ಯಶವಂತ ಚಿತ್ತಾಲರ 'ಪುರುಷೋತ್ತಮ' ಕಾದಂಬರಿ - ಹುತ್ತಗಟ್ಟಿದ ಚಿತ್ತ ಕೆತ್ತಿದ ಪ್ರತಿಮೆಯೇ?

ಯಶವಂತ ಚಿತ್ತಾಲರ 'ಪುರುಷೋತ್ತಮ' ಕಾದಂಬರಿ - ಹುತ್ತಗಟ್ಟಿದ ಚಿತ್ತ ಕೆತ್ತಿದ ಪ್ರತಿಮೆಯೇ?

ತ್ತೀಚೆಗೆ  ನನ್ನ ಕೈಗೆ ಯಶವಂತ ಚಿತ್ತಾಲರ 'ಪುರುಷೋತ್ತಮ'  ಕಾದಂಬರಿ ಸಿಕ್ಕಿತು.  ೫೭೦ ಪುಟಗಳ ದೊಡ್ಡ ಕಾದಂಬರಿ ಅದು.
ಹಿನ್ನುಡಿಯಲ್ಲಿ ಈ ರೀತಿ ಇತ್ತು .

" ಪುರುಷೋತ್ತಮ - ಭಾರತೀಯ ಭಾಷಾ ಪರಿಷತ್ ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳನ್ನು ಗಳಿಸಿರುವ ಮಹತ್ವದ ಕಾದಂಬರಿ.

ಯಶವಂತ ಚಿತ್ತಾಲರ ಈ ಬೃಹತ್ ಕೃತಿ ಕನ್ನಡ ಕಾದಂಬರಿಯ ಇತಿಹಾಸದಲ್ಲಿ ಒಂದು ಮಹತ್ವದ ಮೈಲಿಗಲ್ಲು. ಇಂದು, ಜೀವನ ಹಾಗೂ ಸಾಹಿತ್ಯಗಳೆರಡನ್ನೂ ದಿಕ್ಕು ತಪ್ಪಿಸುತ್ತಿರುವ ನಿಷ್ಠುರ ಸಮಸ್ಯೆಗಳನ್ನು ಕುರಿತ ಸೃಜನಶೀಲ ಧ್ಯಾನದ ಫಲವಾದ ‘ಪುರುಷೋತ್ತಮ’ ಕಾದಂಬರಿ - ಪ್ರಕಾರದ ಕ್ಷಿತಿಜಗಳನ್ನು ವಿಸ್ತರಿಸುವ ಚೇತೋಹಾರಿ ಪ್ರಯತ್ನವಾಗಿದೆ.

ಮನುಷ್ಯ ಚೇತನವೊಂದು ತಲುಪಬಹುದಾದ ಎತ್ತರಗಳ ಅನ್ವೇಷಣೆ ಚಿತ್ತಾಲರ ಪ್ರಮುಖ ಕಾಳಜಿಗಳಲ್ಲಿ ಒಂದು. ‘ಪುರುಷೋತ್ತಮ’ದಲ್ಲೂ ಸೃಷ್ಟಿಕಾರ್ಯದ ಉತ್ಕಟ ಕ್ಷಣಗಳಲ್ಲಿ ಸೃಜನಶೀಲಗ್ರಹಿಕೆಯಾಗಿ ಆಕಾರ ತಾಳಿದ ಹುಡುಕಾಟ ಪ್ರೀತಿಯಾಗಿ ಹರಡಿಕೊಳ್ಳುತ್ತ ಉದಾತ್ತತೆಯಲ್ಲಿ ಶಿಖರಗಾಮಿಯಾಗುತ್ತದೆ. ಹಾಗೂ ನಮ್ಮೆಲ್ಲರ ಮನುಷ್ಯ-ಸಾಧ್ಯತೆಗಳಿಗೆ ಕನ್ನಡಿ ಹಿಡಿಯುತ್ತದೆ. ಆದ್ದರಿಂದಲೇ ‘ಪುರುಷೋತ್ತಮ’ ಅನನ್ಯವಾದ ನೈತಿಕ, ಸಾಮಾಜಿಕ ಒಳನೋಟಗಳನ್ನು ಕೊಡುತ್ತದೆ. ನಮ್ಮ ಕಾಲದ ಬದುಕಿನ ವಿಕೃತಿಯ ಅಂತಿಮ ಪ್ರತಿಮೆಯಾದ ಹಣವನ್ನು ನಿರಾಕರಿಸುವ ಕಥಾನಾಯಕನ ನಿಲುವು ಅಸಾಧಾರಣ ಕೆಚ್ಚನ್ನು ಪ್ರಕಟಿಸುತ್ತಲೇ ಇಷ್ಟೊಂದು ಕ್ರೌರ್ಯ ತುಂಬಿದ ಇಂದಿನ ಸಮಾಜದಲ್ಲೂ ಮನುಷ್ಯನ ಅಂತಃಕರಣಕ್ಕೆ ಧನ್ಯತೆಯನ್ನು ತಂದುಕೊಡಬಹುದಾದ ಸಾಹಸಕ್ಕೆ ಪ್ರತೀಕವೂ ಆಗುತ್ತದೆ.
ಪುಟಪುಟದಲ್ಲೂ ಚಿತ್ತಾಲರ ಶೈಲಿಯ ಅಂಕಿತವುಳ್ಳ ಬರವಣಿಗೆ ಒಂದು ನೆಲೆಯಲ್ಲಿ ಅತ್ಯುತ್ತಮ ಕಾವ್ಯಕ್ಕೆ ಸಂವಾದಿಯಾದರೆ ಮತ್ತೊಂದು ನೆಲೆಯಲ್ಲಿ ಕನ್ನಡ ಕಥನಕಲೆ ಸಾಧಿಸಿರುವ ಪ್ರಬುದ್ಧತೆಗೆ ಸಾಕ್ಷಿಯಾಗಿದೆ. ಜೊತೆಗೇ ಇಲ್ಲಿಯ ಅದ್ಭುತ ಪಾತ್ರಸೃಷ್ಟಿಯ ಹಿಂದೆ ಕೆಲಸ ಮಾಡಿದ ಅಪೂರ್ವ ಸೃಜನ ಪ್ರತಿಭೆಗೆ ಕೂಡ.

ಹಾಗೆಂದೇ ‘ಪುರುಷೋತ್ತಮ’ ದೀರ್ಘಕಾಲ ಉಳಿಯುವ ಕನ್ನಡದ ಬಹುಮುಖ್ಯ ಕೃತಿಯಾಗಿದೆ."

ಮುನ್ನುಡಿಯಲ್ಲಿ ಓದಿದ ಪ್ರಕಾರ ಸುಮಾರು  ಹಿಂದಿನ ಕಾದಂಬರಿಯ ಹತ್ತು ವರುಷಗಳ ನಂತರ ಬಂದ ಕಾದಂಬರಿ ಅದು. ಮನುಷ್ಯ ಚೇತನವೊಂದು ತಲುಪಬಹುದಾದ ಎತ್ತರ ಏನು? ನಮ್ಮೆಲ್ಲರ ಮನುಷ್ಯ-ಸಾಧ್ಯತೆಗಳೇನು? ಮನುಷ್ಯನ ಅಂತಃಕರಣಕ್ಕೆ ಧನ್ಯತೆಯನ್ನು ತಂದುಕೊಡಬಹುದಾದುದು ಏನು ? ತಿಳಿಯಲು ಈ ಕಾದಂಬರಿಯನ್ನು ಓದಲು ಶುರುಮಾಡಿದೆ.

 ಮುಂಬೈವಾಸಿ ಕಥಾನಾಯಕ ಪುರುಷೋತ್ತಮನ ಊರು  ಹನೇಹಳ್ಳಿಯ ತಲೆಮಾರುಗಳ ಹಿಂದಿನ ಹಳೇ ಸಂಗತಿ- ಒಂದು ನಾಗರಹಾವನ್ನು ಕೊಂದ ಸಂಗತಿಯ ಉಲ್ಲೇಖದಿಂದ ಶುರುವಾಗುತ್ತದೆ ಕಾದಂಬರಿ. ಮನೆತನಕ್ಕೆ ಶಾಪ ಇದೆಯೇ ? ದಾಯಾದಿ ಮನೆತನಗಳ ತಲೆಮಾರುಗಳ ದ್ವೇಷಕ್ಕೆ , ನಡೆದ ಆತ್ಮಹತ್ಯೆ , ಅಪಘಾತ , ಕೊಲೆ, ಜೈಲು ಮುಂತಾದ ಸಂಗತಿಗಳಿಗೆ ಅದುವೇ ಕಾರಣವೇ? ಪುರುಷೋತ್ತಮನ ಮುತ್ತಜ್ಜನು ಮುಂಬೈಯಲ್ಲಿ ಕಟ್ಟಿದ ಬಂಗಲೆಯಲ್ಲಿ ಈಗ ವಾಸವಾಗಿರುವುದು  ಪುರುಷೋತ್ತಮ ಮತ್ತು ಅವನ ತಾಯಿ ಸಾವಿತ್ರಿ. ಅವನ ಹೆಂಡತಿ  ಹೇಮಾ ಮದುವೆಯ ಎರಡೇ ವರ್ಷದ ನಂತರ ಅವನನ್ನು ತೊರೆದು ಅವನು ಬಹಳವಾಗಿ ಪ್ರೀತಿಸುವ ಮಗಳು ಜಾನಕಿಯೊಂದಿಗೆ ಅಮೇರಿಕದಲ್ಲಿ ಇದ್ದುಬಿಟ್ಟಿದ್ದಾಳೆ. ಇವನ ಮನೆಯನ್ನು ಸೇರಿದಂತೆ ಒಂದು ವಿಶಾಲ ಜಾಗಕ್ಕೆ  ಮುಂಬೈಯ ಬಿಲ್ಡರುಗಳು ಕಣ್ಣು ಹಾಕಿದ್ದಾರೆ. ಉಳಿದ ನಿವಾಸಿಗಳು ಕೊಟ್ಟಷ್ಟು ಹಣ ಪಡೆದು ತಮ್ಮ ಮನೆಗಳನ್ನು ಮಾರಿಬಿಟ್ಟಿದ್ದಾರೆ. ಮುತ್ತಜ್ಜನ   ಬಗ್ಗೆ  ಅವನ  ಮನೆಯ ಬಗ್ಗೆ    ಅವನಿಗೆ ತುಂಬ ಪ್ರೀತಿ. ಇವನು ಮಾರಲಿಕ್ಕೆ ಸಿದ್ಧನಿಲ್ಲ. ಇವನು ಮಾರದಿರುವುದಕ್ಕೆ  ಇನ್ನಷ್ಟು ಹಣದಾಸೆಯಿಂದ ಬೆಲೆ ಏರಿಸುವ  ಇವನ ಹುನ್ನಾರು ಕಾರಣವೇ?  ಇವನ ಹಿಂದೆ ಬೇರೆ ಬಿಲ್ಡರುಗಳು ಇದ್ದಾರೆಯೇ ? ಹೀಗೆ  ಹಣದಿಂದ ಏನು ಬೇಕಾದರೂ ಕೊಳ್ಳಬಹುದು ಎಂಬ ಗಟ್ಟಿ ನಂಬುಗೆಯ  ಬಿಲ್ಡರುಗಳ , ಪ್ರಾಪರ್ಟಿ ಡೀಲರುಗಳ  ಪರಸ್ಪರ ಸಂಶಯ , ಸಂಚುಗಳು!.  ಮಂಜುನಾಥ ಎಂಬಾತನು -  ಇವನಿಗೆ ದಾಯಾದಿ ಆಗಬೇಕು-ಅವನು  ಧಿಡೀರನೆ ಮನೆಗೆ ನುಗ್ಗಿ ನಿನ್ನ ತಂದೆಯ ಬಗೆಗೆ ನಿನಗೆ ಗೊತ್ತಿಲ್ಲ ಅಂತ ಕಾಣುತ್ತದೆ , ಅವನು ಸತ್ತದ್ದು ಅಪಘಾತದಿಂದಲ್ಲ, ಕೊಲೆಯಿಂದ ಎಂದಷ್ಟೇ ಹೇಳಿ  ಹೋಗಿಬಿಟ್ಟಿದ್ದಾನೆ. ಇತ್ತ ಪುರುಷೋತ್ತಮನ ಹೆಂಡತಿ ಡೈವೋರ್ಸ್ ಕೇಳಿದ್ದಾಳೆ. ಇವನು ಪ್ರೀತಿಸುವ ಮಗಳು ಜಾನಕಿ ಈತನ ಮಗಳೇ ಅಲ್ಲ ಎಂದು ಆಘಾತ ಬೇರೆ ನೀಡಿದ್ದಾಳೆ.  ನಂತರ  ಶ್ರೀಧರ, ಜನಾರ್ಧನ, ಗಣಪತಿ , ಕಲ್ಯಾಣಿ , ಬಾಯಕ್ಕ , ಸರಸ್ವತಿ, ಸೀತೆ , ಕಮಲಾವತಿ , ತುಮ್ಮದ್ರಕ್ಕ  ಮುಂತಾದ  ಪಾತ್ರಗಳು ಪ್ರವೇಶಿಸುತ್ತವೆ. ಇವರ ಪರಸ್ಪರ ಸಂಬಂಧ ಅಷ್ಟೊಂದು ತಿಳಿಯಬರುವುದಿಲ್ಲ - ಮೊದಲ ಓದಿಗೆ .  ಪುರುಷೋತ್ತಮ , ಅವನ ತಾಯಿ ಸಾವಿತ್ರಿ  ಸೇರಿದಂತೆ ಈ ಎಲ್ಲ ಪಾತ್ರಗಳ ಪರಸ್ಪರ ಸಂಬಂಧವಾಗಲೀ , ಹಿಂದಿನ ಸಂಗತಿಗಳಾಗಲೀ ,  ಗುಣಾವಗುಣಗಳಾಗಲೀ , ಚಿಂತನೆಯ ಲಹರಿಯಾಗಲೀ , ಮನಸ್ಸಿನ  ವಿಚಾರಗಳಾಗಲೀ  ಇಲ್ಲವೇ ಇಲ್ಲ.  ಹೀಗಾಗಿ ಓದುವುದು  ಸ್ವಲ್ಪ ಕಠಿಣವಾಗುತ್ತದೆ.  ಸುಮಾರು ಎರಡು ನೂರು ಪುಟಗಳವರೆಗೆ ಪುರುಷೋತ್ತಮ ಕೇಂದ್ರವಾಗಿದ್ದರೆ , ಮುಂದಿನ ಎರಡುನೂರು ಪುಟ (ಅಂದಾಜು)   , ಅವನ ಉಲ್ಲೇಖ ಅತಿಥಿ ನಟನ ಹಾಗೆ ಅಲ್ಲಿಷ್ಟು ಇಲ್ಲಿಷ್ಟು .    ಮಂಜುನಾಥನ ಹಿಂದಿನ ಕಥೆ ಏನ್ನೋ ಸ್ವಲ್ಪ ಇದೆ.  ವೆಂಕಟದಾಸು ,  ನಾಥಾನಿ  ಮುಂತಾದ ಬಿಲ್ಡರುಗಳ  ಸಂಗತಿ  ಬೇರೆ. ೩೭೦ ಪುಟಗಳ ನಂತರವೂ ಕಥೆಯ ಕೇಂದ್ರ ವ್ಯಕ್ತಿ ಯಾರು ? ಕೇಂದ್ರ ಸಂಗತಿ ಯಾವುದು?  ಗೊತ್ತಾಗುವುದಿಲ್ಲ. ಕಾದಂಬರಿಯ ಹೆಸರಿನಂತೆ ಪುರುಷೋತ್ತಮ ಕೇಂದ್ರ ವ್ಯಕ್ತಿ ಆಗಿದ್ದರೆ ಮುಂದಿನ ಸುಮಾರು ಇನ್ನೂರು ಪುಟ ಅವನ ಸಂಗತಿ ಹೆಚ್ಚೂ ಕಡಿಮೆ ಇಲ್ಲವೇ ಇಲ್ಲವೇಕೆ?

( ಆದರೂ ಹಟ ಬಿಡದ ವಿಕ್ರಮನಂತೆ ಮುಂದುವರೆಸಿದೆ. ನಾಲ್ಕು ಪುಟದಷ್ಟು ಟಿಪ್ಪಣಿಯನ್ನೂ ಬರೆದು ನಂತರ ಹರಿದು ಹಾಕಿದೆ!. ಒಂದು ಸಲ ಕಾದಂಬರಿಯ ಕೊನೆಯನ್ನು ಮುಟ್ಟಿದರೂ  ಕತೆಯೂ ಒಟ್ಟಾರೆ ವಿಷಯವೂ  ಅಸ್ಪಷ್ಟವಾಗಿ ಉಳಿದ ಕಾರಣ ಇಡೀ ೫೭೦ ಪುಟ್ಗಳ ಕಾದಂಬರಿಯನ್ನು ಮತ್ತೊಮ್ಮೆ ಓದಿದೆ. ಗಮನಿಸಿರದ ಕೆಲವು ಒಂದೆರಡು ಸಾಲುಗಳಲ್ಲೇ ಮಹತ್ವದ ಘಟನೆಗಳು ನಡೆದು ಹೋದದ್ದೂ  ಎರಡನೇ ಬಾರಿ  ಓದಿದಾಗಲೇ ಅರಿವಿಗೆ ಬಂದಿತು!. )

 ಮುಂದೆ  ಘಟನೆಗಳು ತೀವ್ರ ವೇಗ ಪಡೆಯುತ್ತವೆ. ರಾಜಕಾರಣಿ , ಪೋಲೀಸರು, ಆತ್ಮಹತ್ಯೆಯ ಪ್ರಯತ್ನ , ಆತ್ಮಹತ್ಯೆ , ಜೋಡಿ ಭೀಕರ ಕೊಲೆಗಳು  , ಧಿಡೀರನೆ ಹುಟ್ಟಿಕೊಳ್ಳುವ  ಗುಡಿಸಲುಗಳು ,  ಬೆದರಿಕೆಗಳು , ನಾನಾ ಒತ್ತಡಗಳು  ಎಲ್ಲ ಪುರುಷೋತ್ತಮನನ್ನು   ಇನ್ನೇನು ಹುಚ್ಚೇ ಹಿಡಿಯುತ್ತದೇನೋ ಎನ್ನುವಷ್ಟು ಕಾಡುತ್ತವೆ. ಅವಧೂತನಂತೊಬ್ಬ ಮನುಷ್ಯ  ಕಾಣಿಸಿಕೊಳ್ಳುತ್ತಾನೆ. ಏನನ್ನು ಬೇಕಾದರೂ ಹಣದಿಂದ  ಕೊಳ್ಳಬಹುದು ಎಂಬುದರ ವಿರುದ್ಧ ಮನೆಯನ್ನು ಮಾರಲಾರೆ ಎಂಬುದು ಅಸಾಮಾನ್ಯ ಧೀರತನವೋ ?  ಅದರಿಂದಾಗಿ ಮನೆಯ ಮೂರು  ಹೆಂಗಸರನ್ನು ಅಪಾಯಕ್ಕೆ ಒಡ್ಡುವುದು ಹುಂಬತನವೋ ? ಈ  ನಡುವೆ  ಪುರುಷೋತ್ತಮನನ್ನು ಆಘಾತಪಡಿಸುವ ಸಂಗತಿಗಳು ಅಮೇರಿಕದಿಂದ ತಿಳಿದು ಬರುತ್ತವೆ. ಹೆಂಡತಿ ಅದಾಗಲೇ ಕ್ಯಾನ್ಸರಿನಿಂದ ಸತ್ತು ಹೋಗಿದ್ದಾಳೆ, ಮಗಳು ಜಾನಕಿ ಇವನ ಜತೆ  ಇರಬಯಸುತ್ತಾಳೆ. ಆದರೆ ಅವಳು ಸಹಜ ಮಗುವು ಅಲ್ಲ! ಬುದ್ಧಿಮಾಂದ್ಯವೋ ಅಥವಾ ಮತ್ತೇನೋ ತೊಂದರೆಯ ಮಗು, ಸರಿ.  ಪುರುಷೋತ್ತಮನು  ಇವನ್ನೆಲ್ಲ ಎದುರಿಸುವುದು ಹೇಗೆ ? ಪ್ರತಿಕ್ರಿಯಿಸುವುದು ಹೇಗೆ ? ಯಾವ ನಿರ್ಧಾರಗಳನ್ನು ಕೈಗೊಳ್ಳುವನು ? ಅವನ ಕ್ರಿಯೆಗಳು ಯಾವುವು ? ಕೊನೆಗೆ ಅವನ ತಿಳಿವಿಗೆ  ಬಂದ ಅವನಿಗೇ ಸಂಬಧಪಟ್ಟ ಸಂಗತಿ!!  ಅವನಲ್ಲಿ  ಉಂಟಾಗುವ ಇನ್ನೊಂದು ಪರಿವರ್ತನೆ !! ಅಬ್ಬಾ ,  ಅವನ ನಿರ್ಧಾರಗಳಿಗೆ , ಕ್ರಿಯೆಗಳಿಗೆ  ಹಿನ್ನೆಲೆ , ಕಾರಣ , ಸ್ಫೂರ್ತಿ ಏನು ?     ಅಸಲಿಗೆ ಈ ಪುರುಷೋತ್ತಮನು ಎಂಥವನು ? ಇವನು ಶ್ರೀ ರಾಮಚಂದ್ರನಂತೆ ಪುರುಷರಲ್ಲೇ ಉತ್ತಮನೇ ? ಇದನ್ನೆಲ್ಲ  ಓದುಗರೇ ಕಂಡುಕೊಳ್ಳಬೇಕಷ್ಟೇ, ಕಾದಂಬರಿಕಾರರಿಂದ  ಯಾವುದೇ ವ್ಯಾಖ್ಯಾನ /ವಿವರಣೆ /ಚರ್ಚೆ  ಇಲ್ಲಿಲ್ಲ.  ಕಣ್ಣ ಮುಂದೆ ನಡೆಯುವ  ಸಾಮಾನ್ಯ ಎನಿಸುವ ಆದರೆ ನಿಜಕ್ಕೂ ಅಸಾಮಾನ್ಯವಾದ ಕೆಲವು   ಸಂಗತಿಗಳನ್ನು  ಮನಗಾಣುವುದೂ ಸುಲಭ ಸಂಗತಿ ಅಲ್ಲವೇನೋ .  

ಗೋಪಾಲಕೃಷ್ಣ ಅಡಿಗರ ಕವನದಲ್ಲಿನ  ಸಾಲು "ಚಿತ್ತಗಟ್ಟದೆ ಹುತ್ತ ಮತ್ತೆ ಕೆತ್ತೀತೇನು ಪುರುಷೋತ್ತಮನ ಪ್ರತಿಮೆ "ಯಂತೆ  ಚಿತ್ತಾಲರು ಹುತ್ತಗಟ್ಟಿದ ಚಿತ್ತದಿಂದ ವಾಲ್ಮೀಕಿಯಂತೆ  ಈ ಶಿಲ್ಪವನ್ನು ಕೆತ್ತಿದರೆ?

( ಇಂಟರ್ ನೆಟ್ಟಿನಲ್ಲಿ ಈ ಕಾದಂಬರಿಯ ಬಗ್ಗೆ  ಯಾರಾದರೂ ಏನಾದರೂ ಬರೆದಿದ್ದಾರೆಯೇ ಎಂದು ಹುಡುಕಿದಾಗ ಏನೊಂದೂ ಸಿಕ್ಕಲಿಲ್ಲ, ಅದಕ್ಕೆ ನಾನೇ ನನಗೆ ತೋಚಿದ ಹಾಗೆ ಬರೆದಿದ್ದೇನೆ. ನೀವೇನಾದರೂ ಓದಿದ್ದರೆ  ನಿಮ್ಮ ಅನಿಸಿಕೆ ತಿಳಿಸಿ.  ತುಂಬ ಅದ್ಭುತವೆನ್ನಿಸಿದ ಈ ಕಾದಂಬರಿಯನ್ನು ನೀವೂ ಸಾಧ್ಯ ಆದರೆ ಓದಿ)

 

Rating
No votes yet

Comments

Submitted by ಮಮತಾ ಕಾಪು Mon, 02/18/2013 - 10:37

ಶ್ರೀಕಾಂತ್ ಅವರೆ ನಿಮ್ಮ ಬರಹವನ್ನು ಓದಿದ ನಂತರ ಕಾದಂಬರಿಯನ್ನು ಒಮ್ಮೆಯಾದರೂ ಓದಬೇಕೆನಿಸಿದೆ, ಕುತೂಹಲಕಾರಿಯಾದ ಕಾದಂಬರಿಯೆನಿಸುತ್ತಿದೆ. ಧನ್ಯವಾದಗಳು ಪುರುಷೋತ್ತಮದ ಪರಿಚಯಕ್ಕಾಗಿ.

Submitted by venkatesh Mon, 02/18/2013 - 12:50

In reply to by ಮಮತಾ ಕಾಪು

'ಪುರುಷೋತ್ತಮ' ಚಿತ್ತಾಲರ ಕಿಸೆಯಿಂದ ಮೂಡಿಬಂದ ಕೃತಿಗಳ್ಳಲ್ಲೊಂದು ಅತ್ಯುತ್ತಮ ಕೃತಿಯೆಂಬುದನ್ನು ಎಲ್ಲರೂ ಒಪ್ಪಬೇಕು. ಎಚ್ಚೆಸ್ವಿಯರು ತಮ್ಮ ಭಾಷಣದ ಸಮಯದಲ್ಲಿ ಚಿತ್ತಾಲರನ್ನು ಬಹಳ ನೆನೆಯುತ್ತಾರೆ.

Submitted by hamsanandi Tue, 02/19/2013 - 02:03

ಸುಮಾರು ೨೦ ವರ್ಷದ ಹಿಂದೆ ಈ ಕಾದಂಬರಿಯನ್ನು ೨-೩ ಸಲ ಓದಿದ್ದೆ. ಎಷ್ಟೋ ವಿವರಗಳು ಮರೆತಿದ್ದರೂ, ಬಹಳ ಅದ್ಭುತವಾಗಿತ್ತು ಅನ್ನೋದು ಮಾತ್ರ ನೆನಪಿತ್ತು. ಈ ಬರಹಕ್ಕೆ ಧನ್ಯವಾದಗಳು ಶ್ರೀಕಾಂತ್ ಅವರೆ.

Submitted by ರಾಮಕುಮಾರ್ Thu, 02/21/2013 - 12:07

ನಾನು ಚಿತ್ತಾಲರ "ಪುರುಷೋತ್ತಮ" ಓದಿಲ್ಲ.ಆದರೆ ಅವರ "ಶಿಕಾರಿ","ಕೇಂದ್ರ ವೃತ್ತಾಂತ" ಓದಿದ್ದೇನೆ. "ಪುರುಷೋತ್ತಮ"ದ ನಿಮ್ಮ ವಿಮರ್ಶೆ ಓದಿದ ಮೇಲೆ ನನಗನಿಸಿದ್ದು ಮನುಷ್ಯನ ಸಂಕೀರ್ಣ ಮನೋವ್ಯಾಪಾರಗಳ ವರ್ಣನೆ, ಮನೋ ವಿಶ್ಲೇಷಣೆ ಚಿತ್ತಾಲರ ಕಾದಂಬರಿಗಳ recurring theme.

Submitted by shreekant.mishrikoti Thu, 02/21/2013 - 15:51

In reply to by ರಾಮಕುಮಾರ್

ನೀವು ಹೇಳುವುದು ಸರಿ ಇರಬಹುದು ರಾಮಕುಮಾರರೇ , ಅದಕ್ಕೇ ಚಿತ್ತಾಲರ ಉಳಿದ ಕೃತಿಗಳನ್ನೂ ಓದಬೇಕೆಂದುಕೊಂಡಿದ್ದೇನೆ.

Submitted by Aravind M.S Sat, 02/23/2013 - 17:21

ಶ್ರೀಕಾಂತರೆ,
ಪುರುಶೋತ್ತಮ ವಾಸ್ತವ ಕ್ರೂರ ಪ್ರಪಂಚಕ್ಕೆ ಹಿಡಿದ ಕನ್ನಡಿ. ಹೀಗಿದ್ದರೂ ಪುರುಶೋತ್ತಮನ ಆದರ್ಶಗಳು ಪ್ರಶ್ನೆ ಮೂಡಿಸುವಂಥವೇ ಅನಿಸಿದೆ. ಅದೇಕೆ ಒಬ್ಬ ತನ್ನ ಪೂರ್ವಿಕರ ಆಸ್ತಿಗೆ ಅಷ್ಟೊಂದು ವ್ಯಾಮೋಹ ಬೆಳೆಸಿ ಜೋತಾಡಬೇಕು,‍‍‍‍‍‍ ‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍ಈ ಹಟ ಸಾಮಾನ್ಯವಾಗಿ ಎಲ್ಲರಲ್ಲಿ ಕಾಣಿಸಲ್ಲ.
ಹೀಗೆ ಈ ಪುಸ್ತಕ ಓದಿದಾಗ ನನಗೆ ನಿಮಗೆ ಆದಂತೆಯೇ ಹಲವು ಗೊಂದಲ ಮೂಡಿಸಿದ್ದವು‍‍‍‍ ‍‍‍‍‍‍ಅವುಗಳನ್ನು ಖಾತ್ರಿ ಮಾಡಿಸಿದ್ದಕ್ಕೆ ನಿಮಗೆ ಋಣಿ.

~‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍ ಅರವಿಂದ

Submitted by shreekant.mishrikoti Sun, 02/24/2013 - 14:35

In reply to by Aravind M.S

"ಪುರುಶೋತ್ತಮನ ಆದರ್ಶಗಳು ಪ್ರಶ್ನೆ ಮೂಡಿಸುವಂಥವೇ ಅನಿಸಿದೆ."
---- ಈ ಕಾದಂಬರಿಯಲ್ಲಿ ಪುರುಷೋತ್ತಮನ ಆದರ್ಶಗಳ ಬಗ್ಗೆ ಏನೂ ಹೇಳಿಲ್ಲ; ಆದರೆ ಅವನ ನಿರ್ಧಾರ ಮತ್ತು ಕೃತಿಗಳ ಮೂಲಕವೇ ನಾವು ಅವನ್ನು ಅರ್ಥ ಮಾಡಿಕೊಳ್ಳಬೇಕು.

"ಅದೇಕೆ ಒಬ್ಬ ತನ್ನ ಪೂರ್ವಿಕರ ಆಸ್ತಿಗೆ ಅಷ್ಟೊಂದು ವ್ಯಾಮೋಹ ಬೆಳೆಸಿ ಜೋತಾಡಬೇಕು,‍‍‍‍‍‍"
-- ಆಸ್ತಿಯ ಬಗೆಗಿನ ವ್ಯಾಮೋಹಕ್ಕಿಂತ ಒಬ್ಬ ಮನುಷ್ಯ ತನ್ನ ಆಸ್ತಿಯನ್ನು ಮಾರಿಕೊಳ್ಳುವುದು ಬಿಡುವುದು ಅವನ ಇಷ್ಟ ಆಗಬೇಕೇ ಹೊರತು ಕೊಳ್ಳಬಯಸುವರ ಅನಗತ್ಯ ಆಮಿಷ, ಬೆದರಿಕೆ , ಒತ್ತಡಗಳು ತಪ್ಪು ಅಲ್ಲವೇ? . ಇಲ್ಲಿ ಕೇವಲ ಪೂರ್ವೀಕ(?)ರ ಆಸ್ತಿಯ ವ್ಯಾಮೋಹ ಅಷ್ಟೇ ಇಲ್ಲ . ಇನ್ನೂ ಏನೇನೋ ಇದೆ. ಅದನ್ನೆಲ್ಲ ಕಂಡುಕೊಳ್ಳಲೇ ಇಡೀ ಕಾದಂಬರಿಯನ್ನು ಇನ್ನೊಮ್ಮೆ ಓದಬೇಕಾಯಿತು. ಯಾವ ಸಾಲನ್ನೂ ಬಿಡದೇ ಓದುವುದು ತುಂಬ ಅವಶ್ಯಕ ಇಲ್ಲಿ! ನಾನು ಕಂಡುಕೊಂದದ್ದು ಏನೆಂಬುದನ್ನೂ , ಕೊನೆಯಲ್ಲಿ ಅವನಲ್ಲಾದ ಅದ್ಭುತ ಪರಿವರ್ತನೆಯನ್ನೂ ಬೇಕೆಂದೇ ತಿಳಿಸಿಲ್ಲ!! ಹಾಗೆ ತಿಳಿಸಿದಲ್ಲಿ ಈ ಅದ್ಭುತ ಸೃಷ್ಟಿಗೆ ನಾನು ಅನ್ಯಾಯ ಮಾಡಿದಂತಾದೀತು!! ನೀವೂ ಸಾಧ್ಯ ಇದ್ದರೆ ಇನ್ನೊಮ್ಮೆ ಓದಿ!!

ಈ ಪುರುಷೋತ್ತಮನು ಎಂಥವನು ? ಇವನು ಶ್ರೀ ರಾಮಚಂದ್ರನಂತೆ ಪುರುಷರಲ್ಲೇ ಉತ್ತಮನೇ ? ಇದನ್ನೆಲ್ಲ ಓದುಗರೇ ಕಂಡುಕೊಳ್ಳಬೇಕಷ್ಟೇ, ಕಾದಂಬರಿಕಾರರಿಂದ ಯಾವುದೇ ವ್ಯಾಖ್ಯಾನ /ವಿವರಣೆ /ಚರ್ಚೆ ಇಲ್ಲಿಲ್ಲ. ಕಣ್ಣ ಮುಂದೆ ನಡೆಯುವ ಸಾಮಾನ್ಯ ಎನಿಸುವ ಆದರೆ ನಿಜಕ್ಕೂ ಅಸಾಮಾನ್ಯವಾದ ಕೆಲವು ಸಂಗತಿಗಳನ್ನು ಮನಗಾಣುವುದೂ ಸುಲಭ ಸಂಗತಿ ಅಲ್ಲವೇನೋ .

Submitted by shreekant.mishrikoti Sun, 02/24/2013 - 14:38

In reply to by shreekant.mishrikoti

ಮೇಲಿನ ಪ್ರತಿಕ್ರಿಯಯಲ್ಲಿ ಕೆಲವು ತಪ್ಪುಗಳಿವೆ ... ಅದನ್ನು ದಯವಿಟ್ಟು ಈ ಕೆಳಗಿನಂತೆ ಓದಿಕೊಳ್ಳಿ

"ಪುರುಶೋತ್ತಮನ ಆದರ್ಶಗಳು ಪ್ರಶ್ನೆ ಮೂಡಿಸುವಂಥವೇ ಅನಿಸಿದೆ."

----ಈ ಕಾದಂಬರಿಯಲ್ಲಿ ಪುರುಷೋತ್ತಮನ ಆದರ್ಶಗಳ ಬಗ್ಗೆ ಏನೂ ಹೇಳಿಲ್ಲ; ಆದರೆ ಅವನ ನಿರ್ಧಾರ ಮತ್ತು ಕೃತಿಗಳ ಮೂಲಕವೇ ನಾವು ಅವನ್ನು ಅರ್ಥ ಮಾಡಿಕೊಳ್ಳಬೇಕು.

"ಅದೇಕೆ ಒಬ್ಬ ತನ್ನ ಪೂರ್ವಿಕರ ಆಸ್ತಿಗೆ ಅಷ್ಟೊಂದು ವ್ಯಾಮೋಹ ಬೆಳೆಸಿ ಜೋತಾಡಬೇಕು,‍‍‍‍‍‍"

------ ಆಸ್ತಿಯ ಬಗೆಗಿನ ವ್ಯಾಮೋಹಕ್ಕಿಂತ ಒಬ್ಬ ಮನುಷ್ಯ ತನ್ನ ಆಸ್ತಿಯನ್ನು ಮಾರಿಕೊಳ್ಳುವುದು ಬಿಡುವುದು ಅವನ ಇಷ್ಟ ಆಗಬೇಕೇ ಹೊರತು ಕೊಳ್ಳಬಯಸುವರ ಅನಗತ್ಯ ಆಮಿಷ, ಬೆದರಿಕೆ , ಒತ್ತಡಗಳು ತಪ್ಪು ಅಲ್ಲವೇ? . ಇಲ್ಲಿ ಕೇವಲ ಪೂರ್ವೀಕ(?)ರ ಆಸ್ತಿಯ ವ್ಯಾಮೋಹ ಅಷ್ಟೇ ಇಲ್ಲ . ಇನ್ನೂ ಏನೇನೋ ಇದೆ. ಅದನ್ನೆಲ್ಲ ಕಂಡುಕೊಳ್ಳಲೇ ಇಡೀ ಕಾದಂಬರಿಯನ್ನು ಇನ್ನೊಮ್ಮೆ ಓದಬೇಕಾಯಿತು. ಯಾವ ಸಾಲನ್ನೂ ಬಿಡದೇ ಓದುವುದು ತುಂಬ ಅವಶ್ಯಕ ಇಲ್ಲಿ! ನಾನು ಕಂಡುಕೊಂದದ್ದು ಏನೆಂಬುದನ್ನೂ , ಕೊನೆಯಲ್ಲಿ ಅವನಲ್ಲಾದ ಅದ್ಭುತ ಪರಿವರ್ತನೆಯನ್ನೂ ಬೇಕೆಂದೇ ತಿಳಿಸಿಲ್ಲ!! ಹಾಗೆ ತಿಳಿಸಿದಲ್ಲಿ ಈ ಅದ್ಭುತ ಸೃಷ್ಟಿಗೆ ನಾನು ಅನ್ಯಾಯ ಮಾಡಿದಂತಾದೀತು!! ನೀವೂ ಸಾಧ್ಯ ಇದ್ದರೆ ಇನ್ನೊಮ್ಮೆ ಓದಿ!!

Submitted by Shreekar Sun, 02/24/2013 - 19:29

In reply to by shreekant.mishrikoti

ಪುರುಷೋತ್ತಮ ಪ್ರಕಟವಾದಾಗ ಒಮ್ಮೆ ಓದಿದ್ದೆ, ಕುತೂಹಲಕಾರಿಯಾಗಿತ್ತು.

ರಿಯಲ್ ಎಸ್ಟೇಟ್ ನ ತಿಮಿಂಗಿಲಗಳು ಹೇಗೆ ತಮ್ಮ ಹಿತಾಸಕ್ತಿಗಳಿಗಾಗಿ ಮುಂಬಯಿಯಲ್ಲಿ ಮತೀಯಗಲಭೆಗಳನ್ನು ಹುಟ್ಟಿಹಾಕುವರು ಎಂಬುದನ್ನು ಓದಿದ ನೆನಪು.

Submitted by Aravind M.S Mon, 02/25/2013 - 15:08

In reply to by shreekant.mishrikoti

ಶ್ರೀಕಾಂತರೆ,

ಪುರುಶೋತ್ತಮ ಮತ್ತೆ ಓದಬೇಕಾದ ಕಾದಂಬರಿ ನಿಜ. ಧನ್ಯವಾದಗಳು. ವ್ಯಾಮೋಹ ಅನ್ನೋದು ತಪ್ಪಾಗುತ್ತದೆ ‍‍ ಒಂದು ಮನೆ ಅನ್ನೋದು ಹಲವು ಕಲ್ಪನೆಗಳನ್ನು ತೆಗೆದಿಡುವ, ನಮ್ಮ ಮನೋ ವಿಸ್ತಾರಗಳನ್ನ ರೂಪಿಸುವ ವಾಸ ಸ್ಥಾನ. ಅದಕ್ಕೆ ಇರಬೇಕು ಅದು ಮನೆ ಅನ್ನಿಸಿಕೊಂಡಿರೋದು.

‍‍ ಅರವಿಂದ

Submitted by sri.ja.huddar Fri, 12/20/2013 - 16:19

ಯಶವಂತ ಚಿತ್ತಾಲರು ಸಾಹಿತ್ಯಾಸಕ್ತರು ಮರೆಯಲಾರದ ಹೆಸರು ಅವರ ಶಿಕಾರಿ ಯಂತೂ ಬೊಂಬಾಟ, ಅಲ್ಲದೇ ಅವರ 40 ಕಥೆಗಳು ನಾನು ಓದಿದ್ದೇನೆ. ಅವರ ಕಾದಂಬರಿ ಪರಿಚಯಿಸಿದ್ದಕ್ಕೆ ವಂದನೆಗಳು.