ಮೆಲುಕು .

ಮೆಲುಕು .

ಕೃಪೆ : ಡಾ|| ಎಸ್ . ಅರ್ . ಶಂಕ್ಪಾಲ್
( ಒಂದು ಅನುಭವ ಲೇಖನ )

ಹಳ್ಳಿಯ ಸೊಗಡು ಆಹ್ಲಾದಕರ . ಅದರಲ್ಲೂ ಅಲ್ಲಿಯೇ ಹುಟ್ಟು ಬೆಳೆದ ನನ್ನಂಥವರಿಗೆ ಹಳ್ಳಿಯಲ್ಲಿ  ಕಳೆದ ದಿನಗಳು ಸವಿನೆನಪುಗಳಾಗಿವೆ . ಹಳ್ಳಿಯಲ್ಲಿ ಕಳೆದ ಪ್ರಿತಿಯೊಂದು ಕ್ಷಣವೂ ಅವಿಸ್ಮರಣೀಯ . ಪ್ರತಿದಿನವು ಈ ಕಾಂಕ್ರೀಟು ಕಾಡಿನಲ್ಲಿ ಕಚೇರಿಯ ದಿನನಿತ್ಯದ ಕೆಲಸದಲ್ಲಿನ ಜಂಜಾಟದಲ್ಲಿ (ಪೇಚಾಟವೆಂದರೆ ಅತಿಶಯೊಕ್ತಿಯಲ್ಲ ...!) ಸಾಕು ಸಾಕಾಗಿ ಮನಸ್ಸಿನ ಹಾಗೂ ಆರೋಗ್ಯದ ದೃಷ್ಟಿಯಿಂದ ಹಳ್ಳಿಗೆ ಹೊಗಬೇಕೆಂಬ ಆಸೆಯಾಯಿತು .

ನನ್ನ ಅಪ್ತ ಸ್ನೇಹಿತನ ಮನೆಗೆ ಹೋಗಬೇಕೆಂದು ತೀರ್ಮಾನವಾಯಿತು .

ಹಳ್ಳಿಗೆ ಹೋದ ಕ್ಷಣ ಕಾತುರದಿಂದ ಕಾಯುತ್ತಿದ್ದ ನನ್ನ ಸ್ನೇಹಿತನನ್ನು ಕಂಡು ಸಂತೋಷವಾಯಿತು . ಬಹಳ ಆತ್ಮೀಯತೆಯಿಂದ ಬರಮಾಡಿಕೊಂಡರು ಅವನ ಮನೆಯವರು . ಉಭಯ ಕುಶಲೋಪರಿ ಆದ ನಂತರ ಊಟಕ್ಕೆ ಆಹ್ವಾನವಾಯಿತು . ಆಗ ನಾನಂದೆ " ರಾಜ ನಾನು ಊಟ ಮಾಡುವುದು ರಾತ್ರಿ ೧೦ರ ನಂತರ " . ( ಮಧ್ಯ ರಾತ್ರಿ ಎಂದರೆ ತಪ್ಪಿಲ್ಲ ) . ಅದಕ್ಕೆ ಅವನಂದ " ಮೊದಲು ಊಟ ಮಾಡು . ಬೇಗ ಊಟ ಮಾಡುವ ಅಭ್ಯಾಸ ಆರೋಗ್ಯಕ್ಕೆ ಒಳ್ಳೆಯದು " . ಕೆಲಸದ ಗುಂಗಿನಲ್ಲಿ ಈ ಮಾತನ್ನು ಮರೆತಿದ್ದೆ ಎಂದೆನಿಸುತ್ತದೆ .

ಸರಿ ಊಟವಾಯಿತು , ಎಲೆ - ಅಡಿಕೆ ಹಾಕಿ ( ಅವರ ಅಭ್ಯಾಸದಂತೆ ) ಊರನ್ನು ಸುತ್ತಲು ಹೊರಟೆವು ...
ಹೀಗೆ ಊರಿನ ಸಮಾಚಾರ ಹೇಳುತ್ತಿದ್ದಾಗ ನನ್ನ ಹಿಂದಿನ ಸವಿನೆನಪುಗಳು ಕಣ್ಣ ಮುಂದೆ  ವರ್ಣರಂಜಿತ ಚಿತ್ರಗಳಾಗಿ ಹಾಯ್ದು ಹೋಯಿತು ...

ಊರ ದೇವಸ್ಥಾನದ ಮುಂದಿರುವ ಮೈದಾನದಲ್ಲಿ ಅತ್ಯಾಕರ್ಷಕ ನಾಟಕಗಳು , ಕಂಸಾಳೆ ಪದಗಳು , ಕೋಲು ಆಟ ಹೀಗೆ ಹತ್ತು ಹಲವು ಮನರಂಜನೆ ಕಾರ್ಯಕ್ರಮಗಳು ನಡೆಯುತ್ತಿದ್ದವು . ಆ ಕಾರ್ಯಕ್ರಮಗಳಲ್ಲಿನ ವೈಭವ ಕಣ್ಣಿಗೆ ಕಟ್ಟುವಂತೆ ಜ್ನಾಪಕಕ್ಕೆ ಬಂದಿತ್ತು . ಊರಿನ ಎಲ್ಲಾ ಜನರು ಒಂದು ಕಡೆ ಸೇರಿ ನೋಡಿ ಆನಂದಿಸುತ್ತಿದ್ದರು .
ಹಬ್ಬ ಹರಿದಿನಗಳಾಗಲಿ ಜಾತ್ರೆ ಸಂದರ್ಭಗಳಾಗಲಿ ಊರಿಗೆ ಊರೇ ಸೇರಿ ಆಚರಿಸುತ್ತಿತ್ತು . ಮೇಲು - ಕೀಳು ಎಂಬ ಅರಿವಿಲ್ಲದೆ ನಾವು ಹುಡುಗರು ತರ್ಲೆ - ಕಪಿ ಚೇಷ್ಟೆ ಮಾಡುತ್ತ ಆಚರಣೆಯ ಭಾಗವಾಗುತ್ತಿದ್ದೆವು . ಆಗಿನ ಹಳ್ಳಿ ಜನರ ಒಗ್ಗಟ್ಟು - ಸಹಬಾಳ್ವೆ ಅವರ್ಣನೀಯ , ಅನ್ಯರಿಗೆ ಮಾದರಿ .

ಇನ್ನು  ಹಳ್ಳಿಯ ವಿಚಾರ ಬಂದಾಗ ಅಲ್ಲಿನ ಪರಿಸರದ ಸೊಬಗು ಸೊಗಡುಗಳ ಬಗ್ಗೆ ಮಾತನಾಡದೆ ಇರಲು ಸಾಧ್ಯವಿಲ್ಲ . ಹಚ್ಚು ಹಸಿರಿನ ವಾತವರಣ , ಮುಂಜಾನೆಯ ತಂಪು , ಹಕ್ಕಿಗಳ ಇಂಪು , ಆಗಸದಲ್ಲಿನ ಸೂರ್ಯನ ಕೆಂಪು ... ಕವಿಯೇ ಆಗಿಬಿಡುತ್ತೇವೆ ಹೇಳುತ್ತ ಹೋದರೆ . ಬೆಳೆದ ಹಣ್ಣು , ಆಕ್ಚಿಮರ , ಗೇರಹಣ್ಣು , ಮಾವಿನ್ ತೋಪು , ಹತ್ತಿ ಹಣ್ಣು , ನೇರಳೆ ಹಣ್ಣು ಇನ್ನೂ ಅನೇಕ ಮರಗಳ ಹಣ್ಣು ತಿನ್ನುತಿದ್ದೆವು . ಇಂತಹ ಮರ ನಮ್ಮೂರಲ್ಲಿ ಇಲ್ಲ ಎಂದು ಹೇಳಲಾಗುತ್ತಿರಲ್ಲಿಲ್ಲ . ಈ ಎಲ್ಲಾ ಮರದ ಹಣ್ಣುಗಳನ್ನು ತಿಂದು ಗಂಟಲು ಹಾಳುಮಾಡಿಕೊಂಡು , ಮನೆಯಲ್ಲಿ ಬಯ್ಸಿಕೊಂಡ ವಿಷಯ ಜ್ನಾಪಕಕ್ಕೆ ಬಂದು ನಗುವನ್ನು ತಂದಿತ್ತು .

ನಂತರ ನಾವು ಬಿದ್ದು ಈಜುತ್ತಿದ ಕೊಳ , ಕಟ್ಟೆ - ಕೆರೆ ನೋಡಿ ಮತ್ತೊಮ್ಮೆ " ಬೀಳುವ " ಹಂಬಲವಾಯಿತು . ಈಜು ಬಹಳ ಮೋಜು ನೀಡುತ್ತಿತ್ತು . ( ಪಟ್ಟಣದಲ್ಲಿ " swimming pool " ಎಂಬ ನಿಂತ ನೀರಿನಲ್ಲಿ ಈಜಲು ಹಣ ನೀಡಿ ಹೋಗಬೇಕು ) . ಹಾಗೆಯೇ ಮುಂದೆ ಸಾಗಿದಾಗ ಹಚ್ಚು ಹಸುರಾದ ಹೊಲಗಳನ್ನು ನೋಡಿ ಆಗಿನ ವ್ಯವಸಾಯದ ಬಗೆ - ಎತ್ತು ಬಳಸಿ ನೆಲ ಊಳುವ ರೀತಿ ... ಡರ್ರ್ ಡರ್ರ್ ಎನ್ನುವ ರೈತರು ನೋಡಲು ಎರಡು ಕಣ್ಣು ಸಾಲದು ... ಈಗ ಧಗ ಧಗ ಟ್ರಾಕ್ಟರ್ ಗಳ ದಾಳಿ ಎಂಬುದು ವಿಪರ್ಯಾಸ ! ಊರಿನಲ್ಲಿ ಅವತ್ತು ಬೆಳದಿಂಗಳು . ಆಕಾಶ ನೋಡಿದಾಗ ಎಲ್ಲೆಡೆ ನಗುತ್ತಿದ್ದ ಮಿನುಗುತ್ತಿದ  ನಕ್ಷತ್ರಗಳು . ಅವನ್ನು ನೋಡಿಕೊಂಡೇ ಸಮಾಧಾನದಿಂದ ನಿದ್ದೆ ಹೋದೆವು .

ಬೆಳಿಗ್ಗೆ ಎದ್ದು ಶೌಚಾಲಯಕ್ಕೆ ಹೋಗುವಾಗ ಟಾಯ್ಲೆಟ್ ಗಳಿವೆ ಎಂಬುದು ಸಮಾಧಾನದ ಸಂಗತಿ . ಮೊದಲಿನ ವಿಷಯವೇ ಬೇರೆಯಾಗಿತ್ತು . ಬಯಲಿಗೆ ಹೋಗಿ ಬರಲು ಹರಸಾಹಸ ಮಾಡಬೇಕಿತ್ತು . ನೆನಪಿಸಿಕೊಂಡರೆ ನಗು ಬರುತ್ತಿತ್ತು . ಹೀಗೆ ನೆನಪುಗಳನ್ನು ಮೆಲುಕು ಹಾಕುತ್ತ ಮುಂದುವರೆದಿತ್ತು ನನ್ನ ಹಳ್ಳಿ ಪ್ರವಾಸ .

ಎರಡು ದಿನ ಅಲ್ಲಿದ್ದ ಪರಿಣಾಮ ನನ್ನ ಮನಸ್ಸು ಹಗುರ ಎನಿಸಿತ್ತು . ಹಳ್ಳಿ ಬಹಳಷ್ಟು  ಬದಲಾಗಿದ್ದರೂ ಅಲ್ಲಿನ ಪರಿಶುದ್ಧ ಗಾಳಿ , ತಂಪು ವಾತಾವರಣ , ಶುದ್ಧ ಆಹಾರ ನನಗೆ " ನೆಮ್ಮದಿ " ( ಪಟ್ಟಣದಲ್ಲಿ spa , massage parlour , gym  ಗಳಲ್ಲಿ ಮಾರಲಾಗುವ ವಸ್ತು ...! )  ನೀಡಿದ್ದವು . " ಯಂತ್ರ " ದ ತರಹ ದುಡಿಯುವ ಪಟ್ಟಣದವರಿಗೆ ಪ್ರತಿ ವರ್ಷ " ಹಳ್ಳಿ " ಪ್ರವಾಸ ಅತ್ಯಾವಷ್ಯಕ ಎಂದೆನಿಸಿತ್ತು !

Rating
No votes yet