ಮೂವತ್ತು ದಿನ , ಇಪ್ಪತ್ತು ಪುಸ್ತಕ ; ಒಂದಿಷ್ಟು ಒಳ್ಳೇ ಪುಸ್ತಕ ನಿಮಗಾಗಿ

ಮೂವತ್ತು ದಿನ , ಇಪ್ಪತ್ತು ಪುಸ್ತಕ ; ಒಂದಿಷ್ಟು ಒಳ್ಳೇ ಪುಸ್ತಕ ನಿಮಗಾಗಿ

ಕಳೆದ ಮೂವತ್ತು ದಿನದಲ್ಲಿ ಡಿಜಿಟಲ್ ಲೈಬ್ರರಿಯಿಂದ ಇಪ್ಪತ್ತ್ತು ಕನ್ನಡ ಪುಸ್ತಕ ಇಳಸ್ಕೊಂಡೆ ; ಎಲ್ಲಾ ಓದಿದೆ , ಅದೂ ಪೂರ್ತಿಯಾಗಿ ಅಂತ ತಿಳ್ಕೋಬೇಡಿ. ಇಷ್ಟೊಂದು ಹೇಗೆ ಓದಲಿಕ್ಕೆ ಸಾಧ್ಯ ಅಂತನೂ ಆಶ್ಚರ್ಯಪಡಬೇಡಿ . ದಿನಕ್ಕೊಂದು ಪುಸ್ತಕ ಓದಬಹುದು - ಟೀವಿ ಮತ್ತು ದಿನದ ಇಂಗ್ಲೀಷ್ ಪೇಪರ್ ರಾಶಿ ಓದದೆ ಇದ್ರೆ ಅದು ಸಾಧ್ಯ .
ಇರಲಿ .
ಈ ಇಪ್ಪತ್ತರಲ್ಲಿ ಏಳು - ಅಂದರೆ

೧. ತಮಿಳು ತಲೆಗಳ ನಡುವೆ - ಬೀ ಜಿ ಎಲ್ ಸ್ವಾಮಿಯವರದು. ಸಂಪದದಲ್ಲೇ ಅದರ ಪೀಡಿಎಫ್ ಕಡತ ಇದೆ.

೨, ೩. ನನ್ನ ಜೀವನ ಸ್ಮೃತಿಗಳು - ಕರ್ನಾಟಕ ಕುಲಪುರೋಹಿತ ಆಲೂರರ ಆತ್ಮಚರಿತ್ರೆ - ಎರಡು ಭಾಗಗಳಲ್ಲಿ

೪.ಸುನೇರಿ - ಪಂಜಾಬಿಯ ಜ್ಞಾನಪೀಠ ವಿಜೇತ ಸಾಹಿತಿ ಅಮೃತಾ ಪ್ರೀತಂ ಅವರ ಕವನ ಸಂಗ್ರಹ - ಹಾ.ಮಾ. ನಾಯಕರು ಅನುವಾದಿಸಿರೋದು .
ಕನ್ನಡದ ಬಾವುಟ - ಕನ್ನಡ ಕವನಗಳ ಸಂಗ್ರಹ
ರಂಗಣ್ಣನ ಕನಸಿನ ದಿನಗಳು
ಆದಿಕವಿ ವಾಲ್ಮೀಕಿ - ಮಾಸ್ತಿ ವೆಂಕಟೇಶ ಅಯ್ಯಂಗಾರರದು , ವಾಲ್ಮೀಕಿರಾಮಾಯಣ ಕುರಿತ ವಿಮರ್ಶೆ

ಈಗಾಗಲೇ ನಾನು ಕೊಂಡು ಓದಿ ನನ್ನ ಹತ್ತಿರ ಇಟ್ಟುಕೊಂಡ ಪುಸ್ತಕಗಳು . ಈಗ ಡಿಜಿಟಲ್ ಸ್ವರೂಪದಲ್ಲಿ ಸಿಕ್ಕದ್ದರಿಂದ ಅವನ್ನು ನನ್ನ ಪುಸ್ತಕರಾಶಿಯನ್ನು ಕರಗಿಸಲು ಅನುಕೂಲವಾಯಿತು !

ಸುನೇರಿ ( http://dli.iiit.ac.in/cgi-bin/Browse/scripts/use_scripts/advnew/metainfo.cgi?&barcode=5010010065130 ) ತಪ್ಪದೇ ಓದಿ - ಚಿಕ್ಕ ಚಿಕ್ಕ ಕವನಗಳ ಚಿಕ್ಕ ಪುಸ್ತಕ - ಚೆನ್ನಾಗಿದೆ.
ಅಲ್ಲಿಂದ ಒಂದಿಷ್ಟು ಸಾಲುಗಳು :

ಈ ಭೂಮಿ -
ಒಂದು ಸುಂದರ ಪುಸ್ತಕ
ಸೂರ್ಯ ಚಂದ್ರರೇ ಅದರ ರಕ್ಷಾಪುಟಗಳು
ಆದರೆ -
ಹಸಿವು , ಬಡತನ , ದಾಸ್ಯ ....
ದೇವರೇ
ಇವೇನು ನಿನ್ನ ಪ್ರವಚನಗಳೇ ?
ಅಥವಾ
ಬರಿಯ ಅಚ್ಚಿನ ತಪ್ಪುಗಳೇ ?
******

ಯಾರಿಗಾದರೂ ಹಸಿವಾದರೆ
ಹಳಸಿದ ಧರ್ಮದ ರೊಟ್ಟಿಯನ್ನು
ಯಾವಾಗಲೂ ತಿನ್ನಬಹುದು
ಬೇಕೆಂದರೆ ಸ್ವಲ್ಪವನ್ನ ಮುಂದಿನ ಜನ್ಮಕ್ಕೂ
ಇಟ್ಟುಕೋಬಹುದು.
( ವಂದಿಸಲು ಮಾತ್ರ ಮರೆಯಬಾರದು)
****

ಗಂಗೆಯಿಂದ ಓಡ್ಕಾವರೆಗೆ
ಇದೇನು ನನ್ನ ಬಾಯಾರಿಕೆಯ
ಪ್ರವಾಸ ಕಥನವೆ ?

****

ಉಜ್ಬೆಕ್ಕಾಗಲಿ
ಪಂಜಾಬಿಯಾಗಲಿ
ಪ್ರಾಸ ಒಂದೇ !

****

ಮೂರು ಒಳ್ಳೇ ಪುಸ್ತಕಗಳು ಸಿಕ್ಕವು .
೧. ಜೇನವ್ವನ ಸಂಸಾರ - ಜೇನುಗಳ ಜೀವನ ಬಗ್ಗೆ ನಿಮಗೇನು ಗೊತ್ತು .
ಅವುಗಳ ಜೀವನ ಚಕ್ರ ; ಸಮಾಜ ಜೀವನ ; ಕೆಲಸದ ವಿಭಜನೆ ; ಜೇನಿನ ಮಹತ್ವ ಎಲ್ಲ ಅದ್ಭುತವೇ ; ಶಾ. ಬಾಲೂರಾವ್ ಅವರು ತುಂಬ ಚೆನ್ನಾಗಿ ಬರೆದಿದ್ದಾರೆ
ನೀವೂ ಓದಿ ( http://dli.iiit.ac.in/cgi-bin/Browse/scripts/use_scripts/advnew/metainfo.cgi?&barcode=5010010052196)

೨. ಕಡಲ ತೀರದ ಗ್ರಾಮ - ಅನಿತಾ ದೇಸಾಯಿ ಅವರು ಬರೆದದ್ದು - ನ್ಯಾಶನಲ್ ಬುಕ್ ಟ್ರಸ್ಟಿನದು - ಮಕ್ಕಳಿಗಾಗಿ ಇರೋದಾದರೂ ದೊಡ್ಡವರೂ ಓದಬೇಕಾದ ಪುಸ್ತಕ . ಒಂದು ಹಳ್ಳಿಯಲ್ಲಿ ಜನ ಬಡತನದಲ್ಲಿ ಬದುಕಿದ್ದಾರೆ . ಹೊಟ್ಟೆ ತುಂಬಿಸೋದೇ ಕಷ್ಟ ; ಅಂತಹದ್ದರಲ್ಲಿ ಒಂದು ಕಾರ್ಖಾನೆ ಅಲ್ಲಿಗೆ ಬರಲಿದೆ . ಜನರ ಹೊಲಗಳನ್ನ ಅದಕ್ಕೆ ಬಳಸಲಿದ್ದಾರೆ . ಬೇಸಾಯ , ಮೀನುಗಾರಿಕೆಯಲ್ಲಿ ಬದುಕಿರುವ ಜನರು ಇನ್ನೇನು ಮಾಡಬೇಕು ? ಬದಲಾದ ಪರಿಸ್ಥಿತಿಯನ್ನ ಹೇಗೆ ಎದುರಿಸಬೇಕು ?
ಅಲ್ಲಿ ಒಬ್ಬ ಹುಡುಗ ; ಕುಡುಕ ತಂದೆ ; ಕಾಯಿಲೆಯಿಂದ ನರಳುವ ತಾಯಿ . ಶಾಲೆಗೆ ಹೋಗುವ ಇಬ್ಬರು ತಂಗಿಯರು . ಶಾಲೆಗೆ ಹೋಗದ ಒಬ್ಬಳು ತಂಗಿ . ಅವನು ಚಳುವಳಿಗಾರರ ಬೆನ್ನು ಹತ್ತಿ ಮುಂಬೈಗೆ ಬರುತ್ತಾನೆ . ಅಲ್ಲೇ ಇದ್ದುಬಿಡುತ್ತಾನೆ . ಯಾವುದೋ ಕೊಳಕು ಹೋಟಲಿನಲ್ಲಿ ಕೆಲಸ ಮಾಡಿಕೊಂಡು ಇರುತ್ತಾನೆ . ಒಬ್ಬ ಪಾನ್ವಾಲಾ , ಮತ್ತೆ ಒಬ್ಬ ವಾಚು ರಿಪೇರಿಯವನ ಪರಿಚಯ ಆಗುತ್ತದೆ . ವಾಚು ರಿಪೇರಿ ಕಲೀತಾನೆ . ದೀಪಾವಳಿಗೆ ಊರಿಗೆ ಹೋಗಿ ಅಲ್ಲೇ ನೆಲೆಸುವ ನಿರ್ಧಾರ ಮಾಡುತ್ತಾನೆ . ಊರಿಗೆ ಮೊದಲನೇ ವಾಚುರಿಪೇರಿ ಅಂಗಡಿ ಹಾಕುವ ನಿರ್ಧಾರ ಮಾಡುತ್ತಾನೆ. ಆದರೆ ಆ ಊರಲ್ಲಿ ವಾಚು ಕಟ್ಟಿಕೊಳ್ಳೋರೇ ಇಲ್ವಲ್ಲ ? ಕಾರ್ಖಾನೆ ಆಗ್ತಿದ್ದ ಹಾಗೆ ಜನ ಬರ್ತಾರಲ್ಲ ? ಅವರೆಲ್ಲ ವಾಚ್ ಕಟ್ಟಿಕೊಳ್ತಾರಲ್ಲವೆ ?

ಜತೆಗೇ ಕೋಳಿ ಸಾಕುವ ನಿರ್ಧಾರ ಮಾಡುತ್ತಾನೆ. ಕೋಳಿ ಅಥವಾ ತತ್ತಿ ತೆಗೆದುಕೊಳ್ಳುವರಾರು ? ಇನ್ನಾರು ಬರಲಿರುವ ಕಾರ್ಖಾನೆಯ ಜನಗಳು! ಕೋಳಿಸಾಕಣೆಯ ಬಗ್ಗೆ ಏನೂ ಗೊತ್ತಿಲ್ವಲ್ಲ ? ಕಲಿತರಾಯ್ತು ಅಂತಾನೆ.
ಹೀಗೆ ಹೊಸ ಪರಿಸರಕ್ಕೆ , ಬದಲಾವಣೆಗಳಿಗೆ ಹೊಂದಿಕೊಳ್ಳುತ್ತ ಹೋಗುವುದೇ ಸರಿಯಾದ ಉಪಾಯ ಅಂತ ವಿಜ್ಞಾನಿ ಒಬ್ಬ ಉದ್ಗರಿಸುತ್ತಾನೆ . ವಿಕಾಸವಾದ ತಾನೇ ಏನು ? ಎಲ್ಲ ಪ್ರಾಣಿ , ಪಕ್ಷಿಗಳು ಹಾಗೇ‌ ಮಾಡುತ್ತ ಬಂದಿವೆ. ಅಲ್ಲವೇ.

೩ ಭವಭೂತಿಯ ಉತ್ತರರಾಮ ಚರಿತ - ಇದು ನಾನು ಬಹುಕಾಲದಿಂದ ಹುಡುಕುತ್ತಾ ಇದ್ದದ್ದ್ದು - ಸಿಕ್ಕಿತು. ಅ. ನ. ಮೂರ್ತಿರಾವ್ ಅವರ 'ಪೂರ್ವ ಸೂರಿಗಳೊಡನೆ' ಅನ್ನೋ ಪುಸ್ತಕ ಓದಿದ್ದೆ . ಅಲ್ಲಿ ರಾಮ ಸೀತೆಯರ ಪಾತ್ರಚಿತ್ರಣ ಕುರಿತಾದ ವಿಶ್ಲೇಷಣೆ ಇತ್ತು . ಅಲ್ಲಿ ವಾಲ್ಮೀಕಿಯ ರಾಮನನ್ನು ವಾಲ್ಮೀಕಿ ಕಾಣ; ಅವನನ್ನು ಭವಭೂತಿ ಚೆನ್ನಾಗಿ ಬಲ್ಲ ; ಅಂತ ಮಾತಿತ್ತು . ಆ ಭವಭೂತಿಯ ಉತ್ತರರಾಮಚರಿತದಲ್ಲಿ ಸೀತಾ ಪರಿತ್ಯಾಗ ಸಂದರ್ಭದಲ್ಲೂ ರಾಮನ ಉದಾತ್ತತೆಯನ್ನು , ಹಾಗೇ ರಾಮಸೀತೆಯರ ಆದರ್ಶ ದಾಂಪತ್ಯವನ್ನೂ ಚೆನ್ನಾಗಿ ಚಿತ್ರಿಸಲಾಗಿದೆ . ಅಂತ ಹೇಳಿದ್ದರು. ಆ ಪುಸ್ತಕ ಇಲ್ಲಿದೆ. http://dli.iiit.ac.in/cgi-bin/Browse/scripts/use_scripts/advnew/metainfo.cgi?&barcode=5010010064394

ಒಂದು ಸಂಗತಿ ಇಲ್ಲಿಂದ . ವಾಲ್ಮೀಕಿಯ ರಾಮ ' ಸತ್ಯಕ್ಕಾಗಿ ವಂಶದ ಗೌರವಕ್ಕಾಗಿ , ಜನರ ಹಿತಕ್ಕಾಗಿ ಲಕ್ಷ್ಮಣ , ಭರತರನ್ನು , ರಾಜ್ಯವನ್ನು ಬಿಡಬಲ್ಲೆ , ಇನ್ನು ಸೀತೆಯ ಮಾತೇನು ?' ಅನ್ನುತ್ತಾನೆ . ಇಲ್ಲಿ ಸೀತೆಯನ್ನು ಎಲಕ್ಕಿಂತ ಕಡೆಗಣಿಸಲಾಗಿದೆ. ಅದೇ ಭವಭೂತಿ ಅದೇ ಮಾತನ್ನೇ ಸ್ವಲ್ಪ ಬದಲಾವಣೆಯಿಂದ - ' ಸತ್ಯಕ್ಕಾಗಿ ವಂಶದ ಗೌರವಕ್ಕಾಗಿ , ಜನರ ಹಿತಕ್ಕಾಗಿ ಲಕ್ಷ್ಮಣ , ಭರತರನ್ನು , ರಾಜ್ಯವನ್ನು ಬಿಡಬಲ್ಲೆ , ಹೆಚ್ಚೇನು ಸೀತೆಯನ್ನೂ ಬಿಡಬಲ್ಲೆ ' ಎಂದು ಅವನಿಂದ ಹೇಳಿಸುತ್ತಾನೆ . ಇಲ್ಲಿ ಸೀತೆಯನ್ನು ಎತ್ತರದಲ್ಲಿರಿಸಲಾಗಿದೆ. ಹಾಗೇ ರಾಮನನ್ನು ಕೂಡ !

ಮತ್ತೆ ಇತರ ಪುಸ್ತಕಗಳು

ಗಂಧದ ಹುಡಿ - ಸೆಂಟ್ರಲ್ ಕಾಲೇಜು ವಿದ್ಯಾರ್ಥಿಗಳು ಬರೆದ ಪ್ರಬಂಧ ಸಂಕಲನ . ಜೀ ಪಿ ರಾಜರತ್ನಂ ಸಂಕಲಿಸಿದ್ದಾರೆ - ಸಾಧಾರಣ ಇದೆ .

ಹತ್ತು ಮಕ್ಕಳ ತಾಯಿ - ಜೀ ಪಿ ರಾಜರತ್ನಂ ಬರೆದಿರೋದು - ಬೌದ್ಧ ವಿಹಾರಗಳ ಹಿಂದಿನ ಕತೆಗಳು - ಬೌದ್ಧ ಸಾಹಿತ್ಯ , ಪುರಾಣ , ಜೀ.ಪಿ. ರಾಜರತ್ನಂ ಬರಹದಲ್ಲಿ ರುಚಿ ಇರುವವರು ಓದಬೇಕಾದ ಪುಸ್ತಕ.

ಹರಪನಹಳ್ಳಿ ಭೀಮವ್ವ ಕುರಿತಾದ ಒಂದು ಪುಸ್ತಕ . ಆಕೆಯ ಹೆಸರು ಕೇಳಿದ್ದೆ . ಏನು ಎಂತ ಅಂತ ಗೊತ್ತಿರಲಿಲ್ಲ. ಎಳೆಯ ವಯಸ್ಸಿನಲ್ಲಿ ವಿಧವೆಯಾದ ಈಕೆ ಬಹುಕಾಲ ಬದುಕಿ ಭಕ್ತಿಸಾಹಿತ್ಯ ರಚಿಸಿದ್ದಾರೆ .

ಪೂಜನ : ಇದೂ ಒಂದು ಒಳ್ಳೇ ಪುಸ್ತಕ. ಮಾಸ್ತಿಯವರು ಅನೇಕ ಪುಸ್ತಕಗಳಿಗೆ ಮುನ್ನುಡಿಗಳನ್ನು ಬರೆದಿದ್ದು ಅವನ್ನೆಲ್ಲ ಇಲ್ಲಿ ಒಟ್ಟಾಗಿಸಿದ್ದಾರೆ. ಮಾಸ್ತಿ ಬರಹ ಕುರಿತು ರುಚಿ ಇರುವವರು ಓದಬೇಕಾದ ಪುಸ್ತಕ.

ಹದಿಮೂರು ಶ್ರೇಷ್ಠ ಕತೆಗಳು - ಭಾರತದ ೧೩ ಭಾಷೆಗಳಿಂದ ಆಯ್ದ ಕತೆಗಳು - ನ್ಯಾಶನಲ್ ಬುಕ್ ಟ್ರಸ್ಟ್ ನದು - ಮಕ್ಕಳಿಗಾಗಿ . ಪರವಾಗಿಲ್ಲ . ಇದರಲ್ಲಿ ಕನ್ನಡದ ತ್ರಿವೇಣಿ ಅವರ ಒಂದು ಕತೆ ಇದೆ.

ಮಲೆ ಮಾದೇಶ್ವರ - ಒಂದು ದೊಡ್ಡ ಹೊತ್ತಿಗೆ . ಮಲೆ ಮಾದೇಶ್ವರನ ಬಗ್ಗೆ ನನಗೆ ಹೆಚ್ಚು ಗೊತ್ತಿರಲಿಲ್ಲ ; ಪರಿಚಯ ಮಾಡಿಕೊಳ್ಳಲು ಅಲ್ಲಲ್ಲಿ ಕಣ್ಣಾಡಿಸಿದೆ.

ಅಂಚೆ ಸ್ಟ್ಯಾಂಪುಗಳ ರಂಜಕ ಕತೆ - ಮಕ್ಕಳಿಗಾಗಿ, ನ್ಯಾಶನಲ್ ಬುಕ್ ಟ್ರಸ್ಟ್ ನದು.

ಮಿಣುಕುಗಳು - ರಾಮಾನುಜಂ ಅಂತ ಇದ್ದದ್ದನ್ನು ನೋಡಿ , ಏ . ಕೆ . ರಾಮಾನುಜನ್ ಇರಬಹುದು ಅಂತ ಇಳಿಸಿಕೊಂಡಿದ್ದೆ . ಇದು ಪಿ.ಎಸ್.ರಾಮಾನುಜಂ . ಸಾಧಾರಣ ಇದೆ . ಚುಟುಕಗಳ ಸಂಗ್ರಹ.

ಗೆದ್ದಲು - ಬಂಗಾಳಿಯ ಕಾದಂಬರಿ. ಯಾವನೋ ಒಬ್ಬ ಕೆಲಸಕ್ಕೆ ರಾಜಿನಾಮೆ ಕೊಟ್ಟ ನಂತರದ ದಿನಚರಿ . ಪಾತ್ರಗಳೂ ಇಲ್ಲ ; ಅವನ ಬಗ್ಗೂ ಹೆಚ್ಚು ತಿಳಿಯಲಿಲ್ಲ ; ನಿಧಾನವಾಗಿ ಓದಲು ಮನಸ್ಸೂ ಬರಲಿಲ್ಲ . ಪುಸ್ತಕದ ಕೊನೆ ತಲುಪಿದರೂ ತಳಬುಡ ತಿಳಿಯಲಿಲ್ಲ :( .

ಗುಜರಾತಿ ಏಕಾಂಕ ನಾಟಕಗಳ ಸಂಗ್ರಹ - ಸಾಧಾರಣ ಇದೆ.

Rating
No votes yet

Comments