ಮಿರ್ಚಿ,ಮಂಡಕ್ಕಿ ಮತ್ತೆ ಚಹಾ
ನೀವೇನಾದರು ಧಾರವಾಡಕ್ಕೆ ಹೋದರೆ ಅನುಭವಿಸಲೇ ಬೇಕಾದ ಕೆಲ ರಸ ನಿಮಿಷಗಳು.
೧.ಸಂಯುಕ್ತ ಕರ್ನಾಟಕ ಪತ್ರಿಕೆಯನ್ನೂ ಅಮೂಲಾಗ್ರ ಓದಬೇಕು ,ಶುಕ್ರವಾರದ ಪುರವಣಿ "ಚಿತ್ರಸೌರಭ" ಓದಿದರಂತು ಪೂರ್ಣ ಫಲ.
೨.ಮರಗಟ್ಟುವ ಛಳಿಯನ್ನು ಲೆಕ್ಕಿಸದೆ ನಾಳೆ ಮುಂಜಾನೆ ನಸುಕಿನಲ್ಲಿ ಎದ್ದು ಅಭ್ಯಾಸ ಮಾಡುವೆ ಎಂಬ ರೌರವ ನರಕಸದ್ರಶ ಅನುಭಾವದ ಬರೀ ಒಂದು ಮಾನಸಿಕ ಪರಿಕಲ್ಪನೆ.
೩.ಸಂಜೆ ಹವಾಕ್ಹೊರಿ ಕಾರ್ಯಕ್ರಮಕ್ಕೆ ಮಾಳಮಡ್ಡಿ ಸ್ಟೇಷನ್ ಕಡೆಗೆ ಹೋಗುವ ನಿಯಮ.
೪."ಬೇಂದ್ರೆ ಬಸ್ಸ್" ಹತ್ತಿ ಹುಬ್ಬಳ್ಳಿ ಕಡೆ ಒಂದು ಸುತ್ತ್ ಹಾಕಿ ಸುರಕ್ಷಿತವಾಗಿ ಮನೆಗೆ ಹಿಂತಿರುಗುವ ಭಂಡ ಧೈರ್ಯ.
೫.ಪ್ರತಿ ಶನಿವಾರ ಕಾಲ್ನಡಿಗೆಯಲ್ಲಿ ನುಗ್ಗಿಕೇರಿ ಹಣ(ನ)ಮಪ್ಪನ ದರ್ಶನ ಅದರಲ್ಲೂ ವಿಶೇಷವಾಗಿ ಆತನ ಭಕ್ತರ ಸಂದರ್ಶನ(ಸ್ವಾಮಿಕಾರ್ಯ..ಸ್ವಕಾರ್ಯ..).
೬.ಬಸ್ಸಪ್ಪನ ಖಾನಾವಳಿ ಅಥವಾ ಯಾವುದಾದರೊಂದು ಹಳೇ ತಲೆಮಾರಿನ ಖಾನಾವಳಿಯಲ್ಲಿ ಕಂಠ ಮಟ ಊಟ ತದನಂತರ ಭರ್ಪುರ್ ನಿದ್ದೆ(ಇದಂತೂ ಧಾರಾವಾಡದಲ್ಲಿ ಅನಾಯಾಸವಾಗಿ ಬರುತ್ತದೆ).
೭.ಶ್ರೀನಿವಾಸ-ಪದ್ಮಾ ಈ ಜೋಡಿ ಸಿನಿಮಾ ಮಂದಿರಗಳಲ್ಲಿ ಒಂದು ಸುಂದರ ಕನ್ನಡ ಸಿನೆಮಾ.
೮.ಪ್ರಸಿಧ್ಧ ಲೈನ್ ಬಜಾರ್ ಫೆಡೆ ,ಅದೂ ಬಾಬು ಸಿಂಗ್ ಅವ್ರ ಅಂಗಡಿಗೆ ಮುದ್ದಾಮ್ ಹೋಗಿ ಇನ್ನು ಹಬೆಯಾಡುತ್ತಿರುವ ಬಿಸಿ ಬಿಸಿ ಫೆಡೆ ಸವಿಯುವ ಕಾರ್ಯಕ್ರಮ.
೯.ಉಳಿದಂತೆ ಗಿರ್ಮಿಟ್,ಪಡ್ದು,ಮಂಗಳೂರ್ ಭಜ್ಜಿ ಹಾಗು ಮಾಳಮಡ್ಡಿಯ ಕೆಲವೆ ಕೆಲ ಅಂಗಡಿಗಳಲ್ಲಿ ಸಿಗುವ ಮಂಡಿಗೆ ಸವಿಯುವುದು.
೧೦.ಹಳೇ ಧಾರವಾಡದ ಬಟ್ಟೆ ಅಂಗಡಿಗಳಲ್ಲಿ ಕಳೆದು ಹೋಗಿರುವ ಮನೋಹರ ಗ್ರಂಥಮಾಲೆ ಅಂಗಡಿ ಹುಡುಕಿ ಪುಸ್ತಕ ಕೊಳ್ಳುವುದು.
೧೧.ಉಳವಿ ಬಸ್ಸಪ್ಪ,ವನವಾಸಿ ರಾಮ ಮಂದಿರ,ವಿಠಲನ ಮಂದಿರಗಳ ದರ್ಶನ.
೧೨.ಮಳೆಗಾಲದಲ್ಲಿ ಕೊಡೆಯ ಸಹಾಯವಿಲ್ಲದೆ ನೀವು ಎಲ್ಲೂ ತೋಯ್ಸಿಕೊಳ್ಳದೇ ನಿಮ್ಮ ಗಮ್ಮ್ಯ ತಲಪುವ ಪ್ರಯತ್ನ
(ನೆನಪಿದೆಯಲ್ಲವೇ ? ಧಾರವಾಡದ ಮಳಿ ನಂಬಾರ್ದು..ಬೆಳಗಾವಿ ಹುಡು.. ನೀವ್ ಶಾಣ್ಯಾರದಿರಿ ಬಿಡ್ರಿ).
ಹೌದು, ಈ ಧಾರಾವಾಡದ ಸಹವಾಸವೇ ಹೀಗೆ,ಕಳೆದು ಹೋದ ಪ್ರೇಯಸಿಯ ಜೊತೆಗೆ ಮತ್ತೆ ಒಂದಾದಂತೆ.ಜಗತ್ತೇ ಬದಲಾಗಲಿ ನಾ ಮಾತ್ರಾ
ಹಿಂಗೇ ಇರ್ತೀನಿ ಅನ್ನುವ ನಿರಮ್ಮಳವಾದ ಜಡತ್ವ ಮೈಗೂಡಿಸಿಕೊಂಡಿರುವ ಊರಿದು.ಅಪ್ಪಟ ಕನ್ನಡದಲ್ಲಿ ಹೇಳಬೇಕೆಂದರೆ ಯಾವಾಗಲು ಕಂಬಳಿ
ಹೊದ್ದು ಮಲಗಲು ಹೇಳಿ ಮಾಡಿಸಿದ ಜಾಗ.ಆ ಊರಿನ ಸೋನೆ ಮಳೆಯಲ್ಲಿ ಮಿಂದ ಕೆಂಪು ಮಣ್ಣು ಸ್ವಲ್ಪ ದಿನಗಳಲ್ಲಿಯೇ
ನಿಮ್ಮನ್ನು ಧಾರವಾಡದ ಜೋತೆಗೆ ಎರಕ ಹೊಯ್ದು ಬಿಡುತ್ತದೆ.
ಧಾರವಾಡದ ಅನುಭವ ಒಬ್ಬ ಹುಟ್ಟು ಕುರುಡ ಆನೆಯನ್ನು ಬಣ್ಣಿಸಿದಂತೆ ಅವರವರ ಕಲ್ಪನೆಗೆ ಮೀರಿದ ಒಂದು ಅನುಭೂತಿಯನ್ನು ನೀಡುತ್ತದೆ.
ದೇವರು ಹಾಗು ಪ್ರೀತಿ ಎಂಬ ಎರಡು ತೀವ್ರತರದ ಭಾವನಾತ್ಮಕ ಮೆಟಾ ಫಿಸಿಕ್ಸ್ ಗಳ ನಂತರ ಇನ್ನೇನಾದರು ನಿತ್ಯನೂತನವಾಗಿ ಬರೆಯಬಹುದಾದರೆ
ಅದು ಧಾರವಾಡದಲ್ಲಿ ಕಳೆದ ಅನುಭವಗಳು ಎಂದರೆ ತಪ್ಪಾಗಲಿಕ್ಕಿಲ್ಲಾ.ಈ ಸ್ಥಳ ಪುರಾಣದ ಪೀಠಿಕೆ ಅದೆಷ್ಟು ಹೇಳಿದರೂ ಸಾಲದು,ಇರಲಿ, ಮೇಲಿನ ವಿಷಯಕ್ಕೆ ಬರುತ್ತೇನೆ.
ಮಂತ್ರವಾದಿಯ ಜೀವ ಗಿಳಿಯೊಳಗೆ ಎಂಬಂತೆ ಧಾರವಾಡದ ಆತ್ಮ ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿದೆ.
ಆ ಊರಿನ ನೈಜ ಅಂಥ: ಸತ್ವವನ್ನು ಸುಂದರವಾಗಿ ಕಟ್ಟಿ ಕೊಡಲು ಬೇರಾವುದೇ ಪತ್ರಿಕೆಗೆ ಅಷ್ಟಾಗಿ ಸಾಧ್ಯವಾಗಿಲ್ಲಾ.
ಹುಬ್ಬಳ್ಳಿ-ಧಾರವಾಡದ ಎಲ್ಲಾ ಕೋರ್ಟುಗಳಲ್ಲಿ ಬಹುತೇಕ ಎಲ್ಲರು ಸಂಯುಕ್ತ ಕರ್ನಾಟಕದ ಮೇಲೆ ಪ್ರಮಾಣ ಮಾಡಿಯೇ ಸಾಕ್ಷಿ ಹೇಳುತ್ತಾರೆ ಎಂಬುದು ನನ್ನ ಬಲವಾದ ಅನುಮಾನ.
ಸಂಯುಕ್ತ ಕರ್ನಾಟಕ ರಾಜ್ಯದಾದ್ಯಂತ ಓದಬಹುದಾದರೂ ಧಾರವಾಡದಲ್ಲಿರುವಾಗ ಓದುವುದು ಮಂಡಕ್ಕಿ ಜೊತೆಗೆ ಬಿಸಿ ಬಿಸಿ ಚಹಾ ಕುಡಿದ ಅನುಭವ ತರುತ್ತದೆ.ಹಳೆಯದಾದರೂ
ತನ್ನದೇ ಆದ ವರ್ಚಸ್ಸಿನಿಂದ ಒಂದು ವಿಶಿಷ್ಟವಾದ ಜವಾರಿತನದ ಛಾಪನ್ನು ಉಳಿಸಿಕೊಂಡು ಬಂದ ಪತ್ರಿಕೆ.ಇತ್ತೀಚಿಗೆ ಪತ್ರಿಕಾ ರಂಗದಲ್ಲಿ ಸ್ಟಾರ್ ಎನಿಸಿಕೊಂಡ ದಿಗ್ಗಜರೆಲ್ಲಾ
ಮೊದಮೊದಲಿಗೆ ಸಂಯುಕ್ತ ಕರ್ನಾಟಕಕ್ಕೆ ಮಣ್ಣು ಹೊತ್ತೇ ಮುಂದೆ ಬಂದಿದ್ದಾರೆ.ನನ್ನ ನೆನಪಿದ್ದ ಮಟ್ಟಿಗೆ ನರಸಿಂಹ ಜೋಷಿ ಎಂಬ ಹಿರಿಯರು ಪೊಲಿಟಿಕಲ್ ಕಾಮೆಂಟರೀ ಬರೆಯುತ್ತಿದ್ದ
ದಿನಗಳಲ್ಲಿ ಪ್ರತಿವಾರವೂ ಅವರು ತಮ್ಮ ಅಂಕಣವನ್ನು(ರಾಜಕೀಯ ರಂಗ) "ಬದಲಾದ ರಾಜಕೀಯ ವಿದ್ಯಮಾನಗಳಿಂದ..." ಎಂದು ಶುರು ಮಾಡುತ್ತಿದ್ದುದ್ದು ಒಂದು ಸೌಜಿಗದ
ಸಂಗತಿಯಾಗಿರುತ್ತಿತ್ತು.ಪ್ರತಿ ವಾರ ಬರೆದರೂ ಅಂಕಣದ ಮೊನಚು ಹಾಗು ಹದವಾದ ವಿಷಯ ವಿವರಣೆ ಅವರ ಒಂದು ವೈಶಿಷ್ಟ್ಯ.ಅದೇ ರೀತಿ ಜೀ.ಹೆಚ್ಫ್. ರಾಘವೇಂದ್ರ ಅವರು
ಬರೆಯುತ್ತಿದ್ದ ವಿಡಂಬನೆಯ ಭರ್ಪೂರ್ ರಂಗಿನೊಂದಿಗೆ "ಟಿಂಗರ ಬುಡ್ದಣ್ಣಾ" ಓದಲು ತುಂಬಾ ರುಚಿಸುತ್ತಿತ್ತು.ಧಾರವಾಡದ ಜನಮಾನಸದಲ್ಲಿ ಹಾಸು ಹೊಕ್ಕಾದ ಸಾಹಿತ್ಯ,
ಸಂಸ್ಕೃತಿ,ಸಂಗೀತಗಳಿಗೆ ತುಡಿಯುವ ಒಂದು ಪತ್ರಿಕೆ.ಹೀಗೆ ಹತ್ತು ಹಲವಾರು ಮಜಲುಗಳನ್ನು ಓದುಗರಿಗೆ ನೀಡುವಲ್ಲಿ ಅದು ಯಶಸ್ಸನ್ನು ಕಂಡಿದೆ.ಅದೇ ಪತ್ರಿಕೆ ಬೆಂಗಳೂರಿನಲ್ಲಿ
ನೀವು ಓದಲು ಹೋದರೆ ಅದು ಒಂದು ಆರಿದ ಚಹಾ ಕುಡಿದ ಅನುಭವವಾಗುತ್ತದೆ.
ಕೆಲವೋಮ್ಮೆ ಪೇಪರಿನಲ್ಲಿ ಅತ್ಯಂತ ನೀರಸ ಸುದ್ದಿಗಳಾದ "ಎಮ್ಮೆ ಕಳೆದಿದೆ,ಎತ್ತು ಸತ್ತಿದೆ,ವಿದೇಶೀ ಪ್ರವಾಸದ ಸುಖಾಗಮನ,ಶಿವಗಣಾರಾಧನೆ,ವೈಕುಂಠ ಸಮಾರಾಧನೆ"
ಹೀಗೆ ಹತ್ತು ಹಲವು ವಿಷಯಗಳು ಅಲ್ಲಿ ಮೈ ಕೊಡವಿ ನಿಂತುಕೊಂಡಿರುತ್ತವೆ.ಎರೆಡೆರಡು ತಾಸುಗಟ್ಟಲೆ ತದೇಕಚಿತ್ತದಿಂದ ಆ ಪೇಪರ್ ಓದಿ..ಕೊನೆಗೆ "ಎಂಟಾಣಿನೂ ಇಲ್ಲಾ ಪೇಪರ್ನಾಗ.."
ಎಂಬ ಒಂದು ಯಕಸ್ಚಿತ್ ಅಭಿಮತ ವ್ಯಕ್ತಪಡಿಸುವ ಹಿರಿ ಜೀವಗಳು ಅದೇ ಪತ್ರಿಕೆ ಒಂದು ದಿನ ಓದದೇ ಹೋದರೆ ಚಡಪಡಿಸುತ್ತಾರೆ.ಜಗತ್ತಿನ ಎಲ್ಲ ವರ್ತಮಾನ ಪತ್ರಿಕೆಗಳನ್ನು
ತಂದು ಗುಡ್ಡೆ ಹಾಕಿದರೂ,ಸಂಯುಕ್ತ ಕರ್ನಾಟಕ ಓದದೇ ಕೆಲವರಿಗೆ ಮುಂಜಾನೆಯ ಕೆಲ "ಕಾರ್ಯಕ್ರಮಗಳು" ಸಾಂಗವಾಗಿ ನೆರವೇರುವುದಿಲ್ಲಾ.
(ಮುಂದುವರೆಯುವುದು....)
Comments
ಉ: ಮಿರ್ಚಿ,ಮಂಡಕ್ಕಿ ಮತ್ತೆ ಚಹಾ
ಗಿರಿಯವ್ರಾ..
ಭ್ಹಾಳ್ ಚೊಲೋ ಅದರೀ..ಪ, ನಿಮ್ಮ ಧ್ಹಾರವ್ಹಾಡದ ವರ್ಣನಾ.... ಬೇಂದ್ರೇ ಮಾಸ್ತರ‍್ದು ಚಹಾದೋಡಿ ಚೂಡಾದಂಗಾ ಆದ್ರ ನಿಮ್ದು ಮಂಡಕ್ಕಿ ಜೋಡಿ ಚಹಾದಂಗಾ. ಖರೇನ ಅಗ್ದೀ ಚೊಲೋನ ಐತ್ರೀ..ಪ. ನಿಮ್ಮ ಲೇಖನಕ್ಕ ನಾನು ಶರಣ್ರೀ..ಯಪ್ಪಾ!
ಸುಮಾರು ಇಪ್ಪತ್ತೈದು ವರ್ಷಗಳ ಹಿಂದೆ ಧಾರವಾಡದಲ್ಲಿ ನಾನು ಓದುತ್ತಿದ್ದಾಗಿನ ನೆನಪು ಮೆಲಕುಹಾಕಿದಂತಾಯಿತು. ಧಾರವಾಡದ ಬಗೆಗೆ ಎಷ್ಟು ಹೇಳಿದರೂ ಕಡಿಮೆಯೇ. ಅಲ್ಲಿನ ಸಪ್ತಾಪೂರ ಭಾವಿ, ಪಾವಟೇನಗರ, ಕಿಲ್ಲಾದಾಗಿನ ದುರ್ಗಾದೇವಿ ಗುಡಿ, ಶಾಲ್ಮಲಾ ನದೀ ತೀರದಲ್ಲಿರುವ ಶನೇಶ್ವರನ ಗುಡಿ, ಎತ್ತಿನಗುಡ್ಡದ ಅಗ್ರಿ ಕಾಲೇಜ, ಸಾಧನಕೇರಿ.. ಇವೆಲ್ಲದರ ಬಗೆಯೂ ನಿಮ್ಮ ಮುಂದಿನ ಕಂತುಗಳಲ್ಲಿ ಬರೆಯುತ್ತೀರೆಂದು ಆಶಿಸುತ್ತೇನೆ.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ
In reply to ಉ: ಮಿರ್ಚಿ,ಮಂಡಕ್ಕಿ ಮತ್ತೆ ಚಹಾ by makara
ಉ: ಮಿರ್ಚಿ,ಮಂಡಕ್ಕಿ ಮತ್ತೆ ಚಹಾ
ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು ಶ್ರೀಧರ್ ಸರ್,
ಧಾರವಾಡದಲ್ಲಿ ನಾನು ಕಳೆದದ್ದು ಸ್ವಲ್ಪೇ ದಿನಗಳನ್ನು,ನನ್ನ ಮೊದಲ ಪ್ರೀತಿ ಧಾರವಾಡ :)
ನನ್ನ ಪಾಲಿನ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದೇನೆ..
ಉ: ಮಿರ್ಚಿ,ಮಂಡಕ್ಕಿ ಮತ್ತೆ ಚಹಾ
ಲೇಖನ ಭಾಳ ಚನ್ನಾಗಿದೆ, ಮಿರ್ಚಿ, ಮಂಡಕ್ಕಿ ಚಹಾದಾಂಗ. ಈಗರ ಏಲ್ ಇ ಎ (ಶಿವಪ್ಪ ಕ್ಯಾಟೀನ್) ಕ್ಯಾಂಟೀನ್ ಗೆ ಹೋಗಿ ತುಪ್ಪದ ಅವಲಕ್ಕಿ, ಗಿರಮಿಟ್, ಮಿರ್ಚಿ ಪಾರ್ಸಲ್ ತಗೊಂಬನ್ನಿ ನೋಡ್ರಿ.
In reply to ಉ: ಮಿರ್ಚಿ,ಮಂಡಕ್ಕಿ ಮತ್ತೆ ಚಹಾ by lpitnal
ಉ: ಮಿರ್ಚಿ,ಮಂಡಕ್ಕಿ ಮತ್ತೆ ಚಹಾ
ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು ಲಕ್ಷ್ಮೀಕಾಂತ ಸರ್, ನೀವು ಹೇಳಿದ ಗಿರ್ಮಿಟ್ ಟ್ರೈ ಮಾಡ್ತೀನಿ :)
In reply to ಉ: ಮಿರ್ಚಿ,ಮಂಡಕ್ಕಿ ಮತ್ತೆ ಚಹಾ by malegiri
ಉ: ಮಿರ್ಚಿ,ಮಂಡಕ್ಕಿ ಮತ್ತೆ ಚಹಾ
ಉತ್ತರ ಕರ್ನಾಟಕದಲ್ಲಿ ವಾಸಿಸುವ -ವಾಸಿಸಿದ ನಮಗೆ ಸಂಯುಕ್ತ ಕರ್ನಾಟಕ -ವಗ್ಗರಣೆ (ಮಂಡಕ್ಕಿ )-ಕಡು ಖಾರದ ಮೆಣಸಿನಕಾಯಿ ಬಜ್ಜಿ -ಚುದುರು ಪುಗ್ಗಿ ,ಖಾರ (ಮಿಚ್ಚರ್) ಅಹ ನೆನದರೆ ಬಾಯಲ್ಲಿ ನೀರ್ ಊರುವುದು ..
ಬೆಳಗ್ಗೆ ಪೂರಿ ಸಾಗು -ಬಿಸಿ ಚಹಾ (ನಮ್ ಕಡೆಯ ಚಾಕ್ಕು(ಚಹಾಕ್ಕು) ಇಲ್ಲಿಯ ಚಾಕ್ಕು ಇರುವ ಭಿನ್ನತೆ ಹಲವು ) ಸಂಜೆ ಪುಗ್ಗಿ ,ಖಾರ,ಈರುಲ್ಲ್ಲಿ ಜೊತೆ ತಿನ್ವಾಗ ಆಗುವ ರಸಾನುಭವ ಅಹ ಎಂತು ಹೇಳುವುದು ..!!
ಇನ್ನು ಪತ್ರಿಕೆ ವಿಷಯಕ್ಕೆ ಬಂದರೆ -ವಿಜಯಕರ್ನಾಟಕ ಬರುವವರೆಗೂ ನಮ್ ಕಡೆ ಬಹುತೇಕ ಜನರಿಗೆ ಸಂಯುಕ್ತ ಕರ್ನಾಟಕ ಇಷ್ಟವಾದ ಆಗಿದ್ದ ದಿನ ಪತ್ರಿಕೆ , ಒಂದು ಅದು ಹುಬ್ಬಳ್ಳಿಯಿಂದ ಪ್ರಸಾರ ಅಗ್ಗುತ್ತಿದ್ದುದು ಮತ್ತು ಉತ್ತರ ಕರ್ನಾಟಕಕ್ಕೆ ನೇರವಾಗಿ ಹತ್ತಿರದ್ದಾಗಿದ್ದು ,ಹಾಗೆಯೇ ಅದರ ಕೆಲ ಪ್ರಮುಖರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿ ಆಗಿದ್ದುದು ಇತ್ಯಾದಿ , ಆದರೆ ಬೇರೆ ಪತ್ರಿಕೆಗಳಿಗೆ ಹೋಲಿಸಿದರೆ ಅದರ ಮುದ್ರಣ ಗುಣ ಮಟ್ಟ -ವಿಷ್ಯ -ಪೇಪರ್ ಗುಣ ಮಟ್ಟ ಅಸ್ಟು ಚೆನ್ನಾಗಿ ಇರಲಿಲ್ಲ ,ವಿಜಯ ಕರ್ನಾಟಕ ಸಹಾ ಹುಬ್ಬಳ್ಳಿಯಿಂದ ಶುರು ಆಗಿ ಅತಿ ಕಡಿಮೆ ಬೆಲೆ ಸಮರ -ಗುಣಮಟ್ಟದ ಪೇಪರ್ -ಸುದ್ಧಿ (ಸ್ಥಳೀಯ ಮಟ್ಟದಲ್ಲಿ ಮುದ್ರಣ -ಪ್ರಸಾರ ಪ್ರಚಾರ)ಕಾರಣವಾಗಿ ಸಂಯುಕ್ತ ಕರ್ನಾಟಕವನ್ನು ಕೆಲ ಪ್ರದೇಶಗಳಿಗೆ -ಜನರಿಗೆ ಸೀಮಿತಗೊಳಿಸಿತು :(( ಆಮೇಲೆ ಸಂಯುಕ್ತ ಕರ್ನಾಟಕದವರೂ ಸಹಾ ಧಿಗ್ಗನೆ ಮೇಲೆದ್ದು ಇತರೊಡನೆ ಸ್ಪರ್ಧೆಗೆ ಬಿದ್ದು ಈಗೀಗ ಗುಣಮಟ್ಟದ ಸುದ್ಧಿ -ಮುದ್ರಣ ಮಾಡುತ್ತಿರುವರು . ಆದರೆ ಅದಕ್ಕೆ ಈ ಹಿಂದಿನ ಮಹತ್ವ -ಮತ್ತು ಜನರನ್ನು ಸೆಳೆವ ಶಕ್ತಿ ಕಡಿಮೆ ಆಗಿದೆ ಅನ್ಸಿದೆ .
ಅದರ ಸಹೋದರಿ ಮಾಸಿಕ -ಕಸ್ತೂರಿ , ಮತ್ತು ವಾರಕ್ಕೊಮ್ಮೆ ಬರುವ ಕರ್ಮವೀರ -ಮತ್ತು ಯುಗಾದಿ -ದೀಪಾವಳಿ ವಿಶೇಷಾಂಕಗಳು ಈಗಲೂ ನನಗೆ ಅಚ್ಚು ಮೆಚ್ಚು ..
ಒಂದೂವರೆ ವರ್ಷಗಳ ಹಿಂದೆ ಹುಬ್ಬಳ್ಳಿಗೆ ಮೊದಲ ಬಾರಿ ಹೋಗಿದ್ದೆ , ಧಾರವಾಡಕ್ಕೆ (ವಿದ್ಯಾ ನಗರಿ ) ಹೋಗುವ ಆಶೆ ಇತ್ತು ಆಗಲಿಲ್ಲ , ಮುಂದೊಮ್ಮೆ ನೋಡುವ ..
ನನ್ನಿ
ಶುಭವಾಗಲಿ
\।/
In reply to ಉ: ಮಿರ್ಚಿ,ಮಂಡಕ್ಕಿ ಮತ್ತೆ ಚಹಾ by venkatb83
ಉ: ಮಿರ್ಚಿ,ಮಂಡಕ್ಕಿ ಮತ್ತೆ ಚಹಾ
ಸರ್ , ನಾ ಏನು ಮುಂದಿನ ಸಂಚಿಕೆಗೆ ಹಾಕ್ಬೇಕಂತ ಬರ್ದ್ಬಿಟ್ತಿನೋ.. ಅದರ ಸ್ಯಾಂಪಲ್ ನಿಮ್ಮ ಪ್ರತಿಕ್ರಿಯೆಯೋಳಗ ಅದ... :)