ಮುಗ್ಧತೆಯ ಅಂತ್ಯವೇ ಕೃಷಿಯ ಆರಂಭ
ಲೈಂಗಿಕತೆಯ ಅವಶ್ಯಕತೆಯೇ ಇಲ್ಲದೇ ಮಣ್ಣು ಜೀವಿಗಳನ್ನು ಹುಟ್ಟಿಸುತ್ತದೆ ಎಂದು ಪ್ರಾಚೀನ ಭಾರತೀಯರು, ಗ್ರೀಕರು ನಂಬಿದ್ದರು. ತಾಪದ ಪ್ರಭಾವದಿಂದ ಮಣ್ಣು ಜೀವಿಗಳನ್ನು ಹುಟ್ಟಿಸುತ್ತದೆ ಎಂದು ಗ್ರೀಕ್ ಚಿಂತಕ, ಗುರು ತೇಲ್ಸ್ ತನ್ನ ವಿದ್ಯಾರ್ಥಿಗಳಿಗೆ ಹೇಳಿದ್ದ. ಮಣ್ಣು ಯಾವ ಬಾಹ್ಯ ನೆರವೂ ಇಲ್ಲದೆ ಸೃಷ್ಟಿಸುವ ಶಕ್ತಿ ಹೊಂದಿದೆ ಎಂಬ ವಾದವನ್ನು ತತ್ವಜ್ಞಾನಿ ಅರಿಸ್ಟಾಟಲ್ ಮಂಡಿಸಿದ್ದ.
ಮಣ್ಣಿನ ಶಕ್ತಿಯ ಕುರಿತ ಇಂಥ ಪರಿಕಲ್ಪನೆಗಳು ದಾಖಲಾಗುವುದಕ್ಕೆ ಸಾವಿರಾರು ವರ್ಷಗಳ ಮೊದಲೇ ಕೃಷಿ ಹುಟ್ಟಿತ್ತು. ಕೃಷಿಯ ಹುಟ್ಟಿನ ಬಗ್ಗೆ ಎರಡು ಬಗೆಯ ಕಥನಗಳಿವೆ. ಮೊದಲನೆಯದ್ದು ನಾವೆಲ್ಲರೂ ಶಾಲೆಯಲ್ಲಿ ಅರಿಯುವುದು. ಎರಡನೆಯದ್ದು ನಮ್ಮ ಧಾರ್ಮಿಕ ನಂಬಿಕೆಗಳಿಂದ ಬಂದದ್ದು. ಶಾಲೆಯಲ್ಲಿ ಹೇಳುವಂತೆ ಸುಮಾರು 10,000 ವರ್ಷಗಳ ಹಿಂದೆ ಕೃಷಿ ಆರಂಭವಾಯಿತು. ಇದು ಮನುಷ್ಯನನ್ನು ನಾಗರಿಕನನ್ನಾಗಿಸಿತು. ಅವನ ಅಲೆಮಾರಿ ಬದುಕನ್ನು ಕೊನೆಗೊಳಿಸಿ `ನಿವಾಸಿ'ಯಾಗುವಂತೆ ಮಾಡಿತು. ಚಕ್ರದಿಂದ ಆರಂಭಿಸಿ ಅತ್ಯಾಧುನಿಕ ಸೂಪರ್ ಕಂಪ್ಯೂಟರ್ಗಳವರೆಗಿನ ಎಲ್ಲ ಆವಿಷ್ಕಾರಗಳಿಗೂ ಬೇಸಾಯವೇ ಮೂಲ.
ಈ ವೈಜ್ಞಾನಿಕ ಕಥನದ ಹುಟ್ಟಿಗೆ ಕಾರಣವಾದದ್ದು ಡಾರ್ವಿನ್ನ ವಿಕಾಸವಾದ. ಈ ಕಥನವನ್ನು ಸೃಷ್ಟಿಸಿದ ಪ್ರದೇಶದಲ್ಲಿರುವ ಧಾರ್ಮಿಕ ನಂಬಿಕೆಗಳು ಬೇಸಾಯದ ಹುಟ್ಟಿಗೆ ಸಂಬಂಧಿಸಿದಂತೆ ಬೇರೊಂದು ಕಥೆಯನ್ನು ಹೇಳುತ್ತವೆ. ಆದಿ ಪುರುಷ ಆಡಂ ಮತ್ತು ಆದಿ ಮಾತೆ ಈವ್ ಇದ್ದದ್ದು ಏಡನ್ ಉದ್ಯಾನವನದಲ್ಲಿ. ಅಲ್ಲಿದ್ದ ಜ್ಞಾನವೃಕ್ಷದ ಹಣ್ಣನ್ನು ಹೊರತು ಪಡಿಸಿದರೆ ಎಲ್ಲಾ ಮರ, ಗಿಡಗಳನ್ನೂ ಇವರಿಬ್ಬರೂ ಆಹಾರವಾಗಿ ಬಳಸುವ ಅನುಮತಿಯನ್ನು ದೇವರು ನೀಡಿದ್ದ. ಈವ್ ಒಂದು ದಿನ ಚಪಲಕ್ಕೆ ಬಲಿಯಾಗಿ ಜ್ಞಾನವೃಕ್ಷದ ಹಣ್ಣನ್ನು ತಿನ್ನುತ್ತಾಳೆ. ಆಡಂ ಆಕೆಯನ್ನು ಅನುಸರಿಸುತ್ತಾನೆ. ಆಜ್ಞೆಯನ್ನು ಪಾಲಿಸದ ಈ ತಪ್ಪಿಗಾಗಿ ದೇವರು ಅವರಿಗೆ ಶಿಕ್ಷೆ ವಿಧಿಸುತ್ತಾನೆ. ಅದರಂತೆ ಅವರು ಬೆವರು ಸುರಿಸಿ ದುಡಿದು ಬದುಕಬೇಕು. ಹಾಗೆ ಕೃಷಿ ಆರಂಭವಾಗುತ್ತದೆ.
ಅತ್ಯಂತ `ವೈಜ್ಞಾನಿಕ'ವಾಗಿರುವ ಮೊದಲ ಕಥನ ಮತ್ತು ಕೇವಲ ನಂಬಿಕೆಯನ್ನಷ್ಟೇ ಆಧಾರವಾಗಿ ಇಟ್ಟುಕೊಂಡಿರುವ ಎರಡನೇ ಕಥನಗಳ ಮಧ್ಯೆ ಮೂಲಭೂತವಾದ ವ್ಯತ್ಯಾಸಗಳೇನೂ ಇಲ್ಲ. ಮನುಷ್ಯ ನಿಸರ್ಗದಲ್ಲಿ ಆಹಾರವನ್ನು ಕಂಡುಕೊಳ್ಳುವುದರ ಬದಲಿಗೆ ಆಹಾರವನ್ನು ಸೃಷ್ಟಿಸುವ ಪ್ರಯತ್ನ ಆರಂಭಿಸಿದ ಎಂಬುದನ್ನು ಎರಡೂ ಕಥನಗಳು ಹೇಳುತ್ತಿವೆ. ಇನ್ನೂ ಸ್ಪಷ್ಟವಾಗಿ ಹೇಳುವುದಾದರೆ ನಿಸರ್ಗವನ್ನು ತನಗೆ ಬೇಕಿರುವಂತೆ ಬದಲಾಯಿಸುವ ಪ್ರಯತ್ನಗಳನ್ನು ಮನುಷ್ಯ ಆರಂಭಿಸಿದ. ಆಡಂ ಮತ್ತು ಈವ್ರ ಕಥೆಯನ್ನು ಸೂಕ್ಷ್ಮವಾಗಿ ನೋಡಿದರೆ ಇದು ಅರ್ಥವಾಗುತ್ತದೆ.
ಜ್ಞಾನವೃಕ್ಷದ ಹಣ್ಣನ್ನು ತಿಂದದ್ದರಿಂದ ಅವರಲ್ಲಿ ಒಳಿತು-ಕೆಡುಕುಗಳ ಅರಿವುಂಟಾಯಿತು. ಅಂದರೆ ಅವರು ತಮ್ಮ ಮುಗ್ಧತೆಯನ್ನು ಕಳೆದುಕೊಂಡರು. ಈ ಮುಗ್ಧತೆಯನ್ನು ಕಳೆದುಕೊಳ್ಳುವುದರ ಜೊತೆಗೆ ಮನುಷ್ಯನ `ನಾಗರಿಕ'ನಾಗುವ ಪ್ರಕ್ರಿಯೆ ಆರಂಭಗೊಂಡಿತು. ಇದೇ ಕಾರಣಕ್ಕೆ ಚಾರ್ಲ್ಸ್ ಡಾರ್ವಿನ್ನ ಬಲವಿದ್ದವನಷ್ಟೇ ಉಳಿದುಕೊಳ್ಳುತ್ತಾನೆ ಎಂಬ ಸಿದ್ಧಾಂತ ಬಹಳ ತರ್ಕಬದ್ಧವಾಗಿ ಕಾಣಿಸಿದ್ದು. ಹಾಗೆಯೇ ಡಾರ್ವಿನ್ ಪ್ರಸಿದ್ಧನಾದ ಹೊತ್ತಿನಲ್ಲೇ ಸಸ್ಯವಿಜ್ಞಾನಿ ಆಂಟನ್ ಡಿ ಬಾರಿ ಮಂಡಿಸಿದ `ಕೂಡುಬಾಳುವೆ'ಯ ಸಿದ್ಧಾಂತ ಇನ್ನೂ ಅರ್ಥವಾಗದೇ ಹೋಗಿರುವುದು. ಆಂಟನ್ ಡಿ ಬಾರಿ ಹೇಳುವಂತೆ ತನ್ನಿಂದ ತಾನೇ ಪೂರ್ಣವಾಗುವ ಯಾವ ಜೀವಿಯೂ ಇಲ್ಲ. ಯಾರು ಯಾರನ್ನು ಕೊಲ್ಲುತ್ತಾರೆ ಎನ್ನುವುದಕ್ಕಿಂತ ಯಾರು ಬದುಕಬೇಕಾದರೆ ಯಾರಿರಬೇಕು ಎಂಬುದು ಬಹಳ ಮುಖ್ಯ. ನಮ್ಮ ಕಾಡುಗಳನ್ನು ನೋಡಿದರೆ ಇದು ಅರ್ಥವಾಗುತ್ತದೆ. ಬಲಶಾಲಿಯಷ್ಟೇ ಬದುಕುವುದಾದರೆ ಪೊದೆ, ಹುಲ್ಲುಗಳು ಇರುತ್ತಿರಲಿಲ್ಲ.
-ಇಸ್ಮಾಯಿಲ್
Comments
ಖಂಡಿತಾ ಬಲಹೀನವಲ್ಲ
In reply to ಖಂಡಿತಾ ಬಲಹೀನವಲ್ಲ by vvdooshaka
ನನಗೂ ಹಾಗೇ ಅನ್ನಿಸಿತ್ತು.