ಯಾವುದು ರಕ್ಷಣೆ ???

ಯಾವುದು ರಕ್ಷಣೆ ???

ಮಂಜು ಮುಸುಕಿದ ಮಾಂತ್ರಿಕ ಕನ್ನಡಿಗೆ ಮುಖವೊಡ್ಡುವದೇ? ದೀಪದ ಜ್ವಾಲೆ ಬಿರುಗಾಳಿಗೆ ಸಿಲುಕಬಾರದಲ್ಲವೇ? ಒಟ್ಟಿನಲ್ಲಿ ಪಯಣ.ಕೊನೆಗೊಂದು ದಿನ ಸತ್ತವರ ಗೋರಿ ಮಾಡಿ ಬಧ್ರತೆಯ ಕೋಟೆ ಕಟ್ಟುವುದು.ಈಗ ಸದ್ಯಕ್ಕೆ ಕೋಟೆಯ ಕನಸು.ಮಸಣದಲ್ಲಿ ದೇಗುಲ ತಲೆ ಎತ್ತಿದೊಡನೆ ನೋವು ಮರೆಯಾಗಬಹುದೆ?ಭಕ್ತಿ ಮನೆ ಮಾಡುವುದೇ?
ಇಂದು ನಾವು ಸಾಗುತ್ತಿರುವ ದಾರಿ ನೋಡಿದರೆ ಸಿಂಗರಿಸಲು ಸನ್ನದ್ಧರಾಗುವ ಹೊತ್ತಿಗೆ ,ಸಿಂಗರಿಸಿಕೊಳ್ಳುವುದು ಕೊನೆಗೆ ಶವವೇನೋ ಅನಿಸುವಂತಿದೆ.

ಇಂದು ದೇಶದಲ್ಲಿ ಭಯೋತ್ಪಾದನೆ ಎಂಬುದು ಬರಿ ಧನಿಯೆತ್ತಿರುವದಲ್ಲಾ ಕಾಡ್ಗಿಚ್ಚಿನಂತೆ ಹಬ್ಬುತ್ತಿದೆ.ಈಗ ಸಧ್ಯದಲ್ಲೇ ಮೊದಲು ದೆಲ್ಲಿ ಸ್ಫೋಟದಿಂದ ಹೊರಟು ಬೆಂಗಳೂರಿನ IISc ಕಡೆ ತಿರುಗಿ ಇಂದು ಕಾಶಿಯಲ್ಲಿನ ಸರಣಿ ಸ್ಫೋಟದಲ್ಲಿದೆ,ಇನ್ನು ಹಲವೆಡೆಗೆ ಕೈಚಾಚಲು ಸಿದ್ಧವಾಗಿ ನಿಂತಿರಬಹುದು. ಅಮಾನವೀಯ ಭಯೋತ್ಪಾದನಾ ಕ್ರುತ್ಯಗಳಿಂದಾಗಿ ಜನರು ತತ್ತರಿಸಿ ಹೋಗಿದ್ದಾರೆ.ಬದುಕಿನ ಪ್ರತಿ ಕ್ಷಣವನ್ನೂ ಸಾವಿನ ದವಡೆಯಲ್ಲಿ ನಿಂತಂತೇ ಬಾಳಬೇಕಾಗಿದೆ.

ಈ ಭಯೋತ್ಪಾದನೆ ಎಂಬುದು ಅಸಂತುಷ್ಟ ಆತ್ಮಗಳ ಕೃತ್ರಿಮ ಹೋರಾಟ.ಜಿಹಾದಿಗಳೆಂದು ಹಣೆಪಟ್ಟಿಹಾಕಿಕೊಳ್ಳುವ ಇವರು ಯೋಚಿಸಿನೋಡಿದರೆ ಧರ್ಮದಕುರಿತು 'ಅಂಧ'ರು. ಧರ್ಮವೆಂಬುದು ಕಾಯುತ್ತದೆಯೇ ಹೊರತು ಕೊಲ್ಲುವುದಲ್ಲ.ಈ ಭಯೋತ್ಪಾದಕರೆಂಬ ಧರ್ಮದ ವ್ಯಭಿಚಾರಿಗಳೊಂದಿಗೆ ನಾವು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಗೋಲಿ ಆಡುತ್ತಿದ್ದೇವೆ.ನಮ್ಮ ಸರಕಾರವೆಂಬುದು ರಕ್ತಪಾತಗಳ ಮುಚ್ಚಲು ಮಣ್ಣುಸುರಿಯುತ್ತಿದೆಯೇ ಹೊರತು ಜೀವ ಉಳಿಸುವ ಕ್ರಮ ಕೈಗೊಳ್ಳುತ್ತಿಲ್ಲ.

ಪ್ರತಿಯೊಂದು ಇಂತಹ ಭಯಾನಕ ಕೃತ್ಯಗಳಿಗೂ ಶಂಖೆಗಳೆಂಬ ಮುಖವಾಡಹಾಕಿ ಕುಳಿತಿರುವ ನಮ್ಮ ಭದ್ರತಾ ವ್ಯವಸ್ಥೆ ಎಚ್ಚರಾಗಿರುವುದು ಸತ್ತವರ ಅಂಕೆ ಸಂಖ್ಯೆ ಜನಸಾಮಾನ್ಯರಿಗೆಲ್ಲ ನೆನಪಿರುವವರೆಗೆ ಮಾತ್ರ ! ಅದಾರನ್ನೋ ಹಿಡಿದುತಂದು ಇನ್ನೇನು ಎಲ್ಲವೂ ನಮ್ಮ ಕೈಯ್ಯಲ್ಲಿದೆ ಎಂಬಂತೆ ಫೋಸುಕೊಡುತ್ತಾರೆ.ಆದರೆ ಕೊನೆಗೆ ಕೊನೆತನಕ ನಡೆಯುತ್ತಿರುವುದು ಮಂಪರು ಪರಿಕ್ಷೆ ಮಾತ್ರ.

ಇಂದು ನಾವು ಅಮೆರಿಕಾ,ಪಾಕಿಸ್ತಾನ,ಚೈನಾ ಹೀಗೆ ಹಲವು ದೇಶಗಳ ಸಂಬಂಧ ಸುದಾರಿಸಲು ಯೋಚಿಸುತ್ತಿದ್ದೇವೆ.ಇದು ಶಾಂತಿಯೆಂಬ ಮೂಲ ಮಂತ್ರಕ್ಕೆ ಏನಾದರೂ ಸಹಾಯವಾಗಬಹುದೆಂಬ ಕಲ್ಪನೆಯಿದ್ದರೂ,ಇದು ನಮ್ಮೊಳಗೆ ಹಬ್ಬುತ್ತಿರುವ ಬೆಂಕಿ ಆರಿಸಲು ಬಾವಿತೋಡುವ ಯತ್ನ.ಇಂದು ಶಾಂತಿಯೆಂಬುದು ಜಪದ ಮಾಲೆಯೊಳಗಿನ ರುದ್ರಾಕ್ಷಿಯಲ್ಲಿದ್ದಿರಬೇಕು ಅಷ್ಟೇ!

ನಾವುರಕ್ಷಾಣಾ ವ್ಯವಸ್ತೆ ಅಂದರೆ ಗಡಿ ಪ್ರದೇಶಗಳನ್ನು ಕಾಯಲೆಂದೇ ಇರುವುದೆಂದು ತಪ್ಪುತಿಳಿದಂತಿದೆ,ಹೋಗಲಿ ಅದಕ್ಕಾದರೂ ಸರಿಯಾದ ವ್ಯವಸ್ಥೆಯಿದಯೇ? ಇಲ್ಲಿ ಜನಸಾಮಾನ್ಯರಿಗೆ ರಕ್ಷಣೆ ಇಲ್ಲಾ.ಅಕ್ರಮ ವ್ಯವಹಾರಕ್ಕೆ ಸೂರಾಗುವ ರಕ್ಷಣಾ ವ್ಯವಸ್ಥೆ ಇರುವ ತನಕ ನಾವು ಮುಂದುವರೆಯಲಾರೆವು ಹಳ್ಳಿಯಿಂದ ದಿಲ್ಲಿಯವರೆಗೆ ಉತ್ತಮ ರೀತಿಯ ಬದಲಾವಣೆಗಳಾಗಿ,ಪ್ರತಿ ವಿಷಯದಲ್ಲೂ ಜಾಗರೂಕರಾಗದ ಹೊರತು ಭಯೋತ್ಪಾದನೆಗೆ ಕಡಿವಾಣ ಬೀಳದು. ಪ್ರಭಲ ರಕ್ಷಣಾ ವ್ಯವಸ್ಥೆಯಿಂದ ಮಾತ್ರ ಇದನ್ನು ಸದೆಬಡಿಯಲು ಸಾದ್ಯ.

ಭಯೋತ್ಪಾದನೆ ಇಡೀ ದೇಶವನ್ನು ನುಂಗಿಹಾಕುವ ಮೊದಲು ನಾವು ಎಚ್ಚೆತ್ತುಕೊಳ್ಳಬೇಕು. ಜಿಹಾದ್ ನ ಮುಸುಕಿನೊಳಗಿನ ಭಯೋತ್ಪಾದಕರ ಸೊಕ್ಕಡಗಿಸುವ ಕಾರ್ಯವನ್ನು ಮೊದಲು ಮಾಡೋಣಾ.

Rating
No votes yet

Comments