ಮುಂಬೈ ಕನ್ನಡಿಗನ ದಿನಚರಿ

ಮುಂಬೈ ಕನ್ನಡಿಗನ ದಿನಚರಿ

ಕಳೆದ ಮಂಗಳವಾರ ಮತ್ತು ಭಾನುವಾರದ ಮಳೆಯ ಆರ್ಭಟದಿಂದ ತತ್ತರಿಸಿದ್ದ ಜನರ ದೈನಂದಿನ ಕೆಲಸ ಕಾರ್ಯಗಳು ಇಂದಿಗೆ ಸಾಮಾನ್ಯ ಸ್ಥಿತಿಗೆ ಬಂದಿತು. ಅದು ಹೇಗೆ ಇಂದೇ ಸಾಮಾನ್ಯ ಸ್ಥಿತಿಗೆ ಬಂದಿತು ಅಂತ ಹೇಳ್ತೀರಿ ಅಂತ ನೀವು ಕೇಳಬಹುದು. ಇಂದು ಲೋಕಲ್ ಟ್ರೈನಿನಲ್ಲಿ ತುಂಬಾ ಜನಸಂದಣಿ ಇತ್ತು. ಮತ್ತು ನನ್ನ ಸ್ನೇಹಿತನೊಬ್ಬನ ಜೇಬಿಗೆ ಕತ್ತರಿ ಬಿದ್ದಿತ್ತು. ಪ್ರತಿದಿನ ಟ್ರೈನ್ ಹತ್ತುವಾಗ, ಹತ್ತಿದ ಮೇಲೆ, ಇಳಿಯುವಾಗ ತುಂಬಾ ಕಷ್ಟ ಕೋಟಲೆಗಳನ್ನು ಅನುಭವಿಸುತ್ತೀವಿ. ನನಗೇನೋ ಅದು ಆಭ್ಯಾಸವಾಗಿ ಹೋಗಿದೆ. ಆದರೆ ಹೊಸಬರಿಗೆ ಇಲ್ಲಿಯವರೆವಿಗೆ ಇದ್ದ ಧೈರ್ಯವೆಲ್ಲಾ ಕಳೆದು ತಮ್ಮ ತಮ್ಮ ಊರುಗಳಿಗೆ ಮರಳೋಣ ಅಥವಾ ಕೆಲಸವೇ ಬಿಟ್ಟುಬಿಡೋಣ ಅಥವಾ ಆತ್ಮಹತ್ಯೆ (!) ಮಾಡಿಕೊಳ್ಳೋಣ ಎನ್ನುವಷ್ಟು ಬೇಸರವಾಗುತ್ತದೆ. ಅದೇ ಕೆಲವರಿಗೆ ಹಾಗೇನೂ ಅನ್ನಿಸುವುದಿಲ್ಲ. ಅವರು ವಿ.ಐ.ಪಿ. ಏನೋ ಅನ್ನುವಂತೆ ಅವರಿಗೆ ಕುಳಿತುಕೊಳ್ಳಲು ಸ್ಥಾನ ಸಿಕ್ಕುವುದು, ಒಳಗೆ ಹೋಗಲು ಅನುವಾಗುವುದು. ಅದು ಹೇಗೆ ಎನ್ನುವುದು ನನಗೆ ಚಿದಂಬರ ರಹಸ್ಯದಂತಾಗಿತ್ತು. ಇಂದು ಅದನ್ನು ಹತ್ತಿರದಿಂದ ಅನುಭವಿಸಿದೆ. ಅವರು ಅನುಸರಿಸುವ 3 ಅತ್ಯಂತ ಮುಖ್ಯ ಅಂಶವನ್ನು ಅನುಸರಿಸುವರು. ಒಂದು - ತಲೆಗೆ ಚೆನ್ನಾಗಿ ಎಣ್ಣೆ ಹಚ್ಚಿರುವರು. ಆದೂ ಜಿಗುಟು ಜಿಗುಟಾಗಿರುವ ಹರಳೆಣ್ಣೆ. ಅವರು ಹತ್ತಿರ ಬಂದರೇ ಎಲ್ಲರೂ ದೂರ ಸರಿಯುವರು. ಎರಡು - ಮಳೆಗಾಗಿ ಛತ್ರಿ ಇಟ್ಟುಕೊಂಡಿರುವರು. ಅದು ಒದ್ದೆಯಾಗಿದ್ದಾಗ ಅದನ್ನು ಕೊಡವುದಿಲ್ಲ. ಆ ಕೆಲಸವನ್ನು ಗಾಡಿ ಹತ್ತಿದ ಮೇಲೆಯೇ ಮಾಡುವರು. ಅವರ ಛತ್ರಿಯಿಂದ ಸ್ನಾನ ಮಾಡಿಸಿಕೊಳ್ಳಲಿಚ್ಛಿಸಿದ ಜನ ಅವರಿಗೆ ಜಾಗ ಬಿಡುವರು. ಮಳೆಗಾಲ ಇಲ್ಲದಿದ್ದಾಗಲೂ ಛತ್ರಿ ಹಿಡಿದಿರುವರು. ಆಗೆಲ್ಲಿಂದ ಬರುವುದು ನೀರು ಅಂತ ಕೇಳ್ತೀರಾ? ಸಾರ್ವಜನಿಕ ನಲ್ಲಿ ಇದೆಯಲ್ಲ. ಮೂರು - ಯಾವಾಗಲೂ ಹುರಿಗಡಲೆ ಅಥವಾ ಕಡಲೆಕಾಯಿ ಬೀಜ ತಿನ್ನುವರು. ಒಳಗೆ ಬಂದ ತಕ್ಷಣ ಅವರಿಂದ ಢರ್ ಭುರ್ ಝೇಂಕಾರ. ನೀವೇ ಹೇಳಿ ಅವರುಗಳು ನಿಜಕ್ಕೂ ಬುದ್ಧಿವಂತರಲ್ಲವೇ? ಇನ್ನು ಮೇಲೆ ನಾನೂ ಅವರನ್ನು ಅನುಸರಿಸಲು ಪ್ರಯತ್ನಿಸುವೆ.
Rating
No votes yet

Comments