ಮೊಬೈಲ್ ಕಥೆ

ಮೊಬೈಲ್ ಕಥೆ

ಹಾದಿಯಲ್ಲಿ ಹಾಯುತ್ತ ಇರುವಾಗ ತಮ್ಮಷ್ಟಕ್ಕೆ ತಾವೇ ಮಾತನಾಡಿಕೊಂಡು, ನಗುತ್ತ ಇರುವವರನ್ನು ನೋಡಿದ್ದೀರಾ? ಹಿಂದೆ ಇಂಥವರನ್ನು ಎರಡು ವರ್ಗಕ್ಕೆ ಸೇರಿಸಲಾಗಿತ್ತು. ಮೊದಲನೆಯದು ಜ್ಞಾನಿಗಳದ್ದು ಎರಡನೆಯದು ಹುಚ್ಚರದ್ದು, ಆದರೆ ಈ ಕಂಪ್ಯೂಟರ್ ಯುಗದಲ್ಲಿ ಹೊಸದೊಂದು ವರ್ಗದ ಸೇರ್ಪಡೆಯಾಗಿದೆ, ಮೊಬೈಲ್ ಮಲ್ಲರದ್ದು. ನಾಗರೀಕತೆಯ ನಾಗಾಲೋಟಕ್ಕೆ ಸರಿಯಾಗಿ ದಾಪುಗಾಲು ಹಾಕಲು, ಸಮಯದ ಅಭಾವದ ಕೊರತೆಯನ್ನು ನೀಗಿಸಲು, ಮೊಬೈಲ್ ಮನುಕುಲಕ್ಕೆ ಒಂದು ವರದಾನ.

ದಾರಿ ಸವೆಯುತ್ತ ಇರಬೇಕಾದರೆ ಅಪರೂಪದ ಗೆಳೆಯನೋ, ಗೆಳತಿಯೋ, ಸಂಬಂಧಿಕರೋ, ಎದುರಾದರೆ ಕುಶಲ ಪ್ರಶ್ನೆಗೆ ಬದಲಾಗಿ ನಿಮ್ಮ ಮೊಬೈಲ್ ನಂಬರ್ ಏನು, ಆನಂತರ ಕರೆ ಮಾಡುತ್ತೇನೆ ಎಂದು ವಿದಾಯ ಹೇಳುವಷ್ಟರ ಮಟ್ಟಿಗೆ ಬೆಳೆದಿದೆ ನಮ್ಮ ಮೊಬೈಲ್ನೊಂದಿಗಿನ ಸಂಬಂಧ. ಒಂದು ವೇಳೆ ನಿಮ್ಮ ಬಳಿ ಮೊಬೈಲಿಲ್ಲವಾಗಿದ್ದು ನಿಜವನ್ನು ನುಡಿದರೆ, ಯಾವುದೋ ಅನಾಗರಿಕ ಪ್ರಪಂಚದಿಂದ ಬಂದ ಕ್ಷುಲ್ಲಕ ಜೀವಿ ಎಂದು ನಿಮ್ಮ ಪರಿಸ್ಥಿತಿಗೆ ಅವರು ಮರುಕಗೊಂಡರೂ ಆಶ್ಚರ್ಯವಿಲ್ಲ! ಇಂತಹ ಸಂದರ್ಭದಲ್ಲಿ ಪರಿಸ್ಥಿತಿ ನಿಮ್ಮ ಅಹಂಕಾರವನ್ನು ಮೆಟ್ಟಿ ನಿಮ್ಮನ್ನು ಪಾತಾಳಕ್ಕೆ ಕುಗ್ಗಿಸುತ್ತದೆ.

ಇಂದು ಮೊಬೈಲ್ ಬರಿ ವಾಹಕ ಸಾಧನವಾಗಿರದೆ ನಿಮ್ಮ ಅಂತಸ್ತನ್ನು ಪ್ರದರ್ಶಿಸುವ ಸಾಧನವೂ ಆಗಿದೆ. ಕೇವಲ ಒಂದು ಸಾವಿರದಿಂದ ಹಿಡಿದು ಐವತ್ತು ಸಾವಿರದ ಮುಖಬೆಲೆಯವರೆಗಿನ ಬಹುಮುಖ ಸಾಧನವಾಗಿ ಮೊಬೈಲ್ ಬೆಳೆಯುತ್ತಿದೆ. ಕ್ಯಾಮೆರಾ, ಮ್ಯೂಸಿಕ್ ಪ್ಲೇಯರ್, ಗೇಮ್ಸ್, ಇಂಟರ್ನೆಟ್, ಬ್ಲೂ-ಟೂತ್ ಮುಂತಾದ ಹತ್ತು ಹಲವು ಸೌಲಭ್ಯಗಳೊಂದಿಗೆ, ವಿವಿಧ ವರ್ಣ, ಚಿತ್ತಾರಗಳೊಂದಿಗೆ ಗಮನ ಸೆಳೆಯುತ್ತದೆ.

ಸುಮಾರು ಎರಡು ವರ್ಷಗಳೊಂದಿಗೆ ನನ್ನೊಂದಿಗಿದ್ದ ನನ್ನ ಕಡಿಮೆ ಬೆಲೆಯ ಮೊಬೈಲಿನ ಅಂದ ಕೆಡುತ್ತ ಬಂದಿತ್ತು. ಇತರರಿಗೆ ಮುಖ ತೋರಿಸಲು ಅದು ತುಂಬಾ ನಾಚಿಕೊಳ್ಳುತ್ತಿದ್ದರೂ, ತನ್ನ ಕೈಲಾದ ಕೆಲಸವನ್ನು ಅಚ್ಚುಕಟ್ಟಾಗಿಯೇ ನಿರ್ವಹಿಸುತ್ತಿತ್ತು. ಒಂದು ದಿನ, ಜಾಹೀರಾತಿನ ಜಾಲಕ್ಕೆ ಒಳಗಾಗಿ ಒಂದು ಅಂದಗಾತಿಯ ಮೋಹಕ್ಕೆ ಒಳಗಾದೆ. ನನ್ನ ಈಗಿನ ಮೊಬೈಲ್ ಕುಳ್ಳಗಿನ, ದಪ್ಪನೆಯ ಶರೀರದ ನಡುವಯಸ್ಸಿನ ಗರತಿಯಂತೆ ನಾಚಿಕೊಳ್ಳುವ ಸ್ವಭಾವದ್ದು. ಆದರೆ ಆ ಜಾಹೀರಾತಿನ ಕೆಂಪು ಬಣ್ಣದ, ಉದ್ದನೆಯ ನೀಳ ಶರೀರದ, ಚೆಲ್ಲಾಟದ ಚೆಲುವೆ ನನ್ನ ರೊಮ್ಯಾಂಟಿಕ್ ಮನೋವೃತ್ತಿಗೆ ತುಂಬಾ ಹಿಡಿಸಿತು. ಅಲ್ಲದೆ ನನ್ನ ಈಗಿನ ಮೊಬೈಲ್ಗೆ ಹೋಲಿಸಿದರೆ ಅದು ಇನ್ನೂ ಹೆಚ್ಚಿನ ಸೇವೆಯನ್ನು ಒದಗಿಸುವುದಾಗಿತ್ತು.

ಮನೆಯ ಬಳಿಯಲ್ಲೇ ಇರುವ "ಸೇಲ್ಸ್ & ಸರ್ವಿಸ್" ಎಂದು ದೊಡ್ಡದಾಗಿ ಫಲಕವನ್ನು ಹಾಕಿಕೊಂಡ ಒಂದು ಮೊಬೈಲ್ ಅಂಗಡಿಗೆ ಭೇಟಿ ಕೊಟ್ಟೆ. ಅದರ ಬೆಲೆ ಕೇಳಿ ಒಮ್ಮೆ ದಂಗಾದರೂ ಅದನ್ನು ತೋರ್ಪಡಿಸಿಕೊಳ್ಳದೆ ಕೊಂಡೆ. ನನ್ನ ಹಳೆಯ ಮೊಬೈಲನ್ನು ಮಾರುವ ಮನಸ್ಸಿದ್ದರೂ ಅದರ ಬೆಲೆಯನ್ನು ಕೇಳಿ ನಿರಾಶೆಯಾಗಿ ಮನೆಗೆ ತಂದು ಒಂದು ಮೂಲೆಯಲ್ಲಿ ಇರಿಸಿದೆ.

ಇನ್ನು ಮುಂದಿನ ನನ್ನ ಕೆಲಸ ಹೊಸ ನಲ್ಲೆಯನ್ನು ಒಲಿಸುವುದು. ಅದರೊಂದಿಗೆ ಬಂದ ದಪ್ಪನೆಯ ಪುಸ್ತಕ ಓದಿ ಅದರ ಗುಣಾವಗುಣಗಳನ್ನು ಅವಲೋಕಿಸತೊಡಗಿದೆ. ನನ್ನ ಮೊದಲ ಮೊಬೈಲ್ನಷ್ಟು ಸುಲಭವಾಗಿ ಇದು ನನಗೆ ಒಲಿಯಲಿಲ್ಲ. ಅಲ್ಲದೆ ಏನೋ ಒಂದು ಬಗೆಯ ಅಳುಕು, ಸಂಕೋಚ ಎಲ್ಲಿ ತಪ್ಪು ಮಾಡುವೆನೋ ಎಂಬ ಭಯ. ಅದರ ನುಣುಪಾದ ಹೊರಮೈ ಹಾಳಾಗದಂತೆ ಅದಕ್ಕೊಂದು ಪ್ಲಾಸ್ಟಿಕ್ ಕವಚ ಕೂಡ ಹೊದಿಸಿದ್ದಾಯಿತು.

ನನ್ನ ಹೊಸ ಮೊಬೈಲ್ ನನಗೆ ರೇಡಿಯೋ ಕೇಳಿಸಬಲ್ಲದು, ನನಗಿಷ್ಟವಾದ ಹಾಡನ್ನು ಸಂಗ್ರಹಿಸಿ ನನ್ನ ಮನೋಭಾವನೆಗೆ ತಕ್ಕಂತೆ ಹಾಡನ್ನು ಕೇಳಿಸಬಲ್ಲದು, ಇಂಟರ್ನೆಟ್ನ್ನು ಸಂಪರ್ಕಿಸಬಹುದಿತ್ತು, ಹೊಸ ಹೊಸ ಗೇಮ್ಸ್ ಆಡಬಹುದಿತ್ತು. ನನ್ನ ಗೆಳೆಯರಿಗೆ, ಸಹೋದ್ಯೋಗಿಗಳಿಗೆ ತೋರಿಸಲು ಏನೋ ಒಂದು ಬಗೆಯ ಉತ್ಸಾಹ. ನನ್ನ ಹಳೆಯ ಮೊಬೈಲ್ನಂತೆ ನಾಚಿಕೆಯ ಮುದ್ದೆಯಾಗಿರದೆ ಎಲ್ಲರೊಂದಿಗೆ ಬೆರೆಯುವ ನಾಗರಿಕ ಯುವತಿಯಂತಿತ್ತು.ಗೆಳೆಯರು ಅದನ್ನು ಹೊಗಳುವಾಗ ಮನಸ್ಸು ತುಂಬಿ ಬರುತ್ತಿತ್ತು.

ಆದರೆ ಈ ಸುಖ ಬಹಳ ಕಾಲದವರೆಗೆ ಮುಂದುವರಿಯಲಿಲ್ಲ. ಹಿಂದಿನ ಮೊಬೈಲ್ನ್ನು ಇಡಬೇಕಾದರೆ ದೂರದಿಂದ ಎಸೆದರೂ ಬೇಸರಿಸಿಕೊಳ್ಳದೆ ಕೂರುತ್ತಿತ್ತು. ಆದರೆ ಇದನ್ನು ತುಂಬಾ ನಾಜೂಕಾಗಿ ಬಳಸಬೇಕಿತ್ತು, ಜೇಬಿನಲ್ಲಿ ಇರಿಸಿಕೊಂಡರೆ ಬೇರೆ ಏನೂ ತಾಕದಂತೆ, ಉಪಯೋಗಿಸದೆ ಇದ್ದಾಗ ಒಣಗಿದ ಶುಭ್ರ ಜಾಗದಲ್ಲಿ ತುಂಬಾ ಜೋಪಾನವಾಗಿ ಇಡಬೇಕಿತ್ತು, ಎಸೆದರೆ ಎಲ್ಲಿ ಹಾಳಾಗುವುದೋ ಎಂಬ ಭಯ. ಹಳೆಯ ಮೊಬೈಲ್ ಬೇರೆ ಯಾರ ಜೊತೆಗೂ ಹೋಗದೆ ನನ್ನೊಂದಿಗೆ ಇದ್ದರೆ, ಇದು ಇನ್ನೊಬ್ಬರ ಬಳಿ ಹೋದರೆ ಮತ್ತೆ ಬರುವ ಸೂಚನೆಯೇ ಇಲ್ಲದವರಂತೆ ಇರುತ್ತಿತ್ತು. ಬರಿ ೨೫೦ ರೂ. ಗಳಷ್ಟು ಬರುತ್ತಿದ್ದ ನನ್ನ ಮೊಬೈಲ್ ಬಿಲ್ ಇಂಟರ್ನೆಟ್ನ ದೆಸೆಯಿಂದ ೧೦೦೦ ರೂ. ಗಳಷ್ಟು ಏರಿತು. ಇದಕ್ಕೂ ಸಾಲದೆಂಬಂತೆ ಒಂದು ದಿನ ಕೆಲಸ ಮಾಡುವುದನ್ನೇ ನಿಲ್ಲಿಸಿತು. ಹಿಂದಿನ "ಸೇಲ್ಸ್ & ಸರ್ವಿಸ್" ಅಂಗಡಿಗೆ ಹೋದರೆ, ನಾವು ಬರಿ ಸೇಲ್ಸ್ಗೆಮಾತ್ರ, ಸರ್ವಿಸ್ಗೆ ನಮ್ಮ ಮನೆಯಿಂದ ಸುಮಾರು ೧೦ ಕಿ. ಮೀ. ಗಳಷ್ಟು ದೂರವಿರುವ ಇನ್ನೊಂದು ಅಂಗಡಿಯ ಕಡೆ ಬೊಟ್ಟು ಮಾಡಿ ತೋರಿಸಿದರು. ಅವರ ಸರ್ವಿಸ್ನ್ನು ಶಪಿಸುತ್ತ ವಾರಾಂತ್ಯದಲ್ಲಿ ಅದನ್ನು ಶುಶ್ರೂಷೆಗೆ ಕರೆದೊಯ್ದದ್ದಾಯಿತು.

ಹೀಗೆಯೇ ದಿನದಿಂದ ದಿನ ಅದರ ಆರೋಗ್ಯ ಹದಗೆಟ್ಟಂತೆ, ನನ್ನ ಶುಶ್ರೂಷೆ ಮುಂದುವರೆಯುತ್ತಾ ಹೋಯಿತು. ಕೊನೆಕೊನೆಗೆ ನನಗೆ ಅದರಿಂದ ಕರೆ, ಸಂದೇಶ ಕಳಿಸುವುದೂ ಕಷ್ಟವಾಗತೊಡಗಿತು. ನನ್ನ ಹಿಂದಿನ ಮೊಬೈಲ್ಗೆ ಚಿಕ್ಕ ಮಕ್ಕಳೆಂದರೆ ತುಂಬಾ ಇಷ್ಟ, ವಿರಾಮವಿದ್ದಾಗ ಅವರೊಂದಿಗೆ ಕಾಲ ಕಳೆಯುತ್ತಿತ್ತು. ಹೊಸ ಮೊಬೈಲಿನ ನಾಜೂಕಿಗೆ ಬೆದರಿದ ಮಕ್ಕಳೂ ಕೂಡ ನನ್ನಿಂದ ದೂರವಾಗತೊಡಗಿದರು.

ಹೀಗೆಯೇ ಒಂದು ದಿನ ೪ ಗಂಟೆಯ ಸುಖವಾದ ನಿದ್ದೆಯಲ್ಲಿ ಇರಬೇಕಾದರೆ, ಆಗಂತುಕನಾಗಿ ನಮ್ಮ ಮನೆಗೆ ಬಂದಿದ್ದವನೊಡನೆ, ನನಗೆ ಒಂದೂ ಮಾತೂ ಹೇಳದೆ ಹೊರಟು ಹೋಗಿತ್ತು. ನನ್ನ ಹಳೆ ಮೊಬೈಲ್ ಕವಾಟಿನ ಒಂದು ಮೂಲೆಯಿಂದ ಮಂದಸ್ಮಿತ ಬೀರುತ್ತಿತ್ತು. ಆದರೆ ಅದು ಕುಹಕದ ನಗುವಾಗಿರದೆ ಪ್ರಿಯಕರನನ್ನು ಮತ್ತೆ ಒಲಿಸುವಂತೆ ಇತ್ತು...

Rating
No votes yet

Comments