ಯಾತಕ್ಕೆ ಮಳೆ ಹೋದವೋ...

ಯಾತಕ್ಕೆ ಮಳೆ ಹೋದವೋ...

ಮೋಡಗಳು ಮುನಿಸಿಕೊಂಡಿವೆ.

ನಾನು ತಲೆ ಎತ್ತಿ ನೋಡುತ್ತಲೇ ಇದ್ದೇನೆ. ನೀಲಿ ಆಗಸ ಒಂಚೂರೂ ಕಾಣದ ಹಾಗೆ ಮೋಡಗಳಿವೆ. ಆದರೆ, ಮಳೆ ಬರುತ್ತಿಲ್ಲ. ಆಷಾಡದ ಗಾಳಿಗೆ ಮೋಡಗಳು ಸುಮ್ಮನೇ ತೇಲಿ ಹೋಗುತ್ತಿವೆ. ಕಪ್ಪು ಮೋಡಗಳು ಅಪರೂಪವಾಗಿ, ಬಿಳಿ ಮೋಡಗಳ ತೆಳು ಸಾಮ್ರಾಜ್ಯದ್ದೇ ಕಾರುಬಾರು. ಗಾಳಿಗೆ ಸಿಕ್ಕಿ ತೇಲಿ ಹೋಗುವ ಅರಳೆ ಉಂಡೆಗಳಂತೆ ಸೆಳೆತಕ್ಕೆ ಸಿಕ್ಕವಂತೆ ಎಲ್ಲೋ ಹೊರಟಿವೆ.

ಏಕೆ ಮಳೆ ಬರುತ್ತಿಲ್ಲ?

ಹವಾಮಾನ ವೈಪರಿತ್ಯ ಎನ್ನುತ್ತದೆ ಯಾವಾಗಲೂ ಎಡವುವ ಹವಾಮಾನ ಇಲಾಖೆ. ಎಲ್‌ ನಿನೋ ಎಂದು ಬಡಬಡಿಸುತ್ತಾರೆ ಕೃಷಿ ವಿಶ್ವವಿದ್ಯಾಲಯದ ಒಂದಿಷ್ಟು ಬುದ್ಧಿವಂತರು. ಹಾಗಂದರೇನು ಎಂದು ಕೇಳಿದರೆ ಅವರಿಗೇ ಸರಿಯಾಗಿ ಗೊತ್ತಿಲ್ಲ. ಎಲ್ಲೋ ಅಟ್ಲಾಂಟಿಕ್‌ ಸಾಗರದ ಹವಮಾನದಲ್ಲಿ ಆಗಾಗ ಇಂಥ ಬದಲಾವಣೆಗಳಾಗುತ್ತವಂತೆ. ಬಿಸಿ ನೀರ ಪ್ರವಾಹದ ವೈಪರಿತ್ಯದಿಂದ ಸಮುದ್ರದ ನೀರು ಅಗತ್ಯಕ್ಕಿಂತ ಹೆಚ್ಚು ಆವಿಯಾಗುತ್ತದೆ. ಹೀಗೆ ಹುಟ್ಟಿದ ಮೋಡಗಳು ಕೆಲ ಪ್ರದೇಶಗಳಲ್ಲಿ ವಿಪರೀತ ಮಳೆ ಸುರಿಸಿಬಿಡುತ್ತವೆ. ಇನ್ನೊಂದೆಡೆ, ನಿಗದಿತ ಪ್ರಮಾಣದಲ್ಲಿ ಮಳೆ ಬೀಳಬೇಕಾದ ಪ್ರದೇಶಗಳತ್ತ ಹೋಗುವ ಮೋಡಗಳ ಮೈಯಲ್ಲಿ ತೇವಾಂಶವೇ ಉಳಿದಿರುವುದಿಲ್ಲವಂತೆ. ಆಗ ಇಂಥ ಪರಿಸ್ಥಿತಿ ಉಂಟಾಗುತ್ತದಂತೆ.

ಇಂಟರ್‌ನೆಟ್‌ನಲ್ಲಿ ಈ ಕುರಿತು ಹೆಚ್ಚಿನ ಮಾಹಿತಿ ಪಡೆಯೋಣ ಎಂದು ಅನ್ನಿಸಿದರೂ ಅತ್ತ ಮನಸ್ಸು ಹರಿಯಲಿಲ್ಲ.

ಮಾಹಿತಿ ತೆಗೆದುಕೊಂಡೇನು ಮಾಡುವುದು? ನಮ್ಮನ್ನು ಎಚ್ಚರಿಸಬೇಕಾದ ಹವಾಮಾನ ಇಲಾಖೆಯೇ ಸುಮ್ಮನೇ ಕೂತಿದೆ. ಮಾಹಿತಿಯಿಂದ ನಮಗೇನು ಉಪಯೋಗ ಈಗ? ಮಳೆ ಸರಿಯಾಗಿ ಬಂದಿಲ್ಲ. ಬರುವ ಲಕ್ಷಣಗಳೂ ಕಾಣುತ್ತಿಲ್ಲ. ಅದೊಂದೇ ವಾಸ್ತವ.

ಧಾರವಾಡದ ಸುತ್ತಮುತ್ತಲಿನ ಪ್ರದೇಶಗಳ ರೈತರು ಬಿತ್ತನೆ ಮಾಡಿ ಒಂದು ತಿಂಗಳಾಯಿತು. ಗೊಬ್ಬರಕ್ಕಾಗಿ ರೈತರು ಪ್ರತಿಭಟನೆ ಮಾಡಿದ್ದರು. ಗುಂಡೇಟು ತಿಂದಿದ್ದರು. ರಾಸಾಯನಿಕ ಗೊಬ್ಬರ ಇಲ್ಲದಿದ್ದರೆ ಬೆಳೆಯಲು ಸಾಧ್ಯವೇ ಇಲ್ಲ ಎಂಬಂತೆ ವರ್ತಿಸಿ ಬಿತ್ತಿದ್ದರು. ಈಗ ನೋಡಿದರೆ ಮಳೆಯೇ ಇಲ್ಲ. ಮೊಳಕೆಯೊಡೆದು ಗೇಣಗಲ ಎದ್ದಿರುವ ಬೆಳೆಗಳು ನಿಧಾನವಾಗಿ ಹಳದಿಯಾಗುತ್ತಿವೆ. ಇನ್ನೊಂದಿಷ್ಟು ದಿನದಲ್ಲಿ ಅವು ಒಣಗಿ ಸಾಯುತ್ತವೆ.

ಆಗ ಮತ್ತೆ ರೈತರ ಆತ್ಮಹತ್ಯೆ ಶುರುವಾಗುತ್ತದೆ. ಗಣೇಶ ಚತುರ್ಥಿ ಹೊತ್ತಿಗೆ ಗಣೇಶನ ಬದಲಾಗಿ, ರೈತರ ಶವಗಳ ಮೆರವಣಿಗೆಯೇ ಎಲ್ಲ ಕಡೆ ಕಂಡೀತು.

ಮತ್ತೆ ತಲೆ ಎತ್ತಿ ನೋಡುತ್ತೇನೆ. ಅಂಥ ಸ್ಥಿತಿ ತರಬೇಡಿ ಎಂದು ಮೋಡಗಳನ್ನು ಬೇಡಿಕೊಳ್ಳುತ್ತೇನೆ. ಆದರೆ, ಮೋಡಗಳಿಗೆ ಮೊರೆ ಅರ್ಥವಾಗುವುದಿಲ್ಲ. ಅವಕ್ಕೆ ತಮ್ಮದೇ ಆದ ಗುರಿಯಿದೆ. ದಾರಿಯಿದೆ. ಲೆಕ್ಕಾಚಾರವಿದೆ. ಎಲ್ಲ ಮನವಿಗಳನ್ನು ನಿರ್ಲಕ್ಷ್ಯಿಸಿ ಹಾರಿ ಹೋಗುತ್ತಿವೆ.

ಈಗ ಸರ್ಕಾರ ಮೋಡ ಬಿತ್ತನೆಯ ಮಾತನ್ನಾಡುತ್ತಿದೆ. ಹೊರ ರಾಜ್ಯಗಳಿಂದ ವಿದ್ಯುತ್‌ ಖರೀದಿಸುವ ಮಾತನ್ನಾಡುತ್ತಿದೆ. ಕೆಲಸ ಮಾಡಬೇಕೆನ್ನುವ ವಿಚಾರದ ಬಿತ್ತನೆ ರಾಜಕಾರಣಿಗಳ ಮೆದುಳಿನಲ್ಲಿ ಆಗಿದ್ದರೆ, ಉತ್ಸಾಹದ ವಿದ್ಯುತ್‌ ಅವರ ಮೈಯೊಳಗೆ ಇದ್ದರೆ ಈ ಪರಿಸ್ಥಿತಿಯನ್ನು ನಾವು ಚೆನ್ನಾಗಿ ನಿಭಾಯಿಸಬಹುದಿತ್ತೇನೋ. ಆದರೆ, ಶಾಸಕರ ಖರೀದಿಯಲ್ಲಿ ಅವರು ತೋರಿದ ಉತ್ಸಾಹದ ಕಾಲು ಭಾಗ ಈ ಸಮಸ್ಯೆ ಪರಿಹರಿಸುವುದರಲ್ಲಿ ಕಾಣುತ್ತಿಲ್ಲ.

ಮನಸ್ಸು ಮತ್ತೆ ಮತ್ತೆ ಮೊರೆಯಿಡುತ್ತಿದೆ: ’ಎಲ್ಲಿ ಓಡುವಿರಿ, ನಿಲ್ಲಿ ಮೋಡಗಳೇ, ನಾಲ್ಕು ಹನಿಯ ಚೆಲ್ಲಿ...’ ಊಹೂಂ, ಮೋಡಗಳು ನಿಲ್ಲುತ್ತಿಲ್ಲ. ಹನಿ ಚೆಲ್ಲುತ್ತಿಲ್ಲ. ಅವುಗಳ ಮುನಿಸು ಅರ್ಥವಾಗುತ್ತಿಲ್ಲ. ನಮ್ಮ ಕನಸು ಅವಕ್ಕೆ ಗೊತ್ತಾಗುತ್ತಿಲ್ಲ. ಹಾರುವ ಮೋಡಗಳ ಜೊತೆಜೊತೆಗೆ ಉತ್ಸಾಹವೂ ಹಾರಿ ಹೋದಂತಾಗಿದೆ.

ಮತ್ತೆ ಮಳೆ ಬಂದೀತೆ? ನೆಮ್ಮದಿ ತಂದೀತೆ?

- ಪಲ್ಲವಿ ಎಸ್‌.

Rating
No votes yet

Comments