ರಾಜಕಾರಣಿಗಳಿಂದ ದೇಶಕ್ಕೆಂದು ಮುಕ್ತಿ?
ಕುಖ್ಯಾತಿಯಿಂದಲೇ ’ಖ್ಯಾತನಾಮ’ರಾಗಿದ್ದ ಕೆಲವರು ಒಬ್ಬೊಬ್ಬರಾಗಿ ’ಒಳಗೆ’ ಹೋಗುತ್ತಿದ್ದಾರೆ. (ಅಲ್ಲೂ ಅವರ ಪೊಗರೇನೂ ಕಮ್ಮಿಯಾಗಬೇಕಾದ್ದರಿವುದಿಲ್ಲ!) ಸಿಕ್ಕಿಹಾಕಿಕೊಂಡಿರುವ ’ಮಹಾನ್ ವ್ಯಕ್ತಿ’ಗಳು ಹಲವರು, ಅಷ್ಟೆ. ಇನ್ನೂ ಬಲೆಗೆ ಬೀಳಬೇಕಾದ ತಿಮಿಂಗಲಗಳೂ, ಬಲೆಯನ್ನೇ ಕಡಿದೆಸೆವ, ರಕ್ತಪೀಪಾಸು, ಪಿರಾನಾ ಮೀನುಗಳೂ, ಅವೆಷ್ಟಿವೆಯೋ, ಯಾರು ತಪಶೀಲು ಹಿಡಿಯಬೇಕು?!
ಇಂಥವರು ಯಾವುದೇ ಹಗರಣ-ಪ್ರಕರಣಗಳಿಂದಲೂ ಪಾಠ ಕಲಿಯುವ ಸಂಭವ ಅಷ್ಟಾಗಿಲ್ಲ. ಕಲಿಯುವ ಸಂಪ್ರೇರಣೆ ಅವರಲ್ಲಿರುತ್ತಿದ್ದರೆ, ಪ್ರಾಥಮಿಕ ಶಾಲೆಯಲ್ಲೇ ’ನಾಗರಿಕತೆ’ಯ ಪಾಠ ಕಲಿಯುತ್ತಿದ್ದರು; ಸಭ್ಯ ಪ್ರಜೆಗಳಾಗಿ ಬಾಳುವುದನ್ನರಿತಿರುತ್ತಿದ್ದರು! ಸಭ್ಯರೇ ಆಗಿದ್ದರೆ ರಾಜಕಾರಣದ ’ಗೂಂಡಾಗಿರಿ’ಗೆ ಏಕೆ ಬರುತ್ತಿದ್ದರು? ಈಗ ಬಂದಾಗಿದೆ. ’ಕ್ರಿಮಿನಲ್ ಮೆಂಟಾಲಿಟಿ’ ಹೆಪ್ಪುಗಟ್ಟಿರುವ ಮನ-ಬುದ್ಧಿಗಳಿಗೆ ಯಾರೆಷ್ಟು ’ಬುದ್ಧಿ’ ಹೇಳಿದರೇನು, ಅದು ಒಳಗೆ ಹೋದೀತೇ? ಯಾವ ಪ್ರಕರಣ, ಹಗರಣಗಳು ತಾನೇಇವರಿಗೆ ಬುದ್ಧಿ ಕಲಿಸೀತು?
ಇವರೆಲ್ಲಾ ನಮ್ಮ, ಅಂದರೆ, ಪ್ರಜೆಗಳ ಪ್ರತಿನಿಧಿಗಳೇ. ಇವರುಗಳೇ ಅಳ್ವಿಕೆ, ದಬ್ಬಾಳಿಕೆ ನಡೆಸುವವರು. ಇವರ ಕೈವಶದಲ್ಲೇ ಸಿಐಡಿ, ಸಿಬಿಐಗಳೆಲ್ಲಾ ಕೆಲಸ ಮಾಡುವುದು. ಲೋಕಾಯುಕ್ತರ, ಸಂಭಾವ್ಯ ಲೋಕಪಾಲರ ಶಿಪರಸುಗಳನ್ನೂ, ತಮ್ಮ ರಕ್ಷಣೆಗೆ, ಎದುರಾಳಿಯಮೇಲಿನ ದ್ವೇಷಸಾಧನೆಗೆ ಬಳೆಸಿಕೊಳ್ಳುವ ಮುಕ್ತ ಅವಕಾಶವೂ ಇವರದೇ!
’ವಿ ದ ಪೀಪಲ್ ಆಫ್ ಇಂಡಿಯಾ...’ ಎಂದು ಸಂವಿಧಾನವನ್ನು ಸಮರ್ಪಿಸಿಕೊಂಡಿರುವ ನಾವು, ನಾವಾಗಿಯೇ ಇವರ ಕೈಗೆ ಬೆತ್ತ ಕೊಟ್ಟು ಒತ್ತ ತಿನ್ನುತ್ತಿದ್ದೇವೆ! ಪ್ರಜಾಪ್ರತಿನಿಧಿ ಕಾಯ್ದೆಗೆ ಅಗತ್ಯ ತಿದ್ದುಪಡಿ ತಂದು ನಿಜ ಬಹುಮತದ ಅಭ್ಯರ್ಥಿಗಳು ಮತ್ರಾ ಶಾಸಕರೂ, ಸಂಸದರೂ ಆಗುವವರೆಗೆ, ಅಥವಾ ರೋಸಿ ರೊಚ್ಚಿಗೆದ್ದ ಜನ ಮಿಲಿಟರಿ ಆಡಳಿತವೇ ಸರಿಯೆಂದು ಬೆಂಬಲಿಸುವವರೆಗೆ ಜೆಪಿ ’ಪೂರ್ಣಕ್ರಾಂತಿ’ಯೂ, ಅಣ್ಣಾ ಜಯಕಾರಗಳೂ ನಮ್ಮನ್ನುದ್ಧರಿಸಲಾರವು....