ಮುಖವಾಡ ಧರಿಸಿದ ಹೇಡಿ ನಾ

ಮುಖವಾಡ ಧರಿಸಿದ ಹೇಡಿ ನಾ

ಮುಖವಾಡ ಧರಿಸಿರುವೆ ನಾ

ಮೇಲಿನ ಮುಖ ಅಪರಿಚಿತ
ಒಳಗೆ ನಡೆದಿದ್ದೆಲ್ಲಾ ಚಿರಪರಿಚಿತ

ಹೇಡಿ ನಾ , ವಿಷ ಸತ್ಯದ ಅರಿವಿದ್ದೂ
ಬಾಯಿ ಬಿಡಲಾರದ ಮತಿಗೇಡಿ ನಾ

ವಿಷ ಸತ್ಯ ಗಂಟಲಲ್ಲಿ ಸುಡುತಿದೆ
ಹೊರ ಹೋಗಲಾರದೆ ಒಳ ನುಂಗಲಾರದೆ
ಕಣ್ಣೀರಾಚೆ ಅಡಗಿದ ಸಾವಿರ ನಿಜ
ಬಯಲಾಗುವುದಾದರದು ಹೇಗೆ?

ದುರಳರ ಅಟ್ಟಹಾಸದ ಮೇಲಿನ
ವೇಷವೇ ಈ ಭೋರ್ಗರೆವ ರೋಧನ
ತಿಳಿದರೂ ತಿಳಿಯದ ನಟನೆಯ ಲೇಪನ

ಹೀನ ಬಾಳಿದು ಎಲ್ಲಕೂ ಅಳುಕಿ
ಮತ್ತೊಮ್ಮೆ ಹೆದರಿ ಬೆದರಿ
ಬದುಕುವ ಈ ಜೀವಕೆ ಧಿಕ್ಕಾರ

ವೀರಾವೇಶದ ಮಾತೆಲ್ಲಾ
ಈಗೆಲ್ಲಿ ಬರೀ ಶೂನ್ಯ
ಎಲ್ಲರಿಗೂ ತಿಳಿದಿರುವ ರಹಸ್ಯ
ಬಾಯಿ ಬಿಟ್ಟರೆ ಬದುಕೇ ಘೋರ

ಇದು ಬರೀ ಸಾವಲ್ಲ ಸತ್ಯದ ಜೀವಂತ ದಹನ
ದುಷ್ಟರ ಆಟಕೆ ಮತ್ತೂಂದಿಷ್ಟು ಆಹ್ವಾನ

ಹೇಳುವುದಾರಿಗೆ , ಹೇಳಿದರೂ
ಬೆಲೆಯುಂಟೆ , ನಮ್ಮ ಕೂಗಿಗೆ
ಮೇಲೆ ನಗುವಿನ ಮುಖವಾಡ
ಅರಿವಿದ್ದರೂ ಹಂತಕರ ಕೈವಾಡ

Rating
No votes yet

Comments