ಮೇರಾ ಭಾರತ್ ಮಹಾನ್!

ಮೇರಾ ಭಾರತ್ ಮಹಾನ್!

ನಮ್ಮ ದೇಶದಲ್ಲಿ ಬಹಳವಾಗಿ ಉಕ್ತವಾಗುವ ಮಾತೆಂದರೆ 'ಮೇರಾ ಭಾರತ್ ಮಹಾನ್'. ನಾನು ಅದಕ್ಕೆ ಇನ್ನೊಂದನ್ನು ಸೇರಿಸಬಯಸುವೆ, ಮೇರಾ ಸೋಪ್ ಹಮಾಮ್. ಏಕೆಂದರೆ ಈ ಎರಡೂ ಚಿರಂಜೀವಿಗಳು (ನನ್ನ ಮಟ್ಟಿಗೆ). ಸ್ವತಂತ್ರ ಬಂದು ೬೦ ವರುಷಗಳಾಗುತ್ತಿದ್ದರೂ ನಮ್ಮ ದೇಶದ ಜನಸಂಖ್ಯೆ ಒಂದೇ ಮೇಲೇರುತ್ತಿರುವುದು. ಇದೊಂದು ದೃಷ್ಟಿಯಿಂದ ನಮ್ಮ ದೇಶ ಎಂದಿಗೂ ಮಹಾನ್. ಹಾಗೆಯೇ ಹಮಾಮ್ ಸೋಪನ್ನು ಉಪಯೋಗಿಸುವವರು ಅದನ್ನೇ ಉಪಯೋಗಿಸುತ್ತಿದ್ದಾರೆ (ನನ್ನಂತಹವರು - ಅಪ್ಪ ಹಾಕಿದ ಹಳೆಯ ಆಲದ ಮರಕ್ಕೇ ಜೋತು ಬೀಳುವಂತಹವರು).

ನಮ್ಮ ಏರಿಯಾದಲ್ಲಿ ನಿನ್ನೆಯ ರಾತ್ರಿ ೧೦.೩೦ಕ್ಕೆ ಮತ್ತೆ ವಿದ್ಯುತ್ ಕಡಿತವಾಯಿತು. ಅದಾಗಿದ್ದು ಕೇವಲ ೧೦ ನಿಮಿಷಗಳವರೆವಿಗೆ ಮಾತ್ರ. ಅಲ್ಲಿಯವರೆವಿಗೆ ನನ್ನ ಕಂಪ್ಯೂಟರ್ ಯೂಪಿಎಸ್ ಸಹಾಯದಿಂದ ಓಡುತ್ತಿತ್ತು. ವಿದ್ಯುತ್ ಮತ್ತೆ ಮರಳಿ ಬರುತ್ತಿದ್ದಂತೆಯೇ ನೆಟ್ (ಅಂತರ್ಜಾಲ) ಕಡಿತವಾಯಿತು. ನೆಟ್ ಸೌಲಭ್ಯವನ್ನು ಕೊಡುವ ಮಹಾಶಯನನ್ನು ದೂರವಾಣಿಯ ಮೂಲಕ ಸಂಪರ್ಕಿಸಿದೆ. ಅವನು ಪ್ರತಿಯಾಗಿ, ಸಾರ್ ನಾನೀಗ ಮನೆಗೆ ಹೋಗಿಯಾಯ್ತು - ಬೆಳಗೆ ೪ ಘಂಟೆಗೆ ಬಂದು ನೋಡುವೆ ಎಂದಿದ್ದ.

ಇಂದು ಬೆಳಗ್ಗೆ ೫ ಘಂಟೆಗೆ ಎದ್ದ ಕೂಡಲೇ ಅಂತರ್ಜಾಲ ತಾಣವನ್ನು ತೆರೆಯಲು ನೋಡಿದ್ರೆ ಅದು ತೆರೆಯುತ್ತಲೇ ಇಲ್ಲ. ನನ್ನ ಕಂಪ್ಯೂಟರಿನಿಂದ ಸರ್ವರ್‌ಗೆ ಸಂಪರ್ಕ ಸಿಗುತ್ತಿಲ್ಲ ಎಂಬ ಉತ್ತರ ಬಂದಿತು. ಇದರ ಬಗ್ಗೆ ತಿಳಿಸಲು ಕೇಬಲ್‍ನೆಟ್‍ನವನಿಗೆ ದೂರವಾಣಿ ಕರೆ ಮಾಡಲು, ಉತ್ತರವೇ ಇಲ್ಲ. ಅವನು ದೂರವಾಣಿ ಕರೆ ಸ್ವೀಕರಿಸದ ಹಾಗೆ ಮಾಡಿದ್ದನು. ಏನೂ ತೋಚದೆಯೇ ಬ್ಯಾಂಕಿಗೆ ಬಂದ ಕೂಡಲೇ ಮತ್ತೊಮ್ಮೆ ಅವನನ್ನು ಸಂಪರ್ಕಿಸಲು, ಸಾಬ್ ರೂಟರ್ ಉಡ್‍ಗಯಾ ಎಂದು ಹೇಳುತ್ತಿದ್ದಾನೆ. ಯಾವಾಗ ಸರಿ ಹೋಗತ್ತಪ್ಪಾ ಎಂದು ಕೇಳಿದರೆ, ಏಕ್ ದೋ ದಿನ್ ಮೇ ಹೋ ಜಾಯೆಗಾ ಸಾಬ್ ಎನ್ನೋದೇ? ೧೦ ನಿಮಿಷ ವಿದ್ಯುತ್ ವ್ಯತ್ಯಯದಿಂದ ಇವನ ರೂಟರ್ ಹಾರಿ ಹೋಗಿ ಅದನ್ನು ಸರಿ ಪಡಿಸಲು ೨ ದಿನ ಬೇಕೆಂದರೆ, ದಿನವೂ ವಿದ್ಯುತ್ ವ್ಯತ್ಯಯವಾಗುವ ನಮ್ಮೂರುಗಳಲ್ಲಿನ ಪರಿಸ್ಥಿತಿ ಇನ್ನು ಹೇಗಿರಬೇಡ. ಅಲ್ಲೇನಾದರೂ ಇವನು ಅಂತರ್ಜಾಲ ಸೇವೆ ಕೊಡಲು ಮುಂದಾದರೆ ನಮ್ಮಂತಹವರಿಗೆ ದೇವರೇ ಗತಿ. ಹೋಗಲಿ ಬೇರೆಯವರಿಂದ ಈ ಸೇವೆಯನ್ನು ತೆಗೆದುಕೊಳ್ಳೋಣವೆಂದರೆ, ಬೇರೆಯವರು ಇಲ್ಲಿ ಬರದಂತೆ ಮಾಡಿದ್ದಾರೆ. ಇನ್ನುಳಿದ ಸರಕಾರೀ ಸ್ವಾಮ್ಯದ ಎಂಟಿಎನ್‍ಎಲ್ ನವರ ಸೇವೆಯ ಬಗ್ಗೆ ಹೇಳುವುದೇ ಬೇಡ. ಇಂದು ಸಂಪರ್ಕ ಕೊಟ್ಟರೆ, ಮೋಡಮ್ ಕೊಡುವುದಿಲ್ಲ. ಮೋಡಮ್ ಕೊಟ್ಟರೆ ಸಂಪರ್ಕದಲ್ಲಿ ವ್ಯತ್ಯಯವಿರುತ್ತದೆ. ಇಂತಹ ಸನ್ನಿವೇಶವನ್ನು ಬೇರೆ ಯಾವ ದೇಶದಲ್ಲಿ ನೋಡೋಕ್ಕೆ ಸಾಧ್ಯ ಹೇಳಿ. ಅದಕ್ಕೇ ಅಲ್ವೇ ಮೇರಾ ದೇಶ್ ಮಹಾನ್ ಎನ್ನುವ ಉಕ್ತಿ ಚಿರಂಜೀವಿಯಾಗಿರುವುದು.

ಇನ್ನೊಂದು ವಿಷಯವನ್ನು ನೋಡಿ. ಇಂದಿನ ದಿನಪತ್ರಿಕೆಯಲ್ಲಿ ಒಂದು ಸುದ್ದಿ ಪ್ರಕಟವಾಗಿದೆ. ಅದರ ತಲೆಬರಹ ಹೀಗಿದೆ. Bar girls to dance for anti-quota students. ಕುಣಿಯುವ ಹೆಣ್ಣುಗಳು, ದಿಕ್ಕುಗೆಟ್ಟ ವಿದ್ಯಾರ್ಥಿಗಳಿಗೆ ಸಹಾಯ ಮಾಡುವರಂತೆ. ಮಾನವೀಯತೆಯನ್ನು ಪ್ರದರ್ಶಿಸುತ್ತಿರುವ ಅಂತಹ ಹೆಣ್ಣುಗಳಿಗೆ ನಮ್ಮ ಸಮಾಜ ಕೊಡುವ ಪಟ್ಟವಾದರೂ ಎಂತಹದು - ಬೆಲೆವೆಣ್ಣು. ಈಗ ಮೆರಿಟ್ ಇರುವ ವಿದ್ಯಾರ್ಥಿಗಳಿಗೆ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಅವಕಾಶ ಕಡಿಮೆ ಆಗುತ್ತಿದೆ. ಇವರಿಬ್ಬರಿಗೂ ಸಮಾನ ಸ್ಥಾನ ಕೊಡಲು ರಾಜಕಾರಣಿಗಳು ಏನೂ ಮಾಡಲಾದೀತೇ? ಯಾವಾಗಲು ವೋಟು ಬ್ಯಾಂಕಿನ ಕಡೆಗೇ ಕಣ್ಣಿಟ್ಟಿರುವ ಈ ದುರಾತ್ಮ ರಾಜಕಾರಣಿಗಳು ಇರುವವರೆವಿಗೂ ನಮ್ಮ ದೇಶ ಉದ್ಧಾರವಾಗುವುದಿಲ್ಲ. ಮೆರಿಟ್ ಇರುವ ವಿದ್ಯಾರ್ಥಿಗಳು ನಮ್ಮ ದೇಶದಲ್ಲಿ ಉನ್ನತ ವ್ಯಾಸಂಗಕ್ಕೆ ಅವಕಾಶ ಸಿಗದಿರುವಾಗ ಸ್ವಾಭಾವಿಕವಾಗಿ ಪರದೇಶಗಳ ಮೊರೆ ಹೋಗುವರು. ಆಗ ಪ್ರತಿಭಾ ಪಲಾಯನದ ಬಗ್ಗೆ ಎಷ್ಟು ಬಾಯಿ ಬಡಿದುಕೊಂಡರೇನು ಪ್ರಯೋಜನ. ಸ್ವತಂತ್ರ ಬಂದು ೬೦ ವರುಷಗಳಾಗುತ್ತ ಬಂದರೂ, ಎಲ್ಲರೂ ಸಮಾನರು ಎಂದು ಹೇಳುತ್ತ ಬಂದರೂ ಮೀಸಲಾತಿಯನ್ನು ಹೆಚ್ಚಿಸಲು ಹವಣಿಸುತ್ತಿರುವ ರಾಜಕಾರಣಿಗಳು ಬೆಲೆವೆಣ್ಣುಗಳಿಂತ ಕಡೆ ಎಂದೆನಿಸುವುದಿಲ್ಲವೇ?

ಒಂದು ಕಡೆ ಮೀಸಲಾತಿ ಮೇಲೆ ಬರುವವರನ್ನು ಕೊಲ್ಲುತ್ತಿದ್ದರೆ, ಇನ್ನೊಂದೆಡೆ ದುಡ್ಡು ಕೊಟ್ಟರೂ ಸೂಕ್ತ ಸೌಲಭ್ಯಗಳು ಸಿಗದಿದ್ದರೆ, ನಾಡನ್ನು ರಕ್ಷಿಸುವವರೇ ನಾಡನ್ನು ಭಕ್ಷಿಸುತ್ತಿದ್ದರೆ, ನಾವಿನ್ನಾರ ಮೊರೆ ಹೋಗಬೇಕು?

ಮೇರಾ ಭಾರತ್ ಮಹಾನ್!

Rating
No votes yet

Comments