ರಾಜಕಾರಣಿಗಳ ಬಾಯಲ್ಲಿ 'ಬೊಗಳೆ' ಮಂತ್ರ!

ರಾಜಕಾರಣಿಗಳ ಬಾಯಲ್ಲಿ 'ಬೊಗಳೆ' ಮಂತ್ರ!

ಬೊಗಳೂರು, ಡಿ.4- ರಾಜಕಾರಣಿಗಳೂ ಸತ್ಯ ನುಡಿಯಲಾರಂಭಿಸಿರುವುದು ಬೊಗಳೆ ರಗಳೆ ಬ್ಯುರೋವನ್ನು ವಿಶೇಷವಾಗಿ ಕೆರಳಿಸಿದ ಪರಿಣಾಮವಾಗಿ, ತಾಳ್ಮೆಗೆಡದಿರುವಂತೆ ಎಲ್ಲಾ ಪ್ರಜೆಗಳಿಗೆ ಮನವಿ ಮಾಡಿಕೊಳ್ಳಲಾಗಿದೆ. (bogaleragale.blogspot.com)

ಹೀಗೆ ಸತ್ಯ ಹೇಳಲಾರಂಭಿಸಿರುವುದರಿಂದ ಕಳವಳಗೊಂಡ ಬ್ಯುರೋ ತಂಡವು ನೇರವಾಗಿ ಮಾವನ (ಮತ್ತು ತಮ್ಮ) ಸಂಪನ್ಮೂಲಗಳ ಅಭಿವೃದ್ಧಿ ಮಂತ್ರಿ ದುರ್ಜನ ಸಿಂಹ ಅವರನ್ನು ಮಾತನಾಡಲಾರಂಭಿಸಿತು. ಇದಕ್ಕೆಲ್ಲಾ ಕಾರಣವೆಂದರೆ ದೇಶದ ಜನತೆಯ ಸಹಿಷ್ಣುತೆಯೇ ಪ್ರಜಾಸತ್ತೆ ಸತ್ತೇಹೋಗದಿರಲು ಕಾರಣ ಎಂದು ಅವರು ಹೇಳಿಕೆ ನೀಡಿರುವುದು!

ಕಳೆದ 60 ವರ್ಷಗಳಿಂದ ಮೇಯಲು ಸಾಮರ್ಥ್ಯವಿರುವವರು ಮೇಯ್ದುಕೊಂಡೇ ಇರುವಂತಾಗಲು ಈ ದೇಶದ ಪ್ರಜೆಗಳ ತಾಳ್ಮೆ ಮತ್ತು ಪರಿಸ್ಥಿತಿಯನ್ನು ಅಳೆದು ತೂಗಿ ನೋಡಿ "ಸುಮ್ಮನಿರುವುದೇ ಲೇಸು" ಎಂದು ತೀರ್ಮಾನಿಸುವ ಗುಣಗಳೇ ಕಾರಣ ಎಂದು ಅವರು ನಮ್ಮ ಬ್ಯುರೋಗೆ ಮಾತ್ರವೇ ಸ್ಪಷ್ಟಪಡಿಸಿದ್ದಾರೆ.

ನೀವೇ ನೋಡಿ, ಬದುಕಲು ಬೇಕಾದ ವಸ್ತುಗಳ ಬೆಲೆಯನ್ನು ಎಷ್ಟು ಎತ್ತರಕ್ಕೇರಿಸಿದರೂ ಒಂದೆರಡು ದಿನ ಕೂಗಾಡಿ ಗಲಾಟೆ ಮಾಡುತ್ತಾರೆಯೇ ಹೊರತು, ಬೆಲೆ ತಗ್ಗಿಸುವವರೆಗೂ ಅವರೇನೂ ಬಿಗುವಾಗಿರುವುದಿಲ್ಲ. ಶಾಂತರಾಗಿ ತಮ್ಮ ಪಾಡಿಗೆ ತಾವು ಮರಳುತ್ತಾರೆ. ಅವರಿಗೂ ಪರಿಸ್ಥಿತಿಯ ಅರಿವಾಗಿರುತ್ತದೆ. ಯಾವುದೇ ಪ್ರತಿಭಟನೆ ಮಾಡಿ ಪ್ರಯೋಜನ ಇಲ್ಲ, ಆಳುವವರು ಈ ಬಗ್ಗೆ ಒಂದು ಕುಡಿನೋಟವನ್ನೂ ಹಾಯಿಸುವುದಿಲ್ಲ ಎಂಬ ಸತ್ಯಾಂಶಕ್ಕೆ ಅವರು ಒಗ್ಗಿ ಹೋಗಿದ್ದಾರೆ ಎಂದವರು ತಿಳಿಸಿದರು.

ಮೀಸಲಾತಿ ವಿಷಯಗಳೂ ಅಷ್ಟೇ, ಒಂದು ನೂರಿನ್ನೂರು ಮಂದಿ ಪ್ರತಿಭಟನೆ ಮಾಡಿ ಆತ್ಮದಹನ ಮುಂತಾದ ಕಾರ್ಯಗಳಿಗೆ ಮುಂದಾಗಬಹುದು. ಆದರೆ ಇದರ ಬಗ್ಗೆ ಎಲ್ಲಾ ತಲೆ ಕೆಡಿಸಿಕೊಂಡರೆ, ನಮ್ಮ ಜೇಬು ತುಂಬಿಸಿಕೊಳ್ಳುವುದು, ಓಟಿನ ಬ್ಯಾಂಕ್ ಬ್ಯಾಲೆನ್ಸ್ ವೃದ್ಧಿಸಿಕೊಳ್ಳುವುದು ಹೇಗೆ. ಅವರು ಅವರ ಪಾಡಿಗೆ ಹೋರಾಟ ಮಾಡುತ್ತಾ ಇರುತ್ತಾರೆ ಎಂದು ಕ್ಯಾಕರಿಸಿ ನಕ್ಕರು.

ಈ ದೇಶದ ಪ್ರಜೆಗಳ ತಾಳ್ಮೆಯೇ ನಮ್ಮನ್ನು ಎಲ್ಲಾ ರಂಗಗಳಲ್ಲೂ, ಪ್ರತಿಯೊಂದು ಕ್ಷಣ ಕ್ಷಣವೂ ರಕ್ಷಿಸುತ್ತಿರುತ್ತದೆ. ಹಗರಣ ಬೆಳಕಿಗೆ ಬಂದಾಗ ಒಂದಷ್ಟು ಕೂಗಾಡುತ್ತಾರೆ, ತನಿಖಾ ಆಯೋಗ ರಚಿಸಿದ ತಕ್ಷಣ ಬಾಯಿ ಮುಚ್ಚುತ್ತಾರೆ. ತನಿಖಾ ಆಯೋಗದಲ್ಲಿ ನಮ್ಮವರನ್ನೇ ನೇಮಿಸಿದರಾಯಿತಲ್ಲಾ ಎಂದು ತಮ್ಮ ಚಾಣಕ್ಯ ನೀತಿಯ ಪ್ರಯೋಗಾನುಭವವನ್ನು ಮುಂದಿಟ್ಟರು.

Rating
No votes yet