"ಯಶವಂತ ಹಳಿಬಂಡಿ" ಇನ್ನು ಮುಂದೆ ಕನಸು!

"ಯಶವಂತ ಹಳಿಬಂಡಿ" ಇನ್ನು ಮುಂದೆ ಕನಸು!

ಚಿತ್ರ

ಬುಧವಾರ ಬೆಳಗ್ಗೆ 7-30 ಗಂಟೆಗೆ ತೀವ್ರ ಎದೆನೋವಿನಿಂದಾಗಿ ಸುಗಮ ಸಂಗೀತದ ಗಾಯಕ ಯಶವಂತ ಹಳಿಬಂಡಿ ಆಸ್ಪತ್ರೆಗೆ ಸಾಗಿಸುವ ಮೊದಲೆ ಅಸು ನೀಗಿದ್ದಾರೆ. 64 ವರ್ಷ ಈಗಿನ ದಿನಮಾನಗಳಲ್ಲಿ ಸಾಯುವ ವಯಸ್ಸಲ್ಲ. ಈಗಿನ ನೂತನ ವೈದ್ಯಕೀಯ ಆವಿಷ್ಕಾರಗಳು ಹಲವರ ಆಯಸ್ಸನ್ನು ಹೆಚ್ಚುವಂತೆ ಮಾಡಿವೆ. ಯಾಕೋ ಈತನ ಸಾವಿನ ಸುದ್ದಿ ಕಿವಿಗೆ ಬೀಳುತ್ತಿದ್ದಂತೆ ಸುಗಮ ಸಂಗೀತ ಲೋಕದ ಸಾಧಕರ ಸಾವಿನ ಚಿತ್ರಗಳು ಕಣ್ಮುಂದೆ ಸರಿದು ಹೋದವು. ಮೈಸೂರು ಅನಂತ ಸ್ವಾಮಿ, ಸಿ.ಅಶ್ವಥ, ಜಿ.ವಿ.ಅತ್ರಿ ಮತ್ತು ರಾಜೂ ಅನಂತ ಸ್ವಾಮಿ ಯವರ ಸಾವುಗಳು ಮನ ಕಲಕುವಂತಹವು. ಅನಂತ ಸ್ವಾಮಿ ಕಾಯಿಲೆ ಅನಾರೋಗ್ಯದಿಂದಾಗಿ ಸಂಭವಿಸಿದ್ದರೆ ಸಿ.ಅಶ್ವಥರದು ಮತ್ತೆ ಹೃದಯ ಸ್ತಂಭನದಿಂದ ಸಂಭವಿಸಿದ ಸಾವಾಗಿತ್ತು. ಆದರೆ ಜಿ.ವಿ.ಅತ್ರಿ ಕುಟುಂಬದ ಸಾವು ಮಾತ್ರ ಒಂದು ದಾರುಣ ಸಾವು. ಅದನ್ನು ನೆನೆಸಿಕೊಂಡರೆ ಇಂದಿಗೂ ಅದು ನಮ್ಮನ್ನ ತೀವ್ರವಾಗಿ ಕಾಡುತ್ತದೆ. ಪಿಕ್ನಿಕ್ ಹೋದಾಗ ತಮ್ಮ ಮಗು ನೀರಿಗೆ ಬಿದ್ದುದನ್ನು ಕಂಡು ಸಂರಕ್ಷಿಸಲು ಹೋದ ಅತ್ರಿ ಮತ್ತು ಅವರ ಕುಟುಂಬದ ಎಲ್ಲ ಸದಸ್ಯರ ಸಾವು ನಿಜ ಅರ್ಥದಲಿ ಒಂದು ಮನ ಕಲಕುವ ಸಾವು. ಆ ಕುಟುಂಬ ನಿರ್ವಂಶವಾದುದನ್ನು ನೆನೆಸಿ ಕೊಂಡರೆ ಸಾವು ಎಷ್ಟು ನಿರ್ದಯಿ ಎನಿಸುತ್ತದೆ. ಯಶವಂತ ಹಳಿಬಂಡಿಯದು ಒಂದು ಅನಿರೀಕ್ಷಿತ ಸಾವು, ಅನೇಕರಿಗೆ ಅವರಿಗೆ ಹೃದಯ ಸಂಬಂಧದ ಕಾಯಲೆ ಇರುವುದು ಗೊತ್ತಿರಲಿಲ್ಲ ಕೂಡ. ಹೀಗಾಗಿ ಇವರ ಸಾವು ಅವರ ಅಭಿಮಾನಿಗಳಿಗೆ ಒಂದು ಅನಿರೀಕ್ಷಿತ ದಿಗ್ಭ್ರಮೆ ಗೊಳಿಸಿದಂತಹುದು.

     ಸುಗಮ ಸಂಗೀತದ ಮೇರು ಗಾಯಕ ಆ ಕ್ಷೇತ್ರ ಬಡವಾಯಿತು ಎಂದೆಲ್ಲ ಹೇಳುವುದು ಒಂದು ಸರ್ವೇ ಸಾಮಾನ್ಯವಾದ ಮಾತು ಎಂದರೂ, ಅವರ ಸಾವು ನಮ್ಮನ್ನು ಏಕೆ ಕಾಡುತ್ತದೆ ಎನ್ನುವ ಪ್ರಶ್ನೆ ಇಲ್ಲಿಯದು. ಪಿ.ಕಾಳಿಂಗರಾವ್, ಮೈಸೂರು ಅನಂತಸ್ವಾಮಿ ಮತ್ತು ಸಿ.ಅಶ್ವಥ ಅವರುಗಳು ತಮ್ಮದೆ ಆದ ವಿಶಿಷ್ಟ ಗಾನ ಶೈಲಿಯನ್ನು ಹೊಂದಿದಂತಹ ಅದ್ಭುತ ಗಾಯಕರು. ಇವರೆಲ್ಲ ಮದಿರಾ ಪ್ರಿಯರೆ ಆದರೂ ಅವರ ಮಿತಿಯಲ್ಲಿ ಅದು ಇತ್ತು. ಆದರೆ ರಾಜೂ ಅನಂತಸ್ವಾಮಿಯ ಮೇಲೆ ಮದಿರೆಯ ಹಿಡಿತವಿತ್ತು. ಮೊದಲ ಮೂವರಿಗೆ ಅರ್ಧ ಆಯಸ್ಸು ಆಗಿ ಮುನ್ನಡೆದಿದ್ದರು, ಆದರೆ ರಾಜು ಅನಂತ ಸ್ವಾಮಿ ಇನ್ನೂ ಯುವಕ ನಾಗಿದ್ದ ಆದರೆ ಮದಿರೆ ತನ್ನ ಪ್ರಬಲ ಹಿಡಿತ ಸಾಧಿಸಿ ಆತನ ಜೀವನ ಮುಗಿಸಿ ಹಾಕಿದಳು. ಆದರೆ ಯಶವಂತ ಹಳಿಬಂಡಿ ಯಾವುದೇ ಸುಳಿವು ಕೊಡದೆ ಒಂದು ಮುಂಜಾವು ಎಲ್ಲ ಕೊಡವಿಕೊಂಡು ಹೊರಟು ಹೋದ. ಹೃದಯ ಸ್ತಂಭನ ಸಾವಿಗೊಂದು ನೆಪ. ಆದರೂ ಕಲಾವಿದರು, ಸಾಧಕರ ಸಾವು ಅವರ ಅಭಿಮಾನಿಗಳನ್ನು ಕಾಡುವುದು ಸುಳ್ಳಲ್ಲ. ಈ ಎಲ್ಲ ಗಾಯಕರೂ ಕನ್ನಡದ ಎಲ್ಲ ಕವಿಗಳ ಅದರಲ್ಲೂ ಬೇಂದ್ರೆ ಮತ್ತು ಕುವೆಂಪು ಮುಂತಾದವರ ರಚನೆಗಳನ್ನು ಹಾಡಿ ಅವರನ್ನು ಜನಪ್ರಿಯ ಗೊಳಿಸಿದ್ದಲ್ಲದೆ ತಾವೂ ಜನಪ್ರಿಯತೆ ಪಡೆದವರು. ಆದರೆ ಯಶವಂತ ಹಳಿಬಂಡಿ ಬೇಂದ್ರೆಯವರ ರಚನೆಗಳನ್ನು ಶುದ್ಧ ದಾರವಾಡಿ ಶೈಲಿಯಲ್ಲಿ ಹಾಡಿ ಸ್ವತಃ ಕವಿ ಬೇಂದ್ರೆಯವರೆ ಬೆರಗಾಗುವಂತೆ ಮಾಡಿದವರು. ಬೇಂದ್ರೆಯವರ ಭಾಷಾ ಶೈಲಿಯ ಅಭಿವ್ಯಕ್ತಿಗೆ ಒಂದು ಮಾದರಿಯಾದ ಹೆಗ್ಗಳಿಕೆ ಹಳಬಂಡಿಯವರದು.

     ಯಶವಂತ ಹಳಿಬಂಡಿಯದು ಒಂದು ಜಾನಪದ ಹಾಡುಗಾರರ ಮನೆತನ. ಈತನ ಹುಟ್ಟೂರು ಕಾರವಾರ ಜಿಲ್ಲೆಯ ತೇರಗಾಂವ ಎನ್ನುವ ಗ್ರಾಮ. 1950 ರ ಮೇ ತಿಂಗಳ 25 ರಂದು ಜನಿಸಿದ ಈತನಿಗೆ ಸಂಗೀತದ ಬಗೆಗೆ ಆಸಕ್ತಿ ಹುಟ್ಟಿದ್ದು ತಾಯಿ ಬಸವೇಶ್ವರಿಯವರಿಂದ. ಅವರು ತಮ್ಮ ಪಾಡಿಗೆ ತಾವು ಹಾಡಿಕೊಳ್ಳುತ್ತಿದ್ದರು. ಇದನ್ನು ಕುತೂಹಲದಿಂದ ಗಮನಿಸುತ್ತಿದ್ದ ಯಶವಂತನಲ್ಲಿ ತಾನೂ ಹಾಡುಗಾರನಾಗಬೇಕೆಂಬ ಬಯಕೆ ಪ್ರಬಲವಾಗ ತೊಡಗಿತು. ಆಗ ಧಾರವಾಡ ಆಕಾಶವಾಣಿ ಸುಗಮ ಸಂಗೀತಗಾರರಿಗೆ ಒಂದು ಪ್ರಮುಖ ವೇದಿಕೆಯಾಗಿತ್ತು. ಅನುರಾಧ ಧಾರೇಶ್ವರ ಮತ್ತು ಬಾಳಪ್ಪ ಹುಕ್ಕೇರಿಯವರ ಜನಪದ ಮತ್ತು ಕವಿಗಳ ರಚನೆಗಳನ್ನು ಆಕಾಶವಾಣಿ ಬಿತ್ತರಿಸುತ್ತಿತ್ತು. ಆಗ ಮಕ್ಕಳ ಗಿಳಿವಿಂಡು ಕಾರ್ಯಕ್ರಮ ಪ್ರತಿ ಭಾನುವಾರ ಪ್ರಸಾರವಾಗುತ್ತಿತ್ತು. ಅದು ವಿಶೇಷವಾಗಿ ಹೆಣ್ಣುಮಕ್ಕಳು ಮತ್ತು ಸಣ್ಣ ಮಕ್ಕಳಿಗೆ ಒಲವಿನ ಕಾರ್ಯಕ್ರಮವಾಗಿತ್ತು. ಯಶವಂತ ಹಳಬಂಡಿ ಸಹ ಆ ಕಾರ್ಯಕ್ರಮದಲ್ಲಿ ಭಾಗವಹಿಸಿ ತನ್ನದೆ ಆಧ ವಿಶೇಷ ಛಾಪು ಮೂಡಿಸಿದ್ದ. ಉತ್ತರ ಕರ್ನಾಟಕದ ಧಾರವಾಡ ಹಿಂದೂಸ್ಥಾನಿ ಸಂಗೀತದ ತವರೂರು. ಅದರ ವಶಕ್ಕೆ ಒಳಗಾದ ಹಳಿಬಂಡಿ ಲಕ್ಷ್ಮಣರಾವ ದೇವಾಂಗರವರಲ್ಲಿ ಶಿಷ್ಯವೃತ್ತಿಯನ್ನು ಆರಂಭಿಸಿ ನಂತರದಲ್ಲಿ ನಾರಾಯಣರಾವ ಮುಜುಮದಾರರವರಲ್ಲಿ ಹಿಂದುಸ್ಥಾನಿ ಗಾಯನದ ತರಬೇತಿ ಪಡೆದರು. ಧಾರವಾಡ ದಲ್ಲಿಯೆ ದಿಪ್ಲೋಮಾ ಪದವಿ ಪಡೆದ ಇವರು ಕೆಪಿಸಿ ಯಲ್ಲಿ ವೃತ್ತಿಯನ್ನು ಪ್ರಾರಂಭಿಸಿ ಸುಧೀರ್ಘ ಸೇವೆಯನ್ನು ಸಲ್ಲಿಸಿ ನಿವೃತ್ತಿ ಯನ್ನು ಹೊಂದಿ ಕೊನೆಗೆ ಬೆಂಗಳೂರನ್ನು ಆಯ್ಕೆ ಮಾಡಿಕೊಂಡು ಅಲ್ಲಿ ನೆಲೆ ನಿಂತು ಬದುಕು ಕಟ್ಟಿಕೊಂಡವರು.

     ಸುಮಾರು ನಾಲ್ವತ್ತೆರಡು ವರ್ಷಗಳ ಹಿಂದೆ ಧಾರವಾಡದ ಆಕಾಶವಾಣಿ ಕೇಂದ್ರದಲ್ಲಿ ಸುಗಮ ಸಂಗೀತದ ಗಾಯಕನಾಗಿ ಸೇರಿ ಜನಪ್ರಿಯತೆ ಪಡೆದವರು ಇವರು ತಮ್ಮ ಗಾಯನ ವೃತ್ತಿ ಬದುಕಿನಲ್ಲಿ ಭಾವಗೀತೆ, ಜನಪದ ಗೀತೆ, ವಚನ ಮತ್ತು ಭಕ್ತಿ ಪ್ರಧಾನ ಗೀತೆಗಳನ್ನು ಹಾಡಿ ಕನ್ನಡದ ಜನ ಮನ ಗೆದ್ದವರು. ಇವರು ಹಾಡಿದ ಸುಮಾರು 250 ಧ್ವನಿ ಸುರಳಿಗಳು ಆಸಕ್ತ ಕನ್ನಡಿಗರ ಮನೆಗಳಲ್ಲಿ ಮತ್ತು ಮನಗಳಲ್ಲಿ ಬಿಚ್ಚಿಕೊಂಡು ಅವರನ್ನು ರಂಜಿಸುತ್ತ ಬಂದಿವೆ ಎನ್ನುವುದು ಅವರ ಜನಪ್ರಿಯತೆಗೆ ಸಾಕ್ಷಿ. ಕೆಲವು ಸಿನೆಮಾಗಳಿಗೂ ಇವರು ಹಾಡಿದ್ದು ಕರ್ನಾಡಕದ ಎಲ್ಲ ಸರ್ಕಾರಿ ಉತ್ಸವಗಳಲ್ಲಿ ಹಾಡಿ ಜನಮನ ರಂಜಿಸಿದ್ದಲ್ಲದೆ ಕೆಲವು ಸಲ ಸಂಗೀತ ನಿರ್ಧೇಶಕರಾಗಿಯೂ ಕಾರ್ಯ  ನಿರ್ವಹಿಸಿದ ಹೆಗ್ಗಳಿಕೆ ಇವರದು. ಹತ್ತು ಹಲವು ಸ್ರಶಸ್ತಿಗಳು ಇವರನ್ನು ಅರಸಿ ಬಂದಿವೆ ಎನ್ನುವುದು ಇವರ ಸಂಗೀತ ಸಾಧನೆಯ ಕುರುಹುಗಳು ಎನ್ನಬಹುದು. ಗಾಯನ ಕ್ಷೇತ್ರದಲ್ಲಿ ಉನ್ನತಸ್ಥಾನ ಕ್ಕೇರಿದ ಇವರು ಸರಳವಾಗಿದ್ದರು, ಜನಪ್ರಿಯತೆ ಪಡೆದಿದ್ದರು ನಗುವುದ ಸಹಜ ಧರ್ಮ ನಗಿಸುವುದು ಪರಧರ್ಮವೆಂಬುದನ್ನು ತಮ್ಮ ಜೀವನದ ನಡೆಯನ್ನಾಗಿ ಆರಿಸಿ ಕೊಂಡಿದ್ದರು. ತಾವು ಗಳಿಸಿದ ಹೆಸರು ಜನಪ್ರಿಯತೆ ಎಲ್ಲವನ್ನೂ ಇಲ್ಲಿಯೇ ಬಿಟ್ಟು ತನ್ನ ಜೀವನದ ಬಂಡಿಯನು ಕಾಣದ ದಾರಿಯಲಿ ಮುನ್ನಡೆಸಿಕೊಂಡು ಸಾಗಿ ಹೋಗಿದ್ದಾರೆ. ಅವರ ಈ ಬಂಡಿ ಪಯಣಕ್ಕೆ ಒಂದು ಶುಭ ವಿದಾಯ ಹೇಳೋಣ !

         ಚಿತ್ರ ಕೃಪೆ : ಅಂತರ್ ಜಾಲ  ,ಅವರ ಹಾಡಿಗೆ ಒಂದು ಕೊಂಡಿ Naanu Chikkavanagiddaga appa helutiddaru...........by yashwanth Halibandi - YouTube
http://www.youtube.com/watch?v=yaehy4yFp_U

                                                                               +++                                                                                                     

Rating
No votes yet

Comments

Submitted by nageshamysore Sat, 01/25/2014 - 04:55

ಪಾಟೀಲರೆ ನಮಸ್ಕಾರ. ಗಾಯನ ಕ್ಷೇತ್ರದ ಘಟಾನುಘಟಿಗಳೆಲ್ಲ ಹೀಗೆ ವಿದಾಯ ಹೇಳುತ್ತಿರುವ ಪರಿ ನಿಜಕ್ಕೂ ಖೇದಕರ. ಹೀಗೆ ಹೋದವರ ಸ್ಥಾನ ತುಂಬುವ ಕೆಲಸ ಅಷ್ಟು ಸುಲಭವೂ ಅಲ್ಲ.
ಕಳೆದ ನವಂಬರಿನ ದೀಪಾವಳಿ-ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಿಂಗಪುರಕ್ಕೆ ಬಂದ ಉಪಾಸನ ಮೋಹನ್ ತಂಡದವರು ಭಾವ ಸುಧೆ ಕಾರ್ಯಕ್ರಮ ನಡೆಸಿಕೊಟ್ಟಿದ್ದರು. ಅವರಲ್ಲಿ ಪಂಚಮ್ ಹಳಿಬಂಡಿ ಎಂಬ ಹೆಸರಿನ ಯುವ ಗಾಯಕರೂ ಜತೆಯಲಿ ಹಾಡಿದ್ದರು. ಅವರೇನಾದರೂ ಯಶವಂತ್ ಹಳಿಬಂಡಿಯವರ ಪುತ್ರರೊ , ಸಂಬಂಧಿಯೊ ಇರಬಹುದೆಂದು ಕಾಣುತ್ತದೆ. ಅವರ ಆತ್ಮಕ್ಕೆ ಭಗವಂತನು ಚಿರಶಾಂತಿ ಒದಗಿಸಲಿ.
ಧನ್ಯವಾದಗಳೊಂದಿಗೆ 
ನಾಗೇಶ ಮೈಸೂರು

Submitted by H A Patil Sat, 01/25/2014 - 20:03

In reply to by nageshamysore

ನಾಗೇಶ ಮೈಸೂರು ರವರಿಗೆ ವಂದನೆಗಳು
ತಮ್ಮ ಅಭಿಪ್ರಾಯ ಓದಿದೆ ತಮ್ಮ ಅನಿಸಿಕೆ ಸರಿ ಇದೆ ಹಳೆಯ ನೀರು ಹರಿದು ಹೋದಂತೆ ಹೊಸ ನೀರು ಬರುತ್ತಿರಬೇಕು ಅದು ಜೀವಂತಿಕೆಯ ಲಕ್ಷ ಣ. ಆದರೆ ಹರಿದು ಹೋದ ನೀರಿನ ಬಗೆಗೆ ಅದು ಹಾಕಿಕೊಟ್ಟು ಹೋದ ಪರಂಪರೆಯ ಬಗೆಗೆ ಒಂದು ಗೌರವ ವಿರಬೇಕು. ಆ ಕೃತಜ್ಞತೆಯ ಪ್ರತೀಕವೆ ಈ ಲೇಖನ. ಪಂಚಮ ಹಳಿಬಂಡಿ ಯಶವಂತರವರ ಮಗ ಆತ ಸಹ ತಂದೆಯಂತೆ ಗಾಯಕ. ಇನ್ನೊಬ್ಬ ಮಗ ತಬಲಾ ವಾದಕ ಅವರ ಹೆಸರು ತಕ್ಷಣಕ್ಕೆ ನೆನಪಿಗೆ ಬರುತ್ತಿಲ್ಲ. ಬೇಸರಿಸದೆ ತಾವು ಪ್ರತಿಕ್ರಿಯಿಸುವ ಶ್ರಮಕ್ಕೆ ಧನ್ಯವಾದಗಳು.

Submitted by ಗಣೇಶ Sun, 01/26/2014 - 21:52

In reply to by H A Patil

ಪಂಚಮ ಹಳಿಬಂಡಿಯೂ ಉತ್ತಮ ಗಾಯಕ. ಸುಗಮಗೀತೆಗಳ ಗಾಯಕರನ್ನೆಲ್ಲಾ ಸೇರಿಸಿ ಚಂದನ ಟಿವಿಯಲ್ಲಿ(?)ಹಿಂದೊಮ್ಮೆ ಒಂದು ಸುಗಮ ಗೀತೆಗಳ ಸ್ಪರ್ಧೆ ನಡೆಸಿದ್ದರು. ಸೂಪರ್ ಆಗಿತ್ತು. ಪಂಚಮ ಟಿ.ವಿ ಆಕ್ಟರ್ ಆಗಿ ಈಗಿನ ಸೀರಿಯಲ್ ವೀಕ್ಷಕರಿಗೆ ಪರಿಚಿತರು.
ಪಾಟೀಲರೆ, ವಿದಾಯ ಲೇಖನಕ್ಕೆ ಧನ್ಯವಾದಗಳು.http://www.youtube.com/watch?annotation_id=annotation_1504200297&feature...

Submitted by H A Patil Mon, 01/27/2014 - 19:29

In reply to by ಗಣೇಶ

ಗಣೇಶ ರವರಿಗೆ ವಂದನೆಗಳು
ಯಶವಂತ ಹಳಛಿಬಂಡಿ ಕುರಿತು ತಾವು ಬರೆದ ಪ್ರತಿಕ್ರಿಯೆ ಓದಿದೆ, ನಾನು ಟಿವಿ ಸೀರಿಯಲ್ ಗಳನ್ನು ನೋಡುವುದು ಬಹಳ ಕಡಿಮೆ ಹೀಗಾಗಿ ನನಗೆ ಪಂಚಮ ಬಗೆಗೆ ನನಗೆ ಅಷ್ಟು ಗೊತ್ತಿಲ್ಲ, ವರ್ತಮಾನದ ಪೂರಕ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು.

Submitted by ravindra n angadi Sat, 01/25/2014 - 13:22

ನಮಸ್ಕಾರಗಳು ಸರ್
ಯಸವಂತ ಹಳಿಬಂಡಿಯವರು ನೆನಪು ಕರ್ನಾಟಕದ ಮನೆ ಮನೆಯಲಿ ಹರಿಡಿದೆ
ಯಸವಂತ ಹಳಿಬಂಡಿಯವರು ಹುಬ್ಬಳ್ಳಿಯಲಿ ಬಹು ದಿನಗಳ ಹಿಂದೆ ಕಾರ್ಯಕ್ರಮವನು ನಡೆಸಿಕೊಟ್ಟಿದ್ದರು ಅದನು ಕಂಡು ತುಂಬಾಸಂತೋಷ ಪಟ್ಟದೆವು ಆದರೆ ಇಂದು ದ:ಖದ ಸಂಗತಿ ಕೆಳಿ ತಂಬಾ ಮನಸ್ಸಿಗೆ ನೂವಾಗುತ್ತದೆ. ಈ ಸಾವು ನ್ಯಾಯವೆ ಸರ್

Submitted by H A Patil Sat, 01/25/2014 - 20:12

In reply to by ravindra n angadi

ರವೀಂದ್ರ ಎನ್ ಅಂಗಡಿಯವರಿಗೆ ವಂದನೆಗಳು.
ಈ ಲೇಖನಕ್ಕೆ ತಾವು ಬರೆದ ಪ್ರತಿಕ್ರಿಯೆ ಓದಿದೆ, ಯಶವಂತ ಹಳಿಬಂಡಸಿ ಓರ್ವ ಅದ್ಭುತ ಗಾಯಕ ಅವರನ್ನು ನೋಡಿ ಅವರ ಗಾಯನ ಸುಧೆಯನ್ನು ಪ್ರತ್ಯಕ್ಷವಾಗಿ ಸವಿದ ತಾವು ಧನ್ಯರು. ಈ ಸಾವು ನ್ಯಾಯವೆ ಎಂದಿದ್ದೀರಿ, ಈ ಸಾವು ಮಾತ್ರವಲ್ಲ ಯಾವುದೆ ರೀತಿಯ ಸಾವು ನ್ಯಾಯವಲ್ಲ, ಆದರೆ ಏನು ಮಾಡುವುದು ಹುಟ್ಟು ಅಕಸ್ಮಿಕ ಸಾವು ನಿಶ್ಚಿತ ಇದು ಜಗದ ನಿಯಮ. ಈ ನಿಜ ತತ್ವವನ್ನು ಅರಿತರೆ ಸಾವಿನ ಭಯ ನನ್ನನ್ನು ಕಾಡದು. ನನ್ನ ವೃತ್ತಿ ಬದುಕಿನಲ್ಲಿ ವಿವಿಧ ಬಗೆಯ ಸಾವಿರಾರು ಸಾವುಗಳನ್ನು ಕಂಡಿದ್ದೇನೆ, ಅಂತಹ ಮೃತರ ಜೊತೆ ಒಂಟಿಯಾಗಿ ಕಾಲ ಕಳೆದಿದ್ದೇನೆ, ಕೆಲವರ ಅಂತಹ ಸಂಸ್ಕಾರ ಸಹ ಮಾಡಿ ಬಂದಿರುತ್ತೇನೆ. ಸಾವಿನ ಭಯ ನನ್ನನ್ನು ಕಾಡದು, ಸಾವು ನಮ್ಮ ಬೆಂಬಿಡದ ಸ್ನೇಹಿತ. ಹೆಂಡತಿ ಮಕ್ಕಳು ಬಂಧುಗಳು ಸ್ನೇಹಿತರು ಎಲ್ಲ ಇಲ್ಲಿಯೇ ಉಳಿಯುತ್ತಾರೆ, ಆದರೆ ಸಾವು ನಮ್ಮ ಜೊತೆಗಾರ ಈ ಭಾವವನ್ನು ನಾವು ಅರ್ಥ ಮಾಡಿಕೊಂಡರೆ ಸಾವಿನ ಭಯ ನಮ್ಮನ್ನು ಕಾಡದು. ಪ್ರತಿಕ್ರಿಯೆಗೆ ಧನ್ಯವಾದಗಳು.

Submitted by RAMAMOHANA Tue, 01/28/2014 - 20:34

ಸತ್ತೆನೆಂದೆನಬೇಡ‌ ಸೋತೆನೆಂದೆನಬೇಡ‌
ಬತ್ತಿತೆನ್ನೊಳೂ ಸತ್ವದೂಟೆಯೆನಬೇಡ‌
ಮ್ಱುತ್ಯುಯೆಂಬುದೊಂತೆರೆಯೇರು ತೆರೆಯಿಳಿತ‌
ಮತ್ತೆ ತೋರ್ಪಿದು ನಾಳೆ ಮಂಕು ತಿಂಮ‌
ನೆನಪಾದ‌ ಡಿ ವೀ ಜಿ ಯವರ‌ ಕಗ್ಗ‌. ಯಶವಂತ‌ ಹಳಬಂಡಿಯವರ‌ ಚಿತ್ರಣ‌ ಸೊಗಸಾಗಿದೆ ಪಾಟೀಲರೆ. ಅವರು ನಮ್ಮ‌ ಮಧ್ಯೆ ಇಲ್ಲದಿದ್ದರೂ, ಅವರ‌ ಕಂಠ‌ ಸಿರಿ ನಮ್ಮಿಂದ‌ ಯವತ್ತೂ ಮರೆಯಾಗುವುದಿಲ್ಲ‌.
ರಾಮೋ.

Submitted by H A Patil Wed, 01/29/2014 - 19:15

In reply to by RAMAMOHANA

ರಾಮ ಮೋಹನ ರವರಿಗೆ ವಂದನೆಗಳು
ಈ ಲೇಖನ ಕುರಿತು ತಾವು ಬರೆದ ಪ್ರತಿಕ್ರಿಯೆ ಅದರಲ್ಲಿಯೂ ತಾವು ಸಾಂಧರ್ಭಿಕವಾಗಿ ಡಿವಿಜಿ ಯವರ ಮಂಕು ತಿಮ್ಮನ ಕಗ್ಗದಲ್ಲಿ ಅವರು ಸಾವನ್ನು ಕುರಿತು ಬರೆದ ಕಗ್ಗದ ಸಾಲುಗಳು ಈ ಲೇಖನದ ಮಹಿತಯನ್ನು ಹೆಚ್ಚಿಸಿವೆ ಎಂದು ದಾಖಲಿಸಲು ನನಗೆ ಹರ್ಷವಾಗುತ್ತದೆ, ಧನ್ಯವಾದಗಳು.