ಯಾರು ನಮಸ್ಕಾರಕ್ಕೆ ಯೋಗ್ಯರು?
ಯಾರು ನಮಸ್ಕಾರಕ್ಕೆ ಯೋಗ್ಯರು? ಎಂಬುದಕ್ಕೆ ನಮ್ಮ ಸೂಕ್ತಕಾರರು ಕೊಡುವ ವಿವರಣೆಯನ್ನು ನೋಡಿದರೆ ಆಶ್ಚರ್ಯವಾಗದಿರದು. ಒಂದು ಸೂಕ್ತದ ಸುತ್ತ ಇಂದಿನ ಚಿಂತನ ನಡೆಸಬೇಕೆನಿಸಿದೆ.
ವಾಂಛಾ ಸಜ್ಜನ ಸಂಗತೌ ಪರಗುಣೇ ಪ್ರೀತಿರ್ಗುರೌ ನಮ್ರತಾ |
ವಿದ್ಯಾಯಾಂ ವ್ಯಸನಂ ಸ್ವಯೋಷಿತಿ ರತಿರ್ಲೋಕಾಪವಾದಾದ್ಭಯಮ್ ||
ಭಕ್ತಿಃ ಶೂಲಿನಿ ಶಕ್ತಿರ್ ಆತ್ಮ ದಮನೇ ಸಂಸರ್ಗ ಮುಕ್ತಿಃ ಖಲೈಃ |
ಏತೇ ಯೇಷು ವಸಂತಿ ನಿರ್ಮಲಗುಣಾಸ್ತೇಭ್ಯೋ ಮಹದ್ಭ್ಯೋ ನಮಃ ||
ಸಜ್ಜನರ ಸಹವಾಸದಲ್ಲಿ ಆಸೆ, ಪರರ ಗುಣಗಳಲ್ಲಿ ಪ್ರೀತಿ, ಗುರುವಿನಲ್ಲಿ ವಿಧೇಯತೆ, ವಿದ್ಯೆಯಲ್ಲಿ ಆಸಕ್ತಿ,ತನ್ನ ಪತ್ನಿಯಲ್ಲಿ ಸುಖಪಡುವಿಕೆ, ಲೋಕಾಪವಾದದದೆಸೆಯಿಂದ ಹೆದರಿಕೆ, ದೇವರಲ್ಲಿ ಭಕ್ತಿ, ಮನಸ್ಸನ್ನು ನಿಗ್ರಹಿಸುವುದರಲ್ಲಿ ಶಕ್ತಿ, ದುರ್ಜನರೊಡನೆ ಸಹವಾಸತ್ಯಾಗ, ಈ ನಿರ್ಮಲವಾದ ಗುಣಗಳು ಯಾರಲ್ಲಿರುತ್ತವೆಯೋ ಅಂತಹ ಮಹಾತ್ಮರಿಗೆ ನಮಸ್ಕಾರ."
ಸಜ್ಜನರ ಸಹವಾಸ:
ಎಂತಹ ಜನರಿಗೆ ನಮಸ್ಕರಿಸಬೇಕು? ನಮಸ್ಕಾರಕ್ಕೆ ಅರ್ಹ ವ್ಯಕ್ತಿಗಳ ಮೊದಲನೆಯ ಗುಣವೇ ಸಜ್ಜನ ಸಹವಾಸ. ಸರ್ವಜ್ಞ ವಚನದಲ್ಲಿ ಸಜ್ಜನರ ಸಹವಾಸವನ್ನು ಚೆನ್ನಾಗಿ ಬಣ್ಣಿಸಲಾಗಿದೆ. “ ಸಜ್ಜನರ ಒಡನಾಟ ಹೆಜ್ಜೇನು ಸವಿದಂತೆ, ದುರ್ಜನರ ಕೂಟ ಬಚ್ಚಲಿನ ಕೊಚ್ಚೆಯಂತಕ್ಕು ಸರ್ವಜ್ಞ. ಸಜ್ಜನನಾರು, ದುರ್ಜನನಾರು ಎಂದು ತಿಳಿಯಲು ಬಹಳಕಾಲ ಬೇಕಾಗುವುದಿಲ್ಲ. ಸೂಕ್ತಕಾರರು ಹೇಳುತ್ತಾರೆ….. “ ಮನಸ್ಯೇಕಂ ವಚಸ್ಯೇಕಂ ಕರ್ಮಣ್ಯೇಕಂ ಮಹಾತ್ಮನಾಂ” ಅಂದರೆ ಮನಸ್ಸಿನಲ್ಲೂ ಮಾತಿನಲ್ಲೂ ಮತ್ತು ಕರ್ಮದಲ್ಲೂ ಒಂದೇ ಆಗಿರುವವರು ಮಹಾತ್ಮರು ಅಥವಾ ಸಜ್ಜನರು. ವ್ಯಕ್ತಿಗಳ ನಡವಳಿಕೆಗಳಲ್ಲಿಯೇ ವೆತ್ಯಾಸವು ತಿಳಿಯದೆ ಇರದು. ಹೀಗೆ ಸಜ್ಜನನಾರು ಎಂದು ತಿಳಿದು ಅಂತವರ ಸಹವಾಸ ಮಾಡುವಂತಹ ಆಸೆಯುಳ್ಳವನು ನಮಸ್ಕಾರಕ್ಕೆ ಯೋಗ್ಯನು.
ಪರರ ಗುಣಗಳಲ್ಲಿ ಪ್ರೀತಿ:
ಎರಡನೆಯ ಯೋಗ್ಯತೆ ಎಂದರೆ ಪರರ ಗುಣಗಳಲ್ಲಿ ಪ್ರೀತಿ. ಸಾಮಾನ್ಯವಾಗಿ ಎಲ್ಲರಿಗೂ ತನ್ನನ್ನು ಬಣ್ಣಿಸಿಕೊಳ್ಳುವ ಪರಿಪಾಠ. ಅಂತರಂಗ ಶುದ್ಧಿಯ ಬಗ್ಗೆ ಬಸವಣ್ಣನವರು ಹೇಳುತ್ತಾರೆ ” ತನ್ನ ಬಣ್ಣಿಸಬೇಡ, ಇದಿರಹಳಿಯಲು ಬೇಡ” ಮನುಶ್ಯನಿಗಿರುವ ಈ ದೌರ್ಬಲ್ಯವನ್ನು ಮೆಟ್ಟಿನಿಲ್ಲುವುದು ಬಲು ಕಷ್ಟ.ಸಾಮಾನ್ಯವಾಗಿ ಒಂದು ಚಿಕ್ಕ ಸಹಾಯವನ್ನು ನಾವು ಇತರರಿಗೆ ಮಾಡಿದ್ದರೂ ಅದನ್ನು ಬಲು ದೊಡ್ಡದು ಮಾಡಿ ಸಿಕ್ಕಿದವರಿಗೆಲ್ಲಾ ಹೇಲಿದ್ದೇ ಹೇಳಿದ್ದು, ಜಂಬಾ ಕೊಚ್ಚಿಕೊಂಡಿದ್ದೇ ಕೊಚ್ಚಿಕೊಂಡಿದ್ದು! ಅದು ಎಷ್ಟೇ ದೊಡ್ದದಿರಲಿ ಮತ್ತೊಬ್ಬರ ಸದ್ಗುಣಗಳನ್ನು ಗುರುತಿಸುವ ಕೆಲಸವನ್ನು ನಾವು ಮಾಡುವುದಿಲ್ಲ.ಆದರೆರು ಯಾರು ಇನ್ನೊಬ್ಬರ ಸದ್ಗುಣವನ್ನು ಪ್ರೀತಿಸುತ್ತಾನೆ,ವನಿಗೆ ನಮಸ್ಕರಿಸು, ಎಂದು ಈ ಸೂಕ್ತವು ಕರೆಕೊಡುತ್ತದೆ.
ಗುರುವಿನಲ್ಲಿ ವಿಧೇಯತೆ:
“ಗುರುವಿನ ಗುಲಾಮನಾಗುವತನಕ ದೊರೆಯದಣ್ಣ ಮುಕುತಿ” ಗುರುವಿನ ಮಹತ್ವವನ್ನು ದಾಸರು ಚೆನ್ನಾಗಿ ಬಣ್ಣಿಸಿದ್ದಾರೆ. ಗುರು ಅಂದರೆ ಯಾರು? ಎಂಬ ಪ್ರಶ್ನೆ ಸಹಜವಾಗಿ ಬರುತ್ತದೆ. ಯಾರು ಅಜ್ಞಾನದ ಅಂಧಕಾರದಿಂದ ಸುಜ್ಞಾನದ ದ ಕಡೆಗೆ ಕರೆದುಕೊಂಡು ಹೋಗುತ್ತಾನೋ ಅವನು ಗುರು ಎನಿಸಿಕೊಳ್ಳುತ್ತಾನೆ. ಜೀವನದಲ್ಲಿ ಮುನ್ನಡೆಯಬೇಕಾದರೆ ಒಬ್ಬ ಗುರುವಿನ ಅವಶ್ಯಕತೆ ಇದೆ. ಅಂತವನಿಗೆ ವಿಧೇಯನಾಗಿರು. ಅಂತವನು ನಮಸ್ಕರಿಸಿಕೊಳ್ಳಲು ಯೋಗ್ಯ.
ವಿದ್ಯೆಯಲ್ಲಿ ಆಸಕ್ತಿ:
ವಿದ್ಯೆಯಲ್ಲಿ ಆಸಕ್ತಿಹೊಂದಿದವನು ನಮಸ್ಕಾರಕ್ಕೆ ಯೋಗ್ಯ. ಹಾಗಾದರೆ ವಿದ್ಯೆ ಎಂದರೇನು? ಎಂಬ ಅರಿವಿರಬೇಕಲ್ಲವೇ? ವೇದವು ಹೇಳುತ್ತದೆ “ ಸಾ ವಿದ್ಯಾ ಯಾ ವಿಮುಕ್ತಯೇ” ಅಂದರೆ ಮನುಷ್ಯನನ್ನು ಎಲ್ಲಾ ಬಂಧನದಿಂದ ಬಿಡುಗಡೆಗೊಳಿಸುವುದು ವಿದ್ಯೆ. ವಿದ್ಯೆ ಅಂದರೆ ನಾವೆಲ್ಲಾ ತಿಳಿದಿರುವುದೇ ಬೇರೆಯಲ್ಲವೇ? ವಿದ್ಯಾವಂತನೆಂದರೆ ಅವನು ಯಾವುದಾದರೂ ಪದವಿ[ಡಿಗ್ರೀ] ಪಡೆದಿರಬೇಕು. ಪದವಿ ಯಾಕಾಗಿ? ಒಂದು ನೌಕರಿಗಾಗಿ. ಯಾರೋ ಒಬ್ಬರ ಕೈ ಕೆಳಗೆ ಕೆಲಸ ಮಾಡಲು ಪಡೆಯುವ ಪದವಿಯು ವಿದ್ಯೆ ಎನಿಸಿಕೊಳ್ಳುತ್ತದೆಯೇ? ಎರಡುಹೊತ್ತಿನ ಹೊಟ್ಟೆಪಾಡಿಗೆ ಅಗತ್ಯವಾದ ನೌಕರಿ ಮಾಡಲು ಅಗತ್ಯವಿರುವ ಯಾವುದೇ ಪದವಿಯನ್ನು ವಿದ್ಯೆ ಎನ್ನಲಾದೀತೇ? ವೇದದ ಪ್ರಕಾರ ಇದೆಲ್ಲಾ ವಿದ್ಯೆಯೇ ಅಲ್ಲ. ಕಾರಣ. ಹೆಚ್ಚು ಹೆಚ್ಚು ಪದವಿ ಪಡೆದಷ್ಟೂ ಹೆಚ್ಚು ಹೆಚ್ಚು ಬಂಧನಗಳು ಅಂಟಿಕೊಳ್ಳುತ್ತವೆ. ಪಡೆದ ಪದವಿಯಿಂದ ಉದ್ಯೋಗ, ಕೀರ್ತಿ, ಪ್ರಸಿದ್ಧಿ, ಸಂಸಾರ, ಹೀಗೆ ಒಂದರಮೇಲೊಂದು ಬಂಧನಗಳು ಸೇರಿಕೊಳ್ಳುತ್ತಾ ಹೋಗುತ್ತವೆ. ಅಂದರೆ ಮದುವೆಯಾಗುವುದಾಗಲೀ, ನೌಕರೀ ಮಾಡುವುದಾಗಲೀ ಬಂಧನವೆಂದು ತಿಳಿಯಬೇಕಾಗಿಲ್ಲ. ಆದರೆ ಸಾಮಾನ್ಯವಾಗಿ ಮನುಷ್ಯನು ಅಲ್ಪ ತೃಪ್ತನಲ್ಲ.ಒಂದು ಪಡೆದ ನಂತರ ಮತ್ತೊಂದು ಪಡೆಯುವ ಆಸೆ ಸಹಜವಾಗಿರುತ್ತದೆ. ಆದರೆ ಇಷ್ತಕ್ಕೇ ನಿಲ್ಲದೆ ವಿದ್ಯೆಯ ನಿಜವಾದ ಅರ್ಥ ತಿಳಿದು ಕಮಲದ ಎಲೆಯ ಮೇಲಿನ ನೀರಿನಂತೆ ಸಂಸಾರದಲ್ಲಿ ಇದ್ದೂ ಅದಕ್ಕೇ ಅಂಟಿಕೊಳ್ಳದೆ ಎಲ್ಲಾ ಬಂಧನಗಳಿಂದಲೂ ಮುಕ್ತನಾಗಿರುವ ಸ್ವಭಾವವನ್ನು ಕಲಿತರೆ ಅದು ವಿದ್ಯೆ. ಅಂತಹ ವಿದ್ಯೆಯಲ್ಲಿ ಆಸಕ್ತಿ ಇರಬೇಕು.
ತನ್ನ ಪತ್ನಿಯಲ್ಲಿ ಸುಖ:
ಇದು ಒಬ್ಬ ಸದ್ಗೃಹಸ್ತನಿಗೆ ಇರಲೇಬೇಕಾದ ಗುಣ. ಪಾಶ್ಚಾತ್ಯ ಸಂಸ್ಕೃತಿಯತ್ತ ವಾಲುತ್ತಿರುವ ಯುವಜನತೆಯ ಕಣ್ ತೆರೆಸುವ ಉಕ್ತಿ ಇದಾಗಿದೆ. ಶ್ರೀ ರಾಮಚಂದ್ರನಿಗೆ ಏಕ ಪತ್ನೀವ್ರತಸ್ಥನೆಂಬುದೇ ಹೆಗ್ಗಳಿಕೆ. ಇಂದಿನ ಸಮಾಜವು ಸ್ವಾಸ್ಥ್ಯಪೂರ್ಣವಾಗಿರಬೇಕಾದರೆ ಈ ವ್ರತವನ್ನು ಎಲ್ಲರೂ ಆಚರಿಸುವುದು ಅನಿವಾರ್ಯ. ಈ ವ್ರತಬಂಗದ ಕಾರಣದಿಂದಲೇ ಸಮಾಜದಲ್ಲಿ ಹರಡುತ್ತಿರುವ ಗುಪ್ತರೋಗಗಳು ಮತ್ತು ಮಾನಸಿಕ ಅಸ್ವಾಸ್ಥ್ಯ! ಅಪರಾಧಗಳು! ಆತ್ಮಹತ್ಯೆಗಳು!! ಕಾಯ ವಾಚಾ ಮನಸಾ ಈ ವ್ರತವನ್ನು ಪಾಲಿಸಿದ್ದೇ ಆದರೆ ಆ ಕುಟುಂಬವೇ ಸುಖೀ ಕುಟುಂಬ.
ಲೋಕಾಪವಾದದದೆಸೆಯಿಂದ ಹೆದರಿಕೆ:
ಲೋಕಕ್ಕೆ ಅಂಜಿ ನಡೆಯುವ ಬುದ್ಧಿ. ಇದು ಒಬ್ಬ ಸಜ್ಜನನಿಗೆ ಇರಲೇ ಬೇಕಾದ ಒಂದು ಗುಣ.ತಾನು ಏನು ಕೆಲಸ ಮಾಡುತ್ತಿದ್ದರೂ ಸಹ ತಾನು ಮಾಡುವ ಕೆಲಸವನ್ನು ಈ ಸಮಾಜವು ಗಮನಿಸುತ್ತಿದೆ! ಎಂಬ ಭಯ ಇರಬೇಕು. ಆಗ ತನ್ನಿಂದ ಕೆಟ್ಟ ಕೆಲಸ ಆಗುವ ಅವಕಾಶವೇ ಇಲ್ಲ. ಮನುಷ್ಯನ ಸಹಜ ಗುಣವೆಂದರೆ ಆಸೆ. ಈ ಆಸೆ ಎಂಬುದು ಹಲವು ವೇಳೆ ವ್ಯಕ್ತಿಯನ್ನು ಅಂಧನನ್ನಾಗಿ ಮಾಡಿರುತ್ತದೆ. ನಮ್ಮ ಪಂಚೇಂದ್ರಿಯಗಳೆಲ್ಲವೂ ಹೊರಮುಖವಾಗಿಯೇ ಇವೆ. ಯಾವಾಗಲೂ ಹೊರಗಿನ ಆಕರ್ಷಣೆಗಳು ನಮ್ಮನ್ನು ಸಹಜವಾಗಿ ಸೆಳೆಯುತ್ತವೆ. ಆಗ ಸಮಾಜವೆಂಬುದು ಸಾಕ್ಷಿಯಾಗಲಿದೆ ಎಂಬ ಭಯವಿದ್ದರೆ ತನ್ನಿಂದ ಕೆಟ್ಟ ಕೆಲಸಗಳಾಗಲಾರವು.
ದೇವರಲ್ಲಿ ಭಕ್ತಿ:
ಮನುಷ್ಯನು ಎಷ್ಟೇ ಬುದ್ಧಿವಂತನಾದರೂ ಅವನ ಕಲ್ಪನೆಗೆ ನಿಲುಕದ ಹಲವು ಸಂಗತಿಗಳ ನಿತ್ಯ ಅನುಭವ ಮನುಷ್ಯನಿಗೆ ಆಗುತ್ತದೆ. ಆದ್ದರಿಂದ ಮನುಷ್ಯನು ತಾನು ಏನೇ ಪ್ರಯತ್ನ ಮಾಡಿದರೂ, ಎಷ್ಟೇ ಶ್ರಮವನ್ನು ಹಾಕಿದರೂ ಸಹ ತನ್ನ ಕಲ್ಪನೆಯನ್ನು ಮೀರಿದ ಒಂದು ಶಕ್ತಿ ಇದೆಯಾದ್ದರಿಂದ ಆ ಭಗವಚ್ಚಕ್ತಿಗೆ ತಲೆಬಾಗಿ ತಾನು ಮಾಡುವ ಎಲ್ಲಾ ಕರ್ತವ್ಯವನ್ನೂ ನಿರ್ವಹಿಸಿ ಪರಿಣಾಮವನ್ನು ಭಗವಚ್ಚಕ್ತಿಗೆ ಬಿಟ್ಟುಬಿಟ್ಟರೆ ಮನುಷ್ಯನು ನಿರಾಳವಾಗಿರಬಹುದು. ಆದ್ದರಿಂದ ದೇವರಲ್ಲಿ ಭಕ್ತಿಯಿಟ್ಟು ತನ್ನ ಕರ್ತವ್ಯವನ್ನು ಚಾಚೂ ತಪ್ಪದೆ ಮಾಡಿ ಇನ್ನು “ ಎಲ್ಲವೂ ಅವನದೇ ಎಂದು” ನಂಬುವವನು ನಮಸ್ಕಾರಕ್ಕೆ ಯೋಗ್ಯನಾಗಿರುತ್ತಾನೆ.
ಮನೋನಿಗ್ರಹ: ಮನೋನಿಗ್ರಹ ವೆಂಬುದು ಅತಿ ಕಷ್ಟಕರ ಸಂಗತಿ. ಮನುಷ್ಯನಿಗೆ ಅದು ಬೇಕು, ಇದು ಬೇಕು, ಎಲ್ಲವೂ ಬೇಕೆಂಬುದು ಅತ್ಯಂತ ಸಹಜವಾದ ಗುಣ. ಬಾಯಲ್ಲಿ ನೀರೂರಿದಾಗ ಬೇಡವೆಂದು ಕಡಿವಾಣ ಹಾಕುವುದು ನಿಗ್ರಹ.ಇದು ಎಲ್ಲರಿಗೂ ಸಾಧ್ಯವಿಲ್ಲ. ಇದಕ್ಕೆ ತಪಸ್ಸು ಬೇಕು, ಸಾಧನೆ ಬೇಕು. ಈ ಒಂದು ಸಾಧನೆ ಮಾಡಿದ್ದೇ ಆದರೆ ಮನುಷ್ಯನು ಅತ್ಯಂತ ಸುಖಿ. ಇವನೇ ಮಹಾತ್ಮ.
ದುರ್ಜನರ ಸಂಗ ತ್ಯಜಿಸುವುದು:
ದುರ್ಜನರ ಕೂಟ ಬಚ್ಚಲಿನ ಕೊಚ್ಚೆಯಂತಕ್ಕು ಸರ್ವಜ್ಞ.ಎಂಬುದನ್ನು ಈಗಾಗಲೇ ನೆನಪು ಮಾಡಿದ್ದಾಗಿದೆ. ಇವನು ದುರ್ಜನನೆಂದು ಅರಿಯುವುದು ಹೇಗೆ? ಅದಕ್ಕೆ ಹಿರಿಯರು ಹೇಳುತ್ತಾರೆ….
“ಮನಸ್ಸನ್ಯತ್, ವಚಸ್ಸನ್ಯತ್,ಕರ್ಮಣ್ಯನ್ಯತ್ ದುರಾತ್ಮನಾಮ್” ಅಂದರೆ ಮನಸ್ಸಿನಲ್ಲಿ ಒಂದು,ಮಾತಿನಲ್ಲಿ ಒಂದು ಮತ್ತು ಕ್ರಿಯೆಯಲ್ಲಿ ಮತ್ತೊಂದು ಮಾಡುವವನು ದುರಾತ್ಮನು. ಅವನ ಸಹವಾಸ ಮಾಡಬೇಡ. ಅಂತವರ ಸಂಗವನ್ನು ತ್ಯಜಿಸುವವನು ನಮಸ್ಕಾರಕ್ಕೆ ಯೋಗ್ಯನು.
Comments
ಉತ್ತಮ ವಿಚಾರ.
ಉತ್ತಮ ವಿಚಾರ.
ನಮಸ್ಕಾರ ನಮಸ್ಕಾರ ನಮಸ್ಕಾರ.
ನಮಸ್ಕಾರ ನಮಸ್ಕಾರ ನಮಸ್ಕಾರ.
In reply to ನಮಸ್ಕಾರ ನಮಸ್ಕಾರ ನಮಸ್ಕಾರ. by ಗಣೇಶ
ನಮಸ್ಕಾರ ನಮಸ್ಕಾರ ನಮಸ್ಕಾರ. :))
ನಮಸ್ಕಾರ ನಮಸ್ಕಾರ ನಮಸ್ಕಾರ. :))
ನಾ ಮೋಸ್ಗಾರ ನಾ ಮೋಸ್ಗಾರ ನಾ ಮೋಸ್ಗಾರ
ರಾಮೋ
In reply to ನಮಸ್ಕಾರ ನಮಸ್ಕಾರ ನಮಸ್ಕಾರ. :)) by RAMAMOHANA
ಚೆನ್ನಾಗಿದೆ, ನಿಮ್ಮ ಕಾಮೆಂಟ್
ಚೆನ್ನಾಗಿದೆ, ನಿಮ್ಮ ಕಾಮೆಂಟ್ ಗಳು.ಯಾರಿಗೆ ನಮಸ್ಕಾರ? ನೀವ್ಯಾಕೆ ಮೋಸ್ಗಾರ?...........
In reply to ಚೆನ್ನಾಗಿದೆ, ನಿಮ್ಮ ಕಾಮೆಂಟ್ by hariharapurasridhar
ನಮಗೆ ನಾವೆ ಮೋಸ ಮಾಡ್ಕೋತಿವಲ್ಲ,
ನಮಗೆ ನಾವೆ ಮೋಸ ಮಾಡ್ಕೋತಿವಲ್ಲ, ಶ್ರೀಧರ್ ಅವರೆ ಅದಕ್ಕೆ ತಮಾಷೆಗೆ ಹಾಗ0ದೆ. ಧನ್ಯವಾದಗಳು, ರಾಮೋ.