ರಾಜಸ್ಥಾನವೆಂಬ ಸ್ವರ್ಗದ ತುಣುಕು : (ಪ್ರವಾಸ ಕಥನದ ಒನ್ನೇ ಪುಟ) - ಲಕ್ಷ್ಮೀಕಾಂತ ಇಟ್ನಾಳ

ರಾಜಸ್ಥಾನವೆಂಬ ಸ್ವರ್ಗದ ತುಣುಕು : (ಪ್ರವಾಸ ಕಥನದ ಒನ್ನೇ ಪುಟ) - ಲಕ್ಷ್ಮೀಕಾಂತ ಇಟ್ನಾಳ

ರಾಜಸ್ಥಾನವೆಂಬ ಸ್ವರ್ಗದ ತುಣುಕು : 1
       ಈ 'ಫೂಲೋಂ ಕಾ ತಾರೊಂಕಾ  ಸಬ್ ಕಾ ಕೆಹನಾ ಹೈ.. ...ಏಕ್ ಹಜಾರೋಂ ಮೆ ಮೇರೆ ಪಪ್ಪಾ ಹೈ’ 'ಆಡ್’ ಬರೋದಕ್ಕಿಂತ  ಇನ್ನೂ ಮೊದಲೇ,..ಮಗಳು ಅನುಷಾ ನನ್ನೊಂದಿಗೆ,  ''ಪಪ್ಪಾ, ಈ ಸಾರಿ.........’’ ಒಂದನೇ ಸೆಮೆಸ್ಟರ್‍ನ ರಜಾ ದಿನಗಳಲ್ಲಿ  ಎಲ್ಲಿಗಾದರೂ  ಹೋಗೋಣವೆಂದು, ಅಹವಾಲು ಶುರುಮಾಡಿ ಬಿಟ್ಟಿದ್ದಳು.....  ಅದನ್ನೂ ಕೂಡ ಒಂದು ಡ್ಯೂಟಿ   ಅಂದುಕೊಂಡೇ  ಕೇರಳ ಪ್ರವಾಸ ಹುಡುಕಿ ಇಟ್ಟಿದ್ದೆ. ... ಎಷ್ಟೊಂದು  ಕೆಲಸದ ಒತ್ತಡ ಮಾರಾಯ್ರೇ....  ಕೇರಳಾನೋ, ಗೋವಾನೋ,  ತುಸು ಅವಸರಿಸಿದರೆ,  ಒಂದೆರಡು ದಿನಗಳಲ್ಲೆ ಬೇಗ ಬೇಗ ಹೋಗಿ ಬಂದ ಶಾಸ್ತ್ರ ಮಾಡಿದರಾಯಿತು   ಅಂದುಕೊಂಡಿದ್ದೆ, ಅವೇನೋ ನನಗೂ ಪ್ರಿಯವೇ, ಆದರೆ ಕೆಲಸದೊತ್ತಡದಲ್ಲಿ ಏನೂ ಬೇಡವಾಗಿತ್ತು ಅಷ್ಟೆ. ...ರಜೆ ಹತ್ತಿರವಾದಂತೆ   ಈ ಸಾರಿ ರಾಜಸ್ಥಾನಕ್ಕೇನೆ ಹೋಗೋಣವೆಂದು ಹಠ ಹಿಡಿದು, ಕುಳಿತುಬಿಟ್ಟಳು ಮಗಳು.  ಅವಳಿಗೆ ಅದಾರೋ ಅವಳ  ಕ್ಲಾಸ್‍ಮೇಟ್ ಅದರ ಬಗ್ಗೆ ಹೇಳಿದ್ದಿರಬೇಕು. .ನನಗೂ ಈ ರಾಜಸ್ಥಾನ ಹಾಗೂ ಅದರ ಆ ಥಾರ್ ಮರುಭೂಮಿಯ  ಸೆಳೆತ ಮೊದಲಿನಿಂದಲೂ ಇತ್ತು, ಆದರೆ ಲೇಖಕಿದ್ವಯರಾದ ಸಂಧ್ಯಾ ರಾಣಿ  ಹಾಗೂ ಭಾರತಿಯವರು ಇತ್ತೀಚೆಗೆ ರಣ್ ಉತ್ಸವಕ್ಕೆ ಗುeರಾತ್‍ಗೆ ಹೋಗಿ ಅಲ್ಲಿಂದ ಹೊಟ್ಟೆಕಿಚ್ಚಾಗುವಷ್ಟು ಮಾಹಿತಿ, ಫೇಸ್‍ಬುಕ್‍ಲ್ಲಿ ಫೋಟೋ  ಹಾಕಿದ್ದು, ನೋಡಿ,.. ಅದರ ಬಗೆಗಿನ ಆ ಹಳೆಯ ವ್ಯಾಮೋಹದ ಅಲೆ ಮತ್ತೆ ಇಂಡೆಂಟ್ ಹಾಕಲು ಶುರುವಿಟ್ಟುಕೊಂಡಿದ್ದು ಸುಳ್ಳು ಎಂದು ಹೇಳಲಾರೆ...ಇವರು ಆ ಮರುಭೂಮಿಗೆ ಗಾಗಲ್ ತೊಡಿಸಿ, ಫೋಟೋ ಹಾಕಿದ್ದನ್ನು ನೋಡಿದ್ದು, ನೆನಪಿದೆಯೇ? ನನಗೂ ಕೂಡ, ಆ ಬಣ್ಣಗಳಲ್ಲೆ ತನ್ನನ್ನೇ ಅದ್ದಿಕೊಂಡ,  ಕಣ್ಣಲ್ಲಿ ತುಂಬಿ ಮಿಂದುಕೊಂಡ  ರಾಜಸ್ಥಾನಕ್ಕೆ  ಹೋಗಿ, ಅಲ್ಲಿನ ಆ ಮರುಭೂಮಿಗೊಂದು ಚಂದದ ಬಣ್ಣದ ಅಂಗಿ ತೊಡಿಸುವ, ಇಲ್ಲಾ ಕೊರೆವ ರಾತ್ರಿಯ ಚಳಿಯಲ್ಲಿ ಅದಕ್ಕೊಂದು ಬೆಚ್ಚನೆಯ ರಜಾಯಿ  ಹೊಚ್ಚಿ, ನನ್ನ ಪ್ರೀತಿದುಂಬಿದ ಬಾಹುಗಳಲ್ಲಿ ಬಾಚಿ ತಬ್ಬಿಕೊಳ್ಳುವ  ಕುಚುಕುಚು ಶುರುವಾಗಿಬಿಟ್ಟಿತ್ತು.. ಈ ಪ್ರಕೃತಿಯು  ಎಲ್ಲಿಯೂ ತಾರತಮ್ಯ ಮಾಡದೇ ಈ  ಮನುಷ್ಯನ ತೆಕ್ಕೆಗೆ ಸಿಗದೇ, ಇನ್ನೂ ಕರಪ್ಟ್ ಆಗದೇ,  ಎಲ್ಲೆಡೆಗೂ ಒಂದೇ ಸಮಾನತೆಯನ್ನು ಕಾಯ್ದುಕೊಂಡಿರುವ  ಬಲು  ಸುಂದರಾತಿ ಸುಂದರ ಭೂದಾಯಿಯ  ಮಧುರ ಮಡಿಲು ಅದು, ಆ  ಮರುಭೂಮಿ.
      ಅಂತಹ ಅಗಾಧ  ಮರುಭೂಮಿಯ  ಗ್ರಾಹ್ಯವೂ ಕೂಡ   ಊಹಿಸಲು ಆಗದಷ್ಟು ಸಂಕುಚಿತವಾಗಿ ಇಲ್ಲಿಯ ಬದುಕಿನಲ್ಲಿ ಕಳೆದುಹೋಗಿದ್ದೇವೆ, ಒಗ್ಗಿಹೋಗಿದ್ದೇವೆ, ಕುಬ್ಜರಾಗಿ ಅಲ್ಲವೇ?   ಹಿಂದೆಂದೋ ಒಮ್ಮೆ, ಅಂದರೆ ಹಿಂ...ದೆಂ.....ದೋ ಒ....ಮ್ಮೆ, ಬಿಲಿಯನ್ ಟ್ರಿಲಿಯನ್ ವರ್ಷಗಳಾಯುವಿನ ಹಿಂದೆ,.  ಆಯಾಸ ಪರಿಹಾರಕ್ಕೆ ನೆಲದೆಡೆಗೆ ಬಂದು ಇಲ್ಲಿಯೇ ಭೂಮಿಯ ಮೇಲೆ ಉಳಿದುಬಿಟ್ಟು ಸುತ್ತಲೂ ಮೈಚಾಚಿಕೊಂಡಿರುವ ಅಗಾಧ ಗಗನದಂತಹ ಮುಗಿಲಬಾನೇ ಇರಬಹುದೇನೋ ಅದು,  ಕಂಡರಿಯದಷ್ಟು ವಿಶಾಲತೆಯನ್ನೇ ಚಾಚಿ, ಅದನ್ನೇ ಹೊದ್ದುಕೊಂಡಿದೆ.  ಸರಹದ್ದುಗಳ ಪರಿವೆಯಿಲ್ಲ ಅದಕ್ಕೆ!. ನಾವು ಮಲಗಿದಾಗ ಹೇಗೆ ಮಗ್ಗಲು ಬದಲುವೆವೋ, ಹಾಗೆಯೇ ಅದೂ ಕೂಡ, ಗಾಳಿಯ ಬೆರಳುಗಳಿಂದ ಸ್ಯಾಂಡ್ ಡ್ಯೂನ್‍ಗಳನ್ನು ಸ್ಥಳಾಂತರಿಸುತ್ತ, ಮಗ್ಗಲು ಬದಲಿಸುವುದನ್ನು ನೋಡಿಯೇ ತೀರಬೇಕಿತ್ತು. ತನ್ನ ಮೈಮೇಲೆ ಪ್ರತಿಕ್ಷಣ ಅವಿರತ ರಂಗೋಲಿ ಮೂಡಿಸುತ್ತಲೇ ಅಳಿಸಿಬಿಡುವುದನ್ನು, ಹಸಿ ಹಸಿ ಹಚ್ಚೆ ಹಾಕಿಕೊಳ್ಳುತ್ತ ಮತ್ತೊಂದಕ್ಕೆ ಮುನ್ನುಡಿಯನ್ನು ಆಗಲೇ ಬರೆದುಕೊಳ್ಳುವುದನ್ನು ಕಣ್ಣಾರೆ ಕಾಣಬೇಕಿತ್ತು. ಇಂತಹ ಬಿಸಿ ಭುಸುಗುಡುವ ದಿನಗಳಲ್ಲಿ, ಮತ್ತೆ  ಕೊರೆವ ಆ ಚಳಿಯ ರೌರವ ರಾತ್ರಿಗಳಲ್ಲಿ ಪಾಪ ಅದು ಹೇಗೆ ಇರುವೆಯೋ 'ಒಂಟಿ'ಯಾಗಿ ಎಂದು ಕೇಳಬೇಕಿತ್ತು 'ಲೈವ್' ಅದನ್ನೇ , ಮರಳ ಆತ್ಮವನ್ನೇ.  
       ಅದರ ವಿಶಾಲತೆಯನ್ನು ಕಣ್ಣಾರೆ ಕಾಣುವ, ಅದರಲ್ಲೇಳುವ ಆ ಬಿಸಿಗಾಳಿಯ ಓಲಾಡುವ ತೆರೆಗಳನ್ನು ನೋಡಲು ಕಾತುರ ನನಗೆ, ರಾತ್ರಿಯ ಆ ಕೊರೆಯುವ ಛಳಿಯ ಅಲೆಗಳಲ್ಲಿ ಕ್ಯಾಂಪ್ ಫೈರ್‍ನಲ್ಲಿ  ಬೆಂಕಿ ಕಾಯಿಸುತ್ತ, ಮೊಳಗುತ್ತಿರುವ ಅಲ್ಲಿನ ನೆಲದ ಜನಪದೀಯ ಹಾಡಿಗೆ ಮರಳುಗಾಡಿನ ನವಿಲಿನಂತಿರುವ, ಕಾಲ್‍ಬೇಲಿಯನ್ (ಸಪೇರಾ) ಸುಂದರಿಯರು,  ಲಯಬದ್ಧವಾಗಿ,  ಶೃಂಗಾರಭರಿತ ನೃತ್ಯಗಳನ್ನು, ಆ ಘೂಮರ್‍ಗಳನ್ನು, ಮೈಮಣಿಸಿ ಸುರುಳಿಯಾಗಿಬಿಡುವ ಆ ಲಲನಾಮಣಿಯರ ನಯನ ಮನೋಹರ ಸಂಗೀತಮಯ ಹೆಜ್ಜೆಗಳ ನೃತ್ಯಗಳಲ್ಲಿ ಹೆಜ್ಜೆ ಹಾಕಿ ಆನಂದಿಸಬೇಕಿದೆ,.... ಇನ್ನು  ಈ ನೃತ್ಯಗಳಿರುವಲ್ಲಿ ಸಂಗೀತವಿರಲೇಬೇಕಲ್ಲವೇ, ಈ ನೃತ್ಯಗಳಿಗೆ ಎಂದಿಗೂ ಸಾಥಿಯಾಗಿ, ಸಾಥ ನೀಡುವವರು, ಸಂಗೀತ ಮಾಂತ್ರಿಕ ಜಗದ, ಮಂಗಾನೇರಿಯನ್, ಲಂಗದಾ ಪಂಗಡದ ಹಾಡುಗಾರರು, ಅಪ್ಪಟ ಥಾರ್‍ನ  ನಟ್ಟ ನಡು ಮಡಿಲಿನಲಿಯೇ ಜನಿಸಿದ,  ಜೈಸಲ್ಮೇರ್,, ಬಾರ್‍ಮೇರ್‍ಗಳ ತವರುಗಳಲ್ಲಿ, ಇದಕ್ಕಾಗಿಯೇ ಜನಿಸಿದ, ಸಂಗೀತ ರಿದಮ್‍ಗಳನ್ನೇ ಇಡೀ ಕೇಳುಗ ಮಾಹೋಲ್‍ನ ಎದೆಗುಣಿಸಿ, ತೊಡಿಸಿಬಿಡುವ ಛಾತಿಯ  ಮಾಂತ್ರಿಕರು ಈ ಮಂಗಾನೇರಿಯನ್ನರು ಮತ್ತೆ ಲಂಗದಾ ಜನಾಂಗಗಳು.. ..... ಸುಶ್ರಾವ್ಯ ü ರಾಗರಂಜಿತ  ಸರಗಮ್‍ಗಳನು,್ನ ಅಪರೂಪದ ಕರತಾಲ್‍ನೊಂದಿಗೆ ಸೂಫಿಯಾನಾ ಸಂಗೀತವನ್ನು ಕೇಳುವ ಒಂದು ತರಹದ ತಹ ತಹ,.....ಕೆಲವೇ  ಅಂದರೆ, ಕೇವಲ ಕೆಲವೇ ಹಿರಿಯ ತಲೆಮಾರಿನ ಕೈಗಳು ಮಾತ್ರ ನುಡಿಸುವ,  ಆ 'ಕಮಾಯ್‍ಚಾದ' ತಂತಿಗಳೋ, ಅಲೆಕ್ಷಾಂಡರ್ ದಿ ಗ್ರೇಟ್ ಅಲ್ಲದೇ, ,ಆ ಎಲ್ಲ ಮಹಾರಾಜರು, ರಾಣಾಗಳು, ಸವಾಯಿಗಳು, ರಾeರುಗಳೂ,  ಕೂಡ ಕೇಳಿ ಮಂತ್ರಮುಗ್ಧವಾಗಿದ್ದುದು ಹೇಗೆಂದು, ಅದರ  ಆಡಿನ ಕರುಳಿನಿಂದ ಮಾಡಿದ ಆ ತಂತಿಗಳು ಇಂದಿಗೂ ಜೀವಂತ ಮಿಡಿಯುವುದನ್ನು ಲೈವ್ ಕೇಳಬೇಡವೇ, ಅವುಗಳು ಮರೆಯಾಗುವ ಮುನ್ನ. ...
        .......ಒಂಟೆಗಳ ಕಾರವಾನ್‍ಗಳಲ್ಲಿ ಸ್ಯಾಂಡ್ ಡ್ಯೂನ್ಸ್‍ಗಳ ಮೇಲೆ ಏರಿಳಿಯುತ್ತ,  ಊಹಿಸಲಾರದ ಉದ್ದಕ್ಕೂ ಎತ್ತಲೂ ಕಾಲ ಸ್ಥಬ್ಧವಾದಂತಹ ಜಗದಲ್ಲಿ, ನಿರ್ಲಿಪ್ತವಾಗಿ ಚಾಚಿಕೊಂಡಿರುವ ನೆಮ್ಮದಿಯೊಂದರ ನಿರ್ಮೌನದೊಳಗೆ ನಿಶ್ಯಬ್ದವಾಗಿ ಅದರೊಳಗೊಂದಾಗಿ, ಕಿವಿಗಳನ್ನು ಕಣ್ಣಮೇಲಿಟ್ಟು,, ಮರಳದಿನ್ನೆಗಳ ಮೇಲೆ ನಿಂತು, ಅಲೆಯಲೆಯಾಗಿ ಪುಟಿದೆದ್ದು,  ತೇಲಿಬರುವ ಅದರೆದೆಯ ಹಾಡು 'ಕೇಸರಿಯಾ ಬಾಲಮಾ....ಆವೋ ನೀ...ಪಧಾರೋ ಮ್ಹಾರೇ ದೇಸ ರೆ' ....''ಎಂಬ  ಅದರಾತ್ಮ ಅನಾವರಣದ ದಿವ್ಯ ಪ್ರೇಮದೊರತೆಯ ಅನುರಣನ ಕೇಳಬೇಕಿತ್ತು,.. ಅದರ 'ತಂ ನಂ ತಂ ನಂ' ಎದೆಮಿಡಿತದ ರಸಾಸ್ವಾದವನ್ನು ಕಿವಿಗಳೆದೆಯೊಡ್ಡಿ ಆಲಿಸಬೇಕಿತ್ತು ....ಒಂದೊಂದೆ ಹೆಜ್ಜೆಯಲ್ಲಿ ಕಿರಿದಾಗಿ, ಕಿರಿದಾಗಿ, ಅಣುಮಾತ್ರವಾಗಿ,  ಚಣ ಚಣಗಳಲ್ಲಿ ಸರಿಯುತ್ತ, ಕಣ್ಮರೆಯತ್ತ ಸಾಗುತ್ತ, ಮರಳಸಾಗರದ ಅಗಾಧತೆಯಲ್ಲೆ  ಕಣ್ಣಮುಂದೆಯೇ  ಕರಗುತ್ತ ಕರಗುತ್ತ ಮಾಯವಾಗುತ್ತ,, ಮರಳಿ ಬಾರದಂತೆ  ಅದರಲ್ಲೇ , ಅದರಾಳದಲ್ಲೇ ಲೀನವಾಗಿ ಬಿಡುವ, ಮರಳುಗಾಡಿನ ಕಾರವಾನಿನ ಸಫಾರಿಯ ಹುಚ್ಚು, ಇರಾದೆ...
   ...ಸಾವಿರಗಟ್ಟಲೆ ಹಾಡುಗಳಲ್ಲಿ ನಿಮಗಾವುದಿಷ್ಟ ಎಂದೊಡನೆ, ದೀದಿ, ' ಐ ದಿಲೇ ನಾದಾನ್' ಎಂದ, ಆ ಹಾಡಿನಲ್ಲಿ ಅಂಥದ್ದೇನಿದೆ. .ಜಾನ್ ನಿಸ್ಸಾರ್ ಅಖ್ತರ್ ಮಸಿಯಿಂದ ಮೂಡಿದ, ಲತಾ  ಮಂಗೇಶ್ಕರ ಎಂಬ ಕೋಗಿಲೆಯ ದನಿಯಲ್ಲಿನ ಆ ಹಾಡನ್ನು ಅಲ್ಲೆಲ್ಲೋ ಸ್ಯಾಂಡ್ ಡ್ಯೂನ್ ಮೇಲೆಯೇ ನಿಂತೇ ಆಸ್ವಾದಿಸಬೇಕಿತ್ತು.... 'ಏ ಜಮೀಂ ಛುಪ್ ಹೈ, ಆಸಮಾ ಛುಪ್ ಹೈ, ಫಿರ್ ಏ ಧಡಕನ್ ಸೀ ಜುಸ್ತಜೂ ಕ್ಯಾ ಹೈ' ' ಏ ಕೈಸೀ ಉಲಝನ್ ಹೈ, ಕ್ಯಾ ಯೆ ಉಲಝನ್ ಹೈ' ಎಂದು ಕೇಳುವ ರಜಿಯಾ ಸುಲ್ಥಾಳನ ಪ್ರಶ್ನೆಗೆ, ಆ ದ್ವಂದ್ವಗಳಿಗೆ ಉತ್ತರ ಹುಡುಕಬೇಕಿತ್ತು....ಬೆಳದಿಂಗಳ ರಾತ್ರಿಗಳಲ್ಲಿ ಗುಲ್ಜಾರರ ಆ ಚಂದ್ರನ ನೌಕೆ ಇಲ್ಲೆಲ್ಲಾದರೂ  ಹಾಲಿನಂತಹ ಬೆಳದಿಂಗಳನ್ನು ಹರಡಲು ಕೆಳಗಿಳಿದಿದೆಯೋ, ಇಲ್ಲಾ ಇನ್ನಾವುದೋ ಚಂದ್ರಲೋಕಕ್ಕೆ ಇಲ್ಲಿಯ ಹಾಲು ಬೆಳದಿಂಗಳಿನ ಎದೆಹಾಡಿನ ಗಂಧವನ್ನು ಆಯ್ದು, ಆ ಲೋಕಕ್ಕೆ ಉಣಿಸಲು ಕಾಲದೆಳೆಯ ನಡೆಯಲ್ಲಿ ಇಲ್ಲಿ ಇಳಿದು ಹೊರಡುವುದನ್ನು ಕಣ್ಣಾರೆ ನೋಡಬಹುದೇ,  ಹೌದೇ! ಹೌದಾದರೆ ಅದೆಲ್ಲಿ, ಎಲ್ಲಾ ಮರೀಚಿಕೆಯ ಹಳವಂಡಗಳೇ...ನಾನು ನೋಡಲಿಲ್ಲವೆಂದ ಮಾತ್ರಕ್ಕೆ ಅದು ಇರಬಾರದೆಂದೇನೂ ಇಲ್ಲವಲ್ಲ! ಅರೆ ಹೌದಲ್ಲ! .ಅದು ಇಳಿದ ಸ್ಥಳದಲ್ಲಿ ಕಾಲದ ತುಣುಕುಗಳು ಸಿಗುವವೇ ಅಥವಾ ಕಥೆಗಳೇ ದಕ್ಕುವವೋ ಕಣ್ಣಾರೆ ಖುದ್ದು  ಹುಡುಕಲು ತವಕಿಸಿತ್ತು ಮನ,...ಅದಕ್ಕಾಗಿ ಆ ನೌಕೆಗಾಗಿ ಹಣೆಯ ಮೇಲೆ ಕೈ ಇಟ್ಟು, ದೂರ ದೂರದಲ್ಲೆಲ್ಲಾ ಹುಡುಕಬೇಕಿತ್ತು!  
    ಅಮಿತಾಭ್ ಬಚ್ಚನ್‍ಗೆ ಕರಿಯರ್ ಕೊಟ್ಟ ಆ 'ಸಾಥ್ ಹಿಂದೂಸ್ಥಾನೀ'ಯ  ಲೊಕೇಶನ್‍ನಲ್ಲಿ ಸ್ಥಳೀಯ ಹುಡುಗ,  'ಇಲ್ಲಿ ಮಳೆ' ಯಾವಾಗ ಬರುತ್ತದೆ' ಎಂದ ಅಮಿತಾಭ್‍ಗೆ  'ಹಾಗಂದರೇನು?' ನಾನು ಇಲ್ಲಿ ಕೇವಲ ಏಳು ವರ್ಷದಿಂದ ಮಾತ್ರ ಇದ್ದೇನೆ, ಅಂಥ ಅಚ್ಚರಿಯನ್ನು ನಾನೆಂದೂ ನೋಡಿಲ್ಲ, ನೀರೆಂದಾದರೂ ಮೇಲಿಂದ ಉದುರುತ್ತದೆಯೇ ?  ತನ್ನನ್ನು ಇವರು ಗೇಲಿಮಾಡುತ್ತಿದ್ದಾರೆ ಎಂದೇ ಅವನು ತಿಳಿದಿದ್ದನಲ್ಲವೇ!  ಅದೇನಿದ್ದರೂ ಆರುನೂರು,  ಸಾವಿರ ಫೂಟು ಆಳ ಬಾವಿಯಲ್ಲಿ ಮಾತ್ರ ಸಿಗುವ ಅಮೃತವೆಂದೇ ಬಗೆದಿದ್ದನಲ್ಲವೇ,, ಅವನನ್ನು ಹುಡುಕಿ ಅವನ ಬೊಗಸೆಯಲ್ಲಿ ಜಯಂತರ ಮಳೆಯನ್ನಿಷ್ಟು ಕೊಟ್ಟು ಬರಬೇಕಿತ್ತು.  ಮಳೆಯನ್ನೇ ಕಾಣದೇ,  ಆ ಹಳ್ಳಿಗೆ ಹಳ್ಳಿಯೇ ಆಕಾಶದೆಡೆ ಮುಖಮಾಡಿ ಕುಳಿತ ಆ ಜೀವಗಳಿಗೆ, 'ಲಗಾನ್' ನ 'ಘನನ ಘನನ.....ಮನ್ ಧಡಕಾಯೆ ಬದರವಾ...., ಬಿಜುರೀ ಕಿ ತಲವಾರ್ ನಹೀಂ, ಬೂಂದೋಂ ಕಿ ಬಾಣ ಚಲಾವೊ, ಕಾಲೇ ಮೇಘಾ ಕಾಲೇ ಮೇಘಾ...ಪಾನೀ ತೊ ಬರಸಾವೋ' ಹಾಡನ್ನು ಕೇಳಿಸಬೇಕಿತ್ತು.... ನನ್ನ ಹರಳುಗಟ್ಟಿದ ಕನಸುಗಳೆಲ್ಲ ಮರಳ ಕಣಕಣಗಳಲ್ಲೂ ಜೀವದುಂಬುವುದುನ್ನು ,  ಏಳು ಬಣ್ಣಗಳ ಆ ರಂಗುರಂಗಿನ ರಾಜಸ್ಥಾನದ ಕಾಮನ ಬಿಲ್ಲನ್ನು ಕಣ್ಣಾರೆ ಕಾಣಬೇಕಿತ್ತು. ಇವೆಲ್ಲ ಕನಸುಗಳಿಗೆ ರೆಕ್ಕೆಹಚ್ಚಿ ಹಾರಿಬಿಡುತ, 'ಮೇರೀ ಆವಾಜ್ ಹೀ ಪೆಹಚಾನ್ ಹೈ' ಎನ್ನುವ ದಟ್ಟ ದೈವಿಕ ಅನುಭಾವಗಳನ್ನು ಹೀಗೊಮ್ಮೆ 'ಥಾರ್'ನ ಮರಳಸಾಗರದಲ್ಲಿ ಸ್ವಾನುಭವಿಸಿಕೊಳ್ಳುವ ಸೆಳೆತಗಳು ಒಳಗೊಳಗೆ ಗರಿಬಿಚ್ಚಿ ಹಾಡಿ ಕುಣಿಯತೊಡಗಿದ್ದವು. ......ಹೀಗಾಗಿ  ರಾಜಸ್ಥಾನಕ್ಕೆ ನನ್ನ ವೋಟೂ  ಕೂಡ  ಬಿದ್ದುಬಿಟ್ಟಿತು.. ... ಒಂದು ವಾರದ ರಜಾ ಪಡೆದು,  ಈ ಕಾಮನಬಿಲ್ಲನ್ನೇ ಹೊದ್ದ, ಸತರಂಗೀ ದೇಸಕ್ಕೆ  ಪಧಾರಿಸುವ  ತಯಾರಿ ಹೀಗೆ ಶುರು.ವಾಗಿ ಬಿಟ್ಟಿತ್ತು , ..'ರೂಹ್'(ಆತ್ಮ) ನೊಳಗಿನಿಂದ.
    ಸರಿ... ಏನು ಮಾಡುವುದು, ? ಹೇಗೆ ಮಾಡುವುದು,... ತಯಾರಿ ಏನೇನು?......ಹೇಗೆ ಹೋದರೆ  ಬೆಸ್ಟ್.,... ಎಚ್ಚರಿಕೆಗಳು  ಏನಾದರೂ ಇವೆಯೇ?  ಏನೇನು ಒಯ್ಯೋಣ, 'ಎಷ್ಟು ಥಂಡಿ ಇರುತ್ತದೆ ಗೊತ್ತಾ, ರಾತ್ರಿಗಳಲ್ಲಿ, ಮರುಭೂಮಿಯ ಕ್ಯಾಂಪ್‍ನಲ್ಲಿ,..ಸ್ವೆಟರ್ ಇಲ್ಲದಿದ್ದರೆ ಸೆಟದ್‍ಅ ಹೋಗುವುದು ಅಷ್ಟ!' ಹಗಲಿನಲ್ಲಿ ಬೆಂಕಿಯ ಹಾಗೆ ಕಾಯುವ ಬಿಸಿಲು ರಾತ್ರಿ ಐಸ್ ಆಗಿಬಿಡುತ್ತದೆ ಗೊತ್ತಾ?  'ಟಿಆರ್‍ಪಿ' ಗೆ ಬೆನ್ನುಬಿದ್ದ  ಟೀವಿಯಾಗಿದ್ದಳು  ಮಗಳು ಈಗ.. ಅಯ್ಯಯ್ಯೋ ನಾನು ನನ್ನ ಸ್ವೆಟರ್ ಮೊದಲು ಹಾಕಿಬಿಡಬೇಕು ಮಾರಾಯಾ, ಬ್ಯಾಗ್‍ನಲ್ಲಿ.  ...ಅಂದಹಾಗೆ ಏನೇನು ನೋಡುವುದು, ಇಂಪಾರ್ಟಂಟ್ ಏನೇನು. ಎಲ್ಲಾ ಗುರುತು ಹಾಕಿಕೊಳ್ಳಿ ಎನ್ನುತ್ತ  ಇವಳು ಕೊಳಲಾಗಿದ್ದಳು.. ..ನಿನಗೇನಿಷ್ಟ, ನನಗೇನಿಷ್ಟ. .. ಉದಯಪುರವಿಲ್ಲದಿದ್ದರೆ ಅವಳು ಬರೋಲ್ಲ, ಮತ್ತೆ, ಮರುಭೂಮಿ ಇಲ್ಲದಿರೆ  ನಾನು ಹೋಗೋಲ್ಲ., ಜಯಪುರದಲ್ಲಿ ಒಂದೇ ದಿನ ಸಾಲದು, ಮಗಳ ರಗಳೆ, ಎಲ್ಲಾ  ಎಪಿಸೋಡುಗಳು ಒಮ್ಮೆಲೇ,  ಚಾನೆಲ್ಲಗಳನ್ನು ಬದಲು ಮಾಡುವಾಗ ಸಿಗುವ ಅರೆಬರೆ ಡಯಲಾಗ್‍ಗಳಂತೆ. ಕ್ಷಣಕóಣವೂ  ಬದಲಾಗುವ ನಮ್ಮ ನಮ್ಮ ಅಹವಾಲುಗಳು, ಪಟ್ಟು ಬಿಡದ ಅಹಂಗಳು....ಆಗ್ರ್ಯೂಮೆಂಟ್ ಭರದಲ್ಲಿ ಕೈಲಿರೋ ಐಸ್ಕ್ರೀಮ್ ಜಾರಿ ಬಿದ್ದು ಹೋಗಿದ್ದು  ಗೊತ್ತಾಗದೇ ನಾನೇ ನುಂಗಿದ್ದೇನೆ ಎಂದು ಮಗಳು ತಿಳಿದಿದ್ದಳು., ಕಾಲಲ್ಲಿ ಐಸ್ಕ್ರೀಮ್ ತಣ್ಣಗೆ ತನ್ನ ಸಾಕ್ಷಿ ಹೇಳುವವರೆಗೂ.    ಹೀಗಾಗಿ ನಾವು ಇಡೀ ರಾಜಸ್ಥಾನವೆಂಬ ಜಗತ್ತನ್ನು ಎಂಟು ದಿನಗಳಲ್ಲಿ ನೋಡಲೇಬೇಕಾಗಿತ್ತು.   ಇಂಟರ್‍ನೆಟ್‍ನಲ್ಲಿ ಅಷ್ಟಿಷ್ಟು ಮಾಹಿತಿ  ಕಲೆಹಾಕಿ , ನಾವೆಲ್ಲ  ರಾಜದೀಪ್ ಸರದೇಸಾಯಿಗಳಾಗಿ ಬಿಟ್ಟಿದ್ದೆವು.!
  ...ಗೂಗಲ್ ಸಚ್ರ್Àನಲ್ಲಿ  ರಾಜಸ್ಥಾನದ ಕುರಿತ ಇನ್ನಷ್ಟು  ಮಾಹಿತಿಯನ್ನು  ತೆರೆದು   ಸ್ಟಡಿ ಮಾಡಿದ್ದಾಯಿತು.  'ಮೇಕ್ ಮೈ ಟ್ರಿಪ್'  ತರಹದ್ದೊಂದು ವೆಬ್, 'ಟ್ರಿಪ್ ಅಡ್ವೈಜರ್' ನಲ್ಲಿ   ಜಾಲಾಡಿದ ಕೂಡಲೇ ಅದರಲ್ಲೊಂದು ಫಾರ್ಮ ತರಹದ್ದೊಂದು ಬಂದು ನಮ್ಮ ಹೋಗಿ ಬರುವ ದಿನಾಂಕಗಳು, ನೋಡಲು ಬಯಸುವ ತಾಣಗಳು, ಟು ಎಂಡ್ ಫ್ರೋ  ಪ್ರವಾಸದ  ವಿವರಗಳನ್ನು ಕಲೆಹಾಕಿಕೊಂಡು ಅದು ತನ್ನ ಮೆಂಬರು ಟೂರಿಸ್ಟ್ ಡೆಸ್ಕ್‍ಗಳಿಗೆ ವಿವರಗಳನ್ನು ರವಾನಿಸುತ್ತದೆ.  ಕೂಡಲೇ ಹತ್ತಾರು  ಮೆಸೇಜುಗಳು  ಮೋಬೈಲ್ ನಂಬರಿಗೆ ಬಂದು  ಎಲ್ಲ ವಿವರುಗಳನ್ನು ಕೇಳುತ್ತ, ನಮ್ಮ ಮೇಲ್ ಐಡಿಗೆ ಸಾಕಷ್ಟು ಅವರವರ ಪ್ರೊಗ್ರಾಂ ಗಳನ್ನು, ಪ್ಯಾಕೇಜ್‍ಗಳನ್ನು  ನಮ್ಮ ದಿನಾಂಕಗಳಿಗೆ ಹೊಂದಿಸಿ ಕಳುಹಿಸಿದವು. , ಕೇಳಿದರೆ ತಮ್ಮ  ಪ್ಯಾಕೇಜ್  ದರಗಳನ್ನು ಕೂಡ ನಮೂದಿಸಿ ಕಳುಹಿಸಿದವು. . ಹೀಗೆ ಬಂದ ಪ್ಯಾಕೇಜ್‍ಗಳಲ್ಲಿ  ಲೈಕ್ ಆದವುಗಳನ್ನು   ಪರಾಮರ್ಶಿಸಿ ನಾವು ಪ್ರತಿಕ್ರಯಿಸಿ, ನಮ್ಮ ಪ್ರವಾಸದ ಪ್ಯಾಕೇಜ್ ಫಿಕ್ಷ್ ಮಾಡಿಕೊಳ್ಳುವುದು  ಕ್ಷೇಮ. ಅಥವಾ ಅಲ್ಲಿ ಹೋಗಿಯಾದ ಮೇಲೂ ಅಲ್ಲಿನ ಸ್ಥಳೀಯ ಟ್ರಾವೆಲ್ಸ್‍ಗಳೊಂದಿಗೆ ಸಂಪರ್ಕಿಸಬಹುದು, ಇಲ್ಲವೇ ಕೆಲವು ಹೋಟಲ್‍ಗಳವರು ತಾವೇ  ಪ್ಯಾಕೇಜ್ ಹೊಂದಿದ್ದು, ಕೂಡ ಇದೆ. ಯಾವುದನ್ನೂ ನಮ್ಮ  ಅನುಕೂ¯ಕ್ಕೆ ತಕ್ಕಂತೆ ನಾವು ಹೊಂದಿಸಿಕೊಳ್ಳಬಹುದು,  ತೊಂದರೆಯೇನಿಲ್ಲವೆಂಬುದು ನಂತೆರ ತಿಳಿಯಿತು.  ಪ್ರವಾಸಿ ಟ್ರಾವೆಲ್ಸ್‍ಗಳೊಂದಿಗೆ ದುಡ್ಡಿನ ವಿಷಯದಲ್ಲಿ ಚೌಕಾಶಿಗೆ ಅವಕಾಶವಿದೆ.  ಸಾಧ್ಯವಾದಷ್ಟು  ನಮ್ಮ ಬಜೆಟ್‍ಗೆ ಹೊಂದಿಸಿಕೊಂಡು  ಅಂತಿಮಗೊಳಿಸಿಕೊಳ್ಳಬಹುದು.  .ಎಲ್ಲಾ ಮರೆತರೂ ಇದು ಮಾತ್ರ  ನೆನಪಿರಲಿ.  ಒಮ್ಮೆ ಪ್ಯಾಕೇಜ್ ಫಿಕ್ಷ್ ಆದಮೇಲೆ ಅದರಂತೆ ನಾವೂ ಕೂಡ ನಡೆದುಕೊಳ್ಳಬೇಕಷ್ಟೆ. ಆದಾಗ್ಯೂ ಒಂದು ಹತ್ತು ಪರ್ಸೆಂಟ್  ಅತ್ತ ಇತ್ತ  ಆಗಬಹುದು ಎಂಬ ಒಳಮನಸ್ಸಿಗೊಂದಿಷ್ಟು ಮೊದಲೇ ಹೇಳಿಕೊಂಡಿರಬೇಕು.   ಉದಾಹರಣೆಗೆ ಟ್ರಾಫಿಕ್ ಜಾಮ್ ಸಮಸ್ಯೆ.... ಕೆಲವೊಮ್ಮೆ  ನಾವೇ ಅದನ್ನು ಇದನ್ನು ತಿನ್ನುತ್ತ,  ಮೆಚ್ಚುಗೆಯಾದ ಮಾನುಮೆಂಟ್ಸ್‍ಗಳನ್ನೋ ಇನ್ನಾವುದನ್ನೋ  ತುಸು ಹೆಚ್ಚು ಸಮಯ ತೆಗೆದುಕೊಂಡು   ಮೈಮರೆತು ನೋಡುತ್ತಲೋ.... ...ಇನ್ನೇನನ್ನೋ ಖರೀದಿಸುತ್ತಲೋ... ಸಮಯವನ್ನು  ತಿಂದುಬಿಡುತ್ತೇವೆ. ಅದು ನಮ್ಮ ಅರಿವಿಗೆ ಬಂದಾಗ ತುಂಬಾ ಲೇಟ್ ಆಗಿಬಿಟ್ಟಿರುತ್ತದೆ. ...ಹೀಗಾಗಿ ಮೊದಲೇ ಮನಸ್ಸಿಗೆ ಇದನ್ನು ಹೇಳಿಕೊಂಡುಬಿಟ್ಟರೆ, ವೃಥಾ ವಾಗ್ವಾದಗಳು..ಲೊಚಗುಟ್ಟುಗಳು.. ತಲೆಬಿಸಿಗಳು ತಪ್ಪುತ್ತವೆ...,...ಇದನೊಮ್ಮೆ ಅಭ್ಯಾಸ ಮಾಡಿಕೊಂಡರೆ ಉಳಿದದ್ದೆಲ್ಲ ಗೌಣ.. ಪ್ರವಾಸವನ್ನು ಹೆಚ್ಚು ಹೆಚ್ಚು ಆನಂದಿಸುತ್ತ ಸಾಗಬಹುದು.....ಅಭಿಪ್ರಾಯವಷ್ಟೆ,..'ಸಲಹೆ' ಎಂದು  ಹೇಳಿ ದೊಡ್ಡವನಾಗಲಾರೆ.
     ಹೀಗೆ  ಪ್ರತಿ ವರ್ಷವೂ ಮಕ್ಕಳ ರಜಾ ದಿನಗಳಲ್ಲಿ ಒಂದೆರಡು ದಿನಗಳಿಂದ ಹಿಡಿದು ವಾರದ ಮಟ್ಟಿಗೆ ಪ್ರವಾಸ ಕೈಗೊಳ್ಳುವ ರೂಢಿಯನ್ನು  ಮಕ್ಕಳ ಶಾಲಾ ದಿನಗಳಿಂದ  ಇಟ್ಟುಕೊಂಡಿದ್ದೇವೆ. ಈ ದಿನಚರಿ  ಅಂತೇನಿದೆಯಲ್ಲಾ ಇದು,  ಈ ಮಕ್ಕಳು ಪಿಯುಸಿ ಕಲಿಯುವವರೆಗೆ ಸರಿಯಾಗಿ ನಡೆಯಿತು ಆದರೆ ಒಮ್ಮೆ ಅವರು ಕಾಲೇಜು ಮೆಟ್ಟಿಲು ಹತ್ತಿದರು  ನೋಡಿ,  ಅವರವರೇ ಗೆಳೆಯರ ಜೊತೆಗೆ  ಹೋಗಲು ಬಯಸಿದ್ದರಿಂದಲೋ,  ನಮ್ಮ ಟೇಸ್ಟ್ ಅವರಿಗೆ ಹೊಂದದೇನೋ, ಅಂತೂ ಅವರು  ತಮ್ಮ ತಮ್ಮ ಗೆಳೆಯರೊಡನೆ ಪ್ರತ್ಯೇಕವಾಗಿ ಹೋಗಿ ಬರುವುದನ್ನು ಹೆಚ್ಚು ಪ್ರೀತಿಸಿ. ಅದರಂತೆ ರೂಢಿಸಿಕೊಂಡರು.  ಇದು ಮಗನಿಗೆ ಮಾತ್ರ ಸಂಬಂಧಪಟ್ಟಂತೆ ಹೆಚ್ಚು ಸೂಕ್ತ  ಮಾತು. ಆದರೆ ಮಗಳು ಹಾಗಲ್ಲ, ಅವಳೆಂದೂ  ನಮ್ಮ ಜೊತೆಗೇನೇ,. ಆದರೆ ನನಗೆ ಮೊದಲಿನಷ್ಟು ಸಮಯಾವಕಾಶ ದೊರೆಯದ್ದರಿಂದಲೋ, ಮಗಳ ರಜಾ ಸಮಯ ನನ್ನ ಕೆಲಸದ ಒತ್ತಡದ ದಿನಗಳಿಗೆ ಸರಿ ಹೊಂದಲಾರದೆಯೋ  ಈ ದಿನಚರಿ ಅಸ್ತವ್ಯಸ್ತವಾಗುತ್ತಿತ್ತು,. ಈ  ದಿನಮಾನಗಳು ಹೇಗೆ ಉರುಳಿಬಿಡುತ್ತವೆ ನೋಡಿ,.....ಇಬ್ಬರು ಮಕ್ಕಳಲ್ಲಿ ಮಗ  ಆಗಲೇ  ತಾತ್ಕಾಲಿಕವಾಗಿ ಹೊರದೇಶ ವಾಸಿ. ವಾಸಿ ಅನ್ನುವುದಕ್ಕಿಂತ ಪ್ರವಾಸಿ, ಅತಿಥಿ ಅನ್ನುವುದೇ ಹೆಚ್ಚು ಕ್ಷೇಮ,... ನಮಗೂ ಕೂಡ!.... ಹೀಗಾಗಿ ಒಬ್ಬರನ್ನೊಬ್ಬರು ಬಿಟ್ಟು ಹೇಗೆ ಹೋಗುವುದು ಎಂಬಿತ್ಯಾದಿ ರಗಳೆಗಳಲ್ಲಿಯೇ ಈ ಪ್ರವಾಸಗಳಿಗೆ ಕಡಿವಾಣ ಬಿದ್ದು,  ಪ್ರವಾಸಗಳೇ ಕಡಿಮೆಯಾಗಿಬಿಟ್ಟವು.. ಇನ್ನು ಮಗಳ ಕಾಲೇಜುಗಳ ರಜಾ ದಿನಗಳು  ಅತಿ ಕಡಿಮೆ ಅವಧಿಯವೋ,, ಇಲ್ಲವೆ ನನ್ನ ಸಮಯಾವಭಾವವೋ ಇವೆಲ್ಲವೂ  ಅಂಕೆ ತಪ್ಪಿ  ಈ ಫ್ವಾಮಿಲಿ ಪ್ರವಾಸಗಳು  ಇತ್ತಿತ್ತಲಾಗಿ ಸಾಧ್ಯವಾಗುತ್ತಿರಲೇ ಇಲ್ಲ ಅನ್ನಿ.'ಮುಸಾಫಿರ್ ಹೂಂ ಯಾರೋಂ' ಹಾಡನ್ನು ಕೇಳಿ  ತೃಪ್ತಿ  ಪಟ್ಟುಕೊಳ್ಳವುದಷ್ಟಕ್ಕೆ ಬದುಕು  ಸೀಮಿತವಾಗಿಬಿಟ್ಟಿತ್ತು.
      ಇರಲಿ, ಅಂತೂ   ನನಗೆ ಒಂದು ವಾರದ ರಜೆಯು, ಅದೂ ಕಷ್ಟ ಪಟ್ಟು ಸಿಕ್ಕಿದ್ದರಿಂದ, ಹೆಚ್ಚಿನ ಅವದಿಯ ರಜೆ ಲಭ್ಯವಿಲ್ಲದ್ದರಿಂದ, ಒಂದು ವಾರದ ಮಟ್ಟಿಗೆ ಸಾಧ್ಯವಾದ ಪ್ರವಾಸಿ ಪ್ರೋಗ್ರಾಮಗಳು ನನ್ನ ಮೇಲ್‍ಗೆ ಬಂದಿಳಿದವು. ಆಗ ನನಗೆ ದಟ್ಟವಾಗಿ, ದಿಟವಾಗಿ ಗೋಚರಿಸಿದ ಸಂಗತಿಯೆಂದರೆ, ರಾಜಸ್ಥಾನಕ್ಕೆ ಈ ಒಂದು ವಾರವೆಂಬ ವಾರ ಸಾಲುವುದೇ ಇಲ್ಲ.,, ಏನೆಂದರೂ ಕನಿಷ್ಠ ಹತ್ತು ಹನ್ನೆರಡು ದಿನಗಳನ್ನು ಜೇಬುಗಳಲ್ಲಿ ಜಮಾ ಮಾಡಿಟ್ಟುಕೊಂಡರೆ ಮನಸಾರೆ ಖರ್ಚುಮಾಡುತ್ತ, ಅದನ್ನೊಂದು ಅದ್ಭುತ ಪ್ರವಾಸವಾಗಿಸುವುದರಲ್ಲಿ ಸಂಶಯವಿಲ್ಲ.... ಹೀಗಾಗಿ ಯಾರ ಪ್ರೋಗ್ರಾಮ್‍ಗಳೂ ಪೂರಾ ಅಂದರೆ ಪೂರಾ ರಾಜಸ್ಥಾನದ ಪ್ರವಾಸಗಳನ್ನು ಕಳುಹಿಸಿರಲಿಲ್ಲ... ನನಗಾದರೋ ಗೆಳತಿಯಂತಿರುವ ಮರುಭೂಮಿ ನೋಡಬೇಕಿತ್ತಲ್ಲ !  ಯಾವ ಪ್ರವಾಸೀ ಡೆಸ್ಕಗಳೂ   ಬಿಕಾನೇರ್,  ಜೈಸಲ್ಮೇರ್‍ಗಳನ್ನು ಟಚ್ಚೇ ಮಾಡಿರಲಿಲ್ಲ. ಎನ್‍ಕ್ವೈರಿ ಮಾಡಿದರೆ, ಅದು ತುಂಬಾ ದೂರ ನಿಮ್ಮ ಅವಧಿ ವಿಸ್ತರಿಸಿದರೆ ಮಾತ್ರ ಸಾಧ್ಯವಾಗುವುದೆಂದೇ ಹೇಳುತ್ತಿದ್ದರು.  ಇನ್ನೇನು ಮಾಡುವುದಪ್ಪಾ, ಎಂದು ಫಿಂಗರ್ ಕ್ರಾಸ್ ಮಾಡಿ, ತಳಮಳಿಸುತ್ತ ಕುಳಿತೆ. ಗುಲ್ಜಾರರ, 'ಇಸ್ ಮೋಡ್ ಪೆ' ಹಾಡಿನ, 'ಇನ್ ರೇಶಿಮೇ ರಾಹೋಂ ಮೆ, ಇಕ್ ರಾಹ ತೋ ವೋ ಹೋಗಿ,  ತುಮ್ ತಕ್À ಜೊ ಪಹುಂಚತೀ ಹೈ, ಇಸ್ ಮೋಡ್ ಪೆ ಜಾತೇಂ ಹೈಂ'  ಹೀಗೆ ಅವೆಲ್ಲ ಆಪ್ಶನ್‍ಗಳಲ್ಲಿ ನನ್ನದಾದೊಂದು ದಾರಿಗಾಗಿ ಕಾಯುತ್ತ  ಕುಳಿತಿರುವಾಗಲೇ,   ಒಂದು ಮೇಲ್‍ನಲ್ಲಿ ಜೈಸಲ್ಮೇರ್‍ನ ಮರುಭೂಮಿಯಲ್ಲಿ ಒಂದು ದಿನದ ಶಿಬಿರದಲ್ಲಿ ವಾಸದೊಂದಿಗೆ ಒಂದು ಪ್ರೋಗ್ರಾಮ್ ಬಂದು ಬಿತ್ತು. ಖುಷಿಯಾಯಿತು. ಅರರೆ,..ಇವರು  ನಮ್ಮ ಕೋರಿಕೆಯ  ಎಲ್ಲ ಸ್ಥಳಗಳನ್ನು ಒಳಗೊಂಡ  ಪ್ರವಾಸೀ  ಮೆನು ಸಿದ್ಧ ಪಡಿಸಿ ಕಳುಹಿಸಿದ್ದರು.  ಹೇಗೆ ಸಾಧ್ಯವಾಗಿಸಿದರೋ ನನಗೆ ಆಶ್ಚರ್ಯವಾಯಿತು!  ಅದೂ ಎಲ್ಲಾ ಕಡೆಗಳಲ್ಲೂ ಥ್ರೀ ಸ್ಟಾರ್ ಹೋಟೆಲ್ ಫೆಸಿಲಿಟಿಯೊಂದಿಗೆ ...ಅವರೊಂದಿಗೆ ಸಂಪರ್ಕಿಸಿ, ತುಸು  ಚೌಕಾಶಿ ನಡೆಸಿ, ಅಂತಿಮಗೊಳಿಸಿ,  ಅನುಮೋದಿಸಿ,,  ನಮ್ಮ ಒಪ್ಪಿಗೆ ತಿಳಿಸಿದೆವು, ಅಂತೂ ಅಂದುಕೊಂಡ ಹಾಗೆ  ಸಿಕ್ಕಿತಲ್ಲ ಎಂಬ ನಿರಾಳ ಭಾವದೊಂದು  ಮೂಡಿ ಮರೆಯಾಯಿತು.  ಬಲು ದಿನಗಳ ನಂತರ ಕೊರಳು ತಬ್ಬಿ, ಗುನಿಗುನಿಸಿದ್ದಳು ಇವಳು,  'ಪಿಯಾ ತೋ ಸೆ ನೈನಾ ಲಾಗೆ ರೇ' (ಪ್ರಿಯನೇ, ಕಂಗಳಿವು, ನಿನ್ನಲ್ಲೆ ನಟ್ಟು ಬಿಟ್ಟಿಹವಲ್ಲೋ). ಖುಷಿಯ ರೆಕ್ಕೆಗಳೆಂದರೆ ಇವೇ ಇರಬೇಕು!
      ಈ ನಡುವೆ,   ಇವೆಲ್ಲ ಇ- ಮೇಲ್‍ಗಳ ಮೇಲಾಟಗಳಲ್ಲಿ,  ನಮಗೆ ಯಾವುದೂ ನಮ್ಮ ಅವಶ್ಯಕತೆಗಳಿಗೆ ಹೊಂದದೇ ಇದ್ದುದರಿಂದ ಜಯಪುರಕ್ಕೆ ಹೋಗಿ ಅಲ್ಲಿಯೇ ಲೋಕಲ್ ಟ್ರಾವೆಲ್ಸ್‍ಗಳೊಂದಿಗೆ ಡಿಸೈಡ್ ಮಾಡಿದರಾಯಿತು ಎಂದುಕೊಂಡು ಫ್ಲೈಟ್‍ನೊಂದಿಗೆ ಹೋಟೆಲ್ ಕೂಡ ಕೋಂಬೋ ಬುಕಿಂಗ್ ಮಾಡಿದ್ದೆ. ಹೀಗಾಗಿ ನಮ್ಮ ಬೆಂಗಳೂರಿನಿಂದ ಜೈಪುರಕ್ಕೆ ಹೊರಡುವ  ಜನೆವರಿಯ  ಒಂದು  ಮುಂಜಾನೆಯ ಫ್ಲೈಟ್‍ನಲ್ಲಿ ಜಯಪುರಕ್ಕೆ ಹೊರಟು ಸುಮಾರು ಎರಡೂವರೆ ಗಂಟೆಗಳಲ್ಲಿ ಜೈಪುರಕ್ಕೆ ತಲುಪಿದೆವು. ನಮ್ಮ ಬೆಂಗಳೂರಿಗೆ ಕಂಪೇರ್ ಮಾಡಿದರೆ ಅತೀ ಸಣ್ಣದಾದ ಏರ್‍ಪೋರ್ಟ್ ಇದು.   ಎತ್ತರವೆಷ್ಟೋ  ಅಗಲವೂ ಅಷ್ಟೆ, ಉಹೂಂ, ತುಸು ಹೆಚ್ಚು ಅಷ್ಟೆ  ಇರುವ ಕಟ್ಟಡದ ಏರ್‍ಪೋರ್ಟ್ ಇದು ಜೈಪುರದ್ದು.  ನಾವು ಅಂದಿನ ದಿನ ಆ ಟ್ರಾವೆಲ್ಸ್‍ಗಳೊಂದಿಗೆ ಏರ್‍ಪೋರ್ಟ್ ಲಿಫ್ಟ್ ಬುಕ್ ಮಾಡಿರದಿದ್ದರೂ, ಅವರು ನಮಗೆ ಏರ್ ಪೋರ್ಟನಿಂದಲೇ ಲಿಫ್ಟ್ ಮಾಡಿದರು.  ಅವರಿಗೆ ಧನ್ಯವಾದ ಹೇಳಿ ಅದರಲ್ಲಿ ಕುಳಿತುಕೊಂಡಿತು ನಮ್ಮ ಮೂವರ ಥ್ರೀ ಈಡಿಯಟ್ಸ್ ತಂಡ. ಈಗ  ಜೈಪುರ ಸಿಟಿಯತ್ತ  ಹೊರಟಿತು ನಮ್ಮ  ಮರುಭೂಮಿಯ ನೌಕಾ ಪ್ರವಾಸ. ಇಲ್ಲಿ  ನಮ್ಮ ನೌಕೆಯ ಹೆಸರು, 'ಇನೋವಾ',  ಇಲ್ಲಿಂದಲೆ ಶುರುವಾಯಿತು  ನೋಡಿ, ನಮ್ಮ ರಾಜಸ್ಥಾನದ ಪ್ರವಾಸ .

Rating
No votes yet

Comments

Submitted by nageshamysore Thu, 05/21/2015 - 05:07

ರಾಜಾಸ್ತಾನದ ವೈಭವವನ್ನ 'ರಾಣೀವಾಸ'ದ ಅದ್ದೂರಿತನದಲ್ಲಿ ಸೆರೆ ಹಿಡಿಯಲು ಹೊರಟಂತಿದೆ... ಮುಂದಿನ ಕಂತುಗಳಲ್ಲಿ ಅನುಭವಧಾರೆ ಮತ್ತಷ್ಟು ರೋಚಕವಾಗಿ, ಸಚಿತ್ರವಾಗಿ ಮೂಡಲೆಂದು ಆಶಿಸುತ್ತೇನೆ. 

ಮಳೆ ಹಾಗೆಂದರೇನು
ಚೆನ್ನಾಗಿದೆ ಆ ಸಾಕು
ಮುಂದುವರೆಯಲ್ಲಿ

ಸಂಪದಿಗ ಪಾರ್ಥರವರೇ, ತಮ್ಮ ಪ್ರತಿಕ್ರಿಯೆಗೆ ವಂದನೆಗಳು ಸರ್. ವಾರಕ್ಕೊಂದು ಪುಟ ಹಂಚಿಕೊಳ್ಳಲು ಯೋಚಿಸಿದ್ದೇನೆ. ...ನೋಡೋಣ ಎಷ್ಟು ಕಾರ್ಯಗತವಾಗುವುದೋ .....

ನಾಗೇಶ್ ಜಿ, ನಮಸ್ಕಾರ. ತಮ್ಮ ಪ್ರತಿಕ್ರಿಯೆಗೆ ಧನ್ಯ . ತಮ್ಮ ಎಂದಿನ ಸ್ಫೂರ್ತಿಯ ಸಾಲುಗಳು ನನಗೆ ಪ್ರೇರಣೆ... ಮುಂದಿನ ಕಂತುಗಳಲ್ಲಿ ಸಾಧ್ಯವಾದಲ್ಲಿ ಚಿತ್ರಗಳನ್ನು ಅಪ್ ಲೋಡ್ ಮಾಡಲು ಪ್ರಯತ್ನಿಸುವೆ. ವಂದನೆಗಳು ಮತ್ತೊಮ್ಮೆ ನಾಗೇಶ ಜಿ.

Submitted by H A Patil Fri, 05/22/2015 - 07:58

ಲಕ್ಷ್ಮೀಕಾಂತ ಇಟ್ನಾಳರವರಿಗೆ ವಂದನೆಗಳು
ಬಹಳ ದಿನಗಳ ನಂತರ ಸಂಪದಕ್ಕೆ ಮರಳಿದ್ದಿರಿ ಅದೂ ಅದ್ಬುತ ಪ್ರವಾಸ ಕಥನದ ಮೂಲಕ, ರಾಜಸ್ಥಾನ ಕಲೆ ಸಂಸ್ಕ್ರತಿ ಪರಂಪರೆ ತನ್ನದೆ ಜಾನಪದ ಸೊಗಡಿನ ವೈಶಿಷ್ಟ್ಯದ ಬೀಡು. ನಮ್ಮ ದೇಶದಲ್ಲಿ ಎಲ್ಲ ರಾಜ್ಯಗಳಂತೆ ತನ್ನದೆ ಒಂದು ಛಾಪು ಇದೆ ಅದರ ಸೌಂದರ್ಯದೊಂದಿಗೆ ಅದನ್ನು ಸೆರೆ ಹಿಡಿದು ನಮಗೆ ದರ್ಶನ ಮಾಡಿಸುವುದರ ಮೂಲಕ ನಮಗೂ ಪ್ರವಾಸದ ಅನುಭವವನ್ನು ನೀಡುತ್ತೀರಿ ಎನ್ನುವ ಆಶೆಯಿದೆ, ಸಂಪೂರ್ಣ ಪ್ರವಾಸ ಕಥನದ ನಿರೀಕ್ಷೆಯಲ್ಲಿ, ದನ್ಯವಾದಗಳು.

Submitted by Lakshmikanth Itnal 1 Fri, 05/22/2015 - 08:38

ಹಿರಿಯರಾದ ಹೆಚ್ ಎ ಪಾಟೀಲ್ ರಿಗೆ, ವಂದನೆಗಳು ಸರ್. ತಮ್ಮ ಎಂದಿನ ಹಾರೈಕೆಗಳು ನನಗೆ ವಿಟ್ಯಾಮಿನ್ ಇದ್ದ ಹಾಗೆ. ಪ್ರತಿ ವಾರವೂ ಒಂದೊಂದು ಪುಟ ಸಂಪದಿಗ ಮಿತ್ರರೊಂದಿಗೆ ಹಂಚಿಕೊಳ್ಳುವ ಇರಾದೆ. ತಮ್ಮ ಸಲಹೆ ಪ್ರೇರಣೆ ನನಗೆ ತುಂಬ ಸಹಾಯ ನೀಡುತ್ತದೆ.. ಹೆಚ್ಚು ಹೆಚ್ಚು ಬರೆಯಲು ಇನ್ನಷ್ಟು ಉತ್ಸಾಹ ನೀಡುತ್ತವೆ. ಸಂಪದದಲ್ಲಿ ತುಂಬ ಅಂದರೆ ಆಶ್ಚರ್ಯವಾಗುವಷ್ಟು ಸುಂದರವಾದ ಬರಹಗಳನ್ನು ನಿತ್ಯವೂ ನೀಡುವ ತಾವು, ಕವಿನಾಗರಾಜ್, ನಾಗೇಶ್ ಮೈಸೂರು, ಪಾರ್ಥ, ಭಲ್ಲೇ , ಗಣೇಶ್, ಮಂಜು ಮುಂತಾದ ಘನಿಷ್ಠ ಭಾವಗಳನ್ನು ಸ್ಫುರಿಸುವ, ಬಹುವೇಗಿ ಬರಹಗಳನ್ನು ನೀಡುತ್ತಿರುವುದಕ್ಕೆ ನಿಮಗೆ, ಅವರಿಗೆ ಅಭಿನಂದಿಸುತ್ತದೆ ಮನ. ಹಾಗೆಯೇ ಹೆಚ್ಚು ಬರೆಯದಿದ್ದರೂ ಎಲ್ಲರ ಬರಹ, ಕವನಗಳನ್ನು ಪ್ರೀತಿಯಿಂದ ಓದಿ ಪ್ರತಿಕ್ರಿಯೆ ನೀಡುವ ಸ್ವರ ಕಾಮತ( ರಮೇಶ ಕಾಮತ್) ರ, ನಿಮ್ಮಂತಹವರ ಒಡನಾಟಗಳಲ್ಲಿ ಬರೆಯುವುದೆಂದರೆ ಅದೊಂದು ಹಬ್ಬ, ಸರ್, ತಮ್ಮ ಪ್ರತಿಕ್ರಿಯೆಗೆ ಸರ್ ವಂದನೆಗಳು ಮತ್ತೊಮ್ಮೆ. ಬೆಂಗಳೂರಿನಲ್ಲಿ ನಾವೆಲ್ಲ ಬೇಗ ಸೇರುವ ಆ..ಗಳಿಗೆ ಬೇಗ ಬರಲೆಂದು ಆಶಿಸುತ್ತ....ಇಂತೀ.....

Submitted by kavinagaraj Fri, 05/22/2015 - 08:54

ನಮಸ್ತೆ, ಇಟ್ನಾಳರೇ, ಪೀಠಿಕೆಯೇ ಸೊಗಸಾಗಿರುವಾಗ, ಮುಂದಿನ ಪ್ರವಾಸದ ವಿವರ ಸಹ ಹೆಚ್ಚು ಸೊಗಸಾಗಿರಲೇಬೇಕು. ಪ್ರವಾಸ ಹೊರಡುವವರಿಗೆ ನಿಮ್ಮ ಪೀಠಿಕೆಯಲ್ಲಿನ ಕೆಲವು ಸಲಹೆಗಳು ಉಪಕಾರಿಯಾಗುತ್ತವೆ.

Submitted by ಗಣೇಶ Sun, 05/24/2015 - 21:18

ಇಟ್ನಾಳರೆ, ಪ್ರವಾಸ ಕಥನದ ಪ್ರಾರಂಭವೇ ಸೂಪರ್! ಸಾಲುಗಳನ್ನು ಕೆಳಕೆಳಗೆ ಬರೆದಿದ್ದರೆ ಇದೇ ಕವನವಾಗುತ್ತಿತ್ತು-ಅಷ್ಟು ಚೆನ್ನಾಗಿದೆ. ಕವಿ ಕಣ್ಣಲ್ಲಿ ನೋಡುವ ಚೆಲುವೇ ಬೇರೆ..ಮುಂದಿನ ಬರಹಗಳ ನಿರೀಕ್ಷೆಯಲ್ಲಿರುವೆ.

ಗೆಳೆಯ ಗಣೇಶರಿಗೆ ವಂದನೆಗಳು. ಗೆಳೆಯನ ಹಕ್ಕಿನ ಪ್ರತಿಕ್ರಿಯೆ ಇದು. ತಮ್ಮ ಪ್ರೀತಿಗೆ ಧನ್ಯ ಸರ್. ಪ್ರವಾಸ ಕಥನವನ್ನು ಸಂಪದಿಗ ಮಿತ್ರರೊಂದಿಗೆ ವಾರಕ್ಕೊಂದು ಪುಟ ಹಂಚಿಕೊಳ್ಳುವ ಇರಾದೆ ಇದೆ. ಪ್ರಯತ್ನಿಸುವೆ . ಮತ್ತೊಮ್ಮೆ ವಂದನೆಗಳು ಗಣೇಶ್ ಜಿ.