ಯುಗ ಯುಗಾದಿ ಕಳೆದರೂ...

ಯುಗ ಯುಗಾದಿ ಕಳೆದರೂ...

ನಮಸ್ಕಾರ. ಯುಗಾದಿಯ ಶುಭಾಶಯಗಳು. ಈ ಯುಗಾದಿಯು ಸಂಪದಿಗರೆಲ್ಲರಿಗೂ "ಬೇವಿನ ಕಹಿ ಬಾಳಿನಲಿ ಹೂವಿನ ನಸುಗಂಪು ಸೂಸಿ ಜೀವಕಳೆಯನು ತರಲಿ" ಎಂದು ಹಾರೈಸುತ್ತೇನೆ.

ಯುಗಾದಿ ಎಂದಾಕ್ಷಣ ನಮಗೆಲ್ಲ ನೆನಪಾಗುವುದು ವರಕವಿ ದ.ರಾ.ಬೇಂದ್ರೆಯವರ "ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ" ಎಂಬ ಗೀತೆ. ನಾನು ಚಿಕ್ಕವನಿದ್ದಾಗಿನಿಂದಲೂ ಯುಗಾದಿ ಬಂದಾಕ್ಷಣ ಎಲ್ಲರ ಮನೆಮನಗಳಲ್ಲೂ ಈ ಗೀತೆಯೇ ಅನುರಣಿಸುತ್ತದೆ. ಅದೇ ಈ ಗೀತೆಯ ಸಾರ್ವಕಾಲಿಕ ಶ್ರೇಷ್ಟತೆಯನ್ನು ತಿಳಿಸುತ್ತದೆ. ಹಲವಾರು ಕವಿಗಳು ಈ ಯುಗಾದಿಯ ಮೇಲೆ ಕವನ ಕಟ್ಟಿದ್ದಾರೆ. ಆದರೆ, ಬೇಂದ್ರೆಯವರ ಗೀತೆಯ ಮುಂದೆ ಎಲ್ಲವೂ ಮಂಕಾಗಿ ಬಿಡುತ್ತವೆ. ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪನವರು ಕೂಡ ಯುಗಾದಿಯ ಕುರಿತು ಸಾಕಷ್ಟು ಕವನಗಳನ್ನು ರಚಿಸಿದ್ದಾರೆ. ಅವುಗಳಲ್ಲಿ "ಯುಗಾದಿಯ ಹಾಡು"
ಎಂಬ ಕವನ ಎಂತಹವರಿಗೂ ತುಂಬಾ ಇಷ್ಟವಾಗುತ್ತದೆ. ಈ ಕವನವನ್ನು ಈ ಯುಗಾದಿಯ ಸಂದರ್ಭದಲ್ಲಿ ಸಂಪದಿಗರಿಗೆಂದು ಅರ್ಪಿಸುತ್ತಿದ್ದೇನೆ.

ಯುಗಾದಿಯ ಹಾಡು
-ಜಿ.ಎಸ್.ಶಿವರುದ್ರಪ್ಪ

ಬಂದ ಚೈತ್ರದ ಹಾದಿ ತೆರೆದಿದೆ
ಬಣ್ಣ-ಬೆಡಗಿನ ಮೋಡಿಗೆ
ಹೊಸತು ವರ್ಷದ ಹೊಸತು ಹರ್ಷದ
ಬೇವು-ಬೆಲ್ಲದ ಬೀಡಿಗೆ.

ಕೊಂಬೆ ಕೊಂಬೆಯ ತುಂಬ ಪುಟಿದಿದೆ
ಅಂತರಂಗದ ನಂಬಿಕೆ
ಚಿಗುರು ಹೂವಿನ ಬಣ್ಣದಾರತಿ
ಯಾವುದೋ ಆನಂದಕೆ!

ಇದ್ದುದೆಲ್ಲವ ಬಿಟ್ಟುಹೋದರು
ಎದ್ದುಬಂದಿದೆ ಸಂಭ್ರಮ
ಕಿತ್ತುಕೊಂಡರು ಕೊಟ್ಟು ಸುಖಿಸುವ
ಸೋಲನರಿಯದ ಸಂಗಮ.

ಒಳಿತು ಕೆಡುಕೋ ಏನು ಬಂದರು
ಇರಲಿ ಎಲ್ಲಕು ಸ್ವಾಗತ
ಸ್ಫರ್ಧೆಯಿಲ್ಲದ ಶ್ರದ್ಧೆಯೊಂದೇ
ಸ್ಫೂರ್ತಿಯಾಗಲಿ ಸಂತತ.

ಹಳತು-ಹೊಸತೂ ಕೂಡಿ ಮೂಡಿಸುವಂಥ
ಪಾಕವ ನೋಡಿರಿ
ಎಲ್ಲ ರುಚಿಗೂ ರಸನೆಯಾಗುತ
ಪುಷ್ಟಿಗೊಳ್ಳುತ ಬಾಳಿರಿ.

ಯುಗ ಯುಗಾದಿಗೆ ಹೊಸತು ಹರ್ಷವು
ಬರಲಿ, ಬಾರದೆ ಹೋಗಲಿ;
ಬಂದ ಚೈತ್ರದ ಚಿಗುರಿನಂದದ
ಮಂದಹಾಸವೆ ಉಳಿಯಲಿ.

-ಗೋಡೆ:1972

Rating
No votes yet