ಮೆಹಂದಿ ಸೂಕ್ ಜಾತೀ ಹೈ ರಂಗ್ ದೇನೇ ಕೆ ಬಾದ್....

ಮೆಹಂದಿ ಸೂಕ್ ಜಾತೀ ಹೈ ರಂಗ್ ದೇನೇ ಕೆ ಬಾದ್....

ಮೆಹಂದಿ ಸೂಕ್ ಜಾತೀ ಹೈ ರಂಗ್ ದೇನೇ ಕೆ ಬಾದ್|
ಮೊಹಬ್ಬತ್ ಯಾದ್ ಆತೀ ಹೈ ಪ್ಯಾರ್ ಬಿಚಡ್ ಜಾನೇ ಕೆ ಬಾದ್||

ಮದರಂಗಿ/ಗೋರಂಟಿ/ಗೋರಿಂಟಾಕು/ಹೆನ್ನ/ಮೆಹಂದಿ/ಮರುದ್ವಾನ ಎಂಬ ನಾನಾ ಹೆಸರನ್ನು ಹೊಂದಿರುವ ಈ ಗಿಡದ ಸಸ್ಯಶಾತ್ರೀಯ ನಾಮಧೇಯ ಲಾಸೋನಿಯ ಇನೆರ್ಮಿಸ್.
೬-೨೦ ಅಡಿ ಎತ್ತರ ಬೆಳೆಯುವ ಈ ದೊಡ್ಡ ಪೊದೆ ಅಥವ ಪುಟ್ಟ ಮರವು ಭಾರತ ಉಪಖಂಡದಲ್ಲಿ ಹಾಗೂ ನೆರೆಯ ದೇಶಗಳಲ್ಲಿ ಬೆಳೆಯುತ್ತದೆ.
ಈಜಿಪ್ಟಿನ ಈಬರ್ಸ್ ಪ್ಯಾಪಿರಸ್ ಮದರಂಗಿಯ ಬಗ್ಗೆ ನಮಗೆ ದೊರೆಯುವ ಮೊದಲ ದಾಖಲೆ. ಭಾರತದಲ್ಲಿ ಅನಾದಿ ಕಾಲದಿಂದಲೂ ಬಳಕೆಯಲ್ಲಿದೆ.

ಮದರಂಗಿಯನ್ನು ಮುಖ್ಯವಾಗಿ ಅದರ ಬಣ್ಣ ಬಿಡುವ ಗುಣಕ್ಕಾಗಿ ಉಪಯೋಗಿಸುತ್ತೇವೆ. ಮದರಂಗಿಯ ಎಲೆಯಲ್ಲಿ ಲಾಸೋನ್ ಎಂಬ ರಾಸಾಯನಿಕವು ಇರುತ್ತದೆ.
ನಮ್ಮ ಚರ್ಮವು ಹೊರ ಚರ್ಮ (ಎಪಿಡರ್ಮಿಸ್) ಹಾಗೂ ಒಳಚರ್ಮವನ್ನು (ಡರ್ಮಿಸ್) ಒಳಗೊಂಡಿದೆ. ಇದು ಹೊರ ಚರ್ಮದ ಸ್ಟ್ರಾಟಂ ಕಾರ್ನಿಯಂ
ಎಂಬ ಮೃತ ಜೀವಕೋಶಗಳಿಂದ ಆದ ಚರ್ಮ ಪದರದ ಜೀವಕೋಶಗಳಿಗೆ ಬಣ್ಣವನ್ನು ಹಚ್ಚುತ್ತದೆ. ಮದರಂಗಿಯನ್ನು ಹಚ್ಚಿದ ಕೆಲವು ದಿನಗಳ ನಂತರ
ಬಣ್ಣದ ತೀವ್ರತೆಯು ಕಡಿಮೆಯಾಗುತ್ತಾ ಹೋಗುತ್ತದೆ. ವಾಸ್ತವದಲ್ಲಿ ಇದೊಂದು ಭ್ರಮೆ. ಬಣ್ಣ ಕಡಿಮೆಯಾಗುವುದಿಲ್ಲ. ಬಣ್ಣ ಹಚ್ಚಿರುವ ಮೃತ ಜೀವಕೋಶಗಳು
ನಿಧಾನವಾಗಿ ಉದುರುತ್ತಿರುತ್ತವೆ. :) ಕೆಳಗಿನಿಂದ ಹೊಸ ಹೊಸ ಜೀವ ಕೋಶಗಳು ಹುಟ್ಟುವಾಗ, ಮೇಲಿರುವ ಮೃತ ಕೋಶಗಳು ಉದುರಲೇ ಬೇಕು.
ಇದು ಪ್ರಕೃತಿ ನಿಯಮ. ಹಾಗಾಗಿ ಮದರಂಗಿಯ ಬಣ್ಣ ಪೇಲವವಾಗುತ್ತಿರುವ ಕಾಣುತ್ತದೆ.

ಮದರಂಗಿಯನ್ನು ಹಚ್ಚಲು ಈ ಕೆಲವು ನಿಯಮಗಳನ್ನು ಪಾಲಿಸುವುದು ಒಳ್ಳೆಯದು.

- ಮದರಂಗಿಯನ್ನು ಹಚ್ಚಲು ಹಸಿ ಎಲೆಗಳನ್ನು ಬಳಸಿ.
-ಒಣ ಎಲೆಗಳನ್ನು ಬಳಸಬಹುದಾದರೂ, ಅದರಲ್ಲಿ ಕಲಬೆರಕೆಯಿರುತ್ತದೆ. (ಹಸಿ ಎಲೆ ಕಿತ್ತು ಮನೆಯಲ್ಲಿ ಒಣಗಿಸಿದ್ದು ಪರವಾಗಿಲ್ಲ)
-ಎರಡು ರೀತಿಯ ಕಲಬೆರಕೆ. ಮೊದಲನೆಯದು ಬೇರೆ ಗಿಡಗಳ ಎಲೆಗಳನ್ನು ಸೇರಿಸಿರುವುದು. ಇಂತಹ ಕಲಬೆರೆಕೆಯಲ್ಲಿ ಉತ್ತಮ ಬಣ್ಣ ಬರುವುದಿಲ್ಲ.
ಎರಡನೆಯ ಕಲಬೆರೆಕೆ, ಕೆಲವು ರಾಸಾಯಾನಿಕಗಳನ್ನು (ಉದಾ: ಪೈರೋಗಲಾಲ್, ಸಿಲ್ವರ್ ನೈಟ್ರೇಟ್ ಇತ್ಯಾದಿ) ಬೆರೆಸಿರುವುದು.
ಇವು ದಟ್ಟ ಬಣ್ಣವನ್ನು ಕೊಡುತ್ತವೆಯಾದರೂ ಚರ್ಮದಲ್ಲಿ ಅಲರ್ಜಿಯನ್ನು ಉಂಟುಮಾಡುತ್ತವೆ.
-ಇಂದು ಮಾರುಕಟ್ಟೆಯಲ್ಲಿ ಸಿದ್ಧಪಡಿಸಿದ ಕೋನ್ ಸಿಗುತ್ತವೆ. ಇವುಗಳ ಸುರಕ್ಷತೆಯ ಬಗ್ಗೆ ಖಾತರಿಯನ್ನು ನೀಡುವುದು ಕಷ್ಟ.

-ಬಲಿತ ಎಲೆಗಳನ್ನು ತೆಗೆದುಕೊಳ್ಳಿ.
-ಕಾಂಡ ಸಮೇತ (ಹೆಚ್ಚು ಲಾಸೋನ್ ಇರುವ ಭಾಗ) ಜಜ್ಜಿ.
-ಸ್ವಲ್ಪ ಆಮ್ಲೀಯ ರಸವನ್ನು ಬೆರೆಸಿ ಚೆನ್ನಾಗಿ ರುಬ್ಬಿ. ನಿಂಬೆ ರಸ ಒಳ್ಳೆಯದು. ಚಹ ಕಷಾಯವನ್ನೂ (ಡಿಕಾಕ್ಷನ್) ಬಳಸುವರು.
-ಮದರಂಗಿ+ನಿಂಬೆರಸವನ್ನು ಟೂತ್ ಪೇಸ್ಟ್ ಹದಕ್ಕೆ ಅರೆಯುವುದು ಒಳ್ಳೆಯದು. (ಇದನ್ನು ಕೈಯಿಂದ ಮುಟ್ಟಲೇಬೇಡಿ! ಬಣ್ಣ ಹತ್ತಿಕೊಂಡೀತು!)
-ಕನಿಷ್ಠ ೬ ಗಂಟೆ ಕಾಲ ಬಿಡಿ. ಎಲೆಗಳಲ್ಲಿರುವ ಲಾಸೋನ್ ಹೊರಗೆ ಹರಿಯಬೇಕು.

-ಬಣ್ಣ ಹಚ್ಚಬೇಕಾದ ಭಾಗವನ್ನು ಶುಭ್ರಗೊಳಿಸಿ. ಆದರೆ ಸೋಪು ಹಚ್ಚಬೇಡಿ. ಮದರಂಗಿ ಚೆನ್ನಾಗಿ ಬಣ್ಣವನ್ನು ಬಿಡುವುದಿಲ್ಲ.
-ದಪ್ಪ ಕಾಗದವನ್ನು ಬಳಸಿ. ನೀವೇ ಒಂದು ಕೋನ್ ಮಾಡಿಕೊಳ್ಳಿ. ಕೋನಿನ ಮೂತಿಯನ್ನು ಚಿವುಟಿ.
-ನಿಮಗೆ ಬೇಕಾದ ಚಿತ್ತಾರವನ್ನು ಮೂಡಿಸಿ. ಒಣಗಲು ಬಿಡಿ.
-ಬಣ್ಣ ದಟ್ಟವಾಗಿ ಮೂಡಬೇಕಾದರೆ, ಆಗಾಗ್ಗೆ ಸಕ್ಕರೆ ನೀರನ್ನು ಇಲ್ಲವೇ ಚಹ ಕಷಾಯವನ್ನು, ಹಚ್ಚಿರುವ ಮದರಂಗಿಯ ಮೇಲೆ ಲೇಪಿಸಿ.
-ಮದರಂಗಿ ಒಣಗಿ ಉದುರಲಿ.

ನಂತರ....
ಸುಂದರ ಚಿತ್ತಾರ ನೋಡುಗರ ಚಿತ್ತವನ್ನು ಸೂರೆಗೊಳ್ಳುವಂತೆ ಮೂಡುತ್ತದೆ.

ಸಾಧ್ಯವಾದಷ್ಟು ಸೋಪು ಹಚ್ಚುವುದನ್ನು ತಪ್ಪಿಸಿ.

ಸಖಿ! ಕಾಡಿ ಬೇಡಿ ನನ್ನಿಂದ
ಮದರಂಗಿಯ ಚಿತ್ತಾರ ಬಿಡಿಸಿಕೊಂಡೆ
ಹಾಡಿ ಕುಣಿದು ನಿನಗಿಂತ
ಪ್ರಿಯ ಗೆಳೆಯರು ಇಲ್ಲವೆಂದು ಹೇಳಿದೆ
ಕಾಲವೆಂಬ ಕಾಲ ಕಳೆದಂತೆ
ಮದರಂಗಿ ಬಣ್ಣ ಕರಗಲಾರಂಬಿಸಿತು
ಮನರಂಗದಿ ನೀನು ಬಿಳಚಿ
ಕಣ್ಮರೆಯಾದದ್ದು ಎಂಥ ವಿಪರ್ಯಾಸ!

-ನಾಸೋ

Rating
No votes yet

Comments