ಮೂರು ದೀಪಾವಳಿ ವಿಶೇಷಾಂಕಗಳು

ಮೂರು ದೀಪಾವಳಿ ವಿಶೇಷಾಂಕಗಳು

ದೀಪಾವಳಿ ಮತ್ತು ಯುಗಾದಿ ವೇಳೆಗೆ ವಿಶೇಷಾಂಕಗಳು ಹಬ್ಬದ ಸಂಭ್ರಮವನ್ನು ಪೂರ್ತಿಗೊಳಿಸುತ್ತವೆ. ಸುಮಾರು ೩೫ ವರುಷಗಳ ವಿಶೇಷಾಂಕಗಳನ್ನು ಓದಿದ್ದೇನೆ. ಸಾಮಾನ್ಯವಾಗಿ ಅವುಗಳ ಹೂರಣ ಹೀಗೆ. ವರ್ಷಭವಿಷ್ಯ , ಸಿನೆಮಪುಟಗಳು , ಕಥೆ, ಕವನ , ಓದುಗರಿಗೆಂದು ಒಂದು ವಿಷಯಕೊಟ್ಟು ಅವರಿಂದ ಪುಟ್ಟ ಲೇಖನಗಳು, ಮತ್ತು ಕೆಲವು ವಿಶೇಷ ಲೇಖನಗಳು . ಪ್ರಜಾವಾಣಿ ಬಹಳ ಕಾಲದಿಂದ ಕಥೆ/ಕವನ ಸ್ಪರ್ಧೆಯನ್ನು ನಡೆಸುತ್ತಿದೆ. ಅಂದ ಹಾಗೆ ಈ ಸಲದ ಕರ್ಮವೀರ ವಿಶೇಷಾಂಕದಲ್ಲಿ ಈ ಬಗ್ಗೆ ಸತ್ಯಕ್ಕೆ ಸಮೀಪವಾದ ಒಂದು ಹಾಸ್ಯ(?)ಲೇಖನವೂ ಇದೆ!.

ಈ ವಿಶೇಷ ಲೇಖನಗಳಲ್ಲೂ ಒಂದು ಪ್ಯಾಟರ್ನ್ ಇರುತ್ತದೆ . ಗಂಗಾ ನದಿಯೋ , ಕೋಟೆ ಕೊತ್ತಲಗಳೋ , ಸಂಸ್ಕೃತ ಸಾಹಿತ್ಯ ಮತ್ತು ಪುರಾಣ ಆಧಾರಿತ ಲೇಖನಗಳು ಸಾಮಾನ್ಯ.ಸಾಹಿತ್ಯ/ಸಮಾಜದ ಅನೇಕ ಸಮೀಕ್ಷಾ ಲೇಖನಗಳೂ ಇರುವವು.

ಇರಲಿ ಈ ವರ್ಷದ ಮೂರು ಪ್ರಮುಖ ವಿಶೇಷಾಂಕಗಳನ್ನು ನೋಡೋಣ.

ಉದಯವಾಣಿ . ಇಉತ್ತಮ ಗುಣಮಟ್ಟದ ಮುದ್ರಣಕ್ಕೆ ಅನೇಕಬಾರಿ ಪ್ರಶಸ್ತಿ ಗಳಿಸಿದ ಪತ್ರಿಕೆ . ಹೀಗಾಗಿ ಥಳಕು ಬಳಕು ಜಾಸ್ತಿ .ಯಥಾಪ್ರಕಾರ ೨ ಊದಿನಕಡ್ಡಿ , ಶಾಂಪೂ ಚೀಟಿ, ಧಮಾಕಾ ಬಹುಮಾನ ಯೋಜನೆಗಳೊಂದಿಗೆ ಬಂದಿದೆ. ಕತೆಗಳಲ್ಲಿ ವಿವೇಕ ಶಾನಭಾಗ ಅವರ ಕತೆ ಗಮನ ಸೆಳೆಯುತ್ತದೆ. ( ಇವರ ಪುಸ್ತಕಗಳು ಬಂದಿವೆಯಂತೆ. ಓದಬೇಕು.) ಒಮ್ಮೆ ಹೆಸರು ಗಳಿಸಿದರೆ ಸಾಕು ಏನೂ ಪ್ರಿಂಟಾಗುತ್ತದೆ ಎಂಬುದಕ್ಕೆ ಇಲ್ಲಿರುವ ಚಂ.ಪಾ. ಅವರ ಕವನಗಳು ಉದಾಹರಣೆ.

ಇನ್ನು ಪ್ರಜಾವಾಣಿ. ನಿರಾಭರಣ ಸುಂದರಿಯ ಹಾಗೆ. 'ಐಟಿ ಹೆದ್ದಾರಿಯಲ್ಲಿ' ನಮ್ಮ ಸುತ್ತ ನಡೆಯುತ್ತಿರುವ ಆತಂಕಕಾರಿ ಬದಲಾವಣೆಗಳ ಕುರಿತು ಒಳ್ಳೆಯ ಲೇಖನ. ಹಾಗೆಯೇ 'ಸುವರ್ಣಕರ್ನಾಟಕದ ಸಾಹಿತ್ಯ ಸಮೀಕ್ಷೆ' .ಕತೆಗಳಲ್ಲಿ ಜಯಂತ ಕಾಯ್ಕಿಣಿರವರ ಕತೆ ನೆನಪಿನಲ್ಲಿ ಉಳಿಯುತ್ತದೆ. ಎಂದಿನಂತೆ ಸುಖಕರ ಶೈಲಿಯಲ್ಲಿ ಬರೆದಿದ್ದಾರೆ. ಶ್ರೀರಾಮನನ್ನು ಏಕಾಂಂಗಿಯಾಗಿ ಪೂಜಿಸಲ್ಪಡುತ್ತಾನೆಯೇ ? ಇಲ್ಲ. ಈ ಬಗ್ಗೆ ಎಚ್.ಎಸ್.ವೆಂಕಟೇಶಮೂರ್ತಿಯವರ ಕವನ ನನಗೆ ಸೇರಿತು.

ಮತ್ತೆ ಕರ್ಮವೀರ ಗಾತ್ರದಲ್ಲಿ ದೊಡ್ಡದು. ' ಆಧುನಿಕತೆ ಮತ್ತು ಕನ್ನಡ ಕಾದಂಬರಿ' ಲೇಖನ ಇದೆ. ಅಯ್ಯೋ ! ಕಾದಂಬರಿಗಳ ಹಿಂದೆ ಇಷ್ಟೆಲ್ಲ ವಾದಗಳು , ಪ್ರಜ್ಞೆಗಳು , ನೆಲೆ , ಚಿಂತನೆ , ...... ಇತ್ಯಾದಿಗಳೆಲ್ಲ ಇವೆಯೆ ? ನಾನು ಸುಮ್ಮನೆ ಖುಷಿಗೆ ಓದುವದು ಎಂದುಕೊಂಡಿದ್ದೆ!. ಕಾದಂಬರಿ ಕಾವ್ಯದಷ್ಟೇ ಸಂಕೀರ್ಣ ಎಂದು ತೋರುತ್ತದೆ. 'ಜಾಹೀರಾತು ವಿಶೇಷಾಂಕ' ಹಾಸ್ಯ(?)ಲೇಖನ ಇದೆ.
'ಕಣ್ಮರೆಯಾದ ಕನ್ನಡ ' - ಹಾಸ್ಯ(?)ಲೇಖನ ಬೆಂಗಳೂರಿನಿಂದ ಕನ್ನಡ ಕಣ್ಮರೆ ಯಾದ ಬಗ್ಗೆ ಇದೆ . ಮಹಾರಾಷ್ಟ್ರದ ನೆಲದಿಂದ ಕನ್ನಡ ಕಣ್ಮರೆ ಯಾದ ಬಗ್ಗೆ ಅಲ್ಲ!. ಸಾಮಾನ್ಯವಾಗಿ ನಾನು ವಿಶೇಷಾಂಕ ತಗೊಂಡ ಕೂಡಲೆ ನೋಡುವುದು ಪರಿವಿಡಿ . ಕೆಲವು ಲೇಖಕರ ( ಅರಾಸೇ , ಕೇಫ , ಕಾಯ್ಕಿಣಿ ಇತ್ಯಾದಿ) ಹೆಸರು ಕಂಡರೆ ತಕ್ಷಣ ಆ ಪುಟಕ್ಕೆ ಹೋಗಿ ಓದುತ್ತೇನೆ, ಹಾಗೆ ಅರಾಸೇ ಮತ್ತು ಸಿ.ಎನ್.ಕೃಷ್ಣಮಾಚಾರ್ ( ಹಿಂದೆ 'ಕುಂತಳೆ , ನಿಂತಳೆ , ಶಕುಂತಳೆ...ಎಂಬ ಲೇಖನದ ಕುರಿತು ಇದೇ ಬ್ಲಾಗ್ ನಲ್ಲಿ ಬರೆದಿದ್ದೆ . )ಹೆಸರು ಇಲ್ಲಿ ಸಿಕ್ಕವು . ಆದರೆ ಬಹಳ ನಿರಾಸೆ ಆಯಿತು. ಅವರ ಬಹಳ ಸಾಧಾರಣ ಲೇಖನಗಳು ಇಲ್ಲಿವೆ.

ಸಮಾರೋಪ :-
ಕೊನೆಗೆ ಜಯಂತ ಕಾಯ್ಕಿಣಿರವರ ಕತೆ ಮತ್ತು ವಿವೇಕ ಶಾನಭಾಗ ಅವರ ಕತೆ ಹರಿದಿಟ್ಟುಕೊಂಡು ಈ ಮೂರೂ ಸಂಚಿಕೆಗಳ ವಿಲೇವಾರಿ ಮಾಡೀಬಿಟ್ಟೆ.

Rating
No votes yet