ಮುಳ್ಳಿನ ಮಡಿಲಲ್ಲಿ ಬಸವಳಿದಿದೆ ತಾಜ್ ಮಹಲ್

ಮುಳ್ಳಿನ ಮಡಿಲಲ್ಲಿ ಬಸವಳಿದಿದೆ ತಾಜ್ ಮಹಲ್

 

 

ಶಹಜಹಾನನ  ಕನಸಿನ, ಕನವರಿಕೆಯ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಉತ್ಕಟ ಪ್ರೇಮದ ಹೆಗ್ಗುರತಾದ ಆಗ್ರಾದ ತಾಜಮಹಲ್ ಬಗ್ಗೆ ನಮಗೂ ಎಲ್ಲರಂತೆ ಆಕರ್ಷಣೆ ಇದೆ. ಅದಕ್ಕೂ ಹೆಚ್ಚಾಗಿ ನಮ್ಮ ದೇಶದ ಪ್ರವಾಸೋದ್ಯಮದ ಪ್ರಮುಖ ಕೇಂದ್ರ ಹಾಗೂ ಜಗತ್ತಿನ ೮ನೇ ಅಧ್ಬುತ ಎಂಬ ಹೆಗ್ಗುರುತನ್ನು ಹೊಂದಿರುವ ಈ ಪ್ರೇಮದ ಮಹಲಿನ ಮುಂದೆ ಕುಳಿತು ನಮ್ಮ ಹಳೆಯ ಪ್ರೇಮದ ಕೆರತಗಳನ್ನು ಕಾತರದಿಂದ ನೆನಪಿಸಿಕೊಳ್ಳುತ್ತಾ ಹೊಸ ಮಿಡಿತಗಳಿಗಾಗಿ ತಡಕಾಡುವ ಹಂಬಲ.



ನಾವು ಮೊದಲೇ ದೂರದ ಕರ್ನಾಟಕದ ಹುಬ್ಬಳ್ಳಿಯವರು, ನಮ್ಮ ಬಿಜಾಪುರದ ಸೊಬಗನ್ನು ಕಂಡು ಕಟಕ ರೊಟ್ಟಿ ಶೆಂಗಾ ಚೆಟ್ನಿ ಉಂಡವರು. ನಾವು ಯಾವಾಗ ಅಷ್ಟು ದೂರ ಹೋಗಬೇಕು? ಆದರೂ, ಉತ್ತರ ಭಾರತದ ಪ್ರವಾಸಕ್ಕೆ ಹೋಗಲೇಬೇಕು, ಹೋದರೆ ಮಾತ್ರ ತಾಜಮಹಲಿನ ಸೌಂದರ್ಯವನ್ನು ಅನುಭವಿಸಲೇಬೇಕು ಎಂಬಂತಹ ಹಂಬಲವನ್ನು ಹೊಂದಿದ್ದ ಪಡ್ಡೆ ಹುಡುಗರು ನಾವು.



ಹೌದು, ಅಲ್ಲಿಗೆ ಹೋಗಬೇಕೆಂದು ಕೊಂಡಿದ್ದೆವು, ಆದರೆ ಅದು ಇಷ್ಟು ಬೇಗ ಈಡೇರುತ್ತದೆ ಎಂಬುವುದನ್ನು ಕನಸಿನಲ್ಲಿಯೂ ಎಣಿಸಿರಲಿಲ್ಲ. ನನಗೆ ಉದ್ಯೋಗದ ನಿಮಿತ್ತವಾಗಿ ದೆಹಲಿಯಲ್ಲಿರುವ ಅವಕಾಶ ಒದಗಿಬಂದಿತು. ಅಲ್ಲದೇ ನಾನು ಅಲ್ಲಿ ನೆಲಸಿ ಕೆಲವು ತಿಂಗಳುಗಳಲ್ಲಿಯೇ ನನ್ನ ಇಬ್ಬರು ಸ್ನೇಹಿತರೂ ಅಲ್ಲಿಗೆ ಬಂದರು ಪ್ರವಾಸಕ್ಕಾಗಿ. ಹೀಗಾಗಿ ದಿನವನ್ನು ನಿಗದಿ ಪಡಿಸಿಕೊಂಡು ಮೊದಲಿಗೆ ಪಂಜಾಬಿನ ಅಮೃತಸರಕ್ಕೆ ಹೋಗಿ ಅಲ್ಲಿಂದ ಕೇವಲ ೩೨ ಕಿಲೋಮೀಟರ್ ದೂರದಲ್ಲಿರುವ ಭಾರತ-ಪಾಕಿಸ್ತಾನದ ಗಡಿ ಭಾಗವಾದ ವಾಘಾಕ್ಕೆ ತೆರಳಿ, ನಂತರ ಹೃಷಿಕೇಶ-ಹರಿದ್ವಾರ ಹಾಗೂ ನಂತರ ಅಲ್ಲಿಂದ ಕೃಷ್ಣನ ಜನ್ಮಸ್ಥಾನವಾದ ಮಥುರಾಕ್ಕೆ ತೆರಳಿದೆವು. ಹೀಗೆ ಕೆಲವು ದಿನಗಳ ಪ್ರವಾಸದ ನಂತರ ಮೊದಲೇ ನಿರ್ಧರಿಸಿದಂತೆ (ಆದರೆ ಟಿಕೇಟನ್ನು ಬುಕ್ ಮಾಡಿರಲಿಲ್ಲ) ಆಗ್ರಾಕ್ಕೆ ತೆರಳಿ ಅಲ್ಲಿಂದ ದೆಹಲಿಗೆ ಪ್ರಯಾಣ ಬೆಳೆಸುವ ಯೋಚನೆಯಿಂದ, ಬೆಳಿಗ್ಗೆ ೧೦ ಘಂಟೆಯ ಸುಮಾರಿಗೆ ಮಥುರಾದಿಂದ ಆಗ್ರಾಕ್ಕೆ ಪ್ರಯಾಣ ಬೆಳೆಸಿದೆವು.



ಬಸ್ಸಿನಿಂದ ಇಳಿಯುತ್ತಿದ್ದಂತೆ, ಕನ್ನಡದಲ್ಲಿ ಮಾತನಾಡುತ್ತಾ ತಾಜ್‌ಮಹಲಿಗೆ ಹೇಗೆ ಹೋಗುವುದು ಎಂದು ಯೋಚಿಸಿದ್ದ ನಿಂತಿದ್ದ ನಮ್ಮಲ್ಲಿಗೆ ಆಪತ್ಬಾಂದವನಂತೆ ಆಟೋ ಡ್ರೈವರ್‌ನೊಬ್ಬ ಬಂದ. ಬಂದವನೇ ಇಲ್ಲಿಂದ ತಾಜಮಹಲಿಗೆ ಹೋಗಲು ಸುಮಾರು ೧೦ ಕಿಲೋಮೀಟರ್ ದೂರವಿದೆ, ಹೀಗಾಗಿ ಒಬ್ಬರಿಗೆ ೧೦ ರೂಪಾಯಿಗಳಂತೆ ಬಾಡಿಗೆ ವಿಧಿಸುತ್ತೇವೆ ಮತ್ತು ಸಹ ಪ್ರಯಾಣಿಕರು ಈಗಾಗಲೇ ಕುಳಿತಿದ್ದಾರೆ ಬೇಗ ಬನ್ನಿ ಎಂದು ಅವಸರದಿಂದ ಕರೆದುಕೊಂಡು ಹೋದ ಪುಣ್ಯಾತ್ಮ ಖಾಲಿ ಆಟೋದಲ್ಲಿ ಕೂರಿಸಿ...ಸಾಬ್ ಸಿರ್ಫ್ ನಬ್ಬೆ ರೂಪಾಯಿ ದೀಜಿಯೇ ಮೇ ಆಪ್ಕೋ ಆಗ್ರಾ ಫೋರ್ಟ್, ಫತೇಪುರ್ ಸಿಕ್ರಿ, ರಾಮ್ ಭಾಗ್, ಕ್ರಾಫ್ಟ್ ಬಾಜಾರ್ ದಿಖಾಕೆ ತಾಜ್ ಮಹಲ್ ಲೇ ಜಾವೂಂಗಾ ಎಂದು ತಿಳಿಸಿದ. ನಾವು ಸ್ವಲ್ಪ ಮೀನಾಮೇಷ ಎಣಿಸುತ್ತಿರುವುದನ್ನು ಗ್ರಹಿಸಿದ ಆತ, ಸರ್ ಇದು ನನ್ನ ಬೋಣಿ ಸಮಯ (ಮಧ್ಯಾಹ್ನ ೧ ಘಂಟೆ ಸುಮಾರಿಗೆ) ಬರೀ ಎಪ್ಪತ್ತು ರೂಪಾಯಿ ಕೊಡಿ ಸಾಕು ಎಂದು ಮತ್ತೆ ಮತ್ತೆ ಗೋಗರೆದ. ನಮಗೇಕೋ ಸ್ವಲ್ಪ ಅನುಮಾನ ಕಾಡತೊಡಗಿತು, ಹೀಗಾಗಿ ಬೇಡ ನಮ್ಮನ್ನು ತಾಜಮಹಲ್‌ಗೆ ಬಿಡು ಎಂದು ತಿಳಿಸಿದರೂ ಕೇಳದ ಆತ ಇಲ್ಲ ಸರ್, ನಿಮ್ಮಲ್ಲಿ ಲಗೇಜ್ ಬೇರೆ ಇದೆ ಮೊದಲೇ ತಾಜಮಹಲ್ ಹತ್ತಿರ ಲಗೇಜ್ ರೂಮನ್ನು ಬಂದ್ ಮಾಡಿದ್ದಾರೆ, ಹೀಗಾಗಿ ನೀವು ನನ್ನ ಆಟೋದಲ್ಲಿ ನಿಮ್ಮ ಲಗೇಜನ್ನು ಇಟ್ಟು ಆರಾಮಾಗಿ ತಾಜಮಹಲನ್ನು ನೋಡಿಕೊಂಡು ಬನ್ನಿ, ನಾನೇನೂ ವೇಟಿಂಗ್ ಚಾರ್ಜ್‌ನ್ನು ಪಡೆಯುವುದಿಲ್ಲ ಎಂದು ಬಡಬಡಿಸಿದ. ಆಗ ನಮಗೆ ಖಾತ್ರಿ ಆದಂತಾಯಿತು. ಈ ಮನುಷ್ಯ ಸುಳ್ಳು ಹೇಳುತ್ತಿದ್ದಾನೆ ಎಂದು. ಎಷ್ಟು ಹೇಳಿದರೂ ನಮ್ಮನ್ನು ಬಿಡಲೂ ವಲ್ಲದ, ನಾವು ಕರೆದಲ್ಲಿಗೆ ಬರಲೂ ವಲ್ಲದ ಆತನಿಂದ ತಪ್ಪಿಸಿಕೊಂಡು ಬರುವಷ್ಟರಲ್ಲಿ ಮೊದಲ ಮುಳ್ಳು ಚುಚ್ಚಿದಂತಾಯಿತು ನಮ್ಮ ಮನಸಿಗೆ. ಆದರೂ ಇರಲಿ ಬಿಡು ಇದು ಎಲ್ಲ ಕಡೆ ಇದ್ದದ್ದೆ ಎಂದು ಮುಂದುವರೆಯತೊಡಗಿದೆವು.



ಕೊನೆಗೆ ಯಾರೋ ತಿಳಿಸಿದಂತೆ ಒಂದು ಬಸ್ಸನ್ನು ಹಿಡಿದುಕೊಂಡು ತಾಜಮಹಲ್ ಹತ್ತಿರ ಇಳಿಯುತ್ತಿದ್ದಂತೆ, ಊರಿನ ಚರಂಡಿಯಂತಿರುವ ಅತಿ ಕೊಳಕು ನಾತವನ್ನು ಬೀರುತ್ತಿದ್ದ ಯಮುನೆಯನ್ನು ಕಂಡು ಆದ ದುಃಖದಲ್ಲಿ ಕಣ್ಣಿನಲ್ಲಿ ರಕ್ತಬರುವುದೊಂದೆ ಬಾಕಿಯುಳಿದಿತ್ತು, ಮನುಷ್ಯನ ಸ್ವಾರ್ಥಕ್ಕಿಷ್ಟು ಬೆಂಕಿಹಾಕ.  ಪ್ರಶಾಂತ ಯಮುನೆಯ ದಂಡೆಯ ಮೇಲಿನ ತಾಜಮಹಲಿನ ಕಲ್ಪನೆಯ ಬಲೂನಿಗೆ ಇನ್ನೊಂದು ಮುಳ್ಳು ಚುಚ್ಚಿತ್ತು.



ಆದರೂ ತಾಜಮಹಲನ್ನು ನೊಡುವ ಹಂಬಲ ಎಲ್ಲವನ್ನು ಸಹಿಸುವಂತೆ ಮಾಡಿತ್ತು. ತಾಜ್ ಸಮೀಪಿಸುತ್ತಿದ್ದಂತೆ ಮೊದಲಿನ ಉಲ್ಲಾಸವಿಲ್ಲದಿದ್ದರೂ, ಕಾತರತೆ ಉಳಿದಿತ್ತು. ಹತ್ತಿರ ಬರುತ್ತಿದ್ದಂತೆ ಮೊದಲು ನಮ್ಮ ಕಣ್ಣಿಗೆ ಬಿದ್ದದ್ದು ’ಲಗೇಜ್ ರೂಮ್’ ಹಾ ಅದೇ... ಆ ಆಟೋ ಡ್ರೈವರ್ ಮುಚ್ಚಿದೆ ಎಂದು ಹೇಳಿದ್ದ ಆದರೆ ಈಗ ನೊಡಿದಾಗ ಕಾರ್ಯನಿರತವಾಗಿದ್ದ ಲಗೇಜ್ ರೂಮ್. ಒಂದೆಡೆ ಖುಷಿ, ಇನ್ನೊಂದೆಡೆ ಸುಳ್ಳು ಹೇಳಿದವನ ಮೇಲೆ ಕೋಪ. ಅಲ್ಲಿ ನಮ್ಮ ಬ್ಯಾಗುಗಳನ್ನು ಇಟ್ಟು, ತಾಜಮಹಲಿನ ಗೇಟಿನ ಮುಂದೆ ಬಂದಾಗ, ಉದ್ದನೆಯ ಸಾಲಿನಲ್ಲಿ ಸರತಿಯಲ್ಲಿ ನಿಂತು ಒಳ ಹೋಗಲು ಟಿಕೇಟನ್ನು ತೆಗೆದು ಕೊಳ್ಳಬೇಕಿತ್ತು, ಹೀಗಾಗಿ ಆ ಕೆಲಸಕ್ಕೆ ನಮ್ಮ ಒಬ್ಬ ಸ್ನೇಹಿತನನ್ನು ಬಿಟ್ಟು, ಉಳಿದವರಿಬ್ಬರು ಈಚೆಗೆ ಬಂದ ನಮ್ಮ ಕಣ್ಣಿಗೆ ಬಿದ್ದದ್ದು ಐಸ್‌ಕ್ರೀಂ ಅಂಗಡಿ. ಮೊದಲೇ ತಲೆ ಮೇಲೆ ಬಿಸಿ, ಆರಿದ್ದ ಗಂಟಲು, ನಾಲಿಗೆ ಚಪಲ ಅದನ್ನು ಕೊಳ್ಳಲು ಹೊರಟೇ ಬಿಟ್ಟೆವು. ಆದರೆ ಅಲ್ಲಿ ಹೋದ ಮೇಲೆ, ಆ ಅಂಗಡಿಯಾತ ಎಂಆರ‍್ಪಿಗಿಂತ ಸಿಕ್ಕಾಪಟ್ಟೆ ಹೆಚ್ಚ ಬೆಲೆಯಲ್ಲಿ ಐಸ್‌ಕ್ರೀಂ ಮಾರುತ್ತಿದ್ದನ್ನು ಕಂಡು ಅವನೊಂದಿಗೆ ವಾದಿಸಿ ಕೊನೆಗೆ ಐದು ರೂಪಾಯಿ ಹೆಚ್ಚು ಬೆಲೆಯನ್ನು ತೆತ್ತು ಕೋನ್ ಐಸ್‌ಕ್ರೀಂ ಅನ್ನು ಬಾಯಿಗಿಡುವಷ್ಟರಲ್ಲಿ ತಂಪನೆಯ ಆಸೆಗೆ ಬಿಸಿ ಮುಳ್ಳು ಚುಚ್ಚಿತ್ತು. ಪೊಲೀಸಿನವರ ಮುಂದೆಯೇ ಇದೆಲ್ಲ ನಡೆಯುತ್ತಿದ್ದರೂ ಯಾರೂ ಕೇಳುವವರಿರಲಿಲ್ಲ, ಹೇಳುವವರಿರಲಿಲ್ಲ.



ಆದರೂ ಕೊನೆಗೂ ಹೇಗೋ ಅಲ್ಪಸ್ವಲ್ಪ ಆಸಕ್ತಿಯನ್ನುಳಿಸಿಕೊಂಡು ತಾಜ್ ಸೌಂದರ್ಯವನ್ನು ಕಣ್ಣಿನಲ್ಲಿ ತುಂಬಿಕೊಂಡು, ಹೊಬರುವಷ್ಟರಲ್ಲಿ ಸಾಯಂಕಾಲದ ೬ ಗಂಟೆ. ಮೊದಲೇ ಟಿಕೇಟನ್ನು ಕಾಯ್ದಿರಿಸಿರಲಿಲ್ಲ, ಅಲ್ಲದೇ ಅಪರಿಚಿತ ಊರು ಬೇರೆ ಹೀಗಾಗಿ ಮೊದಲು ನಮ್ಮ ಗೂಡು(ದೆಹಲಿ) ಸೇರಿದರೆ ಸಾಕಿತ್ತು.



ಒಂದು ಸೈಕಲ್ ರೀಕ್ಷಾಕ್ಕಾಗಿ ಕೇಳಿದಾಗ ಎಲ್ಲರೂ ಬಾಯಿಗೆ ಬಂದಷ್ಟು ಕೇಳುತ್ತಿದ್ದರು, ಆದರೆ ಒಬ್ಬಾತ ಮಾತ್ರ ಸರ್, ಮೂವತ್ತು ರೂಪಾಯಿಕೊಡಿ ಸಾಕು ಎಂದ, ಆಹಾ! ಒಬ್ಬನಾದರೂ ಪ್ರಾಮಾಣಿಕ ಸಿಕ್ಕನಲ್ಲ ಎಂಬ ಖುಷಿಯಲ್ಲಿ ಅದನ್ನು ಗೊತ್ತುಪಡಿಸಿಕೊಂಡು ಬಸ್ ನಿಲ್ದಾಣಕ್ಕೆ ಹೊರಟೆವು, ಆಗ ಆತನೇ ಸರ್ ನೀವು ಸರ್ಕಾರಿ ಸಾದಾ ಬಸ್ಸಿಗೆ ೨೫೦ ರೂಪಾಯಿಗಳನ್ನು ತೆತ್ತು ಹೋಗುವ ಬದಲು, ಕೇವಲ ೨೭೫ ರೂಪಾಯಿಗಳಲ್ಲಿ ನಿಮ್ಮನ್ನು ದೆಹಲಿಗೆ ವೋಲ್ವೋ ಬಸ್ಸಿನಲ್ಲಿ ಕರೆದುಕೊಂಡು ಹೊಗುವ ಏಜನ್ಸಿಗೆ ನಿಮ್ಮನ್ನು ಬಿಡುತ್ತೇನೆ ಎಂದಾಗ ಆಯಿತು ಪಾಪ ಪ್ರಾಮಾಣಿಕ ಹೇಳುತ್ತಿದ್ದಾನೆ ಎಂದುಕೊಂಡು ಹೊರಟೆವು. ಆದರೆ ಆ ಬಸ್ಸಿನ ಸಮಯ ನಮಗೆ ಹೊಂದಿಕೆಯಾಗದ್ದರಿಂದ, ಇದರಲ್ಲಿ ಹೋಗುವುದು ಬೇಡ ಬದಲಿಗೆ ಊಟವನ್ನು ಮುಗಿಸಿಕೊಂಡು ಬೇರೆ ಗಾಡಿಯಲ್ಲಿ ಹೋಗೋಣ ಎಂದುಕೊಂಡೆವು, ಆದರೆ ಆ ಸೈಕಲ್ ಪುಣ್ಯಾತ್ಮನನ್ನು ಸಾಗಹಾಕುವಲ್ಲಿ ಸಾಕುಬೇಕಾಯಿತು. ಹಾಗೇ ಊಟವನ್ನು ಮುಗಿಸಿ ಕೊಂಡು ಬಸ್ಸಿಗೆ ಹೋಗೋಣವೆಂದು ಹುಡುಕುತ್ತಿರುವಾಗಲೇ ನಮಗೆ ತಿಳಿದದ್ದು ಬಸ್‌ನಿಲ್ದಾಣ ಅಲ್ಲಿಂದ ೨ ಕೀ.ಮೀ ದೂರದಲ್ಲಿದೆ ಎಂದು!! ಹೀಗಾಗಿ ಮತ್ತೆ ಆಟೋವೊಂದನ್ನು ಗುರುತುಪಡಿಸಿಕೊಂಡು ಹೊರಟಾಗ ಮತ್ತೊಂದು ಆಘಾತ ಕಾದಿತ್ತು, ಸುಮಾರು ಜೋರಾಗಿ ಹೋಗುತ್ತಿದ್ದ ಆಟೋವನ್ನು ಬೆನ್ನತ್ತಿದವನೊಬ್ಬ ಅದು ಒಂದೆಡೆ ನಿಧಾನವಾದಾಗ ಆಟೋದವೊಳಗಡೆ ಕೈಹಾಕಿ ನನ್ನ ಸ್ನೇಹಿತನ ಕೈಯಿಂದ ಬ್ಯಾಗನ್ನು ಕಿತ್ತುಕೊಳ್ಳಲು ಯತ್ನಿಸಿದ, ಆದರೆ ನನ್ನ ಸ್ನೇಹಿತ ಸ್ವಲ್ಪ ಬಿಗಿಯಾಗಿ ಹಿಡಿದುಕೊಂಡಿದ್ದರಿಂದ ಬ್ಯಾಗು ಉಳಿಯಿತು, ಆದರೆ ಇಷ್ಟೆಲ್ಲ ನಡೆಯುತ್ತಿದ್ದರೂ ಯಾವನೊಬ್ಬನೂ ಸಹಾಯಕ್ಕೆ ಬರಲಿಲ್ಲ, ಅಥವಾ ಆ ಕಳ್ಳನನ್ನು ಹಿಡಿಯಲು ಸಹಕರಿಸಲಿಲ್ಲ, ಅಲ್ಲಿಗೆ ಮನುಷತ್ವ, ವಿಶ್ವಾಸ ಎಂಬ ನಂಬಿಕೆಗೂ ಮತ್ತೊಂದು ಮುಳ್ಳು ಚುಚ್ಚಿತ್ತು. ಹಾಗೂ ಹೀಗೂ ಸಾವರಿಸಿಕೊಂಡು ಸರ್ಕಾರಿ ಬಸ್‌ನಿಲ್ದಾಣಕ್ಕೆ ತಲುಪಿ ಆ ಬಸ್ಸಿನ ಟಿಕೆಟ್ ಬೆಲೆ ಕೇವಲ ೧೨೦ ರೂಪಾಯಿ ಮಾತ್ರವಾಗಿತ್ತು!



ಇದು ಹಿಂದಿ ಬಲ್ಲ ಭಾರತೀಯರ ಅನುಭವವವಾದರೆ, ಎಲ್ಲಿಂದಲೂ ಬರುವ ವಿದೇಶಿಯರ ಪಾಡು ಹೇಗಾಗಬೇಡ, ಅವರಿಗೆ ನಮ್ಮ ದೇಶದ ಕುರಿತು ಎಂತಹ ಭಾವನೆ ಮೂಡಲಿಕ್ಕಿಲ್ಲ?



 



ಒಂದು ಸುಂದರ ಹೂವನ್ನು ಕಾಪಾಡಲು ಮುಳ್ಳುಗಳು ಬೇಕು ಅದು ಸೃಷ್ಠಿಯ ನಿಯಮ, ಆದರೆ ಇಲ್ಲಿಯ ಮುಳ್ಳುಗಳು ಆ ಹೂವನ್ನೆ ಬಲಿತೆಗೆದುಕೊಳ್ಳಲು ಹವಣಿಸುತ್ತಿವೆ, ಆದಷ್ಟು ಬೇಗ ಸಂಬಂಧಪಟ್ಟವರು ಅಲ್ಲಿಯ ಪರಿಸರದ ಮಾಲಿನ್ಯವನ್ನು ಮತ್ತು ಇಂತಹ ಮಾಲಿನ್ಯಕಾರಕಗಳನ್ನು ನಿವಾರಿಸದಿದ್ದಲ್ಲಿ ಈ ವಿಷದ ಮುಳ್ಳುಗಳು ಇನ್ನೂ ಅತೀ ಬಲಿಷ್ಠವಾಗಿ ಎಂತಹ ಅವಾಂತರಗಳನ್ನು ಸೃಷ್ಠಿಸಬಹುದು ಎಂದು ನೆನಪಿಸಿಕೊಂಡರೇ ಭಯವಾಗುತ್ತದೆ. ಪ್ರವಾಸಿಗರೂ ಸ್ವಲ್ಪ ಜಾಗೃತರಾಗಿದ್ದು, ಮೊದಲೇ ಎಲ್ಲವನ್ನೂ ನಿಗದಿಪಡಿಸಿಕೊಂಡು ಹೋಗುವುದು ಉತ್ತಮ.



(Photo courtacy : Raghavendra Gudi)


Rating
No votes yet

Comments