ಮಾರ್ಗದರ್ಶಿ

ಮಾರ್ಗದರ್ಶಿ

ಓಂ ಶಿವಪ್ರಕಾಶ್‍ರವರ ಚಿತ್ರ ನೋಡಿದಾಗ ನನ್ನಲ್ಲಿ ಮೂಡಿದ ಭಾವನೆ ಇದು.
ಮಾರ್ಗದರ್ಶಿ
ಚಂದಿರನೆತ್ತರಕ್ಕೇರುವಾಸೆ
ಒಮ್ಮೆಲೇ ಆಗಸಕೆ ಹಾರುವಾಸೆ
ನನ್ನ ಕಲ್ಪನೆಯ ಕುದುರೆಯೇರಿ
ಬಲವಾದ ರೆಕ್ಕೆಗಳೆರಡನಗಲಿಸಿ
ಹಾರಿ ಚಂದ್ರಮನ ಹಿಡಿಯುತ್ತಾ
ಚೆಂಡಾಗಿ ಕೈಯಲಿಟ್ಟಾಡುತ್ತಾ
ಆಗದೇ ಇದ್ದರೂ ಚಂದ್ರನೆಡೆಗೆ
ಕೈಚಾಚಿ ಹಿಡಿಯಲೆತ್ನಿಸುತ್ತಿರುವ
ಆಮರದ ಟೊಂಗೆಯನು ಕಂಡಾಗ
ವ್ಯರ್ಥ ಪ್ರಯತ್ನವದೆಂದು ನಕ್ಕಾಗ
ಮರ ನುಡಿಯಿತು ಮರುಕದಿಂದಲೇ
“ನಾ ಎತ್ತರದ ಗುರಿಯಿಟ್ಟು ಸಾಗುತಿರುವೆ
ಮೇಲೇರುವ ಯತ್ನವಾದರೂ ಮಾಡುತಿರುವೆ
ಮನೆಯೊಳಗೆ ಹಗಲುಗನಸು ಕಾಣುತ್ತಲೇ
ನಗುವ ನೀನೊಮ್ಮೆ ಆತ್ಮಾವಲೋಕನ ಮಾಡಿಕೊ
ಅದಾವ ಸಾಧನೆಗೈದಿರುವೆ ಎಂದು ನೀನಗುತಿರುವೆ
ಕನಸಿನ ಮೂಲಕವೇ ಮೇಲೇರಲು ಬಯಸುವ
ನೀ ಕಲಿಯಬೇಕೆನ್ನಿಂದ ಗುರಿಸಾಧನೆಯ ಪಾಠವ”
ಹೌದಲ್ಲವೇ ಎಂದೆನ್ನುತಾ ದಡಕ್ಕನೆದ್ದು ನೋಡಿದಾಗ
ಕಿಟಕಿಯಲಿ ನಾಕಂಡ ಟೊಂಗೆಗಳ ನಡುವಿನಿಂದ
ನಗುವ ಚಂದಿರನ ಕಿರಣಗಳು ಸಾರುತಿವೆ
“ ಈ ಮರವಲ್ಲವೇ ನಿನಗೆ ಮಾರ್ಗದರ್ಶಿ”

Rating
No votes yet

Comments