ಮಿಸ್ಟೇಕನ್ ಐಡೆಂಟಿಟಿ ಎರಡನೇ ಕಂತು

ಮಿಸ್ಟೇಕನ್ ಐಡೆಂಟಿಟಿ ಎರಡನೇ ಕಂತು

ಮಿಸ್ಟೇಕನ್ ಐಡೆಂಟಿಟಿ ಇಂದ ಮುಂದುವರೆದಿದೆ 

ನಾನು ಬಸ್ ಹತ್ತಿದಾಗೆಲ್ಲ ಬಸ್ ಕಂಡಕ್ಟರ್ 'ಆಗುವ' ಸಂಭವ ಇದ್ದೇ ಇರುತ್ತದೆ. ನಾನೇನಾದರೂ ನೂರರ ನೋಟನ್ನು ಕೊಟ್ಟು, ಟಿಕೆಟ್ ಮತ್ತು ಚಿಲ್ಲರೆ ಪಡೆದಿದ್ದರೆ, ಎಣಿಸುವ ಗೋಜಿಗೂ ಹೋಗದೇ, ಸಾಧ್ಯವಾದಷ್ಟು ಬೇಗ ಅದನ್ನು ಕಿಸೆಗಿಳಿಸುತ್ತೇನೆ. ಅದಲ್ಲವಾದರೆ, ನನ್ನ ಕೈಯಲ್ಲಿ ನಾಲ್ಕಾರು ನೋಟುಗಳು ಕಾಣುತ್ತಿದ್ದಂತೆ, ಅದೇ ಆಗ ಬಸ್ ಹತ್ತಿದ ಪ್ರಯಾಣಿಕರು 'ದೋ ಪಾಂಚ್ ಕಾ (ಟಿಕೆಟ್) ದೋ' ಎಂದು ಹಳೆಯ ಹತ್ತರ ನೋಟೊಂದನ್ನ ನನ್ನ ಮುಂದೆ ಹಿಡಿಯುವುದು ನಿಶ್ಚಿತ.

ಇನ್ನು ಬಟ್ಟೆ ಅಂಗಡಿ, ಚಪ್ಪಲಿ ಅಂಗಡಿಗಳಿಗೇನಾದರೂ ಹೋದರೆ, ಪ್ರತಿ ಸರ್ತಿ ಒಬ್ಬಿಬ್ಬರಾದರೂ ನನ್ನನ್ನು ಅಲ್ಲಿನ ಕೆಲಸಗಾರನೆಂದು ತಿಳಿಯದಿದ್ದರೆ ಹೇಳಿ. ಬಾಟಾದ ಶೋ ರೂಮುಗಳಲ್ಲಿ ಕೆಲಸಗಾರರು ಅವರದೇ ಸಮವಸ್ತ್ರ ಧರಿಸಿರುತ್ತಾರೆ. ಹಾಗಾಗಿ, ನಾನು ಅಲ್ಲಿನ ಕೆಲಸಗಾರ'ನಾಗುವ' ಸಂಭವ ಕಡಿಮೆ ಎಂದು ನಾನು ತಿಳಿದಿದ್ದೆ; ಆದರೆ, ನಾನು ಚಪ್ಪಲಿ ಆಯ್ಕೆ ಮಾಡಿದ ಮೇಲೆ, ಅದನ್ನು ಪ್ಯಾಕ್ ಮಾಡಲು ಬಾಟಾದ ಕೆಲಸಗಾರ ಆಚೆ ಹೋಗುತ್ತಿದ್ದಂತೆ, ಯಾರಾದರೊಬ್ಬರು ನನಗೆ ಚಪ್ಪಲ್ಲೋ, ಶೂನೋ ತೋರಿಸಿ 'ಇಸ್ ಮೇ ಸಾಥ್ ನಂಬರ್ ದಿಖಾನಾ' ಎಂದು ಕೇಳುವುದು; ಅದಕ್ಕೆ ನಾನು ಹಲ್ಕಿರಿದು 'ಮೈ ಭೀ ಕಸ್ಟಮರ್ ಹ್ಞೂ' ಎನ್ನುವುದು ಎಷ್ಟು ಸಲ ಆಯಿತೋ ಲೆಕ್ಕವಿಲ್ಲ.

ಇಷ್ಟು ಹೇಳಿದ ಮೇಲೆ, ಮುಂದಿನದನ್ನು ನೀವೇ ಊಹಿಸಬಹುದು, ನಾನು ತರಕಾರಿ ಗಾಡಿಯವನಿಂದ ತರಕಾರಿ ಕೊಂಡೆ ಎಂದಿಟ್ಟುಕೊಳ್ಳಿ; ಅವನ ಹತ್ತಿರ ಚಿಲ್ಲರೆ ಇದ್ದರೆ ಸರಿ, ಅದಲ್ಲವಾದ್ರೆ ಅವನು ಚಿಲ್ಲರೆ ಮಾಡಿಸಿಕೊಳ್ಳಲು ಪಕ್ಕದ ಅನಗಡಿಗೆ ಹೋಗುತ್ತಲೇ 'ಆಜ್ ಪ್ಯಾಜ್ ಕಿತನೆ ಕಾ ಹೈ?' ಎಂಬ ಪ್ರಶ್ನೆ ನನ್ನತ್ತ ಬಂದೇ ಬರುತ್ತದೆ. ಹೆಚ್ಚಾಗಿ,  ನಾನು ಉತ್ತರಿಸಬೇಕಾದ ಅಗತ್ಯ ಇರುವುದಿಲ್ಲ; ಏಕೆಂದರೆ ಅಷ್ಟರಲ್ಲಿ ಗಾಡಿಯವನು ವಾಪಸ್ ಬಂದಿರುತ್ತಾನೆ.

ನಾನು ಪಿಎಚ್.ಡಿ ಮಾಡುತ್ತಿದ್ದ ಸಂದರ್ಭದಲ್ಲಿ (ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲೇ) ಹಾಸ್ಟೆಲ್ನಲ್ಲಿದ್ದೆ. ಒಮ್ಮೆ ನನ್ನ ಗೆಳೆಯನೊಬ್ಬ ಇನ್ನೊಬ್ಬ ಹಾಸ್ಟಲೈಟ್ ಅನ್ನು ಮೆಸ್ ಬಾಯ್ ಎಂದು ತಪ್ಪು ತಿಳಿದಿದ್ದ. ಆಗಲೇ ನಾನೂ ಮೆಸ್ ಬಾಯ್ 'ಆಗಲು'  ಮಾನಸಿಕವಾಗಿ ತಯಾರಾಗಿದ್ದೆ. ಆದಾಗ್ಯೂ ನನ್ನ ಸುಮಾರು ಆರೇಳು ವರ್ಷಗಳ ಹಾಸ್ಟೆಲ್ ವಾಸದಲ್ಲಿ, ಒಮ್ಮೆಯೂ, ಯಾರೂ, ನನ್ನನ್ನು ಮೆಸ್ ಬಾಯ್ ಎಂದು ತಪ್ಪು ತಿಳಿಯದೇ ಹೋದದ್ದು ಒಂದು ದೊಡ್ಡ ಆಶ್ಚರ್ಯವಾಗಿಯೇ ಉಳಿದಿದೆ.   

ಮತ್ತೆ ಆಸ್ಪತ್ರೆ - ಲಾಬೋರೆಟೋರಿಗೆ ಬಂದರೆ, ಒಂದು ದಿನ ರಕ್ತದ ಸಾಂಪಲ್ ತೆಗೆದುಕೊಳ್ಳುವ ಸಹಾಯಕ ಬಂದಿಲ್ಲ ಎಂದು ಅನಿವಾರ್ಯವಾಗಿ ನಾನೇನಾದರೂ ಆ ಕೆಲಸಕ್ಕೆ ಹೋದರೆ, ಆಗಲೇ ಪಾಳಿಯಲ್ಲಿ ನಿಂತಿರುವ ಜನ ನನ್ನನ್ನೂ ರೋಗಿಯೆಂದು ತಿಳಿದು ನಾನು ಸಾಂಪ್ಲಿಂಗ್ ಕೋಣೆಯ ಬಾಗಿಲಿಗೆ ಬರುತ್ತಿದ್ದಂತೆ ಜೋರಾಗಿ 'ಲೈನ್ ಸೆ ಆವೋ ಭಾಯಿ' ಎಂದು ಹೇಳುವುದೂ, ನಾನು 'ಫಿರ್, ಸಾಂಪಲ್ ಕೌನ್ ಲೇಗಾ?' ಎಂದು ಕೇಳುವುದೂ ನಡೆದೇ ಇರುತ್ತದೆ.

ಅಂದ ಹಾಗೆ, ನಾನು ಬೇರೆಯವರನ್ನು ತಪ್ಪಾಗಿ ತಿಳಿದ ಪ್ರಸಂಗಗಳು ಕಡಿಮೆ; ಆದರೂ ಒಮ್ಮೆ ದೆಹಲಿಗೆ ಬಂದ ಹೊಸತರಲ್ಲಿ ಹೀಗಾಗಿತ್ತು. ಯಾವುದೋ ಕಂಪನಿಯ 'ಡಿಸ್ಕೌಂಟ್ ಸೇಲ್' ಇತ್ತು; ಹೋಗಿದ್ದೆ. (ದೆಹಲಿಯಲ್ಲಿ ಕೆಲವು ಅಂಗಡಿಗಳಲ್ಲಿ ವರ್ಷಕ್ಕೆ ೩೬೫ ದಿವಸ ಡಿಸ್ಕೌಂಟ್ ಸೇಲ್ ಇರುತ್ತದೆ.) ಒಬ್ಬಾತ ಸೇಲ್ಸ್ ಮಾನ್ ಎಂದು ತೋಚಿತು; ನನ್ನ ಹತ್ತಿರ ಬಂದು '೩೮ ಯಾ ೩೯ ನಂಬರ್ ವಾಲಾ ಶರ್ಟ್' ಎಂದ. ನಾನು, 'ಪರವಾಗಿಲ್ಲ ನನ್ನ ಸೈಜ್ ಸರಿಯಾಗಿ ಅಂದಾಜು ಮಾಡಿದ್ದಾನೆ' ಅಂದುಕೊಳ್ಳುತ್ತ, 'ಕೋಯಿ ಭೀ ಚಲೇಗಾ' ಎಂದೆ. ಅವನು 'ಹಾಂ' ಅಂದ. ಹೀಗೇ, ಮಾತುಕತೆ ಮುಂದುವರಿದು ಕನಿಷ್ಠ ಮೂರ್ನಾಲ್ಕು ನಿಮಿಷಗಳ ನಂತರ ನಮಗಿಬ್ಬರಿಗೂ ಅರಿವಾಯ್ತು ನಾವು ಒಬ್ಬರಿನ್ನೊಬ್ಬರನ್ನು ಸೇಲ್ಸ್ ಮಾನ್ ಎಂದು ತಪ್ಪು ತಿಳಿದಿದ್ದೆವು ಎಂದು.

ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಬಹಳ ಹೆಚ್ಚಿನ ಸಂಖ್ಯೆಯಲ್ಲಿ ಮೊದಲಿನ ಉತ್ತರ ಪ್ರದೇಶ, ಬಿಹಾರಗಳಿಂದ ರೋಗಿಗಳು ಬರುತ್ತಾರೆ. ಅವರಿಗೆ ಆಸ್ಪತ್ರೆಯ ನಿರ್ದೇಶಕರಿಂದ ಹಿಡಿದು ಕಸಗುಡಿಸುವವರವರೆಗೆ ಎಲ್ಲರೂ 'ಡಾಕ್ಟರ್ ಸಾಬ್'ಗಳೇ. ಹಾಗಾಗಿ, ನಾನೂ ನನ್ನ ಡಾಕ್ಟರೇಟ್ ಸಿಗುವ ಮೊದಲೇ 'ಡಾಕ್ಟರ್ ಸಾಬ್' ಆಗಿದ್ದೆ. ಪಿಎಚ್.ಡಿ. ಮುಗಿದ ಮೇಲೆ ಇನ್ನೊಂದು ಪೀಕಲಾಟ ಶುರುವಾಯ್ತು, ಅದೆಂದರೆ ನನ್ನ ಗೆಳೆಯರು ನನ್ನನ್ನು ಬೇರೊಬ್ಬರಿಗೆ 'ಯೇ ಡಾ. ಶಿವರಾಮ ಹೈ, AIIMS ಮೇ ಹೈ' ಎಂದು ಪರಿಚಯಿಸುವುದೂ ಅವರು ಆಮೇಲೊಂದು ದಿನ 'ಡಾಕ್ಟರ್ ಸಾಬ್, ಗಲಾ ಖರಾಬ್ ಹೈ' ಎಂದು ನನ್ನಲ್ಲಿಗೆ ಬರುವುದೂ ಶುರುವಾಯ್ತು. ಅವರೆಲ್ಲರಿಗೂ ತಿಳಿಸಿ ಹೇಳಬೇಕಾಗುತ್ತದೆ, 'ಮೈ ಇಂಜೆಕ್ಷನ್ - ದವಾಯಿ ವಾಲಾ ಡಾಕ್ಟರ್ ನಹಿ ಹ್ಞೂ, ಮೇರಾ ಲಾಬ್ ಮೇ ಕಾಮ್ ಹೈ'. ಕೆಲವರು ನಾನು ಅವರಿಂದ ತಪ್ಪಿಸಿಕೊಳ್ಳಲು ಹೀಗೆ ಸಬೂಬು ಹೇಳುತ್ತಿದ್ದೇನೆ ಎನ್ದುಕೊಂಡಿದ್ದೂ ಇದೆ. ನನಗೆ ಹೇಗೆ ಗೊತ್ತು ಎಂದಿರಾ?  "ಯೇ ತೋ ಹಮೇ ಗೋಲಿ ದೇ ರಹಾ ಹೈ' ಎಂದು  ಅವರು ಗೊಣಗಿದ್ದನ್ನು ಸ್ವತಹ ಕೇಳಿಸಿಕೊಂಡಿದ್ದೇನೆ.     

(ಸಾಕಾ? ಇನ್ನೂ ಎಳೆಯಲಾ?) 

Rating
No votes yet

Comments