ಮೈಲಾರ ಮಲ್ಲಣ್ಣ

ಮೈಲಾರ ಮಲ್ಲಣ್ಣ

ಅಂದಹಾಗೇ ಅದ್ಯಾವಾಗ್ಲೋ ಮೈಲಾರಲಿಂಗನ ಬಗ್ಗೆ ಬರೆದುಕೊಂಡಿದ್ದೆ. ಇತ್ತೀಚೆಗೆ ಬೀದರಿಗೆ ಹೋಗಿದ್ದಾಗ ಗೆಳತಿ ಉಮಾ ಅಲ್ಲೇ ಧನ್ನೂರು ಅನ್ತ ಇದೆ, ನಮ್ಮ ತಾತನ ಊರು, ಹೋಗ್ಬನ್ನಿ ಅಂದಿದ್ರು. ಧನ್ನೂರು, ಹಲಬರ್ಗಾ, ಭಾಲ್ಕಿ ಇತ್ಯಾದಿಗಳನ್ನು ನೋಡಿಬರೋಣವೆಂದು ಹೊರಟವನು ದಾರಿ ಮಧ್ಯೆ ಖಾನಾಪುರ ಎಂಬಲ್ಲಿ "ಮೈಲಾರ ಮಲ್ಲಣ್ಣಾ (ಖಂಡೋಬ) ಗುಡಿ" ಅನ್ತ ಬೋರ್ಡು ಕಂಡು ಫಕ್ಕನೇ ಅಚ್ಚರಿ ಮೂಡಿ ಅಲ್ಲೇ ಗಾಡಿ ತಿರುಗಿಸಿದೆ. ಬೀದರ್‍ ಹುಮನಾಬಾದ್ ರಸ್ತೇಲಿ ಅಯ್ ಟೆನ್ ಓಡಿಸೋ ಮಜಾನೇ ಬೇರೆ, ಈ ಕಿತ್ತು ಕೆರ ಹಿಡಿದಿದ್ದ ಹಳ್ಳಿ ರಸ್ತೇಲಿ ಅದೇ ತರ ಕಿತ್ತು ಕೆರ ಹಿಡಿದಿರೋ ಟಾಟಾ ಇಂಡಿಕಾ ಒಡ್ಸೋ ಮಜಾನೇ ಬೇರೆ. ಅಂದು ಭಾನುವಾರ, ರಸ್ತೆಯ ಎರಡೂ ಬದಿ ಜಾನುವಾರು ಸಂತೆ ನೆರೆದಿತ್ತು. ಮೈಲಾರ ಎಷ್ಟು ದೂರ ಅನ್ತ ಯಾರನ್ನೋ ಕೇಳಿದೆ. ಒಂದಿಬ್ಬರು ಓಡಿಬಂದರು ಬಕ್ರಾ ಬೇಕೇನ್ರೀ ಅನ್ತ. ನಾನು ಅವರಿಗೆ ಬೇಕಾದ ಗಿರಾಕಿ ಅಲ್ಲ ಅನ್ನೋದು ಖಾತ್ರಿಯಾಗಿ ಸುಮ್ಮನೇ ನೋಡುತ್ತಾ ನಿಂತರು. “ಮೈಲಾರಕ್ ನಡದೀನ್ರೀ, ಏಸು ದೂರ ಅದರೀ?” ಅಂದೆ. “ಮೈಲೂರನ್ನೋ ಊರು ಇರಾಂಗಿಲ್ರೀ, ಅಲ್ಲಿ ಬರೀ ಮಲ್ಲಣ್ಣಾಗುಡಿ ಅದರೀ, ನೀವ್ ಹಿಂಗಾ ಹೋಗರೀ, ಕಣ್ಣಿಗ್ ಕಾಣ್ತಾವ್ರೀ" ಅಂದರು. “ಅಲ್ರೀಯಪಾ, ಮೈಲಾರ ಅನ್ನೋ ಊರು ಇಲ್ಲೇನ್ರೀ? ಬೋರ್ಡು ಹಾಕ್ಯಾರಲ್ರೀ" ಅಂದಿದ್ದಕ್ಕೆ "ಅದ ಒಂದು ದೊಡ್ ಕತಿರೀ, ಅವರವ್ವನ ಶಾಪಾರೀ, ಕಾ ಅನ್ನೋ ಕಾಗಿ ಇರಂಗಿಲ್ಲ, ಗೂ ಅನ್ನೋ ಗೂಗಿ ಇರಂಗಿಲ್ಲ, ಅಂದಿದ್ಲಲ್ಲರೀ, ಅಲ್ಲೊಂದು ಕಾಗೀನೂ ಇಲ್ಲ, ಗೂಗೀನೂ ಇಲ್ಲ, ಮನುಷ್ಯಾರ್‍ ಭೀ ಮನಿ ಮಾಡಂಗಿಲ್ಲರೀ" ಅಂತ ಉತ್ತರ ಬಂತು. ಯಾಕೋ ತುಂಬಾ ಕುತೂಹಲ ಮೂಡಿತಾದರೂ ಆ ಕತೆಯನ್ನು ಮುಂದುವರಿಸುವ ಉಮೇದು ಅವರಿಗಿರಲಿಲ್ಲ.

ಇಳಿಜಾರಿನ ರಸ್ತೆಯಲ್ಲಿ ಸ್ವಲ್ಪ ದೂರ ಸಾಗಿ ಸಣ್ಣಗೆ ಹರಿದಿದ್ದ ಹೊಳೆಯ ಮೇಲಿನ ಕಿರುಸೇತುವೆ ದಾಟಿ, ಒಂದು ತಿರುವು ತಿರುಗುತ್ತಿದ್ದಂತೆ ಧುತ್ತೆಂದು ಗೋಚರವಾಯಿತು ಆ ಗುಡಿ. ಗುಡಿಯ ಮುಂದಿನ ಕೊಳದಲ್ಲಿ ಹೆಂಗಸರು ಗಂಡಸರೆನ್ನದೆ ಎಲ್ಲರೂ ಮೈ ತೊಳೆದುಕೊಳ್ಳುತ್ತಿದ್ದರು. ಗುಡಿಯ ಪ್ರಾಂಗಣದ ಒಳಹೊಕ್ಕಂತೆ ಅಲ್ಲೊಂದು ದೊಡ್ಡ ಜನಜಂಗುಳಿ ತುಂಬಿತ್ತು. ನೋಡುವುದಕ್ಕೆ ಧರ್ಮಛತ್ರದಂತೆ ತೋರುತ್ತಿತ್ತು. ತೋರುವುದೇನು ಅದು ಧರ್ಮಶಾಲೇನೇ. ಅಲ್ಲಲ್ಲೇ ಉರುಳಿಕೊಂಡಿದ್ದೋರು, ಸೀರೆ ಪಂಚೆ ಒಣಗಿಹಾಕ್ತಿದ್ದೋರು, ಬೇಳೆ ರುಬ್ಬಿ ಒಬ್ಬಟ್ಟು ಸುಡುತಿದ್ದೋರು, ತಲೆ ಬಾಚುತಿದ್ದೋರು, ಬಳೆ ತೊಡಿಸುತಿದ್ದೋರು, ಇವರೆಲ್ಲರ ಗೌಜು ಗದ್ದಲ, ಅರಿಸಿನದ ನೀರಿನ ಓಕುಳಿ, ಬಿಸಿಲ ಮೇಲಾಟ, ಒಲೆಗಳ ಹಸಿಸೌದೆಯ ಹೊಗೆಯ ಮೇಲಾಟ, ಇವೆಲ್ಲವನ್ನೂ ದಾಟಿ ಮುಂದಿನ ಪ್ರಾಂಗಣಕ್ಕೆ ಹೋದಾಗ ಅಲ್ಲೊಂದು ಬೇರೆಯೇ ಲೋಕ ತೆರೆದುಕೊಂಡಿತ್ತು.
ದೊಡ್ಡ ಅಂಗಳದಲ್ಲಿ ಗಾರೆ ಗಚ್ಚಿನ ಗುಡಿಯೊಂದು ಮೈದಳೆದಿತ್ತು. ಸುಮಾರು ೧೫ ಅಡಿ ಅಗಲ ೩೦ ಅಡಿ ಉದ್ದದ ಕಟ್ಟಡವದು. ಮುಂದಿನ ಅಂಕಣದಲ್ಲಿ ಮಗುವಿಗೆ ಚೌಲ ತೆಗೆಯುವ ಕಾರ್ಯ ನಡೆದಿತ್ತು. ಅವರನ್ನು ದಾಟಿಕೊಂಡು ಗುಡಿಯ ಒಳಹೊಕ್ಕರೆ ಅಲ್ಲಿ ಯಾವುದೇ ನಿರ್ಬಂಧವಿಲ್ಲದೆ ದೇವರ ಮೂರ್ತಿಯ ಮುಂದೆಯೇ ಹಲವರು ನಿಂತಿದ್ದರು. ಅದೊಂದು ಎರಡಡಿ ಎತ್ತರದ ನಿಂತ ನಿಲುವಿನ ಬಣ್ಣ ಹಚ್ಚಿದ ಮಣ್ಣಿನ ಮೂರ್ತಿ. ಅದರ ಎರಡೂ ಬದಿಯಲ್ಲಿ ಹೆಣ್ಣು ಮೂರ್ತಿಗಳು. ಅವುಗಳ ಆಚೆ ಈಚೆ ಕುಳಿತ ಪೂಜಾರಿಗಳೆನಿಸಿಕೊಂಡ ವ್ಯಕ್ತಿಗಳು ಭಕ್ತರು ನೀಡುತ್ತಿದ್ದ ಅಂಗವಸ್ತ್ರವನ್ನು ದೇವರ ಹೆಗಲ ಮೇಲೆ ಹಾಕುತ್ತಿದ್ದರು. ಭಕ್ತರಿಗೆ ಕುಂಕುಮ ನೀಡುತ್ತಿದ್ದರು. ಭಕ್ತರಲ್ಲಿ ಹೆಚ್ಚಿನವರು ಹೆಂಗಸರೇ. ಭಕ್ತಜನರು ಕಡಿಮೆಯಾದ ಮೇಲೆ ನಾನು ಆ ಪೂಜಾರಿಗಳನ್ನು ಕೇಳಿದೆ, ಇದಾವ ದೇವರು ಶಿವನೇ? ಅನ್ತ. ಅಲ್ಲವೆಂದರು. ಮಲ್ಲಣ್ಣಾ ದೇವರು ಅಂದರು. ಪಕ್ಕದಲ್ಲಿರುವವರು ಅವನ ಹೆಂಡತಿಯರೇ ಎಂದೆ. ಅವನು ಶಿವ ಹಾಗೂ ಅವನ ಬದಿಯಲ್ಲಿರುವವರು ಗಿರಿಜೆ ಮತ್ತು ಗಂಗೆ ಎಂಬ ವಾದ ನನ್ನ ಮನದಲ್ಲಿತ್ತು. ಆದರೆ ಅವರು ನೀಡಿದ ಉತ್ತರ ನನ್ನನ್ನು ತಬ್ಬಿಬ್ಬಾಗಿಸಿತು. ಅವರು ಅವನ ತಂಗಿಯರೆಂದರು. ಬಂದವರೆಲ್ಲರೂ ಆ ತಂಗಿಯರಿಗೆ ನಮಿಸದೆ ಕೇವಲ ಮುಖ್ಯಮೂರ್ತಿಗಷ್ಟೇ ನಮಿಸುತ್ತಿದ್ದರು. ಅಲ್ಲಿದ್ದ ಒಂದೇ ಒಂದು ಹಣತೆಗೆ ತಾವು ತಂದಿದ್ದ ಗಟ್ಟಿ ತುಪ್ಪವನ್ನು ಬಳಿಯುತ್ತಿದ್ದರು. ನಿಧಾನಕ್ಕೆ ತುಪ್ಪ ಕರಗಿ ಕೆಳಗಡೆಯೇ ಇದ್ದ ಡಬ್ಬದಲ್ಲಿ ಶೇಖರವಾಗುತ್ತಿತ್ತು.. ಆದರೆ ನನ್ನ ಮನದ ಸಂಶಯ ಕರಗದೆ ಇನ್ನೂ ಗಟ್ಟಿಯಾಗುತ್ತಿತ್ತು.
ಬ್ರಾಹ್ಮಣರಲ್ಲದ ಆ ಪೂಜಾರಿಗಳು ಬಹು ತಾಳ್ಮೆಯಿಂದ ನನ್ನ ಪ್ರಶ್ನೆಗಳಿಗೆ ಉತ್ತರಿಸಿದರು. ಮೈಲಾರ ಹಿಂದೆ ಕುರುಬರ ತಾಣವಾಗಿತ್ತು. ಆ ಊರಿನ ಹೆಣ್ಣುಮಗಳೊಬ್ಬಳು ಹೊಲೆಯನೊಬ್ಬನನ್ನು ಪ್ರೇಮಿಸಿದ್ದಳು. ಅವನದೂ ಅಷ್ಟೆ ಉತ್ಕಟ ಪ್ರೇಮ. ಊರವರಿಗೆ ಆತ ಆ ಹೆಣ್ಣುಮಗಳನ್ನು ತನಗೆ ಮದುವೆ ಮಾಡಿಕೊಡುವಂತೆ ವಿನಂತಿಸಿದ. ಆದರೆ ಅವರು ಒಪ್ಪಲಿಲ್ಲ. ಅವರ ವಿರೋಧವನ್ನು ಲೆಕ್ಕಿಸದೆ ಆತ ಈ ಹೆಣ್ಣುಮಗಳನ್ನು ಹೊತ್ತೊಯ್ಯುವುದಾಗಿ ಹಟ ತೊಟ್ಟ. ಅಂತೆಯೇ ಆ ಪ್ರೇಮಿಗಳಿಬ್ಬರೂ ಒಂದು ದಿನ ಓಡಿಯೂ ಹೋದರು. ಎಲ್ಲಿಂದಲೋ ಕುದುರೆಯ ಮೇಲೆ ಧಾವಿಸಿ ಬಂದ ಆ ಹೆಣ್ಣಿನ ಅಣ್ಣ ಆ ಹೊಲೆಯ ಹುಡುಗನಿಗೆ ಯಮನಾದ. ಸಿಕ್ಕಲ್ಲೇ ಅವನನ್ನು ತುಂಡರಿಸಿ ತಂಗಿಯನ್ನು ಊರಿಗೆ ಮರಳಿ ತಂದ. ಇತ್ತ ಹುಡುಗನ ಕಡೆಯವರು ಬಂದರು. ಊರನ್ನು ಸೂರೆಗೈದರು. ಹುಡುಗನ ತಾಯಿಯ ಗೋಳಂತೂ ಹೇಳತೀರದು. ಭಾವಾವೇಶದಿಂದ ಆಕೆ ಶಪಿಸಿದಳು "ಕಾ ಅನ್ನೋ ಕಾಗಿ ಇರಂಗಿಲ್ಲ, ಗೂ ಅನ್ನಕ್ ಗೂಗಿ ಇರಂಗಿಲ್ಲ, ಊರೆಲ್ಲ ನಾಶವಾಗ್ಲಿ" ಅನ್ತ. ಈಗ ಅಲ್ಲಿ ಊರಿಗೆ ಊರೂ ಇಲ್ಲ, ಒಂದು ಕಾಗೆ ಗೂಗೆನೂ ಇಲ್ಲ.
ಪೂಜಾರಿಗಳು ಒಂದು ಹಿತ್ತಾಳೆಯ ಗೊಂಬೆಯೊಂದನ್ನು ಕೈಲಿ ಹಿಡಿದು ತೋರಿದರು. ಕುಂಕುಮ ಬಳಿದಿದ್ದರೂ ಮಂದ ಬೆಳಕಿನಲ್ಲಿ ಮಿನುಗುತ್ತಿದ್ದ ಅದನ್ನು ಹಾಗೇ ಹತ್ತಿರ ಹಿಡಿದು ನೋಡಿದೆ. ಕುದುರೆಯ ಮೇಲೆ ಕುಳಿತವನೊಬ್ಬ ಖಡ್ಗ ಹಿಡಿದು ನೆಲದ ಮೇಲೆ ನಿಂತವನ ಮೇಲೆ ಪ್ರಯೋಗಿಸುತ್ತಿದ್ದಾನೆ. ಅವನ ಬದಿಯಲ್ಲಿ ಹೆಣ್ಣೊಬ್ಬಳಿದ್ದಾಳೆ.
ಮೌನವಾಗಿ ಹೊರಬಂದೆ. ಗುಡಿಯ ಗೋಡೆಯ ಮೇಲೆ ಅದೇ ದೃಶ್ಯದ ಬಣ್ಣದ ಚಿತ್ತಾರ ಮೂಡಿಸಿದ್ದರು. ಗುಡಿಗೊಂದು ಸುತ್ತು ಬಂದೆ. ಒಂದು ಗೋಡೆಯ ಮೇಲೆ ಕನಕದಾಸರ ಚಿತ್ರವಿತ್ತು. ಇನ್ನೊಂದರ ಮೇಲೆ ಕಾಳಿದಾಸನ ಚಿತ್ರ. ಯಾವುದೋ ಧ್ವನಿವರ್ಧಕದಿಂದ ಮಲ್ಲಣ್ಣ ಬೇರೆಯಲ್ಲ ಮಾರ್ಕಂಡೇಯ ಬೇರೆಯಲ್ಲ ಅನ್ತ ಒಂದು ಹಾಡು ತೇಲಿ ಬರುತ್ತಿತ್ತು. ಹಾಗಿದ್ದರೆ ಮೈಲಾರ ಮಲ್ಲಯ್ಯ ಶಿವನಲ್ಲವೇ ಎಂಬ ಜಿಜ್ಞಾಸೆ ಮಾತ್ರ ಮನದಿಂದ ದೂರಾಗಲಿಲ್ಲ.

Rating
No votes yet

Comments