ಮೂಡಲಿರುವನು ಸೂರ್ಯ, ಪಶ್ಚಿಮದಲ್ಲಿ
ಅವನು ನನಸಿಗೆ ಬಂದರೆ, ನಾನು ಕನಸಿಗೆ ತೆರಳುತ್ತೇನೆ
ಅವ ಕತ್ತಲೆಯಲಿ, ಮುಸುಕೆಳೆದರೆ,
ನನ್ನ ಮುಸುಕಿನ ಮೇಲೆ ಸೂರ್ಯ ನಗುತ್ತಾನೆ
ನನ್ನ ಕನಸು ಅವನ ನನಸು
ಅವನ ಕನಸು ನನ್ನ ನನಸು
ಬೇರೆಯಿಲ್ಲ ಇಬ್ಬರ ಮನಸು.
ಇಲ್ಲಿ ಮುಳುಗಿದ ಸೂರ್ಯ
ಅಲ್ಲಿ ಮೇಲೇಳುವನು
ನಕ್ಷತ್ರಗಳ ಜೊತೆ ನನ್ನಾಟ,
ಬಾನಾಡಿಗಳ ಜೊತೆ ಅವನಾಟ,
ನನಗೆ ಬಿಸಿಲಾದರೆ
ಅವಗೆ ಬೆಳದಿಂಗಳು
ಅವಗೆ ರೆಕ್ಕೆಗಳು ಬರಲಿವೆ, ಹಾರಿ ಬರಲು
ನನಗೆ ಖುಷಿಯ, ರೆಕ್ಕೆ ಮೂಡಿವೆ
ಬಾನು ಭುವಿ ಭೇದಿಸಿ, ದಿಗಂತಗಳ,
ನೀಲಸಾಗರದ ವಿಸ್ತಾರ ಮೀರಿ
ಮೂಡಲಿರುವನು ಸೂರ್ಯ, ಪಶ್ಚಿಮದಲ್ಲಿ!
ನಗು ಅರಳಲಿದೆ, ಮನ ಮನದಲ್ಲೂ
ತುಡಿಯುತಿದೆ ಮನ ಅಪ್ಪಲು,
ಕಾಣಲಿದ್ದೇವೆ ಒಟ್ಟಿಗೆ
ನನಸು ಮತ್ತೆ, ಕನಸು
Comments
ಉ: ಮೂಡಲಿರುವನು ಸೂರ್ಯ, ಪಶ್ಚಿಮದಲ್ಲಿ
ಹಿರಿಯರಾದ ಪಾಟೀಲಜಿ, ತಮ್ಮ ಎಂದಿನ ಮೆಚ್ಚುಗೆಗೆ ವಂದನೆಗಳು. ಇಂದಿನ ಈ ಸಾಫ್ಟವೇರ್ ಯುಗದಲ್ಲಿ, ಬಹುತೇಕ ಪಾಲಕರಿಗೆ ಈ ಹಾಡು ಹೃದಯದ ಹಾಡಾಗಿ ಮೂಡಿರಲು ಸಾಕು. ಮಕ್ಕಳು ಅಲ್ಲೆಲ್ಲೋ ಪಶ್ಚಿಮ ದೇಶಗಳಲ್ಲಿ ಕೆಲಸ ಮಾಡುತ್ತ, ನಮ್ಮದೇ ಸ್ವದೇಶಕ್ಕೆ, ಮಾತೃಭೂಮಿಗೆ, ಮನೆಗೆ ಮರುಳುವ ಆ ಕ್ಷಣಗಳ ಎದುರು ನೋಡುವ ಈ ಕಾಲಘಟ್ಟದಲ್ಲಿ ಹೊಳೆದದ್ದನ್ನು ಅಕ್ಷರಗಳಲ್ಲಿ ಹಿಡಿದಿಡಲು ಪ್ರಯತ್ನಿಸಿದೆ ಅಷ್ಟೆ ಸರ್. ಮತ್ತೊಮ್ಮೆ ವಂದನೆಗಳು.