ಮೃಚ್ಛಕಟಿಕ - ಚಾರುದತ್ತನ ಗಲ್ಲು ಪ್ರಸಂಗವು
ಸಂಸ್ಕೃತ 'ಮೃಚ್ಛಕಟಿಕ' ನಾಟಕದ ಅನುವಾದಗಳು ಕನ್ನಡದಲ್ಲಿವೆ - ಸಿಕ್ಕರೆ ಓದಿ.
ನನಗೆ ಮೆಚ್ಚಿಗೆ ಆಯಿತು.
ಅಲ್ಲಿನ ಸ್ವಜನಪಕ್ಷಪಾತ , ರಾಜಕಾರಣದಂಥ ಎಷ್ಟೋ ವಿಷಯಗಳು ಇಂದಿಗೂ ಪ್ರಸ್ತುತ. ಇರಲಿ .
ಅಲ್ಲಿನ ಒಂದು ಪ್ರಸಂಗ ಓದಿ .
ಚಾರುದತ್ತನನ್ನು ಮರಣಶಿಕ್ಷೆ ವಿಧಿಸಲು ಎಳತಂದಿದ್ದಾರೆ. ಆಗ ಇಬ್ಬರು ಕೊಲೆಗಡುಕರು ಅಲ್ಲಿದ್ದಾರೆ. ಶಿಕ್ಷೆಗೆ ಗುರಿಯಾದವರನ್ನು ಕೊಲ್ಲುವದು ಅವರ ಕೆಲಸ. ಅವರಿಬ್ಬರು ಈ ಕೆಲಸದ ಇಂದಿನ ಸರದಿ ಯಾರದ್ದು ಎಂದು ಸುಮಾರು ಹೊತ್ತು ಜಗಳ ಮಾಡುತ್ತಾರೆ .
ಕೊನೆಗೆ ’ಒಬ್ಬ; ಅಯ್ತು ಬಿಡು . ಇಂದು ನನ್ನ ಸರದಿ . ಒಪ್ಕೊಂಡೆ- ಆದರೆ ನನಗೆ ಮೊದಲೇ ಗೊತ್ತಿತ್ತು ನನ್ನ ಸರದಿ’ ಅಂತಾನೆ.
ಇನ್ನೊಬ್ಬ ’ಅದೇನು , ಗೊತ್ತಿದ್ದವನು ಮೊದಲೆ ಒಪ್ಕೊಳ್ಳಬಾರದೆ ? ಇಷ್ಟು ಹೊತ್ತು ಏಕೆ ವ್ಯರ್ಥ ವಾದ ಮಾಡಿದೆ?’
ಮೊದಲಿನವನು ’ ಅಯ್ಯೋ , ಅದು ಹಾಗಲ್ಲ. ಇರೋ ವಿಷಯ ಇದು . ನಮ್ಮಪ್ಪನೂ ಇದೇ ಉದ್ಯೋಗ ಮಾಡ್ತಿದ್ದ. ಅವನು ಸಾಯೋ ಮೊದಲು ನನಗೆ ಒಂದು ಕಿವಿಮಾತು ಹೇಳಿದ. ಮಗನೇ ಯಾರನ್ನಾದರೂ ರಾಜಾಜ್ಞೆ ಪ್ರಕಾರ ಕೊಲ್ಲಬೇಕಾದರೆ ಸಾಧ್ಯವಾದಷ್ಟು ತಡ ಮಾಡು ಅಂತ ಹೇಳ್ದ.’
’ಅದ್ಯಾಕೆ?’
’ಅವನು ಹೇಳ್ದ - ಶಿಕ್ಷೆಗೆ ಗುರಿಯಾದವನನ್ನು ಅವನನ್ನು ಕೊಲ್ಲೋಕೆ ಅವಸರ ಯಾಕೆ. ತಡ ಮಾಡಿದರೆ ಒಂದು ಜೀವ ಉಳೀತಿದ್ರೆ ಉಳೀಲಿ. ನಿರಪರಾಧಿ ಇರಬಹುದು.- ನಿಜವಾದ ಅಪರಾಧಿ ಪತ್ತೆ ಆಗಿ ಅವನ ಬಿಡುಗಡೆ ಆದ್ರೂ ಆಗಬಹುದು , ರಾಜನ ಮನಸ್ಸು ಬದಲಾದ್ರೂ ಆಗಬಹುದು . ರಾಜನಿಗೇನಾದ್ರೂ ಗಂಡು ಮಗು ಹುಟ್ಟಿ ಸಂತೋಷದಲ್ಲಿ ಎಲ್ಲಾ ಶಿಕ್ಷೆ ಮನ್ನಾ ಮಾಡಬಹುದು. ಯಾರಿಗೆ ಗೊತ್ತು ? ರಾಜನೇ ಬದಲು ಆದ್ರೂ ಆಗಬಹುದು!’ ( ಅಲ್ಲಿ ಅಗೋದೂ ಅದೇ )
ಈಗ ನೋಡಿ ಒಂದು ಪಕ್ಷದ ಆಡಳಿತದಲ್ಲಿ ಇನ್ನೊಂದು ಪಕ್ಷದವನನ್ನು ಕೋರ್ಟಿಗೆಳೆಯುವದು , ಕೇಸು ಹಾಕುವದು . ಅಷ್ಟರಲ್ಲಿ ಈ ಸರಕಾರ ಬಿದ್ದು ಹೋಗಿ ಆ ಪಕ್ಷದ ಸರಕಾರ ಅಧಿಕಾರಕ್ಕೆ ಬಂದು ಅವನ ಮೇಲಿನ ಕೇಸುಗಳನ್ನೆಲ್ಲ ಹಿಂದೆ ತಕೊಳ್ಳೋದು . ನಮ್ಮ ಕಣ್ಮುಂದೆ ನಡೆದಿಲ್ಲವೆ ? ಹಿಂದೆಲ್ಲ ಹೀಗೆ ಆಗಿದೆ , ಇಂದಿರಾ ಗಾಂಧಿ , ಜಾರ್ಜ್ ಫರ್ನಾಂಡಿಸ್ ವಿಷಯದಲ್ಲಿ ಹೀಗೆಲ್ಲ ಆಗಿಲ್ಲವೇ ?
ಸಾವಿರ ವರ್ಷ ಹಳೆಯದಾದರೂ ಇಂದಿಗೂ ಪ್ರಸ್ತುತ ಅನ್ನಿಸುಲ್ವೆ , ನೀವೇ ಹೇಳಿ? - ಕೆಲವು ವಿಷಯ ನಾವು ಒಪ್ಪಲಿಕ್ಕಿಲ , ಆದರೆ ಒಳ್ಳೆಯದನ್ನು ತನೆ ನಾವು ತೆಗೆದುಕೊಳ್ಳಬೇಕಾದುದು?