ಮಾಸ್ತಿಯವರು ನಡೆಸಿಕೊಟ್ಟ ಕವಿಗೋಷ್ಠಿ

ಮಾಸ್ತಿಯವರು ನಡೆಸಿಕೊಟ್ಟ ಕವಿಗೋಷ್ಠಿ

“ಮಾಸ್ತಿ ಕನ್ನಡದ ಆಸ್ತಿ” ಎಂದೇ ಖ್ಯಾತರಾಗಿದ್ದ ಮಾಸ್ತಿ ವೆಂಕಟೇಶ ಅಯ್ಯಂಗಾರ್ಯರು ಅಂದಿನ ಮೈಸೂರು ಸಂಸ್ಥಾನದಲ್ಲಿ ಅತ್ಯಂತ ಉನ್ನತ ಹುದ್ದೆಯನ್ನು ಅಲಂಕರಿಸಿದವರು. ಮೈಸೂರು ಸಂಸ್ಥಾನದ ದಿವಾನ ಪದವಿಗೆ ಆಯ್ಕೆಯಾಗ ಬೇಕಾಗಿದ್ದ ಅತ್ಯಂತ ದಕ್ಷ ಅಧಿಕಾರಿ ಶ್ರೀಯುತ ಮಾಸ್ತಿಯವರು ಅಧಿಕಾರದಲ್ಲಿ ಎಷ್ಟು ನಿಷ್ಠೆ, ಪ್ರಾಮಾಣಿಕತೆಯಿಂದ ಹೆಸರು ಮಾಡಿದ ಹಾಗೆಯೇ ಸಾಹಿತ್ಯ ಕ್ಷೇತ್ರದಲ್ಲಿಯೂ ಮುಂಚೂಣಿಯಲ್ಲಿದ್ದು ‘ಜ್ಞಾನ ಪೀಠ’ ಪ್ರಶಸ್ತಿ ಪಡೆದವರು.

ಇದೆಲ್ಲಕ್ಕಿಂತ ಮುಖ್ಯವಾದ ವಿಚಾರವೆಂದರೆ ಮಾಸ್ತಿಯವರ ವ್ಯಕ್ತಿತ್ವ, ನೇರ ನುಡಿ, ಮಾನವೀಯ ತುಡಿತ, ಮಗುವಿನಂಥ ಅಂತಃಕರಣ ಹೊಂದಿದ್ದ ಮಾಸ್ತಿಯವರು ನುಡಿದ ಹಾಗೆ ನಡೆದವರು. ಎಂದೂ ಸಹ ಒಳಗೊಂದು, ಹೊರಗೊಂದು ತರಹ ನಡೆದವರಲ್ಲ. ಅವರ ಹಾಗೆ ನಿಷ್ಕಲ್ಮಷವಾದ ಮನಸ್ಸು ಉಳ್ಳವರನ್ನು ಕಾಣಲು ಸಿಗುವುದಿಲ್ಲ. ಅಂಥ ಗುಣಗಳನ್ನು ಹೊಂದಿರುವ ಮನುಷ್ಯರು ಈಗ ಇಲ್ಲವೇ ಇಲ್ಲ ಎಂಬುದು ನಿರ್ವಿವಾದ. ಯಾರ ಬಗ್ಗೆಯಾಗಲೀ ಯಾವುದೇ ರೀತಿಯ ಪೂರ್ವಗ್ರಹವಿಲ್ಲದೇ ಅತ್ಯಂತ ಸಂಭಾವಿತವಾದ, ಪ್ರಾಮಾಣಿಕವಾದ ಅಭಿಪ್ರಾಯಗಳನ್ನು ಹೊಂದಿದ್ದ ಅವರ ನಡವಳಿಕೆ ಎಲ್ಲರಿಗೂ ಎಂದೆಂದಿಗೂ ಅನುಕರಣೀಯ. 

ಮಾಸ್ತಿಯವರಲ್ಲಿದ್ದ ದೈವೀಕವಾದ ವ್ಯಕ್ತಿತ್ವ, ಸುಸಂಕೃತ ನಡವಳಿಕೆ ನಯವಾದ ಮಾತು ಇವೆಲ್ಲ ಇಂದು ಕಾಣಸಿಗುವುದೇ ಅಪರೂಪ. ಅವರು ನೇರ ನುಡಿಯ ವ್ಯಕ್ತಿಯಾದರೂ, ಎಂದೂ ಯಾರನ್ನೂ ನಿಷ್ಠುರವಾದ ಅಥವಾ ಕಠೋರವಾದ ಮಾತುಗಳಿಂದ ನೋಯಿಸಿದವರಲ್ಲ. ಅವರ ಆಲೋಚನೆಗಳು ಕೂಡ ಎಂದೂ ಸಂಸ್ಕೃತಿಯ ಮಿತಿಗಳನ್ನು ಮೀರಲಿಲ್ಲ. ಈಗಿನ ಕಾಲದಲ್ಲಿ ನಮ್ಮ ಸುತ್ತಮುತ್ತಲಿನ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಜನರಲ್ಲಿ ಅದೆಂಥಾ ದುರ್ಭಾವನೆಗಳು, ಆಡುವ ಮಾತುಗಳು ಎಷ್ಟು ಅನಾಗರಿಕ, ಮನಸ್ಸಿನಲ್ಲಿ ಎಂಥ ದ್ವೇಷ, ವೈಷಮ್ಯ, ನಡವಳಿಕೆಯಲ್ಲಿ ಎಷ್ಟು ಸ್ವಾರ್ಥ, ಇವೆನ್ನೆಲ್ಲ ನೋಡಿದರೆ ನಾವು ತಾಂತ್ರಿಕವಾಗಿ, ವೈಜ್ಞಾನಿಕವಾಗಿ ಮತ್ತು ಆರ್ಥಿಕವಾಗಿ ಮುಂದುವರಿದಿದ್ದರೂ, ಇನ್ನೂ ಸುಸಂಸ್ಕೃತ ಮಾನವನಾಗಲು ಬಹಳ ದೂರ ಕ್ರಮಿಸಬೇಕು ಎಂದು ತೋರುತ್ತದೆ.

ಮಾಸ್ತಿಯವರ ಮಾತು, ನಡವಳಿಕೆ, ಚಿಂತನೆ ಇವನ್ನೆಲ್ಲ ಈಗಿನ ವಿದ್ಯಮಾನಗಳಿಗೆ ಹೋಲಿಸಿ ನೋಡಿದರೆ ಅವರದ್ದು ಎಂಥ ಉನ್ನತವಾದ ವ್ಯಕ್ತಿತ್ವ ಎಂದು ನಮಗೆ ಗೋಚರಿಸುತ್ತದೆ. ಅಂಥ ಮಹನೀಯರು ನಮ್ಮ ಜೀವಿತ ಕಾಲದಲ್ಲಿ ನಮ್ಮ ಮಧ್ಯೆ ಜೀವಿಸಿದ್ದರು ಎಂದು ಹೇಳಿಕೊಳ್ಳುವುದೇ ನಮಗೆ ಹೆಮ್ಮೆಯ ವಿಷಯವಾಗಿದೆ.

ಮಾಸ್ತಿಯವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದ, ಅವರೊಡನೆ ವ್ಯವಹರಿಸಿದ್ದ ಕೆಲವೇ ಕೆಲವರು ಇಂದೂ ನಮ್ಮೊಡನಿದ್ದಾರೆ. ಅಂಥವರಲ್ಲಿ ಪ್ರಮುಖರೆಂದರೆ ‘ನಿತ್ಯೋತ್ಸವ’ ಕವಿ ಎಂದು ಪ್ರಸಿದ್ಧರಾಗಿರುವ ಶ್ರೀಯುತ ನಿಸಾರ್ ಅಹಮದ್ ಅವರು. ಮಾಸ್ತಿಯವರು ಮತ್ತು ಗಾಂಧೀಬಜಾರ್ ಬಗ್ಗೆ ಅವರು ಒಂದು ಪದ್ಯವನ್ನು ಬರೆದಿದ್ದಾರೆ.

ಮಾಸ್ತಿ ವೆಂಕಟೇಶ ಅಯ್ಯಂಗಾರ್ಯರನ್ನು, ನಾನು ಬೆಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಕಾಲದಲ್ಲಿ ಅನೇಕ ಸಲ ಬೆಂಗಳೂರಿನ ಗಾಂಧಿಬಜಾರಿನ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ನೋಡಿದ್ದೆ. ಒಮ್ಮೆಯಂತೂ ಸಂಜೆ ಹೊತ್ತಲ್ಲಿ ಕೈಲಿ ಛತ್ರಿ ಹಿಡಿದು ಕೊಂಡು, ಕನ್ನಡದ ವರಕವಿ ಬೇಂದ್ರೆಯವರ ಜೊತೆ ಮಾತನಾಡುತ್ತಾ ಗಾಂಧಿಬಜಾರಿನಲ್ಲಿ ನಡೆಯುತ್ತಾ ಹೋಗುತ್ತಿದ್ದುದನ್ನು ಕಂಡಿದ್ದೇನೆ.

ಆ ಕಾಲದಲ್ಲಿ ಗಾಂಧೀಬಜಾರಿನ ರಸ್ತೆಯ ಎರಡೂ ಬದಿಯಲ್ಲಿ ದಟ್ಟವಾದ ಮರಗಳ ಸಾಲು ಸಾಲೇ ಇತ್ತು. ಸಂಜೆಯಾದರೆ ಸಾಕು, ಸಾವಿರಾರು ಗಿಳಿಗಳು ಗೂಡು ಸೇರಲು ಆ ಮರಗಳ ಕೊಂಬೆಗಳ ಮೇಲೆ ಹಾರಾಡುತ್ತಾ ಬಂದು ಕುಳಿತುಕೊಳ್ಳುವ ದೃಶ್ಯವಂತೂ ಅತ್ಯಂತ ರಮಣೀಯವಾಗಿರುತ್ತಿತ್ತು. ಅದೆಷ್ಟು ಗಿಳಿಗಳು, ಅವುಗಳ ಕಲರವ, ಮೇಲೆ, ಕೆಳೆಗೆ, ಪಕ್ಕಕ್ಕೆ, ಹಾರುತ್ತಾ ಅವುಗಳ ಗುಂಪು ಮಾಡಿತ್ತಿದ್ದ ಮಧುರ ಧ್ವನಿ, ಮೇಲಕ್ಕೆ ಕತ್ತೆತ್ತಿ ನೋಡಿದರೆ ಮರಗಳ ಎಲೆಗಳೇ ಕಾಣುತ್ತಿರಲಿಲ್ಲ. ಎಲ್ಲಾ ಮರಗಳೂ ಗಿಳಿಗಳಿಂದ ಮುಚ್ಚಿ ಹೋಗಿರುತ್ತಿದ್ದವು. 

ಈಗಿನ ಗಾಂಧೀಬಜಾರು ರಸ್ತೆ ಹಿಂದೆ ಇದ್ದಹಾಗಿಲ್ಲವಲ್ಲ ಎಂಬುದೇ ವ್ಯಥೆ. ಅಭಿವೃದ್ಧಿಯ ಹೆಸರಿನಲ್ಲಿ ಪ್ರಕೃತಿಯ ಚೆಲುವನ್ನೇ ಬಲಿ ಕೊಟ್ಟಿದ್ದೇವೆಯೆ? ಎಂಬ ಪ್ರಶ್ನೆ ನನ್ನಂಥವರನ್ನು ಕಾಡದೇ ಇರುವುದಿಲ್ಲ. 

ವಿದ್ಯಾರ್ಥಿಯಾಗಿದ್ದ ನನಗೆ ಆಗ ಮಾಸ್ತಿ ಬೇಂದ್ರೆಯವರನ್ನು ಕಂಡಾಗ ಹತ್ತಿತ ಹೋಗಿ ನಮಸ್ಕರಿಸಿ ಮಾತನಾಡಿಸಬೇಕೆಂಬ ಆಸೆಯಾಗಿತ್ತು. ಆದರೆ ಈ ಎರಡು ದಿಗ್ಗಜಗಳ ಹತ್ತಿರ ಸುಳಿಯಲು ಆಗ ನನಗೆ ಧೈರ್ಯ ಸಾಲಲಿಲ್ಲ. ದೂರದಿಂದಲೇ ನೋಡಿ ಆಶ್ಚರ್ಯ ಪಟ್ಟಿದಷ್ಟೇ ನನ್ನ ಪಾಲಿಗೆ ಬಂದ ಸೌಭಾಗ್ಯ.

ನನ್ನಂತಯೇ ಇನ್ನೂ ಅನೇಕ ಯುವಕರಿಗೆ ಈ ರೀತಿಯ ಅನುಭವ ಆಗ ಆಗಿರಬೇಕು ಅಂತ ನನ್ನ ಅನಿಸಿಕೆ. ಈ ಮಹನೀಯರುಗಳನ್ನು ಹತ್ತಿರ ಹೋಗಿ ಮಾತನಾಡಿಸುವ ಧೈರ್ಯ ಮಾಡದೇ ಹೋದರೂ, ದೂರದಿಂದಲಾದರೂ ನೋಡಿದ ಸಮಾಧಾನ ಇತ್ತು. 

ಬೆಂಗಳೂರಿನಲ್ಲಿ ನಾನು ವ್ಯಾಸಂಗ ಮುಂದುವರೆಸುತ್ತಿದ್ದ ಸಮಯ. ಸುಮಾರು ೧೯೭೧ ರಿಂದ ೧೯೭೪ರ ಆಸುಪಾಸಿನಲ್ಲಿ, ಒಂದು ದಿನ ನಗರದ ಪುರಭವನದಲ್ಲಿ ಒಂದು ಕವಿಗೋಷ್ಠಿ ಏರ್ಪಾಡಾಗಿತ್ತು. ಆ ಕವಿಗೋಷ್ಠಿಯನ್ನು ಮಾಸ್ತಿಯವರು ನಡೆಸಿಕೊಡುತ್ತಾರೆ ಎಂದು ಕಾರ್ಯಕ್ರಮದಲ್ಲಿ ನಮೂದಿಸಿತ್ತು. ಆ ಗೋಷ್ಠಿಯಲ್ಲಿ ಕನ್ನಡದ ವರಕವಿ ಬೇಂದ್ರೆ, ಚನ್ನವೀರ ಕಣವಿ, ಮೈಸೂರು ಮಲ್ಲಿಗೆ ಖ್ಯಾತಿಯ ಕೆ.ಎಸ್. ನರಸಿಂಹಸ್ವಾಮಿ ಮುಂತಾದ ಅನೇಕ ಮಹಾಕವಿಗಳು ಭಾಗವಹಿಸುತ್ತಾರೆ ಎಂದು ತಿಳಿಸಲಾಗಿತ್ತು. ಇಂಥ ಒಂದು ಸುವರ್ಣಾವಕಾಶವನ್ನು ತಪ್ಪಿಸಿಕೊಳ್ಳುವುದು ಉಂಟೇ. ಸಂಜೆ ಬಹಳ ಮುಂಚಿತವಾಗಿಯೇ ಆ ಕಾರ್ಯಕ್ರಮಕ್ಕೆ ಹಾಜರಾಗಿ ಬಿಟ್ಟೆ. ಆದಷ್ಟು ಮುಂದೆ ಇರುವ ಸೀಟಿನಲ್ಲಿ ಸ್ಥಳ ಗಿಟ್ಟಿಸಿಕೊಂಡು ಕುಳಿತುಕೊಂಡೆ. 

ಈ ಕವಿಗೋಷ್ಠಿಯ ಮತ್ತೊಂದು ಆಕರ್ಷಣೆ ಎಂದರೆ ಕವಿಗಳು ವಾಚಿಸುವ ಕವನಗಳನ್ನು ಹೆಸರಾಂತ ಸುಗಮ ಸಂಗೀತ ಗಾಯಕರು ಹಾಡುವ ಏರ್ಪಾಡೂ ಸಹ ಇತ್ತು. ಈ ಕವಿಗೋಷ್ಠಿಯಲ್ಲಿ ಸುಗಮ ಸಂಗೀತ ಪ್ರಕಾರದ ಆದ್ಯ ಪ್ರವರ್ತಕರಾದ ಶ್ರೀ ಪಿ. ಕಾಳಿಂಗರಾಯರ ಗಾಯನ ಏರ್ಪಾಡಾಗಿತ್ತು. ಅವರಲ್ಲದೆ ಇನ್ನೂ ಅನೇಕ ಮುಂಚೂಣಿ ಗಾಯಕರೂ ಸಹ ಭಾಗವಹಿಸುವವರಿದ್ದರು. 

ತಂತ್ರಜ್ಞಾನದ ಬಳಕೆ ಈಗಿನಷ್ಟು ಮುಂದುವರೆದ್ದಿದ್ದರೆ ಅಂದಿನ ಆ ಅಪೂರ್ವ ಕಾರ್ಯಕ್ರಮನ್ನು ನಾನು ಆಡಿಯೋ, ವೀಡಿಯೋ ಮುದ್ರಣಮಾಡಿಕೊಂಡು ಬಿಡಬಹುದಿತ್ತು. ಆದರೆ ಸಾಮಾನ್ಯರಿಗೆ ಈ ಸೌಲಭ್ಯಗಳು ಇನ್ನೂ ಕೈಗೆಟುಕಿರಲಿಲ್ಲ. ಅವೆಲ್ಲ ಆಕಾಶವಾಣಿ ಮುಂತಾದ ಸಂಸ್ಥೆಗಳಲ್ಲಿ ಕೆಲವಕ್ಕೆ ಮಾತ್ರ ಸಿಗುವಂಥ ಪರಿಸ್ಥಿತಿ ಇತ್ತು. ನಮ್ಮಂಥ ಸಾಮಾನ್ಯರು ಬರೀ ನೋಡುವುದು, ಕೇಳಿಸಿಕೊಳ್ಳುವುದು, ಮೆಲಕು ಹಾಕುವುದು ಇಷ್ಟಕ್ಕೇ ಸಮಧಾನ ಪಟ್ಟುಕೊಳ್ಳಬೇಕಿತ್ತು, ಹಾಗಿತ್ತು ಆಗಿನ ಸಂಧರ್ಭ.

ಈಗ ನಾನು ಓದುಗರಿಗೆ ನನ್ನ ನೆನಪಿನ ಬುತ್ತಿಯಿಂದ ಈ ಕವಿಗೋಷ್ಠಿಯ ವಿವರಣೆಯನ್ನು ಹೆಕ್ಕಿ ತೆಗೆದು ನೀಡುತ್ತಿದ್ದೇನೆ. ಮಾಸ್ತಿ ಬೇಂದ್ರೆ, ಕೆ.ಎಸ್.ನ, ಕಾಳಿಂಗರಾವ್ ಮುಂತಾದ ದಿಗ್ಗಜರುಗಳು ಭಾಗವಹಿಸಿದ ಆ ಸಮಾರಂಭವನ್ನು ಅಷ್ಟು ಸುಲಭವಾಗಿ ಮರೆಯಲು ಸಾಧ್ಯವೇನು? 

ಸಮಾರಂಭವು ನಿಗದಿ ಪಡಿಸಿದ ಸಮಯಕ್ಕೆ ಸರಿಯಾಗಿ ಪ್ರಾರಂಭವಾಯಿತು. ವೇದಿಕೆಯ ಮೇಲೆ, ಮಾಸ್ತಿಯವರು, ವರಕವಿ ಬೇಂದ್ರೆಯವರು, ಕೆ.ಎಸ್.ನ, ಚನ್ನವೀರ ಕಣವಿ ಮುಂತಾದ ಗಣ್ಯರೆಲ್ಲ ಮಂಡಿಸಿದ್ದರು. ಔಪಚಾರಿಕವಾಗಿ ಕಾರ್ಯಕ್ರಮದ ಆರಂಭವಾದ ಮೇಲೆ ಮಾಸ್ತಿಯವರು ಎದ್ದು ನಿಂತರು. ಸಭೆಯನ್ನುದ್ದೇಶಿಸಿ ಮಾತನಾಡಲು ಪ್ರಾರಂಭಿಸಿದರು. ಆದಷ್ಟು ಅವರ ಮಾತುಗಳಲ್ಲಿ ಈ ಕೆಳೆಗೆ ಓದುಗರಿಗಾಗಿ ಮಂಡಿಸಿದ್ದೇನೆ. 

“ನನ್ನ ಊರು ಮಾಸ್ತಿ, ಬೆಂಗಳೂರಿಗೆ ಹತ್ತಿರದಲ್ಲೇ ಇದೆ. ನಾವುಗಳೆಲ್ಲ ಚಿಕ್ಕವರಾಗಿದ್ದಾಗ ಮೊದಲನೇ ಮಹಾಯುದ್ಧದ ಸಮಯ. ಊಟ ಮಾಡಲು ಅಕ್ಕಿ ಸಿಗುತ್ತಿರಲಿಲ್ಲ. ತಿನ್ನೋಕೆ ಏನು ಮಾಡುವುದು. ನನ್ನ ತಾಯಿ ಸಾಮೆ ಅಕ್ಕಿಯಲ್ಲಿಯೇ ಅನ್ನ ಮಾಡುತ್ತಿದ್ದರು. ಅದು ಮುದ್ದೆ ಮುದ್ದೆಯಾಗಿ ಅನ್ನವಾಗಿರುತ್ತಿತ್ತು. ಆ ಸಾಮೆ ಅಕ್ಕಿ ಮುದ್ದೆ ಅನ್ನವನ್ನೇ ನಾವು ತಿನ್ನ ಬೇಕಿತ್ತು. ತಿನ್ನಲು ಬೇರೇನೂ ಇಲ್ಲದಿದ್ದರೆ, ಸಿಕ್ಕಿದ ಆ ಸಾಮೆ ಅಕ್ಕಿ ಅನ್ನದ ಮುದ್ದೇನೆ ನುಂಗಬೇಕು. ಹೊಟ್ಟೆಪಾಡಿಗೆ ಅಷ್ಟಾದರೂ ಸಿಗುತ್ತಿತ್ತಲ್ಲ ಅದೇ ಸಮಾಧಾನ.

ಹೀಗೆ ಸಾಮೆ ಅಕ್ಕಿ ಅನ್ನದ ಮುದ್ದೆಯನ್ನೇ ತಿಂದು ಕಾಲ ತಳ್ಳುತ್ತಿದ್ದೆವು. ಚಿಕ್ಕವಯಸ್ಸು, ಏನು ತಿಂದರೂ ಜೀರ್ಣವಾಗಿ ಬಿಡುತ್ತಿತ್ತು. ಹೀಗೇ ಇರುವಾಗ ಕೆಲವು ಸಲ ಅಂದರೆ ತಿಂಗಳಿಗೋ, ಎರಡು ತಿಂಗಳಿಗೋ ಒಂದು ಸಲ ಅಕ್ಕಿ ಸಿಗುತ್ತಿತ್ತು. ನನ್ನ ತಾಯಿ, ಅಕ್ಕಿಯಲ್ಲಿ ಅನ್ನ ಮಾಡಿ, “ಬನ್ರೋ ಅಕ್ಕಿ ಅನ್ನ ಮಾಡಿದ್ದೇನೆ, ತಿನ್ನೋಕೆ ಬನ್ನಿ” ಅಂತ ಕರೆಯುತ್ತಿದ್ದರು. ನಮಗೆಲ್ಲ ಸಂಭ್ರಮವೋ ಸಂಭ್ರಮ. ಇಂದು ಅಕ್ಕಿ ಅನ್ನ ಸಿಗುತ್ತದೆ ಅಂತ. ಅಕ್ಕಿ ಅನ್ನ ಬಡಿಸಿದರೆ, ಬರೀ ಅನ್ನವನ್ನೇ ಗಬಗಬ ಅಂತ ನುಂಗಿಬಿಡುತ್ತಿದ್ದೆವು. ಸಾಮೆ ಅಕ್ಕಿ ಅನ್ನದ ಮುದ್ದೆಯನ್ನೇ ತಿಂದ ನಮಗೆಲ್ಲ ಅಕ್ಕಿ ಅನ್ನ ಸಿಕ್ಕಿದಾಗ ಪಂಚಭಕ್ಷ ಪರಮಾನ್ನ ಅಂತಾರಲ್ಲ ಹಾಗೆ ಅಷ್ಟು ರುಚಿಯಾಗಿರುತ್ತಿತ್ತು. 

ಇದನ್ನೆಲ್ಲ ಯಾಕೆ ಹೇಳಿದೆ ಅಂದ್ರೆ, ಹಿಂದೆ ಕನ್ನಡದ ಕಾರ್ಯಕ್ರಮ ಅಂದ್ರೆ ಯಾರು ಬರ್ತಾಯಿದ್ರು? ಕನ್ನಡ ಸಾಹಿತ್ಯ ಸಮ್ಮೇಳನ ಅಂದ್ರೆ, ಯಾವುದೋ ಒಂದು ಊರಿನಲ್ಲಿ ಒಂದು ಹೈಸ್ಕೂಲೋ ಅಥವಾ ಮಿಡ್ಲ್ ಸ್ಕೂಲೋ ಖಾಲಿ ಮಾಡಿಸಿಕೊಂಡು ಅಲ್ಲೇ ನಾವೆಲ್ಲ ಸೇರ್ಕೋಳ್ಳೋದು. ಬೆಳ್ಳಾವೆ ನಾರಣಪ್ಪ ಅಲ್ಲಿರೋ ಭಾವೀಲಿ ನೀರು ಸೇದಿ ಹಾಕ್ತಾ ಇದ್ರೆ, ಊರವರು ಕೊಟ್ಟ ಪಾತ್ರೆ ಮತ್ತು ತರಕಾರಿಗಳನ್ನು ಉಪಯೋಗಿಸಿ ಗುಂಡಪ್ಪ ಒಳ್ಳೇ ಮಜ್ಜಿಗೆ ಹುಳಿ ತಯಾರು ಮಾಡ್ತಾ ಇದ್ದ. ಸರಿ ಎಲ್ಲರೂ ಸೇರಿ ಮಾಡಿದ ಅಡುಗೆಯನ್ನು ಗಡದ್ದಾಗಿ ತಿಂದು ಮಲಗಿ ನಿದ್ದೆ ಮಾಡಿ ಎದ್ದ ಮೇಲೆ, ನಾನು ಬರೆದ ಪದ್ಯಾನ ಗುಂಡಪ್ಪ ಓದಿ ಬಿಡೋದು, ಅವನು ಬರೆದ ಪದ್ಯಗಳನ್ನು ನಾನು ಓದೋದು, ಹೀಗೆ ಒಬ್ಬರ ಪದ್ಯ, ಕವನ ಮುಂತಾದವನ್ನು ಬೇರೊಬ್ಬರು ಓದಿ ಮುಗಿಸಿದರೆ ಸಮ್ಮೇಳನ ಮುಗೀತು. ಕನ್ನಡ ಅಂದ್ರೆ ಜನ ಎಲ್ಲಿ ಸೇರ್ತಾಯಿದ್ರು? ಅಂದ್ರೆ ಆಗ ಕನ್ನಡಕ್ಕೆ ಸಾಮೆ ಅಕ್ಕಿ ಮುದ್ದೆ ತಿನ್ನೋ ಕಾಲ ಅಂತ ಹೇಳಬಹುದು. 

ಆದರೆ ಈಗ ನೋಡಿ ಈ ಮುದುಕ ಮಾತಾಡ್ತಾನೆ, ಬೇರೆ ಎಲ್ಲಾ ಕವಿಗಳು ಬಂದಿದ್ದಾರೆ ಅಂತ ಇಷ್ಟು ಜನ ಬಂದು ಸೇರಿದ್ದೀರೆಲ್ಲಾ ಈ ಕನ್ನಡ ಕರ್ಯಕ್ರಮಕ್ಕೆ, ಬಹಳ ಸಂತೋಷ. ಈಗ ಕನ್ನಡಕ್ಕೆ ಅಕ್ಕಿ ಅನ್ನ ತಿನ್ನೋಕಾಲ ಬಂದಿದೆ. 

ಇಷ್ಟೇ ಸಾಲದು ಇನ್ನು ಮುಂದೆ ಕನ್ನಡಕ್ಕೆ ಕೇಸರಿಭಾತು, ಮೈಸೂರು ಪಾಕು ತಿನ್ನೋ ಕಾಲ ಬರಬೇಕು”

ಎಂಥಾ ಅಂತಃಕರಣ ತುಂಬಿದ ಮಾತುಗಳು ಕನ್ನಡದ ಏಳಿಗೆಯ ಬಗ್ಗೆ. ಮಾಸ್ತಿಯವರಲ್ಲದೆ ಬೇರೆಯಾರಿಂದಲೂ ಈ ರೀತಿಯಾದ ಹಾರೈಕೆಯ ಮಾತುಗಳು ಬರಲು ಸಾಧ್ಯವಿಲ್ಲ. 

ಮುಂದೆ ಮಾಸ್ತಿಯವರು ಆ ವೇದಿಕೆಯಲ್ಲಿದ್ದ ಪ್ರತಿಯೊಬ್ಬ ಕವಿಯನ್ನು ಸಭೆಗೆ ಒಬ್ಬೊಬ್ಬರನ್ನಾಗಿ ಪರಿಚಯಿಸಿದರು. ಅವರು ಅಂದು ಅಲ್ಲಿದ್ದ ಕವಿವರ್ಯರನ್ನು ಪರಿಚಯಿಸಿದ್ದು ಹೀಗೆ:

ಮೊದಲಿಗೆ ಬೇಂದ್ರೆಯವರ ಸರದಿ. ಮಾಸ್ತಿಯವರ ಮಾತುಗಳಲ್ಲಿ “ಇವನು ಬೇಂದ್ರೆ. ಅತ್ಯಂತ ನತದೃಷ್ಟ ಈತ. ಏಕೆಂದರೆ ಅತ್ಯಂತ ಅದ್ಭುತವಾದ ಕವಿತೆಗಳನ್ನು ಕನ್ನಡದಲ್ಲಿ ಬರೆದು ಬಿಟ್ಟನಲ್ಲ! ಇಂಗ್ಲೀಷಿನ ಕವಿಗಳಾದ ಷೆಲ್ಲಿ, ಬೈರನ್ ಮುಂತಾದ ನೂರಾರು ಮಂದಿಯನ್ನು ಇವನ ಮುಂದೆ ನಿವಾಳಿಸಿ ಒಗೆಯಬೇಕು. ಇಂಗ್ಲೀಷಿನಲ್ಲಿ ಇವನೇನಾದರೂ, ಕನ್ನಡದಲ್ಲಿ ತಾನು ಬರೆದ ಕವಿತಗಳನ್ನು ಬರೆದಿದ್ದರೆ, ಒಂದೇಕೆ ಅನೇಕ ನೋಬೆಲ್ ಪ್ರೈಸ್ ಕೊಡಬೇಕಾಗಿತ್ತು ಇವನಿಗೆ. ಏನು ಮಾಡೋದು? ಇವನು ಬರೆದ ಕನ್ನಡದ ಕವಿತೆಗಳನ್ನು ಯಾರ್ಕೇಳಾರೆ? ಕನ್ನಡದಲ್ಲೇ ಕೇಳೋವ್ರಿಲ್ಲವಲ್ಲ. ಈಗ ಇವನು ತನ್ನ ಒಂದು ಕವಿತೆಯನ್ನು ನಿಮ್ಮ ಮುಂದೆ ವಾಚಿಸುತ್ತಾನೆ. ಅದನ್ನ ಕಾಳಿಂಗರಾಯ ಹಾಡ್ತಾನೆ, ಕೇಳಿ” 

ಬೇಂದ್ರೆಯವರು ನಸುನಗುತ್ತಾ ಎದ್ದು ನಿಂತು ಅಂದು ವಾಚಿಸಿದ ಕವಿತೆಯ ಮೊದಲೆರೆಡು ಸಾಲುಗಳು ನನಗೆ ನೆನಪಿದೆ, 

ಹೇ ಭಾಯ್ ಹೇ ಬಂಧು

ಮಾನವತೆಯೆ ಒಂದು

ರಾಮಾಯ ಸ್ವಸ್ತಿ, ರಾವಣಾಯ ಸ್ವಸ್ತಿ,

ಸ್ವಸ್ತಿ, ಸ್ವಸ್ತಿ 

ಈ ಕವಿತೆಯನ್ನು ಕಾಳಿಂಗರಾಯರು ತಮ್ಮ ಝೇಂಕರಿಸುವ ಧ್ವನಿಯಲ್ಲಿ ಅತ್ಯಂತ ಮಧುರವಾಗಿ ಹಾಡಿದರು. ವರಕವಿ ಬೇಂದ್ರೆಯವರೇ ಓದಿ, ಗಾನ ಗಂಧರ್ವ ಕಾಳಿಂಗರಾಯರ ಬಾಯಲ್ಲಿ ಆ ಹಾಡನ್ನು ಕೇಳಿದವರೆಲ್ಲ ಅಂದು ಒಂದು ಅಲೌಕಿಕ ಆನಂದವನ್ನು ಅನುಭವಿಸಿದರು. ಈ ರೀತಿಯಾದ ಸೌಭಾಗ್ಯ ಎಲ್ಲರಿಗೂ ಸಿಗುವುದಿಲ್ಲ. ಬಹಳ ಅಪರೂಪವಾದ ಒಂದು ಅವಕಾಶ ಅಂದು ಅಲ್ಲಿ ನೆರೆದಿದ್ದವರ ಪಾಲಿಗೆ ಒದಗಿಬಂದಿತ್ತು. 

ಬೇಂದ್ರೆಯವರ ಸರದಿಯಾದ ನಂತರ ಮಾಸ್ತಿಯವರು ಮೈಸೂರು ಮಲ್ಲಿಗೆ ಖ್ಯಾತಿಯ ಕೆ.ಎಸ್. ನರಸಿಂಹಸ್ವಾಮಿಯವರನ್ನು ಸಭೆಗೆ ಪರಿಚಯಿಸಿದ ರೀತಿ ಇದು.

“ಇವನು ನರಸಿಂಹಸ್ವಾಮಿ, ಮೈಸೂರು ಮಲ್ಲಿಗೆ ನರಸಿಂಹಸ್ವಾಮಿ. ಮೈಸೂರು ಮಲ್ಲಿಗೆ ಪದ್ಯಗಳನ್ನು ಬೆರೆಯೋಕೆ ಮುಂಚೆ, ಇವನು ಬೇರೆ ಏನು ಬರೆದಿದ್ದ ಅದು ನಮಗೆ ಗೊತ್ತಿಲ್ಲ. ಮೈಸೂರು ಮಲ್ಲಿಗೆ ಬರೆದ ಮೇಲೆ ಇವನು ಬೇರೇನು ಬರೆದಿದ್ದರೂ ಅವೆಲ್ಲ ನಮಗೆ ಬೇಕಿಲ್ಲ. ಮೈಸೂರು ಮಲ್ಲಿಗೆ ಈಕ್ವಲ್ಸ್ ನರಸಿಂಹಸ್ವಾಮಿ, ನರಸಿಂಹಸ್ವಾಮಿ ಈಕ್ವಲ್ಸ್ ಮೈಸೂರು ಮಲ್ಲಿಗೆ, ಈಗ ಅವನು ಪದ್ಯ ಓದ್ತಾನೆ ಕೇಳಿ”

ಇದಾನ ನಂತರದ ಸರದಿ ಶ್ರೀ ಚನ್ನವೀರ ಕಣವಿಯವರದ್ದು, ಅವರನ್ನು ಮಾಸ್ತಿಯವರು ಪರಿಚಯಿಸಿದ್ದು ಹೀಗೆ “ಇವನು ಚೆನ್ನವೀರ ಕಣವಿ ಅಂತ, ಚಿಕ್ಕ ವಯಸ್ಸಿನ ಕವಿ, ಒಳ್ಳೊಳ್ಳೆ ಕವಿತೆಗಳನ್ನು ಬರೆದಿದ್ದಾನೆ. ಇವನ ಕೆಲವು ಕವಿತೆಗಳನ್ನ ನಾನು ಓದಿಸಿ ಕೇಳಿದ್ದೇನೆ. ಆಶ್ಚರ್ಯ ಅಂದರೆ, ಇವನು ತಿಪ್ಪೆಮೇಲೆ ಒಂದು ಕವಿತೆ ಬರೆದಿದ್ದಾನೆ. ಎಲ್ಲೂ ಮಲ್ಲಿಗೇ ಮೇಲೆ ಬರೆದ್ರೆ ತಿಪ್ಪೇ ಮೇಲೆ ಬರೆಯೋರು ಯಾರು? ಆ ಕೆಲಸ ಇವನು ಮಾಡಿದ್ದಾನೆ. ಅವನ ಕವಿತೆ ಈಗ ಅವನ ಬಾಯಿಂದಾನೆ ಕೇಳಿ” 

ಹೀಗೆ ಅಲ್ಲಿ ಆಗಮಿಸಿದ್ದ ಪ್ರಸಿದ್ಧ ಕವಿವರ್ಯರುಗಳನ್ನು ಮಾಸ್ತಿಯವರು ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ಸಭೆಗೆ ಪರಿಚಯಿಸಿದ್ದು ಅಂದಿನ ಸಮಾರಂಭದ ವಿಶೇಷ.

ಇಲ್ಲಿ ನಾವು ಗಮನಿಸಬೇಕಾದ ಅಂಶ ಅಂದರೆ, ಪ್ರತಿಯೊಬ್ಬ ಕವಿಯ ಬಗ್ಗೆಯೂ ಮಾಸ್ತಿಯವರು ಅತ್ಯಂತ ಅಭಿಮಾನ, ಪ್ರೀತಿ ಮತ್ತು ಸಲಿಗೆಯಿಂದ ಸಭೆಗೆ ತುಂಬು ಹೃದಯದಿಂದ ಪರಿಚಯ ಮಾಡಿಸಿದ ರೀತಿ. ಅಂದು ಅವರು ಪ್ರತಿಯೊಂದು ಕವಿಯ ಬಗ್ಗೆಯೂ ಆಡಿದ ಮಾತುಗಳು ಅವರ ಮನದಾಳದಿಂದ ಬಂದ ಸವಿನುಡಿಗಳು. ಯಾರ ಬಗ್ಗೆಯಾಗಲೀ ಯಾವುದೇ ರೀತಿಯ ಪೂರ್ವಗ್ರಹವಾಗಲಿ, ಕುಚೋದ್ಯವಾಗಲೀ ಇಲ್ಲದ ನಿರ್ಮಲ ಮನಸ್ಸಿನಿಂದ ಆಡಿದ ಮಾತುಗಳು. 

ಅಷ್ಟೊಂದು ಸಲಿಗೆ, ಪ್ರೀತಿ ತುಂಬಿದ ನುಡಿಗಳನ್ನು ಮಾಸ್ತಿಯವರಲ್ಲದೆ ಬೇರೊಬ್ಬರಿಂದ ಆಡಲು ಸಾಧ್ಯವಿಲ್ಲ. ಕನ್ನಡದ ಬಗ್ಗೆ, ಕನ್ನಡ ಬರಹಗಾರರ ಬಗ್ಗೆ ಅಷ್ಟೊಂದು ಪ್ರೀತಿ, ವಿಶ್ವಾಸಗಳನ್ನು ತೋರುವ ನಿರ್ಮಲ ಮನಸ್ಸಿನ ಮಾಸ್ತಿಯವರು ಅಂದು ನಡೆಸಿಕೊಟ್ಟ ಆ ಕವಿಗೋಷ್ಠಿ, ಒಂದು ಅಪೂರ್ವ ಸಮಾರಂಭ. ನನ್ನ ಅಭಿಪ್ರಾಯದಲ್ಲಿ ಮತ್ತೆ ಆ ರೀತಿಯಾದ ಸಂಧರ್ಭದಲ್ಲಿ ಭಾಗಿಯಾಗುವ ಅವಕಾಶ ಒದಗಿ ಬರಲಾರದು. “ನಭೂತೋ ನಭವಿಷ್ಯತಿ” ಎಂಬ ಸಂಸ್ಕೃತ ನುಡಿ ಈ ಕವಿಗೋಷ್ಠಿಗೆಂದೇ ನುಡಿದಂತಿದೆ.

Rating
No votes yet