ಮಾವಿನ ಹಣ್ಣು ಮತ್ತು ನೊಸ್ಟಾಲ್ಜಿಯ...

ಮಾವಿನ ಹಣ್ಣು ಮತ್ತು ನೊಸ್ಟಾಲ್ಜಿಯ...

ಮಾವಿನ ಹಣ್ಣಿನ ಸುವಾಸನೆ ಮೂಗಿಗೆ ಬಡಿದೊಡನೆ ಯಾರ ಬಾಯಲ್ಲಿ ತಾನೆ ಜಲ ಬರಲ್ಲ ಹೇಳಿ? ಆದರೆ ಮಾವಿನ ಹಣ್ಣಿನ ಸುವಾಸನೆ ನನ್ನ ಬಾಯಿ ನೀರೂರಿಸುವುದರ ಜೊತೆಗೆ ನನ್ನನ್ನು ಸದಾ ನನ್ನಜ್ಜಿಯ ಊರಾದ ಬೆಣ್ಣೂರಿಗೆ, ಅಲ್ಲಿದ್ದ ಮಾವಿನ ತೋಪಿಗೆ ಕರೆದೊಯುತ್ತೆ, ಈಗ ಯಗಚಿ ನದಿಗೆ ಅಡ್ಡಲಾಗಿ ಕಟ್ಚಿರುವ ಡ್ಯಾಂನ ಹಿನ್ನೀರಲ್ಲಿ ಮುಳುಗಿದೆ.


ಬೇಸಿಗೆ ರಜೆ ಬಂತೆದರೆ ಅಜ್ಜಿ ಊರಿಗೆ ರೈಟ್. ಅಲ್ಲಂತು ನನ್ನ ಹಿಡಿಯುವವರು ಯಾರೂ ಇರ್ಲಿಲ್ಲ. ದೊಡ್ಡ ಊರು, ಬಹಳಷ್ಟು ಹುಡುಗರು, ನಮ್ಮ ಹಟ್ಟಿಯವರೊಂದಿಗೆ ಬೆರೆಯುತ್ತಿದ್ದವರು ಕಡಿಮೆ. ಕಾರಣ, ಲಿಂಗಾಯಿತರ ಹಟ್ಟಿ, ನಾಯ್ಕರ ಹಟ್ಟಿ, ಮಡಿವಾಳರ ಹಟ್ಟಿ, ಹೊಲೇರ ಹಟ್ಟಿ, ಹಾದಿಹಳ್ಳಿ ಹಟ್ಟಿ(6 ಕಿ.ಮೀ. ದೂರದ ಹಾದಿಹಳ್ಳಿಯಿಂದ ಬಂದ ಸುಮಾರು 7-8 ಗೌಡ್ರ ಕುಟುಂಬ ವಾಸಿಸುತ್ತಿದ್ದ ಏರಿಯಾ, ಬಹು ಚಿಕ್ಕದು) ಹೀಗೆ ಜಾತಿವಾರು ವಿಭಜನೆ ಇದ್ದಿದ್ರಿಂದ...   


ಹಾದಿಹಳ್ಳಿ ಹಟ್ಟಿಯ ದನ ಕರುಗಳನ್ನೆಲ್ಲಾ ಒಟ್ಟಾಗಿ ದೂರದ ಕೂಡ್ಲೂರು ಬಯಲಿಗೆ ಮೇಯಿಸಲು ಹಟ್ಟಿಯ ಹುಡುಗರೆಲ್ಲಾ ಹೋಗ್ತಿದ್ರು, ಜೊತೆಗೆ ನಾನೂ. ನಂಗೆ ರಜೆ ಬಂತೆಂದ್ರೆ ದನ ಕಾಯುವ ಕೆಲಸಕ್ಕೆ ನಮ್ಮಜ್ಜಿ ಮನೆಯವರಿಗೆ ರಜೆ. ಚಿಕ್ಕೆರೆ-ದೊಡ್ಕೆರೆಗಳ ಮದ್ಯ ಸೀಳಿದ್ದ ದಾರಿ ಹಾಯ್ದು, ಇಳಿದು, ಗದ್ದೆ ಬಯಲ ಮೂಲಕ ಹೋಗಿ ಯಗಚಿ ನದಿ ದಾಟಿ ಸ್ವಲ್ಪ ಮೇಲೆರಿದರೆ ಕೂಡ್ಲೂರು ಬಯಲು. ಚಿಕ್ಕೆರೆ-ದೊಡ್ಕೆರೆ ಎಂದೊಡನೆ ನಂಗೆ ಕಾಡ್ತಿದ್ದ ಪ್ರಶ್ನೆ ಒಂದೇ: ಗಣೇಶ ಅದ್ಹೆಂಗೆ ಚಿಕ್ಕೆರೆಲಿ ಬಿದ್ದು ದೊಡ್ಕೆರೆಲಿ ಏಳ್ತಾನೆ ಅಂತ. ಗದ್ದೆ ಬಯಲಿಗಿಳಿದೊಡನೆ ದನ ಕರುಗಳೆಲ್ಲ ಚದುರಿ ಹೋಗ್ತಿದ್ವು ಅವುಗಳ್ನೆಲ್ಲಾ ಸಂಬಾಲಿಸಿಕೊಂಡು ಬಯಲು ಸೇರೋಸ್ಟ್ರಲ್ಲಿ ಸಾಕುಸಾಕಾಗಿ ಹೋಗ್ತಿತ್ತು. ತಲುಪಿದೊಡನೆ ಕೊಂಡೊಯ್ಯುತ್ತಿದ್ದ ಬುತ್ತಿ ಕಾಲಿ ಮಾಡಿ ಅಲ್ಲೇ ಇದ್ದ ಹಾದಿಹಳ್ಳಿ ಹಟ್ಟಿಗೆ ಸೇರಿದ್ದ ಕೇವಲ ಹತ್ತು ಮರಗಳಿದ್ದ ಮಾವಿನ ತೋಪಿಗೆ ಹೋಗಿ ಊಟದ ಬಾಕ್ಸ್ ಗಳನ್ನೆಲ್ಲಾ ಮರದ ಬುಡದಲ್ಲಿಟ್ಟು ಮರ-ಕೋತಿ ಆಟ ಶುರು ಮಾಡ್ತಿದ್ವಿ. ಒಂದು ರೌಂಡು ಆಟ ಮುಗಿಸುವುದರೊಳಗೆ ಮೇಯ್ತಿದ್ದ ದನ ಕರುಗಳೆಲ್ಲಾ ಹಾಗೆ ಕಬ್ಬಿನ ಗದ್ದೆಗೋ, ಭತ್ತದ ಗದ್ದೆಗೋ ಅಥವ ಜೋಳದ ಹೊಲಕ್ಕೋ ನುಗ್ಗಿ ಕಾಣದಂತಾಗ್ತಿದ್ದು. ಎಲ್ಲವ್ನೂ ಹುಡುಕಿ ಒಂದೆಡೆ ಸೇರ್ಸೋಸ್ಟ್ರಲ್ಲಿ ‘ಸಾಕಪ್ಪ ಈ ದನಗಳ್ನ ಕಾಯೋ ಕೆಲಸ, ಯಾವ್ ಬೋಳಿಮಗಂಗೆ ಬೇಕು’ ಅನ್ಸ್ತಿತ್ತು. ಆದ್ರೂ ನನ್ನ ಬೇಸಿಗೆ ರಜೆ ಮುಗಿಯೋತನಕ ದನ ಕಾಯುವ ಕೆಲಸಕ್ಕೆ ರಜೆ ಹಾಕಿದ್ದೇ ನೆನಪಿಲ್ಲ.


ಏಳೆಂಟು ಹುಡುಗರು ಸೇರಿ ಕಂಡವರ ಮನೆ ತೆಂಗಿನ ತೋಟಕ್ಕೆ ನುಗ್ಗಿ ಮೂವತ್ತು ನಲವತ್ತು ಎಳನೀರು ಕದ್ದು ಇಳಿಸಿ ಅಲ್ಲೇ ಎಲ್ಲವನ್ನು ಕುಡಿದು ಬರ್ತಿದ್ದು, ಎಷ್ಟೋ ದಿನ ಮರ ಹತ್ತುವವರು ಕಾಲು ಕೈ ಗಾಯ ಮಾಡಿಕೊಂಡಿದ್ದೂ ಉಂಟು. ತೆಂಗಿನ ಮರಗಳಿಗೆ ಬ್ಲೇಡ್ ಹೊಡೆದಿರ್ತಿದ್ರು, ಕಳ್ಳರ ಹಾವಳಿ ಹೆಚ್ಚಾಗಿತ್ತು ಅನ್ಸುತ್ತೆ!!!. ಬೆಲ್ಲ ತೆಗೆದ ಮೇಲೆ ದೊಡ್ಡಕೆರೆ ನೀರಿಗೆ ಹಾಕಿರ್ತಿದ್ದ ಅಚ್ಚು ಮಣೆಗಳೇ ನಮಗೆ ಬೋಟುಗಳು. ಫ್ಯಾಂಟಮ್ ಮಾಂಡ್ರೆಕ್ ಎಂದೆಲ್ಲ ಜೋರಾಗಿ ಅರಚುತ್ತಾ ಕಿತ್ತಾಡುತ್ತಾ ಆಳದ ನೀರಿಗೆ ಇಳಿದೇ ಬಿಟ್ಟಿರ್ತಿದ್ವಿ. ಆಳದಲ್ಲಿ ಕೆಲವೊಮ್ಮೆ ಮಣೆಗಳಿಂದ ಜಾರಿದಾಗ ಜೀವ ಉಳಿಸ್ತಿದ್ದಿದ್ದು ಹತ್ತಿ ಗಿಡದ ಒಂದೈವತ್ತು ಒಣಗಿದ ಕಾಂಡಗಳನ್ನು ಒಟ್ಟಿಗೆ ಕಟ್ಟಿ ಮಾಡಿಕೊಂಡ ಹೊರೆಗಳ ಲೈಫ್ ಜಾಕೆಟ್ಟುಗಳು. ಮನೆಯ ಅಟ್ಟದಲ್ಲಿ ನೊಲ್ಗೆಯಲ್ಲಿಟ್ಟಿರುತ್ತಿದ್ದ ಬೆಲ್ಲದ ಗೂಳಕ್ಕೆ ಕೈ ಹಾಕಿ ನೆಕ್ಕದ ದಿನವಿರ್ತಿಲಿಲ್ಲ. ರೊಟ್ಟಿ-ಗೂಳ ಅದೆಂಥ ಕಾಂಬಿನೇಶನ್ ಅಂತೀರ.


ಇದ್ದ ಹತ್ತು ಮಾವಿನ ಮರಗಳನ್ನು ಹಾದಿಹಳ್ಳಿ ಹಟ್ಟಿಯವರು ಮನೆಗೊಂದರಂತೆ ಪಾಲು ಮಾಡಿಕೊಂಡಿದ್ರು, ಕೆಲವರಿಗೆ ಮಾತ್ರ ಎರಡು ಮರ. ಹೀಗೆ ಪಾಲು ಮಾಡಿಕೊಂಡಿದ್ರೂ ಸಹ ಮಾವಿನ ಕೊಯ್ಲು ಒಟ್ಟಾಗೆ ನಡೆಯುತ್ತಿತ್ತು. ನನ್ನಜ್ಜಿ ಮನೆಯವರ ಪಾಲಿಗೆ ಸೇರಿದ್ದ ಮರದಿಂದ ಮಾವಿನ ಕಾಯಿಗಳನ್ನ ಇಳಿಸಿದ ನಂತರ ರಸಿ ಒರೆಸಿ ದೊಡ್ಡ ದೊಡ್ಡ ಮಂಕ್ರಿಗಳಲ್ಲಿ ತಲೆಕೆಳಗಾಗಿಟ್ಟು ಭತ್ತದ ಹುಲ್ಲನ್ನು ಮುಚ್ಚಿ ಅದರ ಮೇಲೊಂದು ಚೀಲ ಹೊದಿಸಿ ಹೊಲೆದು ಹೊತ್ತು ತಂದು ಅಟ್ಟದ ಮೇಲೇರಿ ಪಣತಕ್ಕಿಳಿಸಿ ಒಂದೆರಡು ದಿನ ಕಳೆದರೆ ಸಾಕಾಗಿತ್ತು, ಶಬ್ಧ ಮಾಡದೆ ಏಣಿಯೇರಿ ಬೆಕ್ಕಿನ ಹೆಜ್ಜೆಯಿಟ್ಟು ಮೆಲ್ಲನೆ ಪಣತದ ಬಾಯ್ತೆರೆದು ದುಮುಕಿ ಹಣ್ಣಾಗಿವೆಯಾ ಎಂದು ನೋಡುವುದು ನಿತ್ಯದ ಕೆಲಸವಾಗಿತ್ತು. ಹಣ್ಣಾಗತೊಡಗಿದ ಮೇಲೆ ಕಣ್ಣು ಮುಚ್ಚಿ ಹಾಲು ಕುಡಿಯುವುದು ಜಾಸ್ತಿಯಾಗಿತ್ತು. ಅದು ಭತ್ತ ಶೇಕರಿಸಿಡುವ ಪಣತವಾಗಿದ್ದರಿಂದ ಭತ್ತದ ಚಿಟ್ಟೆಗಳು ಮತ್ತು ಜೆಡರ ಬಲೆ ಮೈಗೆಲ್ಲ ಹಿಡಿದಿರುತ್ತಿತ್ತು. ಎಲ್ರಿಗೂ ಹಣ್ಣು ತಿಂದಾಗಲೆಲ್ಲಾ ಬೆಕ್ಕಿನ ಜಾಣ್ಮೆ ಬಯಲಾಗ್ತಿತ್ತು.


ಹಣ್ಣುಗಳ್ನ ಪಣತದಿಂದ ತೆಗೆಯುವಸ್ಟರಲ್ಲಿ ನನ್ನ ರಜೆಯೂ ಮುಗಿಯುತ್ತಿತ್ತು. ಸಣ್ಣ ಮಾಮ ಒಳ್ಳೊಳ್ಳೆ ಹಣ್ಣುಗಳನ್ನಾರಿಸಿ, ರಟ್ಟಿನ ಬಾಕ್ಸುಗಳಿಗೆ ಹುಲ್ಲು ಹಾಕಿ ಒಂದೂ ಹಣ್ಣೂ ಸಹ ಡ್ಯಾಮೇಜ್ ಆಗದ ಹಾಗೆ ಜೋಡಿಸಿ ಬಾಕ್ಸುಗಳೊಂದಿಗೆ ನನ್ನೂರಿಗೆ ಕರೆದುಕೊಂಡು ಹೋಗ್ತಿದ್ರು. ಕದ್ದು ಹಣ್ಣು ತಿನ್ನುವುದು ಮನೆಯಲ್ಲೂ ಮುಂದುವರಿಸ್ತಿದ್ದೆ... 


ನನಗಾಗ ಗೊತ್ತಿದ್ದಿದ್ದು ಕಸಿ ಮಾವು, ಗಿಣಿ ಮಾವು ಎರಡೇ. ನಾನು ಪುತ್ತೂರಿನಲ್ಲಿ ಹತ್ತನೇ ತರಗತಿಯಲ್ಲಿದ್ದಾಗ ಒಮ್ಮೆ ನನ್ನ ಕ್ಲಾಸ್ ಟೀಚರ್ ಕಲ್ಲೂರಾಯರು ‘ಓಯ್ ಪ್ರಭಾತ್ ಭಟ್ರೆ ಮಾವಿನ ಫಸಲು ಹೇಗುಂಟು, ಎಂತೆಲ್ಲ ವೆರೈಟಿ ಉಂಟು ನಿಮ್ಮಲ್ಲಿ ?’ ಭಟ್ಟ ‘ಸರ್, ನಮ್ಮಲ್ಲಿ ರಸಪೂರಿ, ಬಾದಾಮಿ ಮತ್ತು ಮಲ್ಲಿಕಾ ಉಂಟು’ ಎಂದಾಗ ನನಗೆ ಆಶ್ಚರ್ಯವಾಗಿತ್ತು, ಮೇಸ್ಟ್ರು ‘ನೀಲಂ ಇಲ್ಲವೋ?’ ಅಂದಾಗ ಇನ್ನೂ ಚಕಿತನಾಗಿದ್ದೆ. ಪುತ್ತೂರಿನಲ್ಲಿದ್ದಾಗ ಸ್ನೇಹಿತರು ಲಂಚ್ ಬಾಕ್ಸ್ ತೆಗೆಯವುದನ್ನೆ ಕಾಯುತ್ತದ್ದೆ, ಮಾವಿನ ಮಿಡಿ ಉಸಪ್ಪಿನಕಾಯಿ ತಿನ್ನಲು.


ಮಾವಿನ ಮರಗಳು ಯಗಚಿ ಡ್ಯಾಂನ ಹಿನ್ನೀರಲ್ಲಿ ಮುಳುಗಿವೆ. ಆದರೆ... ನೆನಪಿನ ಗುಂಗಿನಲ್ಲಿ...

Rating
No votes yet

Comments