ಮೈಸೂರಿನ ಓಶೋ ಸನ್ನಿಧಿಯಲ್ಲಿ "ಧ್ಯಾನಸ್ಥ" 3 ದಿನಗಳು

ಮೈಸೂರಿನ ಓಶೋ ಸನ್ನಿಧಿಯಲ್ಲಿ "ಧ್ಯಾನಸ್ಥ" 3 ದಿನಗಳು

ಸೆಪ್ಟಂಬರ್ ತಿಂಗಳಲ್ಲೊಂದು ದಿನ ಎಂದೂ ಇಲ್ಲದವನು ಪುಸ್ತಕ ಮಳಿಗೆಯೊಂದರಲ್ಲಿ ಓಶೋ ವಚನ ಮಾಸಪತ್ರಿಕೆ ನೋಡಿದೆ. ಯಾಕೋ ಬಹಳ ದಿನಗಳ ನಂತರ ಓಶೋವನ್ನು ಓದುವ (ಅದೂ ಕನ್ನಡದಲ್ಲಿ) ಮನಸ್ಸಾಯಿತು. ಮನೆಗೆ ತಂದವನೇ ಕೆಲ ಪುಟಗಳನ್ನು ತಿರುವಿ ಹಾಕಿದೆ. Interesting ಅನ್ನಿಸ್ತು. Of course, ಓಶೋ ಬಗ್ಗೆ ಎಲ್ಲವೂ Interesting ಅಂತ ಅನ್ನಿಸಿಯೇ ಅನ್ನಿಸುತ್ತೆ. ಅಂಥಾ Interesting ವ್ಯಕ್ತಿ ಅವರು. ಆ ಪತ್ರಿಕೆಯ ಏಳನೇ ಪುಟದಲ್ಲಿ ಮೈಸೂರಿನ ಓಶೋ ಸನ್ನಿಧಿಯಲ್ಲಿ ಮೂರು ದಿನಗಳ(ಸೆಪ್ಟಂಬರ್ 25-28) ರೆಸಿಡೆನ್ಶಿಯಲ್ ಓಶೋ ಧ್ಯಾನ ಶಿಬಿರದ ಜಾಹೀರಾತನ್ನು ನೋಡಿದೆ. ಅದನ್ನು ಓದುತ್ತಲೇ ನನ್ನ ಬಹುದಿನದ ಆಸೆಗೆ ರೆಕ್ಕೆಪುಕ್ಕ ಬಂದಂತಾಯಿತು. ಹೇಗಿದ್ದರೂ ಈ ತಿಂಗಳು ಸ್ವಲ್ಪ ಬಿಡುವಾಗಿದ್ದೇನೆ, ಹೋಗಿ ಬಂದೇ ಬಿಡುವಾ ಎಂದುಕೊಂಡವನೇ ಜಾಹೀರಾತಿನಲ್ಲಿದ್ದ ಖುಷಿ ಎನ್ನುವ ಹೆಣ್ಣುಮಗಳ ಸಂಪರ್ಕ ದೂರವಾಣಿಗೆ ಸಂದೇಶ ಕಳುಹಿಸಿದೆ. ಅವರು ಬೆಂಗಳೂರಿನಲ್ಲಿ ನೆಲೆಸಿರುವ ಶಿಬಿರದ ಸ್ವಯಂಸೇವಕಿಯಾದ್ದರಿಂದ ತಕ್ಷಣವೇ ಮೈಸೂರಿನ ಸ್ವಯಂಸೇವಕಿಗೆ ನನ್ನ ಸಂದೇಶ ರವಾನಿಸಿದರು. ಅವರು ಅಷ್ಟೇ ವೇಗದಲ್ಲಿ ನನ್ನನ್ನು ಸಂಪರ್ಕಿಸಿದವರೇ ನನ್ನ ವಿಳಾಸ ಕೇಳಿ ತಾನು ನನ್ನಲ್ಲಿಗೇ ಬಂದು ಬೆಳಗ್ಗೆ ಶಿಬಿರದ ಶುಲ್ಕವನ್ನು ಸಂಗ್ರಹಿಸಿಕೊಳ್ಳುವುದಾಗಿ ತಿಳಿಸಿದರು. ನನ್ನ ಅಕ್ಕನನ್ನು ಹಣಕ್ಕೆ ಕೇಳಿದ್ದೇ ಅವಳೂ 1000 ರೂ.ತೆಗೆದುಕೊಟ್ಟಳು. ಈ ಶಿಬಿರದಲ್ಲಿ ಪಾಲ್ಗೊಳ್ಳಲು ಕಾರಣ ನನ್ನ ತಾಯಿಯಾದರೂ, ಹಣ ನೀಡಿದ್ದು ನನ್ನ ಅಕ್ಕ. ಒಟ್ಟಿನಲ್ಲಿ ಎಲ್ಲಾ ನನ್ನ ಯೋಗವಷ್ಟೆ. ಯಾವುದಾದರೂ ಕೆಲಸ ಆಗಿಯೇ ತೀರಬೇಕಿದ್ದಲ್ಲಿ ಹೀಗೆ ಎಲ್ಲವೂ ಒದಗಿಬರುತ್ತದೆ ಎನ್ನುವುದಕ್ಕೆ ಇದು ಸಾಕ್ಷಿಯಷ್ಟೆ. ಬೆಳಗ್ಗೆ ನನಗೆ ಕರೆ ಮಾಡಿದವರೇ ರಾಮಕೃಷ್ಣನಗರದ ಪ್ರಸಿದ್ಧ ವೃತ್ತ ಆಂದೋಲನ ಸರ್ಕಲ್‌ಗೆ ನನ್ನನ್ನು ಬರಹೇಳಿದರು. ಅವರೇ ಮನೀಷಾ. ಅವರ ಧ್ವನಿ ಕೇಳಿ ಹೆಂಗಸಿರಬೇಕೆಂದು ಭಾವಿಸಿದರೆ ಅವರಿನ್ನೂ ಹುಡುಗಿ. ಅರೇ, ಏನಾಶ್ಚರ್ಯ! ಹುಡುಗಿಯರಿಗೆ ಇಂಥದ್ದರಲ್ಲಿ ಆಸಕ್ತಿಯೇ ಎಂದು ಒಂದು ರೀತಿಯ ಶಾಕ್ ಆಯಿತು ನನಗೆ. ಅಂತೂ ಇಂತೂ ಶಿಬಿರಕ್ಕೆ ಸೇರಿದ್ದಾಯಿತು.

ಏನು ಮೈಸೂರಿನಲ್ಲಿ ಓಶೋ ಸನ್ನಿಧಿಯೇ!
---------------------------------

ಹೌದು. ಮೈಸೂರಿನಲ್ಲಿಯೇ ಇದೆ. ಈ ವಿಚಾರ ಮೈಸೂರಿಗರಿಗೇ, ಅಷ್ಟೇ ಯಾಕೆ ಓಶೋ ಬಗ್ಗೆ ತಿಳಿದವರಿಗೇ, ಅವರ ಅಭಿಮಾನಿಗಳಲ್ಲಿ ಎಷ್ಟು ಜನರಿಗೆ ಗೊತ್ತಿದೆಯೋ ಇಲ್ಲವೋ! ಆದರೆ, ಕಳೆದ ನಾಲ್ಕು ವರ್ಷಗಳಿಂದ, ಅಂದರೆ 2004ರ ಜನವರಿಯಿಂದ ಅವಿರತವಾಗಿ ನಡೆಯುತ್ತಾ ಬಂದಿದೆ. ಅದೂ ಯಾರೊಬ್ಬರ ನಿರೀಕ್ಷೆಗೂ ನಿಲುಕದ ಮಟ್ಟಿಗೆ.

ಇನ್ನು ಮೈಸೂರಿನಲ್ಲಿ ಓಶೋ ಧ್ಯಾನ ಶಿಬಿರ ನಡೆಯುವ ಬಗ್ಗೆ ನನಗೆ ಬಹಳ ಹಿಂದೆಯೇ ತಿಳಿದಿತ್ತಾದರೂ, ಈ ಪ್ರಮಾಣದಲ್ಲಿ ಓಶೋ ಆರಾಧಕರು, ಅಭಿಮಾನಿಗಳು ಮೈಸೂರಿನಂತಹ ಊರಿನಲ್ಲಿ ಸೇರುವರೆಂಬ ಕಲ್ಪನೆಯೂ ನನಗಿರಲಿಲ್ಲ. ಮೈಸೂರು ಜಿಲ್ಲೆಯಲ್ಲೇ ಹುಟ್ಟಿ ಬೆಳೆದವನಾದರೂ, ಓಶೋ ಅಭಿಮಾನಿಯಾದರೂ, ನನಗೇ ಇಷ್ಟು ಕಾಲ ಓಶೋ ಸನ್ನಿಧಿಗೆ ಭೇಟಿ ನೀಡಲಾಗಿರಲಿಲ್ಲ. ಮುಕುಂದೂರು ಸ್ವಾಮಿಗಳು ಹೇಳುವ ಹಾಗೆ "ಎಲ್ಲದಕ್ಕೂ ಯೋಗ ಬೇಕು"(ಯೇಗ್ದಾಗೆಲ್ಲಾ ಐತೆ) ಅನ್ನೋದು ತಕ್ಕ ಮಟ್ಟಿಗೆ ಸರಿ. ಇಲ್ಲದಿದ್ದಲ್ಲಿ ಎಂದೂ ಇಲ್ಲದವನು ಇದ್ದಕ್ಕಿದ್ದಂತೆ ಓಶೋ ವಚನ ಕೊಳ್ಳುವುದೆಂದರೇನು, ಅದರಲ್ಲಿನ 3 ದಿನಗಳ ರೆಸಿಡೆನ್ಶಿಯಲ್ ಧ್ಯಾನ ಶಿಬಿರಕ್ಕೆ 1000 ರೂ.ಕೊಟ್ಟು ಸೇರುವುದು ಎಂದರೇನು! ಒಮ್ಮೆ ಹೆಸರು ಕೊಟ್ಟ ಮೇಲೆ ಅನಿಸಿದ್ದೂ ಉಂಟು, ಛೇ! ತಪ್ಪು ಮಾಡಿಬಿಟ್ಟೆನೇನೋ. 1000ರೂ. ದುಬಾರಿಯಾಯಿತೇನೋ. ಅದೇ ಇದ್ದಿದ್ದರೆ ಯಾತಕ್ಕಾದರೂ ಬರುತ್ತಿತ್ತು ಎಂದೆನಿಸಿದ್ದೂ ಉಂಟು. ಆದರೆ, ಓಶೋ ಬಗ್ಗೆ ಅಷ್ಟೇನೂ ಒಳ್ಳೆಯ ಅಭಿಪ್ರಾಯ ಹೊಂದಿರದ ನನ್ನ ತಾಯಿ ಓಶೋ ಬಗ್ಗೆ ನಾನು ಹೇಳಿದ್ದನ್ನು ಕೇಳಿ ನನ್ನನ್ನು ಪ್ರೋತ್ಸಾಹಿಸಿ ಕಳುಹಿಸಿಕೊಟ್ಟರು.

ಓಶೋ ಪರಿಚಯವಾದದ್ದು ಹೇಗೆಂದರೆ...
---------------------------------

ನನಗೆ ಓಶೋ ಪರಿಚಯವಾದದ್ದು ನನ್ನ ಆತ್ಮೀಯ ಗೆಳೆಯನೊಬ್ಬನ ಮೂಲಕ. ಸುಮಾರು 6 ವರ್ಷದ ಕೆಳಗೆ ಅನಿಸುತ್ತದೆ. ಅವನು ನನಗೆ ನೀಡಿದ ಅವರ ಪುಸ್ತಕ The long and the short and the all. ಆ ಪುಸ್ತಕ ಓಶೋ ಬಗ್ಗೆ ನನಗೆ ಕುತೂಹಲ ಹಾಗೂ ಆಸಕ್ತಿ ಮೂಡಿಸಿತು. ಅಲ್ಲಿಂದಾಚೆಗೆ ಓಶೋ ಬಗ್ಗೆ ಚೂರುಪಾರು ಓದಿದ್ದು ಬಿಟ್ಟರೆ ಇಡಿಯಾಗಿ ಒಂದು ಪುಸ್ತಕವನ್ನು ಓದಲು ಇಲ್ಲಿಯವರೆಗೆ ಸಾಧ್ಯವಾಗಿಲ್ಲ. ಅವರ The book of woman ಪುಸ್ತಕವನ್ನು ನಾನು ಚೆನ್ನೈನಲ್ಲಿದ್ದಾಗ ಕೊಂಡುಕೊಂಡು ಕೆಲವೊಂದು ಅಧ್ಯಾಯಗಳನ್ನು ಓದಿ ಇಷ್ಟಪಟ್ಟಿದ್ದಷ್ಟೆ. ಆದರೆ, ಆ ಪುಸ್ತಕವನ್ನೂ ಇಲ್ಲಿಯವರೆಗೆ ಪೂರ್ಣಗೊಳಿಸಲಾಗಿಲ್ಲ. ಹೆಣ್ಣಿನ ಬಗ್ಗೆ ನಾನು ಅಲ್ಲಿಯವರೆಗೆ ಕಂಡರಿಯದ ಒಳನೋಟಗಳನ್ನು ನೀಡಿದಂತಹ ಮೊತ್ತ ಮೊದಲ ಪುಸ್ತಕ ಅದು. It is too good. ಆ ಕುರಿತು ಬಹಳ ದಿನಗಳಿಂದ ಬರೆಯಬೇಕೆಂದಿದ್ದೇನೆ. ಎಂದು ಸಾಧ್ಯವಾಗುವುದೋ ನೋಡಬೇಕು.

ನನ್ನ ಮನೆಯಿಂದ ಉತ್ತನಹಳ್ಳಿಯೆಡೆ...
-------------------------------
ಅಂದು ಸೆಪ್ಟಂಬರ್ 25, ಗುರುವಾರ. ಮೈಸೂರಿನ ರಾಮಕೃಷ್ಣನಗರದಿಂದ ಬಸ್ಸಿನಲ್ಲಿ ನಗರ ಬಸ್ ನಿಲ್ದಾಣಕ್ಕೆ ಬಂದವನೇ 1 ರಿಂದ 2 ಗಂಟೆಯವರೆಗೆ ಉತ್ತನಹಳ್ಳಿಯ 203ನೇ ಸಂಖ್ಯೆಯ ಬಸ್ಸಿಗಾಗಿ ಕಾದು ಕಾದು ಸುಸ್ತಾಗಿ ಹೋಗಿದ್ದೆ. ಅಂತೂ ಇಂತೂ 203 ಬಂತು. ಅದಾಗಲೇ ಬಸ್ಸು ಕಿಕ್ಕಿರಿದು ತುಂಬಿದ್ದರಿಂದ ಎನ್ನ ಕಾಲೇ ಎನ್ನ ದೇಹದ ಆಧಾರವಾಯಿತು. ಅಲ್ಲಿಂದ ಹೊರಟ ಬಸ್ಸು ಊಟಿ ರಸ್ತೆಯಲ್ಲಿ ಚಲಿಸಿ ಆನಂತರ ಚಾಮುಂಡಿಬೆಟ್ಟದ ಬಳಿ ಉತ್ತನ ಹಳ್ಳಿಯೆಡೆ ತಿರುಗಿತು. ಮೈಸೂರಿಗೆ ಸಾಕಷ್ಟು ಹತ್ತಿರದಲ್ಲಿಯೇ ಇರುವ ಉತ್ತನಹಳ್ಳಿ, ನಾಡ ದೇವಿ ಚಾಮುಂಡಿಯ ಕ್ಷೇತ್ರವಾದ ಚಾಮುಂಡಿ ಬೆಟ್ಟದಷ್ಟು ಜನಪ್ರಿಯವಲ್ಲದಿದ್ದರೂ, ಬೆಟ್ಟದ ತಪ್ಪಲಲ್ಲಿರುವುದರಿಂದಾಗಿ ಹಾಗೂ ತನ್ನದೇ ಆದ ಐತಿಹಾಸಿಕ, ಪೌರಾಣಿಕ ಹಿನ್ನೆಲೆಯಿಂದಾಗಿ ಸಾಕಷ್ಟು ಪ್ರಸಿದ್ಧಿ ಹೊಂದಿರುವ ಸ್ಥಳ. ಬಸ್ಸಿನ ಕಂಡಕ್ಟರಿಗೆ ಓಶೋ ಸನ್ನಿಧಿಯ ಪರಿಚಯವಿಲ್ಲದ್ದರಿಂದ ನನಗೆ ಸ್ವಲ್ಪ ದುಗುಡ ಸುರುವಾಯಿತು. ಆದರೆ, ನನ್ನ ಪುಣ್ಯಕ್ಕೆ ಉತ್ತನಹಳ್ಳಿಯಲ್ಲಿ ಇಳಿಯುವ ಮುನ್ನವೇ ನಾನು ಏರಿದ್ದ ಬಸ್ಸಿನಲ್ಲಿ ನನ್ನ ಮುಂದೆಯೇ ಕುಳಿತಿದ್ದ ವ್ಯಕ್ತಿ ಓಶೋ ಸನ್ನಿಧಿಯಲ್ಲಿ ಅಡುಗೆ ಕೆಲಸ ಮಾಡುವವರಾದ ಶೈಲೇಂದ್ರ ಕುಮಾರ್. ನಾನು ಶಶಿಕುಮಾರ್. ಇಬ್ಬರೂ ಕುಮಾರ್‌ಗಳು ಸೇರಿ ಹೊರಟೆವು ಓಶೋ ಸನ್ನಿಧಿಗೆ.

ಉತ್ತನಹಳ್ಳಿಯಿಂದ ಓಶೋ ಸನ್ನಿಧಿಯತ್ತ...
-----------------------------------

ಮಟಮಟ ಮಧ್ಯಾಹ್ನದ ಬಿಸಿಲು, ಜತೆಗೆ ಹಸಿವು. ಎರಡೂ ಇದ್ದರೂ ಜತೆಗೆ ಸಾಥಿ ಇದ್ದುದರಿಂದ ಯಾವುದರ ಪರಿವೆಯೂ ಆಗಲಿಲ್ಲ. ರೂಢಿಯಂತೆ ನಮ್ಮ ಉಭಯಕುಶಲೋಪರಿಯೂ ಆಯಿತು. ಶಿಬಿರದಲ್ಲಿ ಎಷ್ಟು ಮಂದಿ ಪಾಲ್ಗೊಳ್ಳುವರು ಎಂದು ನಾನು ಕೇಳಿದ ಪ್ರಶ್ನೆಗೆ ಸುಮಾರು 50-60 ಮಂದಿ ಎಂದರು ಕುಮಾರ್. ಅಲ್ಲದೆ, ಅವರಲ್ಲಿ ಹೆಚ್ಚಿನವರು ಉತ್ತರ ಕರ್ನಾಟಕದವರು ಹಾಗೂ ಮೈಸೂರೇತರರು ಎಂದಾಗ ನನಗೆ ಅಚ್ಚರಿಯೋ ಅಚ್ಚರಿ. ಪರವಾಗಿಲ್ಲ, ಇಷ್ಟೊಂದು ಮಂದಿಗೆ ಓಶೋ ಪರಿಚಯವಿದೆಯೇ ಎಂದುಕೊಂಡು ಸಂತಸಚಿತ್ತನಾಗಿ ಹೆಜ್ಜೆ ಹಾಕುತ್ತಿದೆ. ಇನ್ನೇನು ಓಶೋ ಸನ್ನಿಧಿಯ ಸಮೀಪ ಬಂದುಬಿಟ್ಟೆವು ಎನ್ನುವಷ್ಟರಲ್ಲಿ ಮರವೊಂದರ ಮೇಲೆ Turning point of your life ಎಂದು ಬರೆಯಲಾಗಿದ್ದನ್ನು ಕಂಡೆ. ಈ ಶಿಬಿರ ನನ್ನ Lifeನ Turning Point ಆದರಷ್ಟೇ ಸಾಕು ಎಂದು ಮನದಲ್ಲೇ ಪ್ರಾರ್ಥಿಸುತ್ತ ಕುಮಾರರೊಂದಿಗೆ ಮುನ್ನಡೆದೆ.

ಮೈಸೂರಿನಿಂದ ಸುಮಾರು 10 ಕಿ.ಮೀ.ದೂರದಲ್ಲಿರುವ ಸುಂದರ ಹಸಿರು ತಾಣ, ಬಾಳೆ, ತೆಂಗು ತೋಟದ ನಡುವೆ ಧ್ಯಾನಕ್ಕೆಂದೇ ಹೇಳಿ ಮಾಡಿಸಿದಂತಹ ಏಕಾಂತ ಸ್ಥಳ ಓಶೋ ಸನ್ನಿಧಿ. ಬಸ್ಸು ಪಯಣಿಗರು ನಿಜಕ್ಕೂ ಧನ್ಯರು. ಯಾಕೆಂದರೆ, ಉತ್ತನಹಳ್ಳಿಯಿಂದ ಕೇವಲ 1.5 ಕಿ.ಮೀ.ದೂರದ ಕಾಲು ನಡಿಗೆಯಲ್ಲಿ ಹೊರಟರೆ ಹೊಲ ಗದ್ದೆಗಳ ಹಸಿರು ಕಣ್ಮನ ತಣಿಸುತ್ತದೆ. ಹಾದಿಯ ಇಕ್ಕೆಲಗಳಲ್ಲಿಯೂ ಕಾಲುವೆಯ ಜುಳು ಜುಳು ಹರಿವ ನೀರಿನ ನಿನಾದ ವಾಹನಗಳ ಕಿವಿಗಡಚ್ಚಿಕ್ಕುವ ಸದ್ದಿನಿಂದ ನೊಂದಿರುವ ಕಿವಿಗಳಿಗೆ ಸಂಗೀತ ಸುಧೆಯಂತೆ ಕೇಳಿಸುತ್ತದೆ. ಹಳ್ಳಿಯಿಂದ ಒಂದು ಮೈಲಿ ಸವೆಸಿದ ನಂತರ ಕಂಗೊಳಿಸುವುದೇ 'ಓಶೋ ಸನ್ನಿಧಿ'. ಒಳಗೆ ಕಾಲಿಡುತ್ತಿದ್ದಂತೆಯೇ 'ನಿಮ್ಮ ಮನಸ್ಸನ್ನು ಇಲ್ಲಿಯೇ ಬಿಟ್ಟು ಹೋಗಿ' ಎಂದು ಸೂಚಿಸುವಂತಹ ಬರಹ ಗೋಚರಿಸಿತು. ಅದು ಹೇಗೆ ಸಾಧ್ಯ ನೋಡಿಯೇ ಬಿಡುವಾ ಎಂದು ಹೇಳಿ ಒಳನಡೆದೆ. ಆ ಪರಿಸರದಲ್ಲಿ ಸಹೃದಯಿಯಾದ ಯಾರಿಗಾದರೂ 'ಕಾಡು ನೋಡ ಹೋದೆ, ಕವಿತೆಯೊಡನೆ ಬಂದೆ' ಎಂಬಂತಾದಲ್ಲಿ ಅಚ್ಚರಿಯಿಲ್ಲ.

ನಾನೆಷ್ಟು ಪುಣ್ಯವಂತನೆಂದರೆ ಪುಟ್ಟದ್ದಾಗಿದ್ದ 'ಓಶೋ ಧ್ಯಾನ ಮಂದಿರ'ವನ್ನು ಹಿರಿದಾಗಿಸಿ ಹೊಸದಾಗಿ ನಿರ್ಮಿಸಲಾಗಿರುವ ಕಟ್ಟಡದ ಉದ್ಘಾಟನೆಯ ದಿನದಂದು ಶಿಬಿರದಲ್ಲಿ ಪಾಲ್ಗೊಳ್ಳುತ್ತಿರುವುದು. ಮಟಮಟ ಬಿಸಿಲಿನಲ್ಲಿ ಅಪರೂಪಕ್ಕೆ ಅಷ್ಟು ದೂರ ನಡೆದುಬಂದ ನನಗೆ ಹೊಟ್ಟೆ ತಾಳ ಹಾಕುತ್ತಿತ್ತು. ಅದಾಗಲೇ 3 ಗಂಟೆಯಾಗಿದ್ದರಿಂದ ಶಿಬಿರದ ಸ್ವಯಂಸೇವಕಿ ಖುಶಿಯ ಬಳಿ ಹೆಸರು ನೋಂದಾಯಿಸಿದವನೇ ಅವರ ಸೂಚನೆಯಂತೆ Laughterನಲ್ಲಿ ನನ್ನ ಲಗ್ಗೇಜನ್ನು ಇರಿಸಿ ಬಂದು ಅಲ್ಲಿಗೆ ಬಂದವರಲ್ಲಿ ಕಡೆಯವನೆಂಬಂತೆ ಅಳಿದು ಉಳಿದಿದ್ದ ಅನ್ನ ಸಾರು ಎಲ್ಲವನ್ನೂ ಹಾಕಿಸಿಕೊಂಡು ಜಮಾಯಿಸಿಬಿಟ್ಟೆ. Irony ಎಂದರೆ Smile ಅಷ್ಟೇ ಕೊಡುವ ನಾನು, Laughterಗೆ ಒಂದು ರೀತಿಯಲ್ಲಿ ಅಪರಿಚಿತ.(ಈ Laughter ಎನ್ನುವ ಪದ ಕೇಳಿದಾಕ್ಷಣ ನನಗೆ ಥಟ್ಟನೆ ನೆನಪಾಗುವುದು ಫ್ರೆಂಚ್ ಕವಿ ಬೋದಿಲೇರನ Laughter is the satanic version of Mankind ಎನ್ನುವ ಸಾಲು. ಅದು ನನ್ನ ಮೆಚ್ಚಿನ ಸಾಲಾದರೂ ಅದಕ್ಕೆ ನನ್ನ ಸಮ್ಮತಿಯಿದೆ ಎಂದೇನು ನಾನು ಹೇಳುತ್ತಿಲ್ಲ) ಆನಂತರ, ಸ್ವಲ್ಪ ಕಾಲ ವಿಶ್ರಾಂತಿಯ ನಂತರ ಧ್ಯಾನ ಶಿಬಿರಕ್ಕೆ ಎಲ್ಲರಿಗೂ ಕರೆ ಬಂತು.

ಈ ಓಶೋ ಧ್ಯಾನ ಶಿಬಿರ ನಡೆಸುವ ಮಹಾನುಭಾವರಾರು?
-------------------------------------------------
ಓಶೋ ಧ್ಯಾನ ಶಿಬಿರ ನಡೆಸುವವರು ವೃತ್ತಿಯಲ್ಲಿ ವಕೀಲರಾದ ಶ್ರೀ 'ವೇಣುಗೋಪಾಲ್' ಎಂದು ನೋಂದಣಿ ಶುಲ್ಕ ಪಾವತಿಸಿಕೊಂಡಿದ್ದ ಶಿಬಿರದ ಸ್ವಯಂಸೇವಕಿ ಮನೀಷಾ ಹೇಳಿದ್ದರು. ಇಲ್ಲಿಗೆ ಬಂದ ಮೇಲೆ ನನಗನಿಸಿದ್ದು: ಇಷ್ಟೊಂದು ರಿಸ್ಕ್ ತೆಗೆದುಕೊಂಡು ಇಂತಹ ಕಡೆ ಓಶೋ ಧ್ಯಾನ ಶಿಬಿರ ನಡೆಸುತ್ತಾರೆಂದರೆ ಈ ವೇಣುಗೋಪಾಲ್ ನಿಜಕ್ಕೂ ಗಟ್ಟಿಗರೇ ಎನಿಸಿ ಅಭಿಮಾನ ಮೂಡಿತ್ತು. ಹಾಗೆಯೇ ಕೆಲವೊಂದು ಅನುಮಾನಗಳನ್ನು ಕೂಡ. ಆ ಅನುಮಾನಗಳು ದೂರವಾಗಲು ಹೆಚ್ಚು ಕಾಲವೇನು ಬೇಕಾಗಲಿಲ್ಲ. ಶಿಬಿರದ ಉದ್ಘಾಟನೆಯಾಯಿತು. ಶಿಬಿರದ ಮುಖ್ಯಸ್ಥರಾದ ಶ್ರೀವೇಣುಗೋಪಾಲ್ ಉದ್ಘಾಟನಾ ಭಾಷಣ ಅಲ್ಲಲ್ಲ, ನಮ್ಮನ್ನು ಶಿಬಿರಕ್ಕೆ ಆಹ್ವಾನಿಸಿ ಶಿಬಿರದ ಬಗ್ಗೆ, ಹೊಸದಾಗಿ ಕಟ್ಟಲಾಗಿರುವ ಓಶೋ ಧ್ಯಾನ ಸಭಾಂಗಣದ ಬಗ್ಗೆ ವಿವರಿಸಿದರು.

ಮುಂದುವರಿಯುತ್ತದೆ...

Rating
No votes yet

Comments