ಮೂರು ವರ್ಷಕ್ಕೇ ಮುಪ್ಪಾದ ‘ಬ್ಲ್ಯಾಕ್ ಬ್ಯೂಟಿ’

ಮೂರು ವರ್ಷಕ್ಕೇ ಮುಪ್ಪಾದ ‘ಬ್ಲ್ಯಾಕ್ ಬ್ಯೂಟಿ’

ನನ್ನ LG ಲ್ಯಾಪ್ ಟಾಪ್, a thing of beauty is a joy forever ಆಗಬಹುದು ಎನ್ನುವ ನಿರೀಕ್ಷೆಯೊಂದಿಗೆ ಸುಮಾರು ೪೨ ಸಾವಿರ ರೂಪಾಯಿ ಪೀಕಿ ಮೂರು ವರ್ಷಗಳ ಹಿಂದೆ ಕೊಂಡು ಕೊಂಡೆ. 13.3 ಇಂಚು ಪರದೆಯ (ನನಗೆ ಚಿಕ್ಕ ಸೈಜ್ ಇಷ್ಟ, ಕಡಿಮೆ ತೂಕ ವಾದ್ದರಿಂದ) ಕೋರ್ 2 DUO, ೨ GB RAM ೧೬೦ GB ಹಾರ್ಡ್ ಡಿಸ್ಕ್, ಅದೂ – ಇದೂ, ಹಾಳೂ – ಮೂಳೂ, ಇರೋ ಚೆಂದದ ಯಂತ್ರ. ಹಾಂ, ಇದಕ್ಕೆ ನೀಲಿ ಹಲ್ಲೂ (BLUE TOOTH) ಸಹ ಇತ್ತು. ಒಟ್ಟಿನಲ್ಲಿ OWNER’S PRIDE ಎಂದು ಸಲೀಸಾಗಿ ಹೇಳಬಹುದು. ಹೊಸತರಲ್ಲಿ ಅಗಸ ಎತ್ತೆತ್ತಿ ಒಗೆದ ಎನ್ನುವ ರೀತಿಯಲ್ಲಿ ತಂದ ಹೊಸತರಲ್ಲಿ ಜೋಪಾನವಾಗಿ ಇಟ್ಟುಕೊಂಡೆ. ಈ ಪಾಪಿ ಮೆಶೀನ್ ತರುವ ಬದಲಾವಣೆಯ ಅರಿವಿಲ್ಲದೆ ನನ್ನ ಮಡದಿಯೂ ಹುರುಪಿನಿಂದ ಸ್ವಾಗತಿಸಿದಳು. ಮೊಬೈಲ್ ನ ಹುಚ್ಚು ಅಂಟಿಸಿಕೊಂಡು ನನ್ನ ಬೆಲೆಬಾಳುವ N80 ಮೊಬೈಲ್ ನಲ್ಲಿ ಸಂಗೀತ ಕೇಳುತ್ತಾ ಫೋನನ್ನು TOILET ಗುಂಡಿಯಲ್ಲಿ ಸಮಾಧಿ ಮಾಡಿದ್ದ ನನ್ನ (ಆಗ ೪ ವರ್ಷ ಪ್ರಾಯದ) ಮಗನ ಕಣ್ಣಿನಿಂದ ದೂರ ಇಟ್ಟುಕೊಂಡು ಸಾಕುತ್ತಿದ್ದೆ. ಅವನ ಕಣ್ಣು ತಪ್ಪಿಸಿದರೂ ನನ್ನ ಪುಟ್ಟ ೯ ತಿಂಗಳ ಪೋ(ಕ)ರಿಯ ಕಿತಾಪತಿಯಿಂದ ನನ್ನ ಲ್ಯಾಪ್ ಟಾಪ್ ಅನ್ನು ಉಳಿಸಲು ಆಗಲಿಲ್ಲ ನನಗೆ. ಸೋಫಾದ ಮೇಲೆ ಇಟ್ಟು ಊಟಕ್ಕೆಂದು ಕೂತಾಗ ಯಾವಾಗ ಪ್ರತ್ಯಕ್ಷ ಳಾದಳೋ ಸೋಫಾದ ಹತ್ತಿರ, ಎಳೆದು ನೆಲದ ಮೇಲೆ ಕೆಡವಿದಳು. ಅಯ್ಯೋ ನನ್ನ ನಲವತ್ತೆರಡು ಸಾವಿರ ಭಸ್ಮ ಮಾಡಿದಳಲ್ಲಾ ಎಂದು ಹೋಗಿ ನೋಡಿದರೆ ಮೇಲಿನ ಎರಡು, ಕೆಳಗಿನ ಎರಡು ಹಲ್ಲುಗಳನ್ನು ಬಿಟ್ಟು ಸವಾಲೆಸೆಯುವಂತೆ ನನ್ನತ್ತ ನೋಡಿದಳು. ಲ್ಯಾಪ್ ಟಾಪ್ ನ ಸ್ಕ್ರೀನ್ ಸುತ್ತ ಇರುವ ಪ್ಲಾಸ್ಟಿಕ್ ಫ್ರೇಂ ಕ್ರ್ಯಾಕ್. ಇಷ್ಟು ಚಿಕ್ಕ ಪ್ರಾಣಿಯನ್ನು ಬಡಿಯುವುದಾದರೂ ಹೇಗೆ ಎಂದು ಬರೀ ಕೆಂಗಣ್ಣಿನಿಂದ ಅವಳತ್ತ ನೋಡಿ ಲ್ಯಾಪ್ಟಾಪ್ ಅವಳ ಕೈಗೆ ಸಿಗದ ರೀತಿಯಲ್ಲಿ ಇಟ್ಟು ಮರಳಿ ಡಿನ್ನರ್ ಟೇಬಲ್ ಗೆ ಬಂದಾಗ ಅರ್ಧಾಂಗಿನಿ ಗೆ ಸಂತೋಷವಾದ ಸುಳಿವು ಸಿಕ್ಕಿತು. ನಾನು ಲ್ಯಾಪ್ ಟಾಪ್ ಮೇಲೆ ಕುಳಿತು ಆನ್ ಮಾಡುವುದರ ಒಳಗೆ ಅವಳಲ್ಲಿ ಭೂತ ಆವರಿಸಿ ಬಿಡುತ್ತೆ. ಹಗಲಿಡೀ ಆಫೀಸು, ಸಂಜೆಯಾದರೆ ಲ್ಯಾಪ್ ಟಾಪ್ ಎಂದು ಗೊಣಗುತ್ತಿದ್ದಳು. ಈಗ ಲ್ಯಾಪ್ ಟಾಪ್ ಬಿದ್ದ ಸದ್ದು ಕೇಳಿದಾಗ ಅವಳಿಗೆ ಸಂತಸ, ಹಾಳಾಗಿ ಹೋಯಿತು ಎಂದು. ನನ್ನ ಲ್ಯಾಪ್ ಟಾಪ್ ಅವಳಿಗೆ ಸವತಿಯಂತೆ ಕಾಣಲು ಶುರು ಮಾಡಿತು.
 
ಲ್ಯಾಪ್ ಟಾಪ್ ಕೊಂಡ ಈ ಮೂರು ವರ್ಷಗಳ ಅವಧಿಯಲ್ಲಿ ನನ್ನ ಮಗ ಅದರ ಮೇಲೆ ಪೂರ್ಣ ಅಧಿಕಾರ ಸ್ಥಾಪಿಸಿದ, ಮಗಳು ಅದರ ನಾಲ್ಕಾರು ಕೀಲಿಗಳನ್ನು ಕಿತ್ತು ಕೈಗೆ ಕೊಟ್ಟಳು,  ನಾನು ಸಾಕಷ್ಟು ಹುರುಪಿನಿಂದ ನನ್ನ  ಹಳೇ ಸೇತುವೆ ಬ್ಲಾಗಿನಲ್ಲಿ ಬ್ಲಾಗಿಸಿದೆ, ನನ್ನ literary sojourn ಗೆ ಸಂಗಾತಿಯಾಗಿ, ಪ್ರೋತ್ಸಾಹಿಸಿದ ನನ್ನ ಪ್ರೀತಿಯ ಆನ್ ಲೈನ್ ಸಾಹಿತಿಗಳ ತಾಣ ಸಂಪದ ದೊಂದಿಗಿನ ನಂಟು ಇನ್ನಷ್ಟು ಗಾಢವಾಯಿತು, ನನ್ನ ನಿರಂತರ ಟ್ವೀಟ್ಗಳಿಂದ twitter ಶ್ರೀಮಂತವಾಯಿತು, ನನ್ನ ಮಡದಿಯ ಕೆಂಗಣ್ಣಿಗೆ ತುತ್ತಾಗಿ ಮಿರ ಮಿರ ಮಿಂಚುತ್ತಿದ್ದ ಅದರ ಕಪ್ಪು ಬಣ್ಣದ ಹೊಳಪು ಕಾಂತಿ ಹೀನವಾಯಿತು...... ಇಷ್ಟೆಲ್ಲಾ ಆದ ನಂತರ ಸಿಸ್ಟಮ್ ಸಹ ೬೦ ರ ದಶಕದ ಅಂಬಾಸಿಡರ್ ಕಾರಿನ ರೀತಿ ವರ್ತಿಸಲು ಶುರು ಮಾಡಿತು. laptop ನ ಆಯುಷ್ಯ ಬರೀ ಮೂರು ಅಥವಾ ನಾಲ್ಕು ವರ್ಷ ಗಳೋ? ನಿಮಗೂ ಇದರ ಅನುಭವ ಆಗಿದೆಯೇ? ಪ್ರತೀ ಮೂರು ನಾಲ್ಕು ಅಥವಾ ಹೆಚ್ಚೆಂದರೆ ಐದು ವರ್ಷಗಳಿಗೊಮ್ಮೆ ಹತ್ತಾರು ಸಾವಿರ ರೂಪಾಯಿ ಹಾಕಿ ಲ್ಯಾಪ್ ಟಾಪ್ ಕೊಳ್ಳಲು ಸಾಧ್ಯವೋ?
 
ಮೂರು ವರ್ಷಗಳಲ್ಲೇ ಮುಪ್ಪಾದ ಯಂತ್ರವನ್ನು ನನ್ನ ಏಳು ವರ್ಷದ ಮಗನಿಗೆ ಕೊಟ್ಟು ಮ್ಯಾಕ್ ಅಥವಾ vaio ಕೊಳ್ಳುವ ಆಸೆ ಈಗ. ಮಡದಿ ಸಹ ಈಗ ಮತ್ತಷ್ಟು matured ಆಗಿರೋದ್ರಿಂದ ಹಳೇ ಲ್ಯಾಪ್ ಟಾಪ್ ಗೆ ಬಂದ ದುಃಸ್ಥಿತಿ ಹೊಸ ಮೆಶೀನಿಗೆ ಬರಲಾರದು ಎನ್ನೋ ಭರವಸೆ ಇದೆ. ರಾಜಕಾರಣಿಯ ಆಶ್ವಾಸನೆಯ ರೀತಿ ಹುಸಿಯಾಗದಿದ್ದರೆ ಸಾಕು ನನ್ನ ಭರವಸೆ.      
 

     

Rating
No votes yet

Comments