ರಾಜಧಾನಿಯಲ್ಲಿ ನಮ್ಮ ಸೈನ್ಯ
ಇಂಡಿಯನ್ ಎಕ್ಸ್ಪ್ರೆಸ್ಸ್ ಪತ್ರಿಕೆ ಸೈನ್ಯದ ಬಗ್ಗೆ ವರದಿಯೊಂದನ್ನು ಪ್ರಕಟಿಸಿ ಕೋಲಾಹಲವನ್ನು ಸೃಷ್ಟಿಸಿದೆ. ಈ ವರ್ಷದ ಜನವರಿ ೧೬-೧೭ ರ ರಾತ್ರಿ ಭೂಸೇನೆಯ ಎರಡು ಪ್ರಮುಖ ತುಕಡಿಗಳು ದೇಶದ ರಾಜಧಾನಿಯ ಪರಿಸರಕ್ಕೆ ರಕ್ಷಣಾ ಇಲಾಖೆಯ ಅನುಮತಿಯಿಲ್ಲದೆ ಬಂದಿದ್ದು ಏಕೆ? ಸೈನ್ಯದ ಈ ಕ್ರಮ ಸರಕಾರದ ಉನ್ನತ ಸ್ತರದಲ್ಲಿ ಕಂಪನವನ್ನೇಕೆ ತಂದಿತು, ಪ್ರವಾಸದಲ್ಲಿದ್ದ ರಕ್ಷಣಾ ಕಾರ್ಯದರ್ಶಿಯನ್ನು ಮಲೇಷ್ಯಾದಿಂದ ಏಕಾಯೇಕಿ ಹಿಂದಕ್ಕೆ ಕರೆಸಿ ಕೊಂಡಿದ್ದು ಏಕೆ, ಎನ್ನುವ ಹಲವು ಪ್ರಶ್ನೆ ಸಂಶಯಗಳಿಗೆ ಅನುವು ಮಾಡಿ ಕೊಟ್ಟಿದೆ. ಪತ್ರಿಕೆಯ ಈ ವರದಿ ನೋಡಿ ಪ್ರಧಾನಿ, ರಕ್ಷಣಾ ಸಚಿವರು ಸೈನ್ಯದ ಬಗ್ಗೆ ಭರವಸೆಯ ಮಾತುಗಳನ್ನು ಹೇಳಿದ್ದಾರೆಯೇ ಹೊರತು ಪತ್ರಿಕೆ ಎತ್ತಿದ ಪ್ರಶ್ನೆಗಳಿಗೆ ಉತ್ತರ ಕೊಟ್ಟಿಲ್ಲ. ಭಾರತ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಅಚಲ ವಿಶ್ವಾಸ ಇರಿಸಿ ಕೊಂಡಿರುವ ದೇಶ. ನಮ್ಮ ವ್ಯವಸ್ಥೆಯಲ್ಲಿ ಅದ್ಯಾವ ಕುಂದು ಕೊರತೆಗಳೇ ಇರಲಿ ಇಲ್ಲಿ ಪ್ರಜೆಯೇ ಪ್ರಭು. ಜನರಿಂದ ಚುನಾಯಿತನಾದ ಮಂತ್ರಿ ಎಂಥ ಹುಂಬನೇ ಆದರೂ ಅವನ ಆದೇಶದ ಅಡಿ ಅಧಿಕಾರಿಶಾಹಿ ಕೆಲಸ ಮಾಡಬೇಕು. ನಮ್ಮ ಸೈನ್ಯದ ಮಹಾ ದಂಡನಾಯಕ ಜನರಲ್ V.K.Singh ರಿಗೂ ಸರಕಾರಕ್ಕೂ ವೈಮನಸ್ಸಿರುವುದು ಎಲ್ಲರಿಗೂ ತಿಳಿದದ್ದೇ. ನಿವೃತ್ತಿಯಾಗುವ ವಯಸ್ಸಿನ ಕುರಿತು ಶುರುವಾದ ತಗಾದೆ ಸೈನ್ಯದಲ್ಲಿ ಭ್ರಷ್ಟಾಚಾರ ಇರುವ ವಿಷಯದವರೆಗೆ ಮುಂದುವರೆಯಿತು. ಸೈನ್ಯಾಧಿಕಾರಿ ರಿಪೋರ್ಟ್ ಕೊಡಬೇಕಿರುವುದು ರಕ್ಷಣಾ ಸಚಿವರಿಗೆ. ಸಿಂಗ್ ಈ ಕೆಲಸ ಮಾಡದೇ ನೇರವಾಗಿ ಪ್ರಧಾನಿಗೆ ಪತ್ರ ಬರೆದು protocol ಉಲ್ಲಂಘಿಸಿದರು. ಅವರು ಬರೆದ ಪತ್ರ ಸೋರಿಕೆ ಆಗಿ ಮತ್ತೊಂದು ಅನಾಹುತ ಕ್ಕೆ ಎಡೆಯಾಯಿಯಿತು. ಪತ್ರವನ್ನ ಯಾರು ಸೋರಿಸಿದರು ಎನ್ನುವ ಬಗ್ಗೆ ಯಾರಿಗೂ ಗೊತ್ತಿಲ್ಲ. ಈ ಘಟನೆಗಳ ಬೆನ್ನಲ್ಲೇ ಸೈನ್ಯದ ತುಕಡಿಯ ರಾಜಧಾನಿ ಭೇಟಿ.
ಸೈನ್ಯ ಸರಕಾರದ ಮಧ್ಯೆಯ ಜಟಾಪಟಿ ದೇಶಕ್ಕೆ ಒಳ್ಳೆಯದಲ್ಲ. ಕೋಲಾ ಹಲಕ್ಕೆ ಕಾರಣವಾದ ಹಲವು ಜಟಾಪಟಿಗಳನ್ನು ದೇಶ ಕಂಡಾಗಿದೆ. ಇಂದಿರಾ ಗಾಂಧೀ – ಅಲಹಾಬಾದ್ ನ್ಯಾಯಾಲಯದ ನಡುವಿನ ಜಗಳ, ರಾಜೀವ್ ಗಾಂಧಿ – ಜೆಲ್ ಸಿಂಗರ ನಡುವಿನ ಕದನ, ಕೇಂದ್ರ ಸರಕಾರ – ಶೇಷನ್ ನಡುವಿನ ಗಲಾಟೆಗಳನ್ನು ಕಂಡ ದೇಶಕ್ಕೆ ಸೈನ್ಯ ಮತ್ತು ಸರಕಾರದ ನಡುವಿನ ಇರುಸು ಮುರುಸು ಹೊಸತಾಗಿ ಕಾಣುತ್ತಿದೆ. ಏಕೆಂದರೆ ನಮ್ಮ ದೃಷ್ಟಿಯಲ್ಲಿ ಸೇನೆ ಎಂದಿಗೂ ದೇಶಕ್ಕೂ, ಸರಕಾರಕ್ಕೂ ವಿಧೇಯವಾಗಿದ್ದ ಸಂಸ್ಥೆ. ಏಕಾ ಏಕಿ ಈ ತೆರನಾದ ಸಮಸ್ಯೆ ಬರಲು ಕಾರಣ ವೇನು, ನಿಜವಾಗಿಯೂ ನಡೆಯುತ್ತಿರುವುದು ಏನು ಎಂದು ತಿಳಿಯುವ ಹಕ್ಕು ದೇಶಕ್ಕಿದೆ. ಕೂಡಲೇ ಪ್ರಧಾನಿ, ರಕ್ಷಣಾ ಸಚಿವರು ಸಂಶಯ ನಿವಾರಣೆಯ ಕಡೆ ಗಮನ ಹರಿಸುವುದು ಒಳ್ಳೆಯದು.