ಮೌನದ ಮೊರೆ ಹೋಗುತ್ತಾ ಎಲ್ಲರಿಗೂ ಒಂದು ವಿದಾಯ

ಮೌನದ ಮೊರೆ ಹೋಗುತ್ತಾ ಎಲ್ಲರಿಗೂ ಒಂದು ವಿದಾಯ

ಹುಡುಕಾಟದಲ್ಲೇ ಅಲೆದಾಟವೇ ?
ಅಲೆಯುವಾಗಿನ ಹುಡುಕಾಟವೇ?
ಹುಡುಕುವಿಕೆಯಲ್ಲಿನ ಆನಂದವೇ.?
ಕಾಣದ ರಹಸ್ಯವ ಒಡೆವ ಆಸೆಯೇ?

ತಿಳಿ ತಿಳಿದು ತಳ ಕಾಣದಾ ಕುರುಡೇ?
ಕುದಿ ಕುದಿದು ತುದಿ ಕಾಣುವ ಮರುಳೇ?

ಕಣ್ ಕಂಡದ್ದು ಮನಗಾಣುವುದಿಲ್ಲವೆಂಬ ಭ್ರಮೆಯೇ?
ಮನಗಂಡಿದ್ದು ಕಣ್ ಕಾಣುವುದಿಲ್ಲವೆಂಬುದು ಸತ್ಯವೇ?

ಕಂಡದ್ದೆಲ್ಲಾ ಹೇಳಲಾಗದ ದುಗುಡವೋ
ಅರಿವಾದದ್ದೆಲ್ಲಾ ವಿವರಿಸಲಾಗದ ವಿವಶತೆಯೋ

ನಾ ಅದರ ಬೆನ್ನಟ್ಟುತಿದ್ದೇನೋ ?ಅದು ನನ್ನ ಹಿಂದೆಯೋ?
ಸತ್ಯ ನಿರೂಪಿಸಲು ಸಾಕ್ಷಿ ಮಾತ್ರ ಸಾಕೆ?
ಸತ್ಯವೆಂಬುದು ಒಳಗಣ್ಣಿಗೆ ಕಂಡರಷ್ಟೇ ಸಾಲದೇ?

ನೀನಿಲ್ಲ ನಾನಿಲ್ಲ, ಅವನಿಲ್ಲ ಯಾರಿಲ್ಲ ಎಂಬ
ಇಲ್ಲಗಳ ನಡುವೆ ನೀ, ನಾ, ಅವ ಎಲ್ಲರ
ಇರುವಿಕೆಗಳ ಗೊಂದಲದ ಮೂಟೆಯ
ಹೊತ್ತು ನಾ ನಡೆದಿರುವೆ ಹುಡುಕುತಾ
ಇರುವುದೆಲ್ಲವದರ ಜೊತೆಗೆ ಮತ್ತಷ್ಟು
ತುಂಬಿಕೊಳ್ಳಲು ಅರಿವಿನ ದಾಹಕೆ

ದೂರದಲ್ಲೆಲ್ಲೋ ಕಾಣುತಿದೆ ಬೆಳಕಿನ ಕಿರಣ
ಅದ ತಲುಪವವರೆಗೆ ನಾ ಕೊಂಚ ದಿನ ಮೌನ
ಪ್ರೀತಿ ನೀಡಿದ ಸಂಪದ ಮತ್ತು ಸಂಪದಿಗರಿಗೆಲ್ಲರಿಗೂ
ನನ್ನ ಮನದಾಳದಿಂದ ನಮನ

Rating
No votes yet

Comments