ಮುದ್ರಿತ ಪ್ರತಿಗೆ ವಿದಾಯ ಹೇಳಲಿರುವ ಪತ್ರಿಕೆ

ಮುದ್ರಿತ ಪ್ರತಿಗೆ ವಿದಾಯ ಹೇಳಲಿರುವ ಪತ್ರಿಕೆ

ಕ್ರಿಶ್ಚಿಯನ್ ಸಯನ್ಸ್ ಮಾನಿಟರ್ ಪತ್ರಿಕೆ ಮುಂದಿನ ಎಪ್ರಿಲ್ ನಂತರ ಅಂತರ್ಜಾಲದ ಮೂಲಕ
ಮಾತ್ರ ಲಭ್ಯವಿರುತ್ತದೆ. ಮುದ್ರಿತ ಪ್ರತಿಗಳ ಸಂಖ್ಯೆ ಎರಡು ಲಕ್ಷ ಪ್ರತಿಗಳಿಂದ ಐವತ್ತು
ಸಾವಿರಕ್ಕೆ ಕುಸಿದಿರುವುದೇ ಈ ಹೊಸ ಪ್ರಯೋಗಕ್ಕೆ ಹೇತು. ಆದರೆ ವಾರಪತ್ರಿಕೆಯಾಗಿ ಇದರ
ಆವೃತಿ ಲಭ್ಯವಾಗಲಿದೆ.ಈಗಲೂ ಅದು ವಾರದ ಐದು ದಿನಗಳಲ್ಲಿ ಮಾತ್ರ
ಲಭ್ಯವಿದೆ.ಕ್ರಿಶ್ಚಿಯನ್ ಸಯನ್ಸ್ ಮಾನಿಟರ್ ಪತ್ರಿಕೆಯನ್ನು ಲಾಭ-ನಷ್ಟ ಇಲ್ಲದ
ರೀತಿಯಲ್ಲಿ ನಡೆಸಿಕೊಂಡು ಹೋಗಲಾಗುತ್ತಿದೆ. ಇದು ದೇಶವ್ಯಾಪಿ ಪ್ರಸಾರ ಹೊಂದಿ, ಈ
ನಿರ್ಧಾರಕ್ಕೆ ಬಂದಿರುವ ಮೊದಲ ಪತ್ರಿಕೆ.ಅಂತರ್ಜಾಲ ಆವೃತಿಯಲ್ಲಿ ಹದಿಮೂರು ಲಕ್ಷ
ಡಾಲರು, ಮುದ್ರಿತ ಪತ್ರಿಕೆಯ ಚಂದಾಹಣದಿಂದ ಒಂಭತ್ತು ದಶಲಕ್ಷ ಡಾಲರು ಮತ್ತು ಮುದ್ರಿತ
ಪತ್ರಿಕೆಯ ಜಾಹೀರಾತಿನಿಂದ ಒಂದು ದಶಲಕ್ಷ ಡಾಲರು ಆದಾಯವನ್ನು ಪತ್ರಿಕೆ ಹೊಂದಿದೆ.
ಮುದ್ರಿತ ಪತ್ರಿಕೆಯಾಗಿದ್ದೂ, ಜಾಹೀರಾತು ಆದಾಯಕ್ಕಿಂತ ಚಂದಾ ಆದಾಯ ಹೆಚ್ಚಾಗಿರುವ
ಅಪರೂಪದ ಪ್ರಸಂಗ ಇದು. ಇದಕ್ಕೆ ಇದರ ಲಾಭ-ನಷ್ಟ ಇಲ್ಲದ ವ್ಯವಹಾರ ಮಾದರಿ ಮತ್ತು
ಮುದ್ರಿತ ಪತ್ರಿಕೆಯ ಪ್ರಸಾರ ಸಂಖ್ಯೆಯಲ್ಲಾಗಿರುವ ಇಳಿಕೆ ಪ್ರಮುಖ ಕಾರಣವಾಗಿರಬಹುದು
ಎಂದು ತಜ್ಞರ ಅಭಿಮತ.ಎಪ್ರಿಲ್ ನಂತರ ದೈನಂದಿನ ಪತ್ರಿಕೆಯ ಅಂತರ್ಜಾಲ ಆವೃತ್ತಿ ಮತ್ತು
ಮಿಂಚಂಚೆ ಆವೃತ್ತಿ ಮಾತ್ರಾ ಲಭ್ಯವಾಗಲಿದೆ. ವಾರಪತ್ರಿಕೆಯ ಚಂದಾ ಹಣ ಮೂರೂವರೆ
ಡಾಲರುಗಳಾಗಲಿದೆ.ದೈನಂದಿನ ಮುದ್ರಿತ ಪತ್ರಿಕೆಯಿಲ್ಲದಿರುವುದರಿಂದ ಪತ್ರಿಕೆಯ ಕಚೇರಿ
ಖರ್ಚು ಇಳಿಯಲಿದ್ದರೂ, ಜಾಹೀರಾತು ಆದಾಯದ ಮೇಲೆ ಆಗಲಿರುವ ಪರಿಣಾಮದ ಬಗ್ಗೆ ಊಹಾಪೋಹ
ನಡೆಯುತ್ತಲಿದೆ.ವಿದೇಶದ ಸುದ್ದಿಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ನಿರ್ಧಾರವನ್ನು
ಪತ್ರಿಕೆಯ ಸಂಪಾದಕ ವರ್ಗ ಕೈಗೊಂಡಿದೆ. ಕ್ರಿಶ್ಚಿಯನ್ ಮಾನಿಟರ್ ಪತ್ರಿಕೆಯ ಹೊಸ
ಹೆಜ್ಜೆಯನ್ನು ಇತರ ಪತ್ರಿಕೆಗಳು ಕುತೂಹಲದಿಂದ ಗಮನಿಸುತ್ತಿವೆ.
--------------------------------------
ವಿಡಿಯೋ ಕಾನ್ಫರೆನ್ಸ್ ಮೂಲಕ ತೆಗೆದುಕೊಳ್ಳುವ ನಿರ್ಣಯ ಸರಿಯಿರದು?
ಜನರನ್ನು ಭೇಟಿ ಮಾಡಲು ದೂರದೂರಿಗೆ ಪ್ರಯಾಣಿಸುವುದನ್ನು ತಪ್ಪಿಸುವ ವಿಡಿಯೋ
ಕಾನ್ಫರೆನ್ಸ್ ಸೇವೆ ತಪ್ಪು ನಿರ್ಣಯಕ್ಕೆ ಕಾರಣವಾಗಲೂ ಬಹುದು ಎಂದು ಸಂಶೋಧಕರು
ಅಭಿಪ್ರಾಯ ಪಟ್ಟಿದ್ದಾರೆ. ವೈದ್ಯರು ಮತ್ತು ದಾದಿಯರು ವಿಡಿಯೋ ಕಾನ್ಫರೆನ್ಸ್‍ನಲ್ಲಿ
ಪಾಲ್ಗೊಂಡ ಬಳಿಕ ಅವರ ಅಭಿಪ್ರಾಯವನ್ನು ಪರಿಗಣಿಸಿ,ಪೆನ್ಸಿಲ್ವೇನಿಯಾ
ವಿಶ್ವವಿದ್ಯಾಲಯದವರು ನಡೆಸಿದ ಸಂಶೋಧನೆಯಿಂದ ಈ ಅಭಿಪ್ರಾಯ ವ್ಯಕ್ತವಾಗಿದೆ. ವಿಡಿಯೋ
ಕಾನ್ಫರೆನ್ಸ್ ಮೂಲಕ ಚರ್ಚೆ ನಡೆಸಿದಾಗ, ವಿಚಾರಗಳನ್ನು ವ್ಯಕ್ತ ಪಡಿಸಿದವರ ಶೈಲಿಯು
ಇನ್ನೊಂದು ಕಡೆಯಿಂದ ನೋಡುವವರ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ.ವಿಚಾರಗಳು ಏನು
ಎನ್ನುವುದಕ್ಕಿಂತಲೂ, ಅದನ್ನು ಹೇಗೆ ವ್ಯಕ್ತ ಮಾಡುತ್ತಿದ್ದಾರೆ ಎನ್ನುವುದು ಹೆಚ್ಚಿನ
ಪ್ರಾಶಸ್ತ್ಯ ಪಡೆಯುತ್ತದೆ.ಆದರೆ ನೇರ ಭೇಟಿಯಲ್ಲಿ ಹೀಗಾಗದೆ, ವ್ಯಕ್ತಿಯ ಮಾತೇ ಹೆಚ್ಚು
ಮುಖ್ಯವಾಗಿ, ಆತನ ಗತ್ತು- ಗೈರತ್ತು ಗೌಣವಾಗುತ್ತದೆ.ವಿಡಿಯೋ ಕಾನ್ಫರೆನ್ಸ್ ಹೊಸ
ಮಾಧ್ಯಮವಾದ್ದರಿಂದ,ಜನರಿನ್ನೂ ಇದಕ್ಕೆ ಹೊಂದಿಕೊಳ್ಳದಿರುವುದು ಇದಕ್ಕೆ
ಕಾರಣವಾಗಿರಬಹುದು.ಭಾಗವಹಿಸುವವರ ಯೋಚನಾ ಶಕ್ತಿಯಲ್ಲಿ ಬಹುಪಾಲು ಭಾಗವಹಿಸುವಾಗ ಉಂಟಾಗುವ
ಒತ್ತಡದ ನಿರ್ವಹಣೆಗೆ ಬಳಕೆಯಾಗಿ, ಆತನ ಯೋಚನಾ ಶಕ್ತಿ ಕುಂಠಿತವಾಗುವುದು
ಹೀಗಾಗುವುದಕ್ಕೆ ಕಾರಣ ಎಂದು ತಜ್ಞರ ಅಂದಾಜು.
---------------------------------------
ಬ್ಯಾಕ್ಟೀರಿಯಾ ದಾಳಿಯಿಂದ ಕಟ್ಟಡಗಳು ಹಾಳಾಗುತ್ತವೆ
ಕಟ್ಟಡಗಳು ಹಾಳು ಬೀಳಲು ಹವಾಮಾನದಲ್ಲಿ ಏರುಪೇರು ಕಾರಣ ಎನ್ನುವುದು ಸಾಮಾನ್ಯ
ನಂಬಿಕೆ.ತಾಜ್‌ಮಹಲ್ ಅಂತಹ ಸ್ಮಾರಕವು ಹಾಳಾಗುವುದನ್ನು ತಡೆಯಲು ಅದರ ಸುತ್ತ ಕೆಲಸ
ಮಾಡುತ್ತಿದ್ದ ಕಾರ್ಖಾನೆಗಳು ಹೊರ ಸೂಸುತ್ತಿದ್ದ ಅನಿಲಗಳು ಮತ್ತು ತ್ಯಾಜ್ಯಗಳು ಎಂಬ
ಕಾರಣಕ್ಕೆ ಹಲವಾರು ಕಾರ್ಖಾನೆಗಳನ್ನು ತೆರವುಗೊಳಿಸಲಾಯಿತು. ಅಮೃತ ಶಿಲೆಯ
ಕಟ್ಟಡವಾಗಿರುವ ತಾಜ್‍ಮಹಲ್, ಭಾರೀ ಕೈಗಾರಿಕೆಗಳಿಂದ ಸುತ್ತುವರಿಯಲ್ಪಟ್ಟಿದ್ದು,
ತಾಜ್‍ಮಹಲ್ ಮಟ್ಟಿಗೆ ಅದುವೇ ಕಟ್ಟಡ ಹಾಳಾಗಲು ಕಾರಣವಾಗಿರಬಹುದು. ಆದರೆ ಇತರ
ಸ್ಮಾರಕಗಳು ಹಾಳಾಗಲು ಬ್ಯಾಕ್ಟೀರಿಯಾದ ದಾಳಿಯೂ ಕಾರಣವಾಗಿರಬಹುದು ಎಂದು ತಜ್ಞರು
ಅಭಿಪ್ರಾಯ ಪಟ್ಟಿದ್ದಾರೆ.ಇನ್ಸ್ಟಿಟ್ಯೂಟ್ ಫಾರ್ ನ್ಯಾಚುರಲ್ ರಿಸೋರ್ಸಸ್ ಮತ್ತು
ಆಂಗ್ರೋಬಯೋಲಜಿಯ ಸಂಶೋಧಕರ ಸಂಶೋಧನೆಯಿಂದ ಈ ವಿಚಾರ ಹೊರ ಬಂದಿದೆ.ಸ್ಪೈನ್ ಮತ್ತು
ಪೋರ್ಚುಗಲ್‍ನ ಕೆಲವು ಸ್ಮಾರಕಗಳ ಒಳಭಾಗಗಳಲ್ಲಿ ಕಂಡುಬಂದಿರುವ ಕಟ್ಟಡಗಳ ಸ್ಥಿತಿಯನ್ನು
ಅಧ್ಯಯನ ಮಾಡಿದ ಸಂಶೋಧಕರು, ಅವುಗಳಿಂದ ಪಡೆದ ಸ್ಯಾಂಪಲ್‍ಗಳಿಂದ
ಪ್ರಯೋಗಶಾಲೆಯಲ್ಲಿಯೂ,ಬ್ಯಾಕ್ಟೀರಿಯಾಗಳನ್ನು ಬೆಳೆಸಲು ಸಫಲರಾಗಿದ್ದಾರೆ.ಕಟ್ಟಡಗಳ
ಜೈವಿಕ ಕ್ಷಯಿಸುವಿಕೆ ಬ್ಯಾಕ್ಟೀರಿಯಾದಿಂದ ಆಗುತ್ತಿದೆ ಎನ್ನುವ ಹೊಸ ತಿಳುವಳಿಕೆ,
ಮುಂದಿನ ದಿನಗಳಲ್ಲಿ ಕಟ್ಟಡಗಳ ಸಂರಕ್ಷಣೆಯಲ್ಲಿ ಹೆಚ್ಚಿನ ಸಹಾಯ ಮಾಡಲೂ ಬಹುದು.
ಬ್ಯಾಕ್ಟೀರಿಯಾಗಳ ನಿಯಂತ್ರಣ ಮೂಲಕ ಕಟ್ಟಡಗಳ ಸಂರಕ್ಷಣೆ ಸಾಮಾನ್ಯವಾಗಬಹುದು.
------------------------------
ಬೇಕಾಗಿವೆ ಕ್ಷಣಮಾತ್ರದಲ್ಲಿ ಚಾಲೂ ಆಗುವ ಕಂಪ್ಯೂಟರುಗಳು
ಕ್ಷಣದಲ್ಲಿ ಚಾಲೂ ಆಗಿ ಬಳಕೆಗೆ ಸಿದ್ಧವಾಗುವ ಕಂಪ್ಯೂಟರುಗಳು ಮತ್ತು
ಲ್ಯಾಪ್‌ಟಾಪ್‍ಗಳನ್ನು ಬಳಕೆದಾರರು ಬಯಸುವುದು ಸಹಜ.ವಿದ್ಯುಚ್ಛಕ್ತಿ ಅಥವ
ಬ್ಯಾಟರಿಯನ್ನು ಮಿತವಾಗಿ ಖರ್ಚು ಮಾಡಲಿಕ್ಕೋಸ್ಕರ ಅವುಗಳನ್ನು ಸತತವಾಗಿ ಚಾಲೂ ಇಡದೆ
ಇದ್ದರೆ,ನಮ್ಮ ಮಿಂಚಂಚೆ ಪರಿಶೀಲಿಸಲೋ,ಅಂತರ್ಜಾಲದಲ್ಲಿ ಯಾವುದನ್ನಾದರು ವಿಷಯದ ಬಗ್ಗೆ
ಶೋಧ ನಡೆಸಲು ಕಂಪ್ಯೂಟರ್ ಚಾಲೂ ಮಾಡಲೇ ಬಹಳ ಹೊತು ಹಿಡಿಯುತ್ತದೆ.ಇದನ್ನು ತಪ್ಪಿಸಲು
ನಿರ್ವಹಣಾ ವ್ಯವಸ್ಥೆ ತಂತ್ರಾಂಶದಲ್ಲಿ ಬದಲಾವಣೆ ಮಾಡುವುದರಿಂದ
ಹಿಡಿದು,ಯಂತ್ರಾಂಶದಲ್ಲೇ ಬದಲಾವಣೆ ಮಾಡಲು ತಂತ್ರಜ್ಞರು ಯೋಚಿಸುತ್ತಿದ್ದಾರೆ.ಸಣ್ಣ
ಸಂಸ್ಕಾರಕವನ್ನು ಅಳವಡಿಸಿ, ಅದು ತಕ್ಷಣ ಕೆಲಸ ಆರಂಭಿಸುವಂತೆ ಮಾಡಿ,ಅಂತರ್ಜಾಲ
ಜಾಲಾಟ,ಮಿಂಚಂಚೆ ಸೇವೆಗಳನ್ನು ಅದರ ಸಹಾಯದಿಂದ ಒದಗಿಸಿ ಒಡನೆಯೇ ಚಾಲೂ ಆಗುವ ಯಂತ್ರದ
ಅನುಭವ ನೀಡುವ ಪ್ರಯತ್ನಗಳಾಗುತ್ತಿವೆ.ಆದರೆ ಅಂತರ್ಜಾಲವು ನಿಸ್ತಂತು ಸೇವೆಯ ಮೂಲಕ
ಲಭ್ಯವಾಗುತ್ತಿದ್ದರೆ, ಇದನ್ನು ಮತ್ತೆ ಏರ್ಪಡಿಸಲು ಅರ್ಧ ನಿಮಿಷವಾದರೂ ಹಿಡಿಯುತ್ತದೆ
ಎನ್ನುವ ಸಮಸ್ಯೆ ಕಾಡುತ್ತಿದೆ.ಲ್ಯಾಪ್‌ಟಾಪನ್ನು ಸ್ಟ್ಯಾಂಡ್‌ಬೈ ಮೋಡಿನಲ್ಲಿ ಬಳಸಿದರೆ
ಸಾಕಷ್ಟು ದಿಡೀರ್ ಸೇವೆ ಸಿಗುತ್ತದೆ. ಆದರೂ ಅದು ಸಮಾಧಾನ ತಂದಿಲ್ಲ.

ashokworld

udayavani

ಇ-ಲೋಕ  (3/11/2008)

*ಅಶೋಕ್‍ಕುಮಾರ್ ಎ

Rating
No votes yet

Comments