ಮಾಲ್‌ನ ಥಿಯೇಟರ್‌ಗಳು Vs ಕೆಂಪೇಗೌಡರಸ್ತೆಯ ಚಿತ್ರಮಂದಿರಗಳು

ಮಾಲ್‌ನ ಥಿಯೇಟರ್‌ಗಳು Vs ಕೆಂಪೇಗೌಡರಸ್ತೆಯ ಚಿತ್ರಮಂದಿರಗಳು

ರಜಾದಿನಗಳಲ್ಲಿ (ನಾನು "ಏಕಾಂಗಿ"ಯಾಗಿದ್ದ ಕಾಲದಲ್ಲಿ) ಮೆಜೆಸ್ಟಿಕ್‌ಗೆ ಹೋಗಿ, ಚಿಕ್ಕಪೇಟೆ,ಅವೆನ್ಯೂರೋಡ್ ಎಲ್ಲಾ ಸುತ್ತಾಡಿ,ಅಲ್ಲಿಂದ ಕೆಂಪೇಗೌಡರೋಡ್‌ನಲ್ಲಿ -ಯಾವುದಾದರೂ ಥಿಯೇಟರ್‌ನಲ್ಲಿ ಸಿನೆಮಾ ನೋಡಿ, ರೂಮ್‌ಗೆ ಹಿಂದೆ ಬರುತ್ತಿದ್ದೆ.


ಕಳೆದ ರವಿವಾರ ಮಲ್ಲೇಶ್ವರದ "ಮಂತ್ರಿ ಮಾಲ್" ಗೆ ಹೋಗಿದ್ದೆ. ಒಂದೊಂದೇ ಮಹಡಿ ಏರಿದಂತೆ, ಎಂ.ಜಿ.ರೋಡ್, ಅವೆನ್ಯೂರೋಡ್, ಬ್ರಿಗೇಡ್ ರೋಡ್ ಎಲ್ಲಾ ಸುತ್ತಾಡಿದ ಅನುಭವವಾಯಿತು.ಕೊನೆಯ ಮಹಡಿಯ ಇನಾಕ್ಸ್ ಥಿಯೇಟರ್‌ಗಳ ಬಳಿ ಬಂದಾಗ, ಕೆಂಪೇಗೌಡ ರೋಡ್‌ಗೆ ಬಂದ ಹಾಗೆ ಅನಿಸಿತು. ಆರೋ ಎಂಟೋ ಸಿನೆಮಾಗಳ ಲಿಸ್ಟ್‌ನಲ್ಲಿ ಹುಡುಕಿದಾಗ "ದೋ ದೂನಿ ಚಾರ್" ಸಿನೆಮಾದ ಟಿಕೆಟ್‌ಗಳು ಲಭ್ಯವೆಂದಿತ್ತು. ೫ ನಿಮಿಷನೂ ಕ್ಯೂನಲ್ಲಿರಲಿಲ್ಲ-ಟಿಕೆಟ್ ಕೊಂಡು ಥಿಯೇಟರ್ ಒಳಗೆ ಇದ್ದೆ!


ಆವಾಗ, ಎರಡು ತಿಂಗಳ ಮೊದಲು ಕೆಂಪೇಗೌಡ ರೋಡಲ್ಲಿ ಸಿನೆಮಾ ನೋಡಲಿಕ್ಕಾಗಿ ಅಲೆದಾಡಿದ ನೆನಪಾಯಿತು. ಕಪಾಲಿಯಿಂದ ಮೊದಲ್ಗೊಂಡು ಸಾಗರ್‌ವರೆಗೆ ಎಲ್ಲಾ ಥಿಯೇಟರ್‌ಗಳೂ ಹೌಸ್‌ಫುಲ್! ಅದೇ ಬ್ಲ್ಯಾಕ್‌ಲ್ಲಿ ಟಿಕೆಟ್ ಸಿಗುತ್ತಿದ್ದವು.


ಕೊನೆಗೆ, "ವಿಷ್ಣುವರ್ಧನ"ನ ಸಿನೆಮಾದ ಮುಂದಿನ ಶೋ‌ಗೆ ಬೇಗನೆ ಬಂದು ಕ್ಯೂನಲ್ಲಿ ನಿಲ್ಲುವುದು ಎಂದು ನಿರ್ಧರಿಸಿ, ನಮ್ಮವರನ್ನು ಕರಕೊಂಡು ಸುಖಸಾಗರ ಹೋಟಲ್‌ಗೆ ಹೋದೆ.


ತಿಂದುಂಡು ತೃಪ್ತಿಯಿಂದ ಥಿಯೇಟರ್ ಬಳಿ ಬಂದಾಗ, ಟಿಕೆಟ್ ಕೊಡಲು ಇನ್ನೂ ಶುರು ಮಾಡಿರಲಿಲ್ಲ.


೮-೧೦ ಜನರಿಗೆ ಕೊಟ್ಟಿದ್ದಾರೋ ಇಲ್ಲವೋ ಹೌಸ್‌ಫುಲ್ ಎಂದರು! (ಚಿತ್ರ ಹೊಸದೇನಲ್ಲ. ಬಂದು ೧೦೦ ದಿನ ಕಳೆದಾಗಿತ್ತು.)ಕ್ಯೂನಲ್ಲಿದ್ದವರು ಕೌಂಟರ್‌ನವನೊಂದಿಗೆ ಜಗಳಾಡುತ್ತಿದ್ದರು. ಬ್ಲ್ಯಾಕ್ ಟಿಕೆಟ್ ಮಾರುವಾತ ಆಗಲೇ ವ್ಯಾಪಾರ ಶುರು ಹಚ್ಚಿದ್ದ. ಜಗಳ ಮಾಡುತ್ತಿದ್ದವರನ್ನೇ, ಈಚೆಗೆ ಕರಕೊಂಡು ಬಂದು, ಸಮಾಧಾನಿಸಿ ಅವರಿಗೇ ಟಿಕೆಟ್ ಮಾರುತ್ತಿದ್ದ!


ಹೆಚ್ಚು ಕಮ್ಮಿ ಇದೇ ಅನುಭವ "ಮುಂಗಾರು ಮಳೆ" ಸಿನೆಮಾ ನೋಡಲು ಕೆಂ.ಗೌಡರೋಡಲ್ಲಿರುವ ಇನ್ನೊಂದು ಚಿತ್ರಮಂದಿರಕ್ಕೆ ಹಿಂದೊಮ್ಮೆ ಬಂದಾಗಲೂ ಆಗಿತ್ತು.


ಮಾಲ್‌ನ ಚಿತ್ರಮಂದಿರಗಳಲ್ಲಿ-


-ಹೌಸ್‌ಫುಲ್ ಆಯಿತೆಂದು ಒಂದು ಥಿಯೇಟರ್‌ನಿಂದ ಇನ್ನೊಂದಕ್ಕೆ ಓಡಬೇಕಾಗಿಲ್ಲ.


-ಎಲ್ಲಾ ವಿವರಗಳೂ ಕಣ್ಣ ಮುಂದೆ ಲಭ್ಯ.


-ಎ.ಸಿ., ಫ್ಯಾನ್‌ಗಳನ್ನು ಆಫ್ ಮಾಡುವುದಿಲ್ಲ.


-ಮಾಲ್+ಥಿಯೇಟರ್‌ನ ಒಳಗೆ ಪ್ರವೇಶಿಸುವಾಗ ಪೂರ್ತಿ ಚಕಿಂಗ್ ಮಾಡುತ್ತಾರೆ. ಬಾಂಬ್ ಭಯವಿಲ್ಲ.


-ಬ್ಲ್ಯಾಕ್ ಟಿಕೆಟ್‌ನವರ ಹಾವಳಿಯಿಲ್ಲ.


-ಸೀಟುಗಳು ಚೆನ್ನಾಗಿವೆ.


ಇದೆಲ್ಲಾ ಲೆಕ್ಕಾಚಾರ ಮಾಡಿದಾಗ, ಟಿಕೆಟ್ ದರ ದುಬಾರಿ ಅನಿಸುವುದಿಲ್ಲ.


-ಗಣೇಶ.

Rating
No votes yet

Comments