ರಂಜಾನ್ ಅರ್ಥ ಕುರಿತು

ರಂಜಾನ್ ಅರ್ಥ ಕುರಿತು

ರಂಜಾನ್ ಹಬ್ಬದ ಅರ್ಥ ಹುಡುಕುತ್ತಿದ್ದೆ.

ರಂಜಾನಿಗೆ ಅರಾಬಿಕ್ಕಿನ ಮೂಲ ಪದ `ರಮಿದ` ಅಥವಾ `ಅರ್-ರಮದ್`. ಅವುಗಳು ಸೂಚಿಸುವುದು ತೀವ್ರವಾಗಿ ಸುಡುವ ಒಣ ಉರಿಯನ್ನು- ಅದೂ ನೆಲಕ್ಕೆ ಸಂಬಂಧಿಸಿದ್ದು. ಅದೇ ಮೂಲಪದದಿಂದ ಹುಟ್ಟಿದ ರಮ್‌ದಾ ಪದದ ಅರ್ಥ-ಬಿಸಿಲಿಗೆ ಸುಟ್ಟ ಮರಳು ಎಂದು. ಕೆಲವರು ಹಸಿವಿನಿಂದ ಹೊಟ್ಟೆಯಲ್ಲಿ ಸುಡುವ ಅನುಭವವನ್ನು ಅದು ಸೂಚಿಸುತ್ತದೆ ಎಂದು ಹೇಳಿದರೆ, ಇನ್ನು ಕೆಲವರು ಅದು ಬಿಸಿಲು ನೆಲವನ್ನು ಸುಡುವಂತೆ ಸದ್ಭಾವ ದುಷ್ಟತನವನ್ನು ಸುಟ್ಟುಹಾಕುವುದರ ಸಂಕೇತ ಎನ್ನುತ್ತಾರೆ. ಇನ್ನೂ ಕೆಲವರ ಪ್ರಕಾರ, ಮರಳು ಹಾಗು ಕಲ್ಲುಗಳು ಬಿಸಿಲನ್ನು ಅವಾಹಿಸಿ ತಾವೇ ಸುಡುವಂತೆ, ಹಸಿವಿನಲ್ಲಿ ಅಲ್ಲಾಹುವಿನ ನೆನಪು ಹಾಗು ಪಶ್ಚಾತ್ತಾಪದ ಆವಾಹನೆ ಸುಲಭ ಎನ್ನುತ್ತಾರೆ.

ಅರ್-ರಮದ್- ಮೂಲಪದದಿಂದಲೇ ಹುಟಿದ ಗಾದೆ- ಕಲ್ ಮುಸ್ತಜೀರ್ ಮಿನರ್, ರಮದಾ ಬಿನ್ನರ್. ಬಾಣಲೆಯಿಂದ ಹಾರಿ ಬೆಂಕಿಗೆ ಬಿದ್ದದ್ದು. ಈ ಗಾದೆಯನ್ನು ಓದುತ್ತಿದ್ದಂತೆ, ಜಾಗತಿಕ ಮಹಾಶಕ್ತಿಗಳ ಬೇಗೆಯಡಿ ಸುಡುತ್ತಲೇ ಇರುವ ಪ್ಯಾಲಸ್ಟೇನಿನ ಮಕ್ಕಳ ಮುಖಗಳು ಮನಕ್ಕೆ ಎದುರಾದವು. ಇನ್ನು ಸುಡಲು ಏನೂ ಉಳಿದಿಲ್ಲದಿದ್ದರೂ ಪರಿತಾಪ ಮುಗಿಯದ ಆಫ್ಗಾನಿಸ್ತಾನ್‌ದ ದಿಟ್ಟ ಮಹಿಳೆಯರು ನಕ್ಕರು. ಬಾಣಲೆಯಿಂದ ಬೆಂಕಿಗೆ ಬಿದ್ದು ಕರಟುತ್ತಿರುವ ಇರಾಖಿನಲ್ಲಿ ತಲೆಗೆ ಕೈಹೊತ್ತು ಕೂತವರು ಮನದ ಚಿತ್ರಗಳಾದರು. ಎರಡು ಹೊಟ್ಟೆ ಉರಿಗಳ ನಡುವೆ ಒಣಗಿ ನಲಗುತ್ತಿರುವ ಪ್ರೀತಿಯ ಕಾಶ್ಮೀರದ ತಂಪೆಲ್ಲಿ ಹಾರಿದೆ ಎಂದು ಹುಡುಕುವಂತಾಯಿತು.

ಪರಿಸರದ ಮೇಲೆ ಮನ ಬಂದಂತೆ "ಆಕ್ರಮಣ" ಮಾಡುತ್ತಿದ್ದೇವೆ. ಅಂಥ ಜೀವನ ರೀತಿಯನ್ನೇ ಮೆರೆಯುತ್ತಿದ್ದೇವೆ. ಈ ಬುವಿಯನ್ನು ಕಾದ ಬಾಣಲೆ ಮಾಡುತ್ತಿದ್ದೇವೆ. ಹಾಗೆಂದು ಗೊತ್ತಿದ್ದೂ, ಅದರ ಬಗ್ಗೆ ತಣ್ಣಗೆ ಸಣ್ಣ ಪುಟ್ಟ ಮಾತುಗಳನ್ನಾಡಿಕೊಂಡು ಕೂತಿದ್ದೇವೆ.

ಕಣ್ಣೆದುರಿನಲ್ಲೇ ನಡೆಯುತ್ತಿರುವ ಲೋಕದ ಅನಾಚಾರಗಳನ್ನು, ಹತ್ಯಾಕಾಂಡಗಳನ್ನು ನೋಡುತ್ತಾ ಮೂಕರಾಗಿ ಕೂರವ ನಮ್ಮ ಪಾಪಗಳಿಗೆ ಪಶ್ಚಾತ್ತಾಪ ಪಡಲು ಒಂದಲ್ಲ ಸಾವಿರಾರು ರಂಜಾನ್-ವ್ರತ ಸಾಲದೇನೋ ಎಂದು ಮನಸ್ಸು ಒಣಗಿ ಮುರುಟುತ್ತದೆ.

ಅಲ್ಲಾಹುವಿನ ದೂತ ಒಂದು ಹಾದಿತ್ತಿನಲ್ಲಿ ಹೇಳುವಂತೆ- `ಬೆಳಗಿನ ಎಳೆಬಿಸಿಲು ಮರಿ ಒಂಟೆಗೆ ಉರಿಯಾಗಿ ತಟ್ಟಿದಾಗ ಬಾಕಿವುಳಿದ ತಪ್ಪಿತಸ್ಥರ ಪ್ರಾರ್ಥನೆಯ ಕಾಲ ಬಂದಿದೆ`.

Rating
No votes yet

Comments