರಡು ಪ್ರಕಟಣೆಗಳನ್ನು ಗಮನಿಸಿ. ಮೊದಲನೆಯದು, ತಮ್ಮ ಹಿಂದಿನ ಅಧಿಕಾರಾವಧಿಯಲ್ಲಿ ತಮ್ಮ ರಾಜಕೀಯ ಅಸ್ಮಿತೆಯ ಸಂಕೇತವಾಗಿ ಸ್ಥಾಪಿಸಿದ್ದ ಅಂಬೇಡ್ಕರ್ ವನವನ್ನು ನಿರ್ಲಕ್ಷಿಸಲಾಗಿದೆಯೆಂದು ಸಂಬಂಧಪಟ್ಟ ಇಲಾಖೆಯ ಮುಖ್ಯಸ್ಥನನ್ನು ಅಮಾನತ್ತಿನಲ್ಲಿಟ್ಟುದುದು. ಎರಡನೆಯದು, ಮೇಲ್ಜಾತಿಗಳ ಬಡವರಿಗೂ ಮೀಸಲಾತಿ ವಿಸ್ತರಿಸುವ ಪ್ರಸ್ತಾಪ. ಇವೆರಡೂ ಯಾವುದೇ ಸಾಮಾಜಿಕ ದರ್ಶನವಿಲ್ಲದ ರೂಕ್ಷ ಜಾತಿ ರಾಜಕಾರಣ ತಂದುಕೊಡುವ ಅಗ್ಗದ ಜನಪ್ರಿಯತೆಯ ಮೇಲೆ ಕಣ್ಣಿಟ್ಟ ರಾಜಕೀಯ ಅಪ್ರಬುದ್ಧತೆಯ ನಿದರ್ಶನಗಳೇ ಆಗಿವೆ.
ಇಷ್ಟೆಲ್ಲ ಮಿತಿಗಳ ನಡುವೆಯೂ ಮಾಯಾವತಿಯವರ ಈ ಪ್ರಯೋಗ ತಕ್ಕ ಮಟ್ಟ್ಟಿಗಾದರೂ ಯಶಸ್ವಿಯಾಗಿ, ಹೊಸ ರಾಜಕಾಣದ ನಾಂದಿ ಪ್ರಯೋಗವಾದರೂ ಆಗಲಿ ಎಂದು ಆಸೆಯಿಂದ ಹಾರೈಸುವವರಲ್ಲಿ ಕೂಡಾ ಅವರ ರಾಜಕೀಯ ಯಶಸ್ಸಿನ ಬಗ್ಗೆ ಗಂಭೀರ ಅನುಮಾನಗಳಿವೆ. ಕಾರಣಗಳು ಹಲವಾರು: ಅವರು ಪಕ್ಷ ಕಟ್ಟಿರುವ ಸವರ್ಾಧಿಕಾರಿ ರೀತಿ, ಅವರ ಅರಮನೆಗಳಂತಹ ಬಂಗಲೆಗಳು ಮತ್ತು ದುಂದು ವೆಚ್ಚದ ಅವರ ಹುಟ್ಟುಹಬ್ಬದ ಸಮಾರಂಭಗಳಲ್ಲ್ಲಿ ಪ್ರದಶರ್ಿತವಾಗುವ ವಜ್ರಾಭರಣಗಳ ವೈಭೋಗ ಹಾಗೂ ಅಧಿಕಾರಕ್ಕಾಗಿ ಎಲ್ಲ ಮೌಲ್ಯಗಳನ್ನೂ ಧಿಕ್ಕರಿಸಿ ನಿಲ್ಲುವ ಅವರ ರಾಜಕೀಯ ಭಂಡತನ. ಅತಿ ಹೆಚ್ಚು ಮೇಲ್ಜಾತಿಯವರಿಗೆ ಟಿಕೆಟ್ ಕೊಟ್ಟ ಹೆಗ್ಗಳಿಕೆ ಇರುವ ಇವರ ಪಕ್ಷದ ಇನ್ನೊಂದು ಹೆಗ್ಗಳಿಕೆಯೆಂದರೆ, ಅತ್ಯಂತ ಹೆಚ್ಚು ಜನ ಅಪರಾಧಿಗಳಿಗೆ ಟಿಕೆಟ್ ಕೊಟ್ಟದ್ದು. ಅವರಲ್ಲಿ ಅರ್ಧದಷ್ಟು ಜನ ಗೆದ್ದು ಮಂತ್ರಿಮಂಡಲದ ಅರ್ಧ ಭಾಗವನ್ನು ಆಕ್ರಮಿಸಿಕೊಂಡಿದ್ದಾರೆ! ಇದು ಸಾಧ್ಯವಾದದ್ದು, ಪಕ್ಷದ ಬಹುತೇಕ ಟಿಕೆಟ್ಗಳನ್ನು ಅತಿ ಹೆಚ್ಚು 'ಶುಲ್ಕ' ನೀಡುವವರಿಗೆ 'ಹರಾಜು' ಹಾಕಿದುದರಿಂದಾಗಿ. ಹಾಗಾಗಿಯೇ ಹೆಚ್ಚು ಶ್ರೀಮಂತ ಅಭ್ಯಥರ್ಿಗಳ ವಿಷಯದಲ್ಲಿಯೂ ಇವರ ಪಕ್ಷ ಪ್ರಥಮ ಸ್ಥಾನದಲ್ಲಿತ್ತು!
ಹೀಗೆ ಯಾವುದೇ ರಾಜಕೀಯ ಮುನ್ನೋಟದ ಪ್ರಣಾಳಿಕೆಯೇ ಇಲ್ಲದೆ, ಜಾತಿಯೊಂದಿಗೆ ಹಣದ ರಾಜಕೀಯವನ್ನೇ ನಂಬಿ ಮಾಯಾವತಿ ಈ ಚುನಾವಣೆಗಳಲ್ಲಿ ಯಶಸ್ಸು ಸಾಧಿಸಿದ್ದಾರೆ. ಆದರೆ, ಅವರನ್ನು ಈ ಯಶಸ್ಸಿನವರೆಗೆ ಕರೆದು ತಂದಿರುವ ಅವರ ಈವೆರೆಗಿನ ಹದಿನೈದು ವರ್ಷಗಳ ಸಕ್ರಿಯ ರಾಜಕಾರಣದ ಸ್ವರೂಪದ ಮೇಲೆ ಬೆಳಕು ಚೆಲ್ಲುವಂತಿವೆ, ಅವರ ವಿರುದ್ಧ ದಾಖಲಾಗಿರುವ ಈ ಭ್ರಷ್ಟಾಚಾರದ ಮೊಕದ್ದಮೆಗಳು: ಸುಪ್ರೀಂ ಕೋಟರ್ಿನ ಸೂಚನೆಯನ್ವಯ ದಾಖಲಾಗಿರುವ 175 ಕೋಟಿ ರೂಪಾಯಿಗಳ ತಾಜ್ ಕಾರಿಡಾರ್ ಹಗರಣ ಮತ್ತು ಸಿ.ಬಿ.ಐ. ದಾಖಲಿಸಿರುವ 8.77 ಕೋಟಿ ರೂಪಾಯಿಗಳ ಅಕ್ರಮ ಆಸ್ತಿ ಹಾಗೂ 7.36 ಕೋಟಿ ರೂಪಾಯಿಗಳ ಲೆಕ್ಕ ತೋರಿಸದ ನಗದು ಹಣದ ಮೊಕದ್ದಮೆಗಳು; ಜೊತೆಗೆ ಹತ್ತು ಕೋಟಿ ರೂಪಾಯಗಳಿಗೂ ಹೆಚ್ಚಿನ ಮೌಲ್ಯದ ಬೇನಾಮಿ ಆಸ್ತಿ ಸಂಬಂಧ ನಡೆಯುತ್ತಿರುವ ತನಿಖೆ. ಇವುಗಳ ಎದುರಿನಲ್ಲಿ ಮತ್ತು ತದ್ವಿರುದ್ಧ ರಾಜಕೀಯ ನಿರೀಕ್ಷೆಗಳನ್ನು ಪ್ರತಿನಿಧಿಸುವ ಜಾತಿ ಶಕ್ತಿಗಳ ಮಧ್ಯೆ, ಇಡೀ ಸಮಾಜದ ಸಾರ್ವತ್ರಿಕ ಉನ್ನತಿಯಿರಲಿ; ಸರ್ವಜಾತಿಗಳ ಬಡವರ ಉದ್ಧಾರಕ್ಕಾಗಿಯಾದರೂ ಅವರು ಯಾವ ತಾತ್ವಿಕ ಮತ್ತು ನೈತಿಕ ನೆಲೆಗಟ್ಟಿನಲ್ಲಿ ಕೆಲಸ ಮಾಡಲು ಸಾಧ್ಯವಾಗುವುದೋ ಕಾದು ನೋಡಬೇಕು.
ಅಂದ ಹಾಗೆ: ಈ ಮಾಯಾವತಿ ವಿಜಯದಿಂದಾಗಿ ಸದ್ಯಕ್ಕೆ ಆಸೆ ಹುಟ್ಟಿಸಿರುವ ಒಂದು ಸಂಗತಿಯೆಂದರೆ, ನಿರಂತರ ಸೋಲುಗಳಿಗೆ ಸಿಕ್ಕಿರುವ ಕಾಂಗ್ರಸ್ ಪಕ್ಷ ಈಗಲಾದರೂ ತನ್ನ ಆರ್ಥಿಕ ನೀತಿಗಳ ಬಗ್ಗೆ ಪುನಾರಾಲೋಚನೆ ಮಾಡತೊಡಗಿರುವುದು. ಈ ಆರ್ಥಿಕ ನೀತಿಯ ಹರಿಕಾರರಾಗಿ, ಉದ್ಯಮ ಹಾಗೂ ಹೊಸ ಮಧ್ಯಮ ವರ್ಗದ ಆರಾಧ್ಯ ದೈವವಾಗಿ ಮೂಡಿ ನಿಂತಿರುವ ನಮ್ಮ ಪ್ರಧಾನ ಮಂತ್ರಿ ಮನಮೋಹನ ಸಿಂಗರೇ, ಮೊನ್ನೆ ದುಂದು ವೆಚ್ಚದ ಸಮಾರಂಭ-ಆಚರಣೆಗಳ ಅಶ್ಲೀಲತೆ ಹಾಗೂ ಸಾಮಾಜಿಕ ಹೊಣೆಗಾರಿಕೆಯಿಲ್ಲದ ಬರೀ ಲಾಭಾರಿತವಾದ ಉದ್ಯಮಶೀಲತೆಯ ಅನೈತಿಕತೆಯ ಬಗ್ಗೆ ಮಾತನಾಡಿದ್ದಾರೆ.
ಆದರೆ, ಭಾರತದ ನೀಗಲಾಗದ ಬಡತನಕ್ಕೆ ಸಾರಾ ಸಗಟು ಮದ್ದೆಂಬಂತೆ ತಾವು ಜಾರಿಗೆ ತಂದ ಈ ಹೊಸ ಆರ್ಥಿಕ ನೀತಿಯಲ್ಲೇ ಈ ಅಶ್ಲೀಲತೆ ಹಾಗೂ ಅನೈತಿಕತೆಗಳು ಅಂತರ್ಗತವಾಗಿವೆ ಎಂದು ಅವರಿಗೆ ಹೇಳುವವರಾದರೂ ಯಾರು? ಹಾಗೇ, ರೈತರ ಆತ್ಮಹತೆಗಳ ಬಗ್ಗೆ ಹುಂಬ ಹುಂಬಾಗಿ ಮುಜುಗರ-ಆತಂಕಗಳನ್ನು ವ್ಯಕ್ತಪಡಿಸುತ್ತಿರುವ ನಮ್ಮ ಮುಖ್ಯಮಂತ್ರಿಗಳಿಗೆ, ನೀವೂ ಸಕ್ರಿಯವಾಗಿ ಭಾಗಿಯಾಗಿರುವ ಸಮಕಾಲೀನ ರಾಜಕಾರಣ ಅನುಸರಿಸುತ್ತಿರುವ ಆರ್ಥಿಕ ನೀತಿಯೇ ಈ ನಿಲ್ಲದ ದುರಂತಕ್ಕೆ ಕಾರಣವಾಗಿದೆ ಎಂದು ಹೇಳುವವರಾದರೂ ಯಾರು?
ನಿಜವಾಗಿ ಇವು ಸ್ವತಃ ಅವರಿಗೇ ಅರ್ಥವಾಗಲಾರದ ವಿಷಯಗಳೇ? ಅಧಿಕಾರದ ಮಾಯೆಯೆಂದರೆ ಇದೇ ಏನೋ!

Rating
No votes yet