ಮಾಸ್ತಿಯವರ "ಗೌಡರಮಲ್ಲಿ" ಸಕ್ಕತ್ತಾಗಿದೆ.

ಮಾಸ್ತಿಯವರ "ಗೌಡರಮಲ್ಲಿ" ಸಕ್ಕತ್ತಾಗಿದೆ.

DLI ನಲ್ಲಿ ಹುಡುಕುತ್ತಿದ್ದಾಗ ಮಾಸ್ತಿಯವರ  'ಗೌಡರ ಮಲ್ಲಿ' ಕಬ್ಬ ಸಿಕ್ಕಿತು. ಹಾಗೆ ಮುನ್ನುಡಿಯಲ್ಲಿ ಕಣ್ಣಾಡಿಸಿದಾಗ 'ಹನುಮಗಿರಿಯ ಹೊಲಗಳಲ್ಲಿ' ಅಂತ ಬರೆದುದು ಕಣ್ಣಿಗೆ ಬಿತ್ತು. ಮತ್ತು ಹಾಗೆ ಈ ನೆಗೞ್ಚು ಅವರು ಕಣ್ಣಿಗೆ ಕಂಡದ್ದನ್ನು
ಕಬ್ಬದಲ್ಲಿ ಇಳಿಸಿದ್ದಾರೆ ಎಂಬುದು ತಿಳಿಯಿತು. ಅವರು ಮುನ್ನುಡಿಯಲಿ ಹೀಗೆ ಹೇಳಿದ್ದಾರೆ.ಬದುಕಲ್ಲಿ ಕಂಡ ಹಲವಾರು ಸಂಗತಿಗಳು ನಮ್ಮಲ್ಲಿ ಹಲವು ಅನಿಸುಗಳು/ಭಾವನೆಗಳನ್ನು ಮೂಡಿಸುತ್ತವೆ. ಕೆಲವು ಅನಿಸುಗಳು ನಮ್ಮ ಪಳಗಿಗೆ/ಅನುಬವಕ್ಕೆ
ಬರದೇ ಇರಬಹುದು ಆದ್ರೆ ಆ ಅನಿಸುಗಳು ಮನಸ್ಸಿನಲ್ಲೇ ಉಳಿದುಬಿಡುತ್ತವೆ. ಆಗ ಇಂತ ಕಬ್ಬಗಳು ಆ ಅನಿಸುಗಳನ್ನು ಪಳಗಿಸುವುದಕ್ಕೆ/ಅನುಬವಿಸುವುದಕ್ಕೆ ನೆರವು ನೀಡುತ್ತವೆ.

ಈ ಮೇಲೆ ಹೇಳಿದ ಹನುಮಗಿರಿ ಇರುವುದು ನಮ್ಮ ಮನೆಯ ಹತ್ತಿರವೇ. ಈ ಬೆಟ್ಟದ ತಪ್ಪಲಲ್ಲಿ ಆಟೋಂದು ಚೆನ್ನಾಗಿರುವ ರಾಗಿ ಹೊಲಗಳು ಆಗ ಇದ್ದವು ತಿಳಿದು ನಲಿವಾಯ್ತು. ಈಗ ರಾಗಿ ಕಾಳು ಕಾಣಕ್ಕೆ ಸಿಗಲ್ಲ.
ಇರಲಿ, ಕಬ್ಬದ ವಿಸ್ಯಕ್ಕೆ ಬರೋಣ. ಈ ಕಬ್ಬ ತುಂಬಿ ತಿಳಿಯಾಗಿದೆ. ನಾನು ಮಾಸ್ತಿಯವರ ಕಬ್ಬ ಓದಿರಲಿಲ್ಲ. ಗದ್ಯ ಓದಿದ್ದೆ. ಕಬ್ಬ ತಿಳಿಯಾಗಿರುವುದನ್ನ ಓದಿ ಒಂತರ ನನಗೆ ತಣಿಯುವ ಅಚ್ಚರಿಯಾಯಿತು(pleasant surprise).

ವಯ್ಬವ,
 ನಿನ್ನ ಪುರಾಣ ಸಾಕು, ಮಾಸ್ತಿಯವರ ಪದಗಳು ಬೇಕು   :)

" ಮಾನವಮಿ ಕಲೆದಿತ್ತು; ದೀವಳಿಗೆ ಸಾಗಿತ್ತು;
   ಮುಗಿಲ ಮಳೆ ಹುಯ್ದಾಗಿ ನಿಲ್ಲುತಿತ್ತು;
  ಚಳಿ ಸುಳಿದು ಬರುತಿತ್ತು; ದೇಗುಲದಿ ತಿಂಗಳಲಿ
  ಸಾಲು ಸೊಡರಿನ ಪೂಜೆ ಸಲ್ಲುತಿತ್ತು.

ಬೆಳದ ರಾಗಿಯ ಹೊಲವ ಕಾಯುತಿರುವಳು ಮಲ್ಲಿ,
  ಹದಿನೆಂಟು ಹರೆಯದ ಬೇಡ ಹೆಣ್ಣು;
ಕುಯ್ಲ ದಿನ ಬಂತೇನೊ ಎಂದು ನೋಡುತ ಗೌಡ
ಬಂದನಲ್ಲಿಗೆ, ತಣಿಯೆ ನೋಡಿ ಕಣ್ಣು.

ಹುಲುಸು ಬೆಳೆದಿದೆ ಪೈರು; ತೆನೆತುಂಬಿ ಉದುರುತಿದೆ;
ಹೂವಾಗಿ ಹೊಳೆದು ಹುಚ್ಚೆಳ್ಳು ಅವರೆ
ಭೂಮಿದೇವಿಯ ಸೆರಗ ಬಣ್ಣವಾಗೆಸೆಯುತಿವೆ;
ಹಸುರುಕ್ಕಿ ಆ ಸೇಲೆಗಂಚು ತೆವರೆ. "

ತಿಂಗಳಲಿ = ಚಂದಿರನಿರುವಾಗ= ಇರುಳಲಿ
ಸೊಡರು = ದೀಪ= ದೀವಿಗೆ  ( ಸೊಡರ್ವೆಳಗು = ದೀಪದ ಬೆಳಕು)
ಹಸುರುಕ್ಕಿ ಆ ಸೇಲೆಗಂಚು ತೆವರೆ= ಹುಲುಸಾದ ಹಸಿರಿನ(ಹೊಲದ) ಸೆಲೆಗೆ ತೆವರೆ(ರಿ)ಯೇ ಅಂಚು.

ಹೀಗೆ ಹಲ ಒರೆ/ಪದ ಬಳಕೆಗಳು ಕಬ್ಬದ ತುಂಬ ಇದೆ. ಓದುತ್ತ ಇದ್ದರೆ ಮೆತ್ತನೆಯ ಹುಲ್ಲು ಹಾಸಿನ ಮೇಲೆ ನಡೆದಂತಾಗುತ್ತದೆ :)

--------

ನಿಮಗೆ ಹೊತ್ತಗೆ(PDF) ಬೇಕಾಗಿದ್ದರೆ ನನಗೆ ಮಿಂಚಿಸಿ.
 

Rating
No votes yet

Comments