ಯುದ್ಧ ಗೆದ್ದ ಬುದ್ಧಿವಂತಿಕೆ - ಪ್ರೇಮಶೇಖರರ ಲೇಖನದಿಂದ ಆಯ್ದದ್ದು.

ಯುದ್ಧ ಗೆದ್ದ ಬುದ್ಧಿವಂತಿಕೆ - ಪ್ರೇಮಶೇಖರರ ಲೇಖನದಿಂದ ಆಯ್ದದ್ದು.

ಐದಾರು ಸಾವಿರ ವರ್ಷಗಳ ಹಿಂದಿನ ಕತೆ. ಪ್ರೇಮಶೇಖರರ ಬ್ಲಾಗಿನಿಂದ ಎತ್ತಿಕೊಂಡದ್ದು.

 

ಈಜಿಪ್ಷಿಯನ್ನರು ಮತ್ತು ಸುಮೇರಿಯನ್ನರ ನಡುವೆ ಸಿನಾಯ್ ಪರ್ಯಾಯದ್ವೀಪದ ಹತೋಟಿಗಾಗಿನ ಕಾದಾಟ ಸಾಮಾನ್ಯವಾಗಿತ್ತು.  ಆದರೆ ಎರಡೂ ಸೇನೆಗಳ ನಡುವಿನ ಸೈನಿಕ ಸಂಖ್ಯೆ ಮತ್ತು ಸಮರತಂತ್ರಗಳ ನಡುವಿನ ಸಮಾನತೆಯಿಂದಾಗಿ ಪ್ರತೀ ಯುದ್ಧವೂ ಜಯಾಪಜಯಗಳ ನಿರ್ಣಯವಾಗದೇ ಕೊನೆಗೊಳ್ಳುವುದೂ ಸಾಮಾನ್ಯವಾಗಿತ್ತು.  ಯುದ್ಧದಲ್ಲಿ ನಿಶ್ಚಿತ ಜಯ ಗಳಿಸಲೇಬೇಕೆಂಬ ಉದ್ದೇಶದಿಂದ ಸುಮೇರಿಯನ್ನರು ಹೊಸದೊಂದು ಯುದ್ಧೋಪಕರಣವನ್ನು ಸಂಶೋಧಿಸಿದರು.  ನಮ್ಮ ಕಾಲದ ಯುದ್ಧ ಟ್ಯಾಂಕ್‌ಗಳಿಗೆ ‘ಆದಿಪುರುಷನೆಂದು ಕರೆಯಬಹುದಾದ  ಈ ಉಪಕರಣ ಕುದುರೆಗಳನ್ನು ಹೂಡಿದ ರಥದ ಮೇಲೆ ಕೂರಿಸಿದ ಒಂದು ಮರದ ಪೆಟ್ಟಿಗೆಯಾಗಿತ್ತು.  ಆ ಪೆಟ್ಟಿಗೆಯ ಗೋಡೆಗಳಲ್ಲಿ ಹಲವಾರು ರಂಧ್ರಗಳಿದ್ದವು.  ಸುಮೇರಿಯನ್ ಸೈನಿಕರು ಈ ಪೆಟ್ಟಿಗೆಗಳ ಒಳಗೆ ಸುರಕ್ಷಿತವಾಗಿ ಕುಳಿತು ರಂಧ್ರಗಳ ಮೂಲಕ ಈಜಿಪ್ಷಿಯನ್ ಸೈನಿಕರ ಮೇಲೆ ಬಾಣಗಳನ್ನು ಪ್ರಯೋಗಿಸಬಹುದಾಗಿತ್ತು.  ರಥಕ್ಕೆ ಕುದುರೆಗಳನ್ನು ಹೂಡಿದ್ದರಿಂದ ಸುಮೇರಿಯನ್ನರಿಗೆ ಸ್ವಾಭಾವಿಕವಾಗಿಯೇ ಬರೀ ಕಾಲಾಳುಗಳೇ ತುಂಬಿದ್ದ ಈಜಿಪ್ಷಿಯನ್ ಸೇನೆಗಿಂತ ವೇಗದ ಚಲನಾಸಾಮರ್ಥ್ಯವಿತ್ತು.  ಇದರ ಪರಿಣಾಮವಾಗಿ ಸುಮೇರಿಯನ್ನರು ಈಜಿಪ್ಷಿಯನ್ನರ ಮೇಲೆ ಇತಿಹಾಸದಲ್ಲಿ ಪ್ರಾಯಶಃ ಪ್ರಪ್ರಥಮ ಬಾರಿಗೆ ನಿರ್ಣಾಯಕ ಜಯ ಗಳಿಸಿದರು.  ಅಷ್ಟೇ ಅಲ್ಲ, ಮರುವರ್ಷ ಇಂತಹ ಮತ್ತಷ್ಟು ‘ಟ್ಯಾಂಕ್ಗಳನ್ನು ನಿರ್ಮಿಸಿ ಈಜಿಪ್ಟಿನ ಮೇಲೆ ಮತ್ತೊಂದು ಯುದ್ಧ ಹೂಡಿದರು.  ಅತ್ತ ಈಜಿಪ್ಷಿಯನ್ ಪಾಳಯದಲ್ಲಿ ಗೊಂದಲ.  ಅವರಲ್ಲಿ ಈ ‘ಟ್ಯಾಂಕ್ಗಳ ನಿರ್ಮಾಣಕ್ಕೆ ಅಗತ್ಯವಾದ ತಂತ್ರಜ್ಞಾನ ಹಾಗೂ ಸಂಪನ್ಮೂಲಗಳ ಕೊರತೆ ಅರಂಭದಲ್ಲಿ ಇದ್ದಿರುವ ಸಾಧ್ಯತೆ ಇದೆ.  ಆದರೆ ಸುಮೇರಿಯನ್ ‘ಟ್ಯಾಂಕ್ಗಳನ್ನು ನಿರುಪಯುಕ್ತಗೊಳಿಸುವ ತಂತ್ರವೊಂದನ್ನು ಹರಿತ ತಲೆಯ ಈಜಿಪ್ಷಿಯನ್ ಸೇನಾಧಿಕಾರಿಯೊಬ್ಬ ರೂಪಿಸಿ ತನ್ನ ಸೇನೆಗೆ ವಿಜಯದ ಮಾಲೆ ತೊಡಿಸಿದ.
            ಆತ ಮಾಡಿದ್ದಿಷ್ಟೇ: ದಷ್ಟಪುಷ್ಟವಾಗಿ ಬೆಳೆದಿದ್ದ ಒಂದಷ್ಟು ಹೆಣ್ಣುಕುದುರೆಗಳನ್ನು ತಂದು ರಣರಂಗದಲ್ಲಿ ಬಿಟ್ಟ.  ಸುಮೇರಿಯನ್ ಟ್ಯಾಂಕ್ಗಳನ್ನು ಎಳೆಯುತ್ತಿದ್ದುವೆಲ್ಲಾ ಬರೀ ಗಂಡುಕುದುರೆಗಳು ಎನ್ನುವುದನ್ನು ಪತ್ತೆ ಮಾಡಿಕೊಂಡಿದ್ದ ಅವನ ಈ ಉಪಾಯ ಯಶಶ್ವಿಯಾಯಿತು.  ಈಜಿಪ್ಷಿಯನ್ ಹೆಣ್ಣುಕುದುರೆಗಳ ಹಿಂದೆ ಬಿದ್ದ ಸುಮೇರಿಯನ್ ಗಂಡುಕುದುರೆಗಳೆಲ್ಲಾ ಸಾರಥಿಗಳ ಯಾವುದೇ ಮಾತಿಗೂ ಸೊಪ್ಪು ಹಾಕದೇ ‘ಟ್ಯಾಂಕ್ಗಳನ್ನೂ ಎಳೆದುಕೊಂಡು ದಿಕ್ಕುದಿಕ್ಕಿಗೆ ಓಡತೊಡಗಿದವು.  ಸುಮೇರಿಯನ್ ಪಾಳಯದಲ್ಲಿ ಗೊಂದಲವೋ ಗೊಂದಲ.  ಇನ್ನು ಯುದ್ಧದಲ್ಲಿ ಯಾರು ಗೆದ್ದರೆಂದು ನಾನು ಹೇಳಬೇಕಿಲ್ಲವಷ್ಟೇ?"

 ( ಮೂಲ ಲೇಖನ: "ಹಿಂಸೆ ಮತ್ತು ಯುದ್ಧ: ಭಾರತೀಯ ಮತ್ತು ಪಾಶ್ಚಿಮಾತ್ಯ ನಾಗರೀಕತೆಗಳ ದೃಷ್ಟಿಕೋನಗಳು"ಇದರಲ್ಲಿನ ಒಂದು ಸಣ್ಣ ಉಪಕತೆ. ಅನುಮತಿಯೊಂದಿಗೆ.  )

Rating
No votes yet

Comments