ರಣಜಿ ಟ್ರೋಫಿ ೨೦೦೬-೦೭: ಕರ್ನಾಟಕದ ಅಭಿಯಾನ ಅಂತ್ಯ

ರಣಜಿ ಟ್ರೋಫಿ ೨೦೦೬-೦೭: ಕರ್ನಾಟಕದ ಅಭಿಯಾನ ಅಂತ್ಯ

ಕರ್ನಾಟಕದ ೨೦೦೬-೦೭ ಋತುವಿನ ರಣಜಿ ಅಭಿಯಾನ ಸೆಮಿಫೈನಲ್ ಹಂತದಲ್ಲಿ ಮುಕ್ತಾಯ ಕಂಡಿದೆ. ೭ ವರ್ಷಗಳ ಬಳಿಕ ಸೆಮಿಫೈನಲ್ ಪ್ರವೇಶಿಸಿದ್ದ ಕರ್ನಾಟಕ ಅಲ್ಲೇ ಮುಗ್ಗರಿಸಿದೆ. ೧೯೯೯-೨೦೦೦ ದಲ್ಲಿ ವಿ.ವಿ.ಎಸ್ ಲಕ್ಷ್ಮಣ್ ಮತ್ತು ಮೊಹಮ್ಮದ್ ಅಜರುದ್ದೀನ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿ ಕರ್ನಾಟಕಕ್ಕೆ ಸೆಮಿಫೈನಲ್ ನಲ್ಲಿ ತಡೆಹಿಡಿದರೆ ಈಗ ೨೧ರ ಹರೆಯದ ಭಾರತ ಕಿರಿಯರ ತಂಡಕ್ಕೆ ಆಡಿರುವ ಯುವ ಪ್ರತಿಭಾವಂತ ಆಟಗಾರ ಮನೋಜ್ ತಿವಾರಿ ಅದೇ ಕೆಲಸ ಮಾಡಿದ್ದಾರೆ.

ಮೂರುವರೆ ದಿನಗಳ ಕಾಲ ಸತತವಾಗಿ ಹೋರಾಡಿದ ಬಳಿಕ ನಮ್ಮ ಹುಡುಗರಲ್ಲಿ ನಾಲ್ಕನೇ ದಿನ ಹೋರಾಡಲು ಶಕ್ತಿಯೇ ಉಳಿದಿರಲಿಲ್ಲ ಎಂದು ಕಾಣುತ್ತೆ. ಆದರೂ ಪ್ರಥಮ ಬಾರಿಯಲ್ಲಿ ೮೯ಕ್ಕೆ ಕುಸಿದು ನಂತರ ಉತ್ತಮ ಹೋರಾಟ ನಡೆಸಿ ಬಂಗಾಲಕ್ಕೆ ಸ್ವಲ್ಪವಾದರೂ ಬೆವರು ಇಳಿಸಿದ್ದು ನಿಜಕ್ಕೂ ಪ್ರಶಂಸನೀಯ. ಹೋರಾಡಿ ಸೋಲುವುದು ಹೋರಾಡದೆ ಸೋಲುವುದಕ್ಕಿಂತ ಎಷ್ಟೋ ಪಟ್ಟು ಮೇಲು.

ಈ ಋತುವಿನಲ್ಲಿ ಯುವ ಆಟಗಾರರದ್ದೇ ಕಾರುಬಾರು. ರಾಬಿನ್ ಉತ್ತಪ್ಪ ಓಟಗಳನ್ನು ಸೂರೆಗೈದು ರಾಷ್ಟ್ರೀಯ ತಂಡಕ್ಕೆ ಮತ್ತೆ ಆಯ್ಕೆಯಾದರು. ಈ ಋತುವಿನಲ್ಲಿ ಆಡಿದ ಎಲ್ಲಾ ಪಂದ್ಯಗಳಲ್ಲೂ ಗರಬಡಿದವರಂತೆ ಆಡುತ್ತಿದ್ದ ಭರತ್ ಚಿಪ್ಲಿ ಕೊನೆಗೂ ಒಂದು ಉತ್ತಮ ಬಾರಿಯನ್ನು ಆಡಿದರು. ಅವರಿಂದ ಬಹಳ ನಿರೀಕ್ಷೆಯಿದೆ. ಬ್ಯಾರಿಂಗ್ಟನ್ ಸೆಮಿಫೈನಲ್ ನಲ್ಲಿ ಗಳಿಸಿದ ಶತಕಾರ್ಧದಿಂದ ಮುಂದಿನ ಋತುವಿನಲ್ಲಿ ತನ್ನ ಸ್ಥಾನವನ್ನು ಉಳಿಸಿಕೊಳ್ಳಬಹುದು. ಆದರೆ ಮುಂದಿನ ಋತುವಿನಲ್ಲಿ ಅವರು ಈ ಪ್ರಸಕ್ತ ಋತುವಿನಲ್ಲಿ ಆಡಿದಂತೆ ಆಡಿದರೆ ಗೇಟ್ ಪಾಸ್ ಸಿಗುವ ಎಲ್ಲಾ ಸಂಭವಗಳಿವೆ. ಚಂದ್ರಶೇಖರ್ ರಘು ಕರ್ನಾಟಕದ 'ಪ್ಲೇಯರ್ ಆಫ್ ದಿ ಸೀಸನ್'. ಈ ಹಿಂದಿನ ೩ ಋತುಗಳಲ್ಲಿ ಒಂದೆರಡು ಪಂದ್ಯ ಆಡಿ ವಿಫಲರಾಗುತ್ತಿದ್ದ ರಘು ಈ ಬಾರಿ ಕರ್ನಾಟಕದ ಬ್ಯಾಟಿಂಗ್ ಆಧಾರವಾಗಿ ಪ್ರಶಂಸನೀಯ ನಿರ್ವಹಣೆ ತೋರಿದ್ದಾರೆ. ಪವನ್ ಉತ್ತಮ ಪ್ರತಿಭೆ. ಮುಂದಿನ ಋತುವಿನಲ್ಲಿ ಉತ್ತಮ ನಿರ್ವಹಣೆ ಇವರಿಂದ ಎದುರುನೋಡಬಹುದು. ದೀಪಕ್ ಚೌಗುಲೆ ಸಿಕ್ಕ ಅವಕಾಶಗಳನ್ನು ಸದುಪಯೋಗಗೊಳಿಸುವಲ್ಲಿ ವಿಫಲರಾದರು. ತಿಲಕ್ ನಾಯ್ಡು ಅಂತೂ ಕೊನೆಗೆ ತಮ್ಮ ನಿದ್ರಾಸನದಿಂದ ಎಚ್ಚೆತ್ತು ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ದೇವರಾಜ್ ಪಾಟೀಲ್ ರಣಜಿ ತಂಡಕ್ಕೆ ಸತತವಾಗಿ ೨ನೇ ಋತುವಿನಲ್ಲೂ ಆಯ್ಕೆಯಾಗಿದ್ದು, ಈ ಬಾರಿ ಉತ್ತಮ ಪ್ರದರ್ಶನ ನೀಡದಿದ್ದರೆ ಕಷ್ಟವಿದೆ ಎಂಬುದನ್ನು ಅರಿತು ತಿಲಕ್ ಉತ್ತಮ ಪ್ರದರ್ಶನ ನೀಡಿದ್ದಾರೆ. ಯೆರೆ ಗೌಡರ ಬ್ಯಾಟಿಂಗ್ ಮತ್ತು ನಾಯಕತ್ವದ ಬಗ್ಗೆ ತಕರಾರೇ ಇಲ್ಲ. ಮುಂದಿನ ಋತುವಿನಲ್ಲೂ ಅವರು ಆಡಿದರೆ ಕರ್ನಾಟಕಕ್ಕೆ ಒಳ್ಳೆದು. ಯುವ ಆಟಗಾರರ ನಡುವೆ ಒಬ್ಬ ಅನುಭವಿಯ ಅವಶ್ಯಕತೆ ಇರುತ್ತೆ.

ಬೌಲಿಂಗ್ ವಿಭಾಗದಲ್ಲಿ ಅಯ್ಯಪ್ಪ ಮೊದಲ ಪಂದ್ಯದ ಬಳಿಕ ಗಾಯಗೊಂಡು ಹೊರಗೆ ಉಳಿದದ್ದು ಕರ್ನಾಟಕದ ದುರಾದೃಷ್ಟ. ಅಖಿಲ್ ನಿರೀಕ್ಷೆಗೂ ಮೀರಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಧನಂಜಯ ತನ್ನ ಚೊಚ್ಚಲ ಪಂದ್ಯದಲ್ಲಿ ಉತ್ತಮ ನಿರ್ವಹಣೆ ನೀಡಿ ಗಮನ ಸೆಳೆದಿದ್ದಾರೆ. ಸುನಿಲ್ ಜೋಶಿಗೆ ಇರುವ ಅನುಭವಕ್ಕೆ ಹೋಲಿಸಿದರೆ ಅವರ ಪ್ರದರ್ಶನ ಸಾಧಾರಣವಾಗಿತ್ತು. ಬ್ಯಾಟಿಂಗ್ ನಲ್ಲಂತೂ ಅವರು ಹಾಜರಿ ಹಾಕುವುದನ್ನು ಬಿಟ್ಟರೆ ಬೇರೇನೂ ಮಾಡಲಿಲ್ಲ. ಸ್ವಲ್ಪವಾದರೂ ರನ್ನುಗಳನ್ನು ಸುನಿಲ್ ಗಳಿಸಿದಿದ್ದರೆ ಕರ್ನಾಟಕಕ್ಕೆ ಬಹಳ ಪ್ರಯೋಜನವಾಗಿತ್ತಿತ್ತು. ರಾಜು ಭಟ್ಕಳ್ ಮಲ್ಲೇಶ್ವರಮ್ ಜಿಮ್ಖಾನ ಪರವಾಗಿ ಆರಂಭಿಕ ಅಥವಾ ನಾಲ್ಕನೇ ಕ್ರಮಾಂಕದಲ್ಲಿ ಆಡುವ ದಾಂಡಿಗ. ಉಪಯುಕ್ತ ಮಧ್ಯಮ ವೇಗದ ಎಸೆಗಾರನೂ ಹೌದು. ಆಡಿದ ೨ ಪಂದ್ಯಗಳಲ್ಲಿ ಚೆನ್ನಾಗಿಯೇ ನಿರ್ವಹಣೆ ತೋರಿದ್ದಾರೆ. ಕೆ.ಪಿ.ಅಪ್ಪಣ್ಣ ಕರ್ನಾಟಕದ 'ಬೌಲರ್ ಆಫ್ ದಿ ಸೀಸನ್'. ೨೧ ಹುದ್ದರಿಗಳನ್ನು ತನ್ನ ಚೊಚ್ಚಲ ಋತುವಿನಲ್ಲೇ ಗಳಿಸಿದ್ದು ೧೮ರ ಹರೆಯದ ಅಪ್ಪಣ್ಣನ ಸಾಧನೆ. ಆದರೆ ವಿನಯ್ ಕುಮಾರ್ ಪ್ರಮುಖ ಪಂದ್ಯಗಳಲ್ಲಿ ನಿರಾಸೆಗೊಳಿಸಿದರು. ತಮಗಿದ್ದ ಅನುಭವ ಮತ್ತು ಪ್ರತಿಭೆಯಿಂದ ಅವರು ಇನ್ನಷ್ಟು ಉತ್ತಮ ನಿರ್ವಹಣೆ ತೋರಬಹುದಾಗಿತ್ತು.

ಏನಿದ್ದರೂ ಈ ಋತುವಿನಲ್ಲಿ ಕರ್ನಾಟಕ ಉತ್ತಮ ನಿರ್ವಹಣೆಯನ್ನೇ ತೋರಿದೆ. ಮತ್ತೆ ನವಂಬರ್ ವರೆಗೆ ಕಾದು ಮುಂದಿನ ಋತುವಿನಲ್ಲಿ ಮತ್ತೆ ಕ್ರಿಕೆಟ್ ಸುದ್ದಿಗಳನ್ನು ಹಾಗೂ ಮಾಹಿತಿಗಳನ್ನು ಹಂಚಿಕೊಳ್ಳೋಣ.

Rating
No votes yet

Comments