ಮೌನವೇ ಸೃಷ್ಟಿಯೊಳಿರದಿರೆ ನೀನು... ಬೇರೆಲ್ಲಿಯೂ ನೀನಿಲ್ಲ

ಮೌನವೇ ಸೃಷ್ಟಿಯೊಳಿರದಿರೆ ನೀನು... ಬೇರೆಲ್ಲಿಯೂ ನೀನಿಲ್ಲ

ಕಳೆದ ವಾರ ಮಡಿಕೇರಿಯ ತಲಕಾವೇರಿಯಲ್ಲಿ ಮಳೆಗಾಲದ ದಿನಗಳಾದ್ದರಿಂದ ಮೋಡಗಳು ರಾಶಿರಾಶಿಯಾಗಿ ಮುಗಿಲನ್ನೂ ಬೆಟ್ಟ ಕಾಡು ಕಣಿವೆಗಳನ್ನೂ ತುಂಬಿಕೊಂಡಿದ್ದವು. ಮೊದಲ ಮಳೆಗಳು ಸುರಿದು ಸುತ್ತಲಿನ ಹಸುರೆಲ್ಲಾ ತೊಯ್ದು ನವಚೇತನದಿಂದ ಪ್ರಶಾಂತದಲ್ಲೇ ರಾರಾಜಿಸುತ್ತಿತ್ತು. ಪಶ್ಚಿಮದ ಅರಬ್ಬೀ ಸಮುದ್ರದ ಕಡೆಯಿಂದ ಬೀಸುವ ಗಾಳಿಯೊಡನೆ ತೇಲಿ ಬರುವ ಮೋಡಗಳು ಬಿಳಿಯ ಪರದೆಯೊಂದು ಹಸುರನ್ನೆಲ್ಲಾ ಆವರಿಸಿಕೊಳ್ಳುವಂತೆ ಕಣಿವೆಕಾಡುಗಳನ್ನೆಲ್ಲಾ ನುಗ್ಗಿದ್ದವು. ಸ್ವಲ್ಪ ಹೊತ್ತು ಹಸುರುಕಟ್ಟಾದ ಬೆಟ್ಟಗಳು ತಿಳಿಮೋಡಗಳ ಆ ಬಿಳಿಯ ಪರದೆಯ ಹಿಂದೆ ನೋಟದಿಂದ ಅದೃಶ್ಯವಾಗುತ್ತಿದ್ದವು, ಹಾಗೇ ಕವಿದ ಬಿಳುಪು ಸರಿಯುತ್ತಾ ಮುಂದೆ ಸಾಗುತ್ತಿದ್ದಂತೆ ಹಿಂದೆ ಕುಳಿತಿದ್ದ ಹಸುರು ಮತ್ತೆ ನೋಟಕ್ಕೆ ಸಿಗುತ್ತಿತ್ತು. ನೋಡುತ್ತಿದ್ದರೆ ಬೆಟ್ಟಗಾಡಿನಲ್ಲಿ ಕುಳಿತ ಹಸಿರು ಮತ್ತು ಬೀಸುವ ತಿಳಿಮೋಡಗಳ ಬಿಳಿಯ ಪರದೆ, ತಾನು ಮತ್ತೊಂದಕ್ಕಿಂತ ಮಿಗಿಲು ಎಂಬಂತೆ ಆಟದಲ್ಲಿ ತೊಡಗಿದ್ದಂತೆ ಅನುಭವವಾಗುತ್ತಿತ್ತು. ಅಲ್ಲಲ್ಲಿ ಕೆಲವು ಕಡೆ ಬೆಟ್ಟದ ನತ್ತಿಯನ್ನೇರಿ ಕುಳಿತಿರುವ ದಟ್ಟವಾದ ಮೋಡಗಳು ಹಾಗು ಕಾಡಿನ ಮಯ್ಯಿಗೆ ಪೋಣಿಸಿದಂತೆ ಕುಳಿತಿರುವ ಆಲಸೀ ಮೋಡಗಳೂ ಕಂಡುಬಂದವು. ಆಗೊಮ್ಮೆ ಈಗೊಮ್ಮೆ ಕಾರ್ಮೋಡಗಳೂ ನುಗ್ಗಿ ಮಳೆಯನ್ನು ಸುರಿಸಿ ಸೃಷ್ಟಿಯ ವಿವಿಧ ಲೀಲೆಗಳ ಅನುಭವಕ್ಕೆ ಇನ್ನೂ ಕಾತರತೆಯನ್ನು ಮೂಡಿಸುತ್ತಿತ್ತು.

ಈ ಎಲ್ಲಾ  ಸೃಷ್ಟಿಕರ್ಮಗಳಲ್ಲಿ ಮೌನವು ಅಭೇದವಾಗಿಯೇ ಬೆರೆದಿತ್ತು. ಗಾಳಿಯು ತನ್ನೊಡನೆ ಮೌನವನ್ನೂ ಬೀಸುತ್ತಿತ್ತು, ಮೋಡಗಳು ತನ್ನೊಡನೆ ಮೌನವನ್ನೂ ತೇಲಿಸುತ್ತಿದ್ದವು, ಬೆಟ್ಟವು ಕಾಡಿನೊಡನೆ ಮೌನವನ್ನೂ ಬೆಳೆಸಿತ್ತು, ಮಳೆಯು ಮೌನವನ್ನೂ ಸುರಿಸುತ್ತಿತ್ತು. ಅಲ್ಲೇ ಬೆಟ್ಟದ ಇಳಿಜಾರಿನಲ್ಲಿ ಕುಳಿತು ಎಲ್ಲೆಲ್ಲೂ ನೆರೆದಿದ್ದ ಮೌನವನ್ನು ಗಮನಿಸುವುದರಲ್ಲಿ ತೊಡಗಿದೆವು. ಸ್ವಲ್ಪ ಹೊತ್ತಿನ ನಂತರ ಮೌನವು ಬೆಟ್ಟಗಾಡು ಮೋಡಗಳಿಂದ ನಮ್ಮ ಮನಸ್ಸಿಗೆ ಇಳಿದು ಬಂದಂತೆ ಅನುಭವವಾಯಿತು... ಮನಸು ತಿಳಿಯಾಯಿತು, ನಿರ್ಭಾರವಾಯಿತು...

ಬಹುಶ: ಮಲೆನಾಡಿನ ಇಂತಹ ದೃಶ್ಯಗಳೇ ಕುವೆಂಪು ಅವರನ್ನು ...

’ಮೌನವೇ ಸೃಷ್ಟಿಯೊಳಿರದಿರೆ ನೀನು

ಬೇರೆಲ್ಲಿಯೂ ನೀನಿಲ್ಲ’ .... - ಎಂದು

ನಿನ್ನ ಬಾಂದಳದಂತೆ ನನ್ನ ಮನವಿರಲಿ

ನಿನ್ನ ಸಾಗರದಂತೆ ನನ್ನ ಎದೆಯಿರಲಿ

ನಿನ್ನ ಸುಗ್ಗಿಯ ತೆರದಿ ನನ್ನ ಸೊಬಗಿರಲಿ

ನಿನ್ನ ಲೀಲೆಯ ತೆರದಿ ನನ್ನ ಬಾಳಿರಲಿ

ನಿನ್ನ ಬಲವಿರುವಂತೆ ನನ್ನ ಬಲವಿರಲಿ

ನಿನ್ನೊಳಿರುವಾ ಶಾಂತಿ ನನ್ನೆದೆಗೆ ಬರಲಿ’ ..........  ಎಂತೆಲ್ಲಾ  ಬರೆಯುವಂತೆ ಸ್ಫೂರ್ತಿ ನೀಡಿತೇ?

Rating
No votes yet