ಮುಸ್ಸಂಜೆ.

ಮುಸ್ಸಂಜೆ.

ಪ್ರತೀ ಬೆಳಗಿಗೂ ಒಂದು ಆಪ್ತ ಮುಸ್ಸಂಜೆ ಇರುವಂತೆ ಪ್ರತೀ ಬದುಕಿಗೂ ಒಂದು ಆತ್ಮೀಯ ಮುಸ್ಸಂಜೆ ಇರಲಿ ಅಂತ ಬಯಸುವುದು ಸಾಮಾನ್ಯರಿಂದ ಹಿಡಿದು ಎಲ್ಲರೂ ಬಯಸುವ ವಿಷಯ. ಆದರೆ ಇಂತಹ ಮುಸ್ಸಂಜೆಗಾಗಿ ನಾವು ಒಂದು ಕ್ಷಣ ಯೋಚಿಸಿದರೆ ಬದುಕು ಸಾರ್ಥಕ. ವೃದ್ಧಾಶೃಮಗಳು ಹೆಚ್ಚಾಗುತ್ತಿರುವ ಇಂದಿನ ದಿನಗಳಲ್ಲಿ ನಾವು ವೃದ್ಧರ ಕುರಿತು ಯೋಚಿಸುವ ಮೊದಲು ನಮ್ಮನ್ನೇ ಕುರಿತು ಒಂದಿಷ್ಟು ಆತ್ಮವಿಮರ್ಶೆ ಮಾಡಿಕೊಳ್ಳಬೇಕೇನೋ. ಜನರೇಶನ್ ಗ್ಯಾಪ್ ಗಳ ಹೆಸರುಕೊಟ್ಟು ನಮ್ಮೊಳಗಿನ
ಮಾನವೀಯ ಮೌಲ್ಯಗಳನ್ನೇ ಕೊಂದುಕೊಳ್ಳ ಹೊರಟ ನಾವು ನಮ್ಮ ಮುಂದಿನ ಪೀಳಿಗೆಗೆ ಮನುಷ್ಯತ್ವಕ್ಕಿಂತ
ಅಗತ್ಯತೆಗಳಿಗೇ ಹೆಚ್ಚು ಪ್ರಾಮುಖ್ಯತೆ ಕೊಡುವುದನ್ನು ಕಲಿಸುತ್ತದ್ದೇವಾ?

ವೃದ್ಧರ ಕುರಿತು ಒಂದಿಷ್ಟು ಅನುಕಂಪ ಮೂಡಿಸುವ, ನಮ್ಮ ಸಾಕಿ , ಸಲಹಿ, ಬದುಕು ಕೊಟ್ಟ ಅವರಿಗಾಗಿ ಹಿಡಿ ಪ್ರೀತಿ ತೋರುವ ಕಾರ್ಯ ನಮ್ಮೊಳಗಾಗದಿದ್ದರೆ, ನಾವೊಂದು ದಿನ ಇದೇ ಅನಾಥ ಪ್ರಜ್ನೆಯನ್ನು ಅನುಭವಿಸ ಬೇಕಾದದ್ದು ಕಟ್ಟಿಟ್ಟ ಬುತ್ತಿ. ಹಳ್ಳಿಗಳಲ್ಲಿ ಬಿಟ್ಟು ಬಂದ ಅಪ್ಪ ಅಮ್ಮಂದಿರನ್ನು ನಗರ
ಒಗ್ಗುವುದಿಲ್ಲ ಎಂಬ ಕಾರಣ ಕೊಟ್ಟು ನಮ್ಮ ಅನಿವಾರ್ಯತೆಗಳನ್ನು ಮುಂದಿಟ್ಟು ಕೈ ಬಿಡುವ ನಾವು ನಮ್ಮ
ಮಕ್ಕಳನ್ನು ಫಾರಿನ್ ಗೆ ಕಳಿಸಿಕೊಟ್ಟು ಮುಂದೊಂದು ದಿನ ಅದೇ ಕಾರಣಕ್ಕೆ ಒಂಟಿಯಾಗುವ ದಾರಿ ತೆರೆದಿಟ್ಟಂತೆ! ನಾನು ಎಲ್ಲರೂ ಹಾಗೆಂದು ಹೇಳುತ್ತಿಲ್ಲ. ಆದರೆ ಜವಾಬ್ದಾರಿಗಳಿಂದ ತಪ್ಪಿಸಿಕೊಳ್ಳ ಬಯಸುವ
ಎಲ್ಲರೂ ಹೀಗೊಮ್ಮೆ ಆತ್ಮವಿಮರ್ಶೆ ಮಾಡಿಕೊಂಡರೆ ತಪ್ಪಿಲ್ಲವಲ್ಲ!

ಮೊನ್ನೆ ಮೊನ್ನೆ ಹೀಗೊಂದು ವೃದ್ಧಾಶೃಮ ನೋಡಿ ಬಂದಾಗ ಅನಿಸಿತು. ಬಹುಶಃ ನಮ್ಮ ದೇಶದಲ್ಲೂ
ಒಂದುದಿನ ಇಂತಹ ವೃದ್ಧಾಶೃಮಗಳು ಹಳ್ಳಿ ಹಳ್ಳಿಗಳಿಗೂ ಬಂದುಬಿಡಬಹುದು. ಈಗಾಗಲೇ 10% ಜನ ರಿರುವ ಹಳ್ಳಿಗಳಲ್ಲಿ ಮುಕ್ಕಾಲು ಬಾಗ ವೃದ್ಧರೇ ಇದ್ದಾರೆ. ಅವರನ್ನೆಲ್ಲ ನೋಡಿಕೊಳ್ಳೋಕೆ ಜನರಿಲ್ಲದಿದ್ದರೂ
ಒಂದಿಷ್ಟು ಹಣವನ್ನಾದರೂ ಕೊಡುವ ಹಾಗಿದ್ದರೆ ಬದುಕು ಸುಗಮ ವಾಗತ್ತಿತ್ತೇನೋ.ಈಗಿನ ಹೈಟೆಕ್ ವೃದ್ಧಾಶೃಮಗಳು ಹಣವೇ ಮೊದಲಾಗಿರುವಾಗ ಬಡವರಿಗೆ ಭೂಮಿ ತಾಯೇ ಹಾಸಿಗೆ ಬಾನೇ ಹೊದಿಕೆ ಎಂಬಂತಾಗದೇ? ಹಾಗಿದ್ಧರೆ ವೃದ್ಧರ ಪಾಡೇನು?

ಹಣ್ಣೆಲೆ ಕಂಡು ಹಸಿರೆಲೆ ನಕ್ಕರೆ ಆ ಹಸಿರೆಲೆಯೂ ಒಂದಿನ ಹಣ್ಣಾಗಲೇ ಬೇಕಲ್ಲವಾ? ಪ್ರೀತಿ ಅಂತ
ತೋರೋಕಾಗದಿದ್ದರೂ ಒಂದಿಷ್ಟು ಕರ್ತವ್ಯಗಳಿಂದ ನಾವು ನುಣುಚಿಕೊಳ್ಳಬಾರದು. ಅದು ನಮಗೆ ಇಷ್ಟ, ಕಷ್ಟ
ಅಂತಲ್ಲ. ಕರ್ತವ್ಯ ಅಂತ. ನಮ್ಮ ಬದುಕಿನ ಮುಸ್ಸಂಜೆಗೆ ನಾವು ಬರೆವ ಮುನ್ನುಡಿ ಇದೇ.

Rating
No votes yet