ಮುಚ್ಚಿದ ಬಾಗಿಲು

Submitted by rashmi_pai on Mon, 07/01/2013 - 16:06

ವನ ಕೋಣೆಯ ಬಾಗಿಲು ಮುಚ್ಚಿಯೇ ಇರುತ್ತಿತ್ತು. ಬೆಳಗ್ಗೆ ಸುಮಾರು ಏಳು ಗಂಟೆಯ ಹೊತ್ತಿಗೆ ಯಶು ಆತನ ಕೋಣೆಯ ಬಳಿ ಹಾಲು ತೆಗೆದುಕೊಂಡು ಬರುತ್ತಿದ್ದಳು. ಅವನ ಕೋಣೆಯ ಬಾಗಿಲು ತೆರೆಯಲು ಯಾವುದೇ ಕಾಲಿಂಗ್ ಬೆಲ್‌ನ ಆವಶ್ಯಕತೆ ಇರುತ್ತಿರಲಿಲ್ಲ. ಯಶು ಧರಿಸಿದ್ದ ಕಾಲ್ಗೆಜ್ಜೆಯ ಸದ್ದು ಕೇಳಿದರೆ ಸಾಕು ಬಾಬು ಬಾಗಿಲು ತೆರೆಯುತ್ತಿದ್ದ. ಯಶುವಿನ ಕೈಯಿಂದ ಹಾಲಿನ ಪಾತ್ರೆ ತೆಗೆದುಕೊಂಡು ಅದನ್ನು ಇನ್ನೊಂದು ಪಾತ್ರೆಗೆ ಹಾಕಿ ಖಾಲಿ ಬಾಟಲಿಯನ್ನು ಆಕೆಗೆ ಕೈಗಿತ್ತು ಮತ್ತೆ ಬಾಗಿಲು ಮುಚ್ಚಿಕೊಳ್ಳುತ್ತಿದ್ದ. ಸುಮಾರು 25ರ ಹರೆಯದ ಆ ಯುವಕ ಏನು ಮಾಡುತ್ತಿದ್ದಾನೆ?  ಎಂದು ಯಾರಿಗೂ ಗೊತ್ತಿರಲಿಲ್ಲ. ಯಶು ಏನಾದರೂ ಪ್ರಶ್ನೆ ಕೇಳಿದರೆ 'ಹಾಂ.. ಹೂಂ' ಎಂಬ ಉತ್ತರವನ್ನು ಮಾತ್ರ ನೀಡುತ್ತಿದ್ದ.

ಅಂದ ಹಾಗೆ ಬಾಬು 'ಕಯ್ಯೂರ್‌' ಎಂಬ ಈ ಗ್ರಾಮಕ್ಕೆ ಯಾಕಾಗಿ ಬಂದನೆಂದು ಯಾರಿಗೂ ಈವರೆಗೆ ಗೊತ್ತಿಲ್ಲ. ಮಾತಿಗೆ ಸಿಗುವ ಹುಡುಗ ಅವನಲ್ಲ. ಕಾಣಲು ಸ್ಪುರದ್ರೂಪಿ, ಉದ್ದನೆಯ ಪೈಜಾಮ ಹಾಕಿ ಎಡ ತೋಳಲ್ಲಿ ಒಂದು ಜೋಳಿಗೆ ಸಿಕ್ಕಿಸಿ ಕೆಲವೊಂದು ದಿನ ಆ ಊರಲ್ಲಿ ಒಂದಿಷ್ಟು ತಾಸು ಸುತ್ತಾಡುವುದನ್ನು ಬಿಟ್ಟರೆ ಬೇರೇನು ಮಾಡುತ್ತಿದ್ದಾನೆ ಎಂದು ಯಾರೂ ಕೇಳುತ್ತಿರಲಿಲ್ಲ. ಇರಲಿ ಬಿಡಿ, ನಮಗೆ ಯಾಕೆ ಈ ಉಸಾಬರಿ ಎಂದು ಹೇಳುವವರೇ ಬಹುತೇಕ ಮಂದಿ. ಏನೋ ಪ್ರಾಜೆಕ್ಟ್ ಮಾಡಲಿಕ್ಕೆ ಬಂದಿದ್ದಾನಂತೆ ಅವ ಎಂದು ಯಾರೋ ಹೇಳಿದ್ದರು.

ಆದರೆ ಬಾಬು ಇಲ್ಲಿಗೆ ಬಂದು ತಿಂಗಳಾಯ್ತು. ಯಾರಲ್ಲೂ ಹೆಚ್ಚಿಗೆ ಮಾತುಕತೆಯಿಲ್ಲ. ಆತನ ಕೋಣೆಯ ಕಿಟಿಕಿ ಬಾಗಿಲು ಸದಾ ಮುಚ್ಚಿಕೊಂಡೇ ಇರುತ್ತದೆ. ಯಶು ಹಾಲು ತಂದಾಕ್ಷಣ ಮಾತ್ರ ಒಂದೆರಡು ನಿಮಿಷ ಬಾಗಿಲು ತೆರೆದು ಕೊಳ್ಳುತ್ತದೆ. ಮತ್ತೆ...ಅದೇ ಮುಚ್ಚಿದ ಬಾಗಿಲು.

ಅಪರೂಪಕ್ಕೊಮ್ಮೆ ಕಣ್ಣೇಟ್ಟನ್‌ರ  ಚಹಾದಂಗಡಿಗೆ ಬಂದು ಕಟ್ಟನ್ ಚಾಯ ಕುಡಿಯುವುದನ್ನು ಬಿಟ್ಟರೆ ಆತ ಬೇರೆ ಕಡೆಯಿಂದ ಯಾವುದೇ ವಸ್ತು ಖರೀದಿಸುವುದನ್ನು ಈವರೆಗೆ ಯಾರೂ ಕಂಡವರಿಲ್ಲ. ಇವನೇನು ಗಾಳಿ ಮಾತ್ರ ಸೇವಿಸಿ ಬದುಕುತ್ತಾನೆಯೇ? ಅಥವಾ ಮನೆಯೊಳಗೆಯೇ ಎಲ್ಲಾ ವಸ್ತುಗಳನ್ನು ಉತ್ಪಾದಿಸುವ ಯಂತ್ರವಿದೆಯೇ? ಎಂದು ಜನರಾಡಿಕೊಳ್ಳುತ್ತಿದ್ದರು. ಆತನ ಕೋಣೆಯ ಬಳಿ ಯಶು ಬಿಟ್ಟರೆ ಬೇರೆ ಯಾರೂ ಸುಳಿದಾಡುತ್ತಿರಲಿಲ್ಲ. ಯಶು ಅಂದರೆ ಬಾಬು ಬಾಡಿಗೆಗೆ ಇದ್ದಾನಲ್ಲಾ ಆ ಮನೆಯ ಮಾಲೀಕರ ಮಗಳು. ಇಗಷ್ಟೇ ಹತ್ತನೇ ಕ್ಲಾಸು ಮುಗಿಸಿದ್ದಾಳೆ. ಯಶುಗೆ ಬಾಬುವನ್ನು ಕಂಡರೆ ಏನೋ ಆಕರ್ಷಣೆ. ಆದರೆ ಅವನು ಒಂದು ದಿನವಾದರೂ ಯಶುವಿನ ಮುಖ ಸರಿಯಾಗಿ ನೋಡಿರಲೇ ಇಲ್ಲ.ಆ ಹುಡುಗಿಯಂತೂ ಹಾಲು ತೆಗೆದುಕೊಂಡು ಬಂದರೆ ಸಾಕು ಕಡ್ಲೆ ಹುರಿದಂತೆ ಮಾತನಾಡುತ್ತಾಳೆ. ಆ ಕಡೆಯಿಂದ ಏನೂ ಉತ್ತರ ಬರದೇ ಇರುವಾಗ
"ನಿಮ್ಗೇನು ಮಾತಾಡಕ್ಕೆ ಬರಲ್ವಾ ?"ಎಂದು ಕೇಳುತ್ತಾಳೆ.


ದಿನಾ ಅವಳು ಮಾಡುವ ಕಿರಿಕಿರಿಯನ್ನು ಸಹಿಸಲಾರದೆ ಒಂದು ದಿನ " ನೀನು ಈ ರೀತಿ ವಟ ವಟಗುಟ್ಟುತ್ತಿದ್ದರೆ ನೀನು ತರುವ ಹಾಲು ನನಗೆ ಬೇಡ..."
"ಹಾಗಾದರೆ ಕಟ್ಟನ್ ಚಾಯ ಕುಡಿಯುತ್ತೀರೋ, ಮಿಲ್ಮಾ ಪ್ಯಾಕೆಟ್ ಖರೀದಿಸುತ್ತಿರೋ?"
ಅವ ಏನೂ ಮಾತನಾಡದೆ ಅವಳ ಕೈಗೆ ಹಾಲಿನ ಬಾಟಲಿಯನ್ನು ಕೊಟ್ಟು ರಪ್ಪನೆ ಬಾಗಿಲು ಮುಚ್ಚಿಕೊಂಡ.

ಹೀಗೆ ದಿನಗಳು ಕಳೆದವು. ಯಶುವಿಗೆ ಬಾಬುವಿನ ಮೇಲೆ ಅಗಾಧ ಪ್ರೇಮ. ಇದನ್ನು ಅವನಲ್ಲಿ ಹೇಗೆ ಹೇಳಲಿ? ಎಂದು ದಾರಿಯುದ್ದಕ್ಕೂ ಯೋಚನೆ ಮಾಡುತ್ತಾ ಬರುತ್ತಿದ್ದಳು. ಮನೆಯಿಂದ ಹೊರಡಬೇಕಾದರೆ ಹೇಗಾದರೂ ಮಾಡಿ ಎಲ್ಲಾ ಧೈರ್ಯವನ್ನು ಒಗ್ಗೂಡಿಸಿ ತನ್ನ ಮನದ ಮಾತನ್ನು ಇಂದು ಹೇಳಲೇ ಬೇಕು ಎಂದು ತೀರ್ಮಾನಿಸುತ್ತಿದ್ದಳು. ಆದರೆ ಮನದ ಮಾತನ್ನು ಹೇಳಬೇಕೆಂದಿದ್ದರೂ ಸುನಿಯ ಗಂಭೀರ ಮುಖವನ್ನು ಕಂಡಾಕ್ಷಣ ಹೇಳ ಬೇಕಾಗಿರುವುದೆಲ್ಲಾ ಮರೆತು ಹೋಗುತ್ತಿತ್ತು.

ಅಂತೂ ಇಂತೂ ಇವತ್ತು ಹೇಳಿಯೇ ಬಿಡಬೇಕು ಎಂದು ತೀರ್ಮಾನಿಸಿದ ಯಶು ಅಂದು ತನ್ನ ಕಾಲ್ಗೆಜ್ಜೆಯನ್ನು ಬಿಚ್ಚಿಟ್ಟಳು. ಆ ದಿನ ಹಾಲು ತೆಗೆದುಕೊಂಡು ಬಾಬುವಿನ ರೂಮಿನತ್ತ ಓಡಿ ಹೋಗಿ ಬಾಗಿಲು ಬಡಿದಳು. ಮೆಲ್ಲನೆ ಬಾಗಿಲು ತೆರೆದುಕೊಂಡಿತು.
"ನೀನ್ಯಾಕೆ ಬಾಗಿಲು ಬಡಿದೆ?"
"ಹಾಲು..."ಎಂದು ಹಾಲಿನ ಬಾಟಲಿಯನ್ನು ಅವನ ಮುಂದೆ ಇಟ್ಟಳು.
"ನಾನೊಂದು ಮಾತು ಹೇಳಲಾ?"
ಅವ ಏನೂ ಮಾತನಾಡದೆ ಅವಳ ಮುಖವನ್ನೇ ನೋಡಿದ.
ಉಗುಳು ನುಂಗಿ...ಅವಳು ಹೇಳಿದಳು..
"ನನಗೆ ನೀವು ಅಂದ್ರೆ ತುಂಬಾ ಇಷ್ಟ...ನೀವು ನನ್ನನ್ನು ಮದುವೆ ಆಗ್ತೀರಾ?"
ಗಂಭೀರವದನನಾಗಿದ್ದ ಬಾಬು ಸ್ವಲ್ಪ ಸಾವಧಾನಿಸಿಕೊಂಡು..
"ಇದು ನಿನ್ನ ವಯಸ್ಸಿನ ಹುಚ್ಚಾಟ. ನಿನಗೆ ಈಗ ಯಾವುದೂ ಅರ್ಥವಾಗಲ್ಲ. ನಿನಗಿನ್ನೂ ಜೀವನ ಏನೆಂದೇ ತಿಳಿದಿಲ್ಲಾ.."
"ನನಗೆಲ್ಲಾ ಗೊತ್ತು..ನೀವು ಯಾರೆಂದು ನನಗೆ ಗೊತ್ತು..."
(ಅವನತ್ತ ನೋಡಿ ತುಂಟನಗು ಬೀರಿದಳು)

ಅವನು ಗಂಭೀರವದನನಾದ...
ಕಣ್ಣುಗಳು ಪ್ರಶ್ನಾರ್ಥಕ ಭಾವದಿಂದ ಅವಳನ್ನೇ ನೋಡತೊಡಗಿದವು.

"ನೀವು...ತುಂಬಾ ಓದಿದ್ದೀರಂತೆ. ಆಮೇಲೆ ಪತ್ರಿಕೆಗಳಿಗೆಲ್ಲಾ ಲೆಟರ್ ಬರೆಯುತ್ತೀರಂತೆ. ರಾತ್ರಿಯೆಲ್ಲಾ ನೀವು ನಿಮ್ಮ ಗೆಳೆಯರು ಇಲ್ಲಿ ಸೇರಿ ಬಾಂಬ್..."
"ಯಾರು ಹೇಳಿದರು  ನಿನಗೆ?"
"ಎಲ್ಲಾ ಹೇಳ್ತೇನೆ..ಮೊದಲು ನೀವು ನನ್ನನ್ನು ನಿಮ್ಮ ಕೋಣೆಯೊಳಗೆ ಕರೆಯಿರಿ. ಎಲ್ಲಾ ವಿಷ್ಯ ಹೇಳುತ್ತೇನೆ."

ತನ್ನ ಬಗ್ಗೆಯಿರುವ ರಹಸ್ಯಗಳು ಇವಳಿಗೆ ಹೇಗೆ ಗೊತ್ತಾಯಿತು? ಎಂಬುದನ್ನು ಅರಿಯಲು ಒಲ್ಲದ ಮನಸ್ಸಿನಿಂದಲೇ ಆಕೆಯನ್ನು ತನ್ನ ಕೋಣೆಯೊಳಗೆ ಬರಹೇಳಿದ.

"ಈಗ ಹೇಳು..ನಿನಗೆ ಇದೆಲ್ಲಾ ಯಾರು ಹೇಳಿದರು..."
ಕಣ್ಣನ್ ಮಾಮ ಹೇಳಿದ್ರು...ನೀವು ನಕ್ಸಲ್ ಅಂತೆ. ಇಲ್ಲಿ ಬಾಂಬ್ ತಯಾರಿ ಮಾಡುವುದೇ ನಿಮ್ಮ ಕೆಲಸವಂತೆ. ಅದಕ್ಕೇ...ನೀವು ಯಾರಲ್ಲಿಯೂ ಮಾತಾಡಲ್ಲಂತೆ...ಎಲ್ಲಾ ಅಂತೆಗಳನ್ನು ಉಗುಳು ನುಂಗುತ್ತಾ ಹೇಳುತ್ತಿದ್ದಳು ಯಶು.

ಮತ್ತೆ...
"ಹೇಳು..."
"ನೀವು ನನ್ನನ್ನು ಪ್ರೀತಿಸುತ್ತೀರಾ?"
"ಇಲ್ಲ"
"ಯಾಕೆ?"
"ನನ್ನ ಜೀವನದ ಗುರಿಯೇ ಬೇರೆ.."
"ಅದಕ್ಕೆ?"
"ಪ್ರೀತಿ, ಪ್ರೇಮ ಸಂಬಂಧಗಳು ಅಡ್ಡಬರಬಾರದು..."
"ಹಾಗಾದರೆ ಕಣ್ಣನ್ ಮಾಮ ಹೇಳಿದ್ದು ಸರಿ.."
"ಏನು?"
"ನೀವು ಈ ಊರಿಗೆ ಬಾಂಬ್ ಹಾಕಲು ಬಂದಿದ್ದೀರಂತೆ!"
"ಇಲ್ಲ..ನಾನು ಈ ಊರಿಗೆ ಬಾಂಬ್ ಹಾಕಲು ಬಂದಿಲ್ಲ. ನನ್ನ ಗುರಿ ಸಾಧನೆಗೆ ಬಂದಿದ್ದೇನೆ.."
"ಅದೇನು?"
"ನಿನಗೆ ಅರ್ಥವಾಗಲ್ಲ.."
"ನೀವು ಈ ರೀತಿ ಮಾಡಿದ್ರೆ ಆಮೇಲೆ ಪೊಲೀಸ್ ನಿಮ್ಮನ್ನು ಹಿಡಿದು ನೇಣುಗಂಬಕ್ಕೇರಿಸುತ್ತಾರೆ."
"ನನ್ನ ಲಕ್ಷ್ಯ ನೆರವೇರಿದ ಮೇಲೆ ನೇಣುಗಂಬಕ್ಕೇರಲು ನಾನು ತಯಾರ್.."
"ನೀನು ಸತ್ತರೆ....ನೀನು ಸಾಯಬಾರದು..."ಎಂದು ಯಶು ಅಳಲು ಶುರುಮಾಡಿದಳು..

"ಏಯ್...ಈ ರೀತಿ ಅಳಬೇಡ..ಹುಚ್ಚಿ...ಹೋಗು...ಮನೆಯಲ್ಲಿ ಅಪ್ಪ ನಿನಗಾಗಿ  ಕಾಯುತ್ತಿರಬಹುದು..ಹೋಗು" ಎಂದು ಅವಳ ಹೆಗಲನ್ನು ಸವರಿದ.
ಅವಳಿಗೆ ಪರಮಾನಂದ. ಕಡೆಗೂ ಅವ ನನ್ನನ್ನು ಮುಟ್ಟಿದ ಎಂಬ ಸಂತೋಷ.

ಮರುದಿನ ಪುನಃ ಹಾಲು ತೆಗೆದು ಕೊಂಡು ಹೋದಳು. ಅವ ಬಾಗಿಲು ತೆರೆದಾಗ ಯಶು ಹೇಳಿದಳು.
"ಎಚ್ಚರಿಕೆಯಿಂದಿರಿ ಇಲ್ಲಿ ಪೊಲೀಸ್ ರೈಡ್ ಆಗ್ತಿದೆಯಂತೆ ಕಣ್ಣನ್ ಮಾಮ ಹೇಳಿದ್ರು."
ಯಶುವಿಗೆ ಭಯ ಆವರಿಸಿತ್ತು. ಇವಳಿಗೆ ಅವನ ಕೋಣೆಯೊಳಗೆ ಮತ್ತೊಮ್ಮೆ ಹೋಗಬೇಕು ಎಂದೆನಿಸುತ್ತಿತ್ತು.
ಅದಕ್ಕಾಗಿಯೇ ಇನ್ನೊಂದು ವಿಷ್ಯ ನಂಗೊತ್ತು . ಒಳಗಡೆ ಹೋಗೋಣ ಹೇಳ್ತೀನಿ ಎಂದಳು.

ಏನೋ ಪ್ರಧಾನವಿಷ್ಯ ಇರಬಹುದು ಎಂದು ಬಾಬು ಒಳಬರಲು ಹೇಳಿದ.
ಬಾಗಿಲು ಮುಚ್ಚಿಕೊಂಡಿತು.
"ಹೇಳು ಏನು? "
"ಏನಿಲ್ಲಾ..ಕಣ್ಣನ್ ಮಾಮ ಹೇಳ್ತಿದ್ರು...ಪೋಲಿಸ್ ರೈಡ್ ಮಾಡ್ತಾರೆ ಅಂತ. ನೀವು ಪೊಲೀಸ್ ಕೈಗೆ ಸಿಕ್ಕಿದ್ರೆ ನನ್ನ ಗತಿಯೇನು? ನಿಮಗೆ ಗೊತ್ತಾ...ನಾನು ನಿಮ್ಮನ್ನು ಎಷ್ಟು ಲವ್ ಮಾಡ್ತಿದ್ದೀನಿ ಅಂತ. ಕುಳಿತಲ್ಲಿ ನಿಂತಲ್ಲಿ ಎಲ್ಲಾ ನೀವೇ..."

"ಇಷ್ಟೇನಾ...
ನಿನಗೆ ಮೊದಲೇ ಹೇಳಿದ್ದೆ... ನನಗೆ ಈ ಹರಟೆ ಇಷ್ಟ ಆಗೋಲ್ಲಾಂತ"

"ಬಾಬು ಚೇಟ್ಟಾ...ಒಂದು ಬಾರಿಯಾದರೂ ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡು..ನನ್ನ ಪ್ರೀತಿಯ ಆಳ ಎಷ್ಟಿದೆ ಎಂದು ನಿನಗೆ ತಿಳಿಯುತ್ತೆ."

ಬಾಬುವಿಗೆ ಯಶುವಿನ ಮೇಲೆ ಪ್ರೀತಿ ಇತ್ತಾದರೂ ಅದನ್ನು ವ್ಯಕ್ತಪಡಿಸಲು ಅವನಿಗೆ ತನ್ನ ಜವಾಬ್ದಾರಿಗಳು ಅಡ್ಡ ಬರುತ್ತಿದ್ದವು. ಹೇಗಾದರೂ ಮಾಡಿ ಈ ಹುಡುಗಿಯನ್ನು ಮನೆಯಿಂದ ಹೊರಗೆ ಕಳುಹಿಸಬೇಕೆಂದು ಮನಸ್ಸಲ್ಲೇ ಯೋಚನೆ ಮಾಡುತ್ತಿದ್ದ.

ಅವನ ಕೋಣೆಯಲ್ಲೇ ಅತ್ತಿತ್ತ ತಿರುಗಿದ ಯಶು ಗೋಡೆಯಲ್ಲಿ ತೂಗು ಹಾಕಿದ ಫೋಟೋವೊಂದನ್ನು ತೋರಿಸಿ
"ಇದು ಯಾರು?" ಎಂದು ಕೇಳಿದಳು.
"ಚೆ...
ಚೆಗುವೆರಾ" ಎಂದ.
"ನಿನಗೆ ಲಾಲೇಟ್ಟನ್, ದಿಲೀಪ್ ಯಾರನ್ನೂ ಹಿಡಿಸಲ್ವ? ಯಾರೋ ಒಬ್ಬನ ಫೋಟೋ ಮನೆಯಲ್ಲಿ ತೂಗು ಹಾಕಿದ್ದಿಯಲ್ಲಾ..."
ಅವ ಮರು ಮಾತಾಡಲಿಲ್ಲ.
ಇದ್ಯಾವ ಪುಸ್ತಕ? ಇಷ್ಟೊಂದು ಪುಸ್ತಕಗಳನ್ನು ನೀವು ಓದ್ತೀರಾ?
'ದ ಕಮ್ಯೂನಿಸ್ಟ್ ಮೆನಿಫೆಸ್ಟ್, 'ಥಿಯರೀಸ್ ಆಫ್ ಸರ್‌ಪ್ಲಸ್ ವ್ಯಾಲ್ಯೂ', 'ದ ಜರ್ಮನ್ ಐಡಿಯೋಲಜಿ' ಹೀಗೆ ಹಲವಾರು ಪುಸ್ತಕಗಳು ಮೇಜಿನ ತುಂಬಾ ಹರಡಿದ್ದವು.
"ಯಶು... ಈ ಪುಸ್ತಕಗಳ ಬಗ್ಗೆ ಕೇಳಿದ್ದೀಯಾ? "
"ಇಲ್ಲಾ..."
"ಮತ್ತೆ ನಿನಗೇನು ಗೊತ್ತು? "
'ಐ ಲವ್ ಯೂ...' ಎಂಬ ತುಂಟಾಟಿಕೆ ಉತ್ತರ.
"ಅದಿರಲಿ... ನೀವೇನು ಕೆಲಸ ಮಾಡ್ತಾ ಇದ್ದೀರ ಎಂದು ಈವರೆಗೂ ನನ್ನಲ್ಲಿ ಹೇಳಿಲ್ಲ."
"ಬದಲಾವಣೆ"
"ಬದಲಾವಣೆ ಹಾಗಂತ ಕೆಲಸ ಇದೆಯಾ? ನಾನಂತೂ ಈ ಬಗ್ಗೆ ಕೇಳೇ ಇಲ್ಲಪ್ಪಾ'
"ನಿನಗೆ ಅರ್ಥವಾಗದ ಹಲವಾರು ಕೆಲಸಗಳು ಈ ಲೋಕದಲ್ಲಿ ಇದೆ ಯಶು."
"ಹಾಗಾದರೆ ನಿಮಗೆ ಸಂಬಳ ಎಷ್ಟು ಬರುತ್ತದೆ?"
"ಎಲ್ಲರ ಮನಸ್ಸಲ್ಲಿ ನೆಲೆಯೂರುವಷ್ಟು.."
ಅರ್ಥವಾಗದೆ ಯಶು ಮೇಲೆ ಕೆಳಗೆ ನೋಡಿದಳು.
"ಕಯ್ಯೂರ್ ಸ್ಮಾರಕ ನೋಡಿದ್ದಿಯಲ್ಲಾ? ಅದರ ಬಗ್ಗೆ ನಿನಗೆ ಗೊತ್ತೇ ಇದೆ."
"ಹೂಂ.."
"ಆ ಸ್ಮಾರಕಗಳು ಈ ಮಣ್ಣಿಗಾಗಿ ಜೀವತೆತ್ತಂತಹ ಮಹನೀಯರನ್ನು ಸದಾ ನೆನಪಿಸಿಕೊಳ್ಳುವಂತೆ ಮಾಡುವುದಿಲ್ಲವೇ?"
"ತಾಜ್ ಮಹಲ್ ...ಶಾಜಹಾನನ ಪ್ರೀತಿಯನ್ನು ಎಂದೂ ನೆನಪಿಸುವಂತೆ." ಪ್ರೀತಿ ತುಂಬಿದ ಕಣ್ಣುಗಳಿಂದ ಅವನತ್ತ ನೋಡುತ್ತಾ ಹೇಳಿದಳು.

"ಯಶು...ನೀನಿನ್ನು ಹೊರಡಬೇಕು. ನನಗೆ ಬೇರೆ ಕೆಲಸವಿದೆ."
"ಹೂಂ."
"ನಾಳೆ ನನ್ನ ಪ್ರಶ್ನೆಗೆ ನೀನು ಉತ್ತರ ಕೊಡ್ತಿಯಲ್ಲಾ. ಅದಕ್ಕಾಗಿ ಕಾಯುತ್ತೇನೆ."
"ನಾಳೆ ಏನಾಗುತ್ತದೋ ಎಂದು ತಿಳಿದಿಲ್ಲ."
ಮೌನ...

ರಾತ್ರಿ 8.30. ಬಾಬುವಿನ ಕೋಣೆಯ ಸುತ್ತಲೂ ಪೊಲೀಸು ಪಡೆ. ಆ ಹುಡುಗ ನಕ್ಸಲ್ ಅಂತೆ. ಅವನನ್ನ ಪೊಲೀಸರು ಬಂಧಿಸಿದ್ದಾರೆ.
ಯಶುಗೆ ಗಾಬರಿಯಾಯಿತು. ಬಾಬು...ಪೊಲೀಸ್ ಕೈಗೆ ಸಿಕ್ಕಿದರೆ..ನೇಣು...ಪರಶ್ಶಿನಿ ಕಡವ್ ಮುತ್ತಪ್ಪಾ ಕಾಪಾಡು ಎಂದು ದೇವರಲ್ಲಿ ಬೇಡಿಕೊಂಡಳು.

ಆವಾಗಲೇ ಮತ್ತೊಂದು ಸುದ್ದಿ. ಆ ಊರಿನ ಪೊಲೀಸ್ ಇನ್‌ಸ್ಪೆಕ್ಟರ್‌ನ್ನು ನಕ್ಸಲರು ಹತ್ಯೆಗೈದಿದ್ದಾರೆ. ಆ ಪೊಲೀಸ್ ಇನ್ಸ್‌ಪೆಕ್ಟರ್ ತನ್ನ ಅಧಿಕಾರವನ್ನು ಬಳಸಿ ಜನರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದ. ಈ ಪೊಲೀಸ್ ಅಧಿಕಾರಿಗೆ ಶಿಕ್ಷೆಯನ್ನು ವಿಧಿಸಲು ನಕ್ಸಲ್ ತೀರ್ಮಾನಿಸಿತ್ತು. ಹತ್ಯೆ ನಡೆದಾದ ಕ್ಷಣವೇ ಸುದ್ದಿ ಕಿಚ್ಚಿನಂತೆ ಊರಲ್ಲಾ ಹಬ್ಬಿತ್ತು.
ನೆಲಬಾಂಬ್ ಅಂತೆ. ಈ ಹತ್ಯೆಯ ಸಂಚಿಗೆ ಪ್ಲಾನ್ ಮಾಡಿದ್ದು...ಬಾಬು!

ಹೌದು ...ಬಾಬು ಹಾಗೂ ಗೆಳೆಯರು ಪ್ಲಾನ್ ಮಾಡಿದಂತೆ ಎಲ್ಲವೂ ನಡೆದಿತ್ತು. ಬಾಬುವನ್ನು ಬಂಧಿಸುವ ಯೋಜನೆಯನ್ನು ಪೊಲೀಸರು ಹಾಕಿದ್ದಾರೆ ಎಂದು ಅವನಿಗೆ ಮೊದಲೇ ಗೊತ್ತಾಗಿತ್ತು. ಜನರ ಹಾಗೂ ಪೊಲೀಸರ ದೃಷ್ಟಿ  ಬಾಬುವಿನ ಬಂಧನದ ಮೇಲೆ ಮಾತ್ರ ನೆಟ್ಟಿರುವಾಗ ಇನ್‌ಸ್ಪೆಕ್ಟರ್‌ನ್ನು ಹತ್ಯೆಗೈಯ್ಯಲು ನಕ್ಸಲರಿಗೆ ತುಂಬಾ ಸುಲಭವಾಯಿತು.

ಬಾಬುವನ್ನು ಬಂಧಿಸಿ ಪೊಲೀಸರು ಕರೆದೊಯ್ಯುತ್ತಿರುವಾಗ ಯಶು ಕಿಟಿಕಿಯಿಂದಲೇ ನೋಡಿದಳು. ಆದರೆ ಅವಳಿಗೆ ಅವನು ಕಾಣಲಿಲ್ಲ..

ಈ ಘಟನೆಯ ನಂತರ ಬಾಬುವಿನ ಬಗ್ಗೆ ಯೋಚನೆ ಬಂದಾಗೆಲ್ಲಾ ಅವಳ ಕಣ್ಣಲ್ಲಿ ನೀರು ತುಂಬಿ ಬರುತ್ತಿತ್ತು. ಕಾಲ ಕಳೆದಂತೆ ಅವಳ ಪ್ರೀತಿಯ ತಾಜ್‌ಮಹಲ್ ಕಣ್ಣೆದುರೇ ಕುಸಿಯುತ್ತಿತ್ತು. ಅತ್ತ ಕಯ್ಯೂರ್ ಸ್ಮಾರಕಗಳಂತೆ  ಬಾಬುವಿನ ಸ್ಮಾರಕದ ಮುಂದೆಯೂ ಕೆಂಬಾವುಟ ಹಾರುತ್ತಿತ್ತು.
 

Rating
No votes yet

Comments

ksraghavendranavada

Tue, 07/02/2013 - 19:21

ಕಥೆ ಚೆನ್ನಾಗಿದೆ.
> ಆದರೆ ಮನದ ಮಾತನ್ನು ಹೇಳಬೇಕೆಂದಿದ್ದರೂ ಸುನಿಯ ಗಂಭೀರ ಮುಖವನ್ನು ಕಂಡಾಕ್ಷಣ ಹೇಳ ಬೇಕಾಗಿರುವುದೆಲ್ಲಾ ಮರೆತು ಹೋಗುತ್ತಿತ್ತು.<
ಇದು ಬಾಬು ಆಗಬೇಕಿತ್ತೇನೋ?
ನಮಸ್ಕಾರಗಳೊ೦ದಿಗೆ,
ನಿಮ್ಮವ ನಾವಡ.

ನಮಸ್ತೆ...
ಹೌದು ಅಲ್ಲಿ ಬಾಬು ಆಗಬೇಕಿತ್ತು. ತಪ್ಪಾಗಿದೆ...ಆದರೆ ಇಲ್ಲಿ ತಿದ್ದುವುದು ಹೇಗೆ?
ಕಥೆ ಮೆಚ್ಚಿದ್ದಕ್ಕೆ ನನ್ನಿ

ರಶ್ಮಿ

prakashapatil

Wed, 07/03/2013 - 14:42

ಕತೆ ತುಂಬಾ ಚೆನ್ನಾಗಿದೆ. ಆದರೆ, ಈ ಸಾಲಿನಲ್ಲಿ "ಯಶುವಿನ ಕೈಯಿಂದ ಹಾಲಿನ ಪಾತ್ರೆ ತೆಗೆದುಕೊಂಡು ಅದನ್ನು ಇನ್ನೊಂದು ಪಾತ್ರೆಗೆ ಹಾಕಿ ಖಾಲಿ ಬಾಟಲಿಯನ್ನು ಆಕೆಗೆ ಕೈಗಿತ್ತು ಮತ್ತೆ ಬಾಗಿಲು ಮುಚ್ಚಿಕೊಳ್ಳುತ್ತಿದ್ದ" ಪಾತ್ರೆ ಒಮ್ಮೆಗೆ ಬಾಟಲಿಯಾಗಿ ಬದಲಾವಣೆಯಾಗಿದೆ ಅನಿಸುತ್ತೆ, ಒಮ್ಮೆ ಪರೀಕ್ಷಿಸಿ.....

ಇಂದು ದಿನಪತ್ರಿಕೆಯಲ್ಲಿ ನಕ್ಸಲರು ಎಸ್ ಪಿ ಹತ್ಯೆ ಮಾಡಿದ್ದು ಸುದ್ಧಿ - ಈಗ ನಾ ಓದಿದ ಈ ಕಥೆಯ ಹೂರಣವೂ ಹೋಲುವುದು ಕಾಕತಾಳೀಯವೇ ??

ಈ ಮೊದಲು ಸಂಪದದಲ್ಲಿ ಬದಲಿಸು ಎಂದು ಆಯ್ಕೆ ಇತ್ತು. ಈಗ ಇಲ್ಲ , ಹೀಗಾಗಿ ಬರೆಯುವಾಗ ಬರೆದ ಮೇಲೆ ತಪ್ಪುಗಳಿ ಇದ್ದರೆ ತಿದ್ದಿ ಹಾಕಬೇಕು , ಶೀರ್ಷಿಕೆ ಇತ್ಯಾದಿ ತಪ್ಪು ಆದರೆ ಸಂಪದ ನಿರ್ವಾಹಕರಿಗೆ ಮೆಸೇಜ್ ಕಳಿಸಿದರೆ ತಿದ್ದುವರು (ನನ್ನ ಒಂದು ಬರಹಕ್ಕೆ ಹೀಗೆ ಆಗಿತ್ತು ). .
ನಕ್ಸಲರು ಮಾಡೋದು ಸರಿಯ?
ನಮ್ ವ್ಯವಸ್ಥೆಯ ಅವ್ಯವಸ್ತೆ ಅವರನ್ನ ಈ ತರಹ್ ಆಡ್ದ ದಾರಿ ಹಿಡಿದು ದೇಶೀ ಉಗ್ರರಾಗುವ ಹಾಗೆ ಮಾಡಿದೆ.
ಆದರೆ ಹಿಂಸೆಗೆ ಹಿಂಸೆಯೇ ಪರಿಹಾರವಲ್ಲ ..
ನಕ್ಸಲರ ಬಗ್ಗೆ ಚರ್ಚೆ ನಡೆದರೆ ಅದೇ ಒಂದು ದೊಡ್ಡ ಚರ್ಚೆ ಆದೀತು .. ;;(((

ಶುಭವಾಗಲಿ

\।

H A Patil

Thu, 07/04/2013 - 16:15

ಮೇಡಂ ವಂದನೆಗಳು

' ಮುಚ್ಚಿದ ಬಾಗಿಲು' ಒಂದು ಆಕರ್ಷಕ ಮತ್ತು ಸಕಾಲಕ ಕಥೆ ಕೂಡ. ಈ ಕಥಾನಕ ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ. ಉತ್ತಮ ಕಥೆ ನೀಡಿದ್ದಿರಿ ಧನ್ಯವಾದಗಳು.