ಮಾಯಾ ಬಣ್ಣ
ಮಾಯಾ ಬಣ್ಣ
ಬಣ್ಣಮಯ ಬದುಕಲ್ಲಿ
ಬಿಳಿ,ನೀಲ,ಕೆಂಪು,
ಕಪ್ಪು, ಹಸಿರು, ಹಳದಿ
ನೆರೆದಿಹವು ನೂರೆಂಟು
ಬಣ್ಣಗಳ ಮೇಳ ....
ನೂರು ಕನಸುಗಳಿಗೆ
ಬಣ್ಣ ತುಂಬಿ ಮೆರೆಸುತಾ
ಸಕಲವ ಮರೆಸುವ
ಹಣ ಬಣ್ಣದ ತಾಳಕೆ
ಎಲ್ಲ ಬಣ್ಣಗಳ ಸಮ್ಮಿಳಿತ
ಹಲವು ಭವಿಷ್ಯಗಳ ಏರಿಳಿತ.......
ಕುಂದಾದಡೇನು ಕೊಂಚ
ಹೆಣ್ಣ ಮೈಬಣ್ಣ ಮಿನುಗೀತು
ಹಣ ಬಣ್ಣದ ಮಿಂಚ ಸಂಚಲ್ಲಿ ...
ಗುಣವಿಲ್ಲದಿರ್ದಡೆ ಹೆಚ್ಚಲ್ಲ
ಮುಚ್ಚುವುದು ಬ್ಯಾಂಕು ಚೆಕ್ಕಲ್ಲಿ
ಗ್ರಹಗತಿಗಳು ಬೆರಗಾಗಿ
ಹಿಂದೆ ಸರಿವುವು ಪೆಚ್ಚು ಪೆಚ್ಚಾಗಿ....
ಹಣ ಬಣ್ಣದ ಹುಚ್ಚು
ಹೊಳೆಯಲ್ಲಿ ಮಿರುಗುತಿಹ
ಬದುಕ ಬಣ್ಣ ಕೊಚ್ಚುವುದೋ,
ಬಿಚ್ಚಿ ಬರಿದಾಗುವುದೋ
ತಿಳಿದವರಿಲ್ಲ ......
ಅರಿವು ಮಾಸಿದರೇನು
ದಾಸಾನುದಾಸರಾಗಿಹರೆಲ್ಲಾ
ಹಣ ಬಣ್ಣದ ಝಣ ಝಣದೆದುರು
ಭಕ್ತಿ ಬಣ್ಣವೂ ಭಣ ಭಣ
ಸಕಲವೂ ಮಾಯಾ ಬಣ್ಣದ ಕಾಲ್ಗುಣ ......
ಕಮಲ ಬೆಲಗೂರ್
Rating