ರಾಜಸ್ಥಾನವೆಂಬ ಸ್ವರ್ಗದ ತುಣುಕು -4....(ಬೀಕಾನೇರ್ ನೆಡೆಗೆ) - ಲಕ್ಮೀಕಾಂತ ಇಟ್ನಾಳ
ರಾಜಸ್ಥಾನವೆಂಬ ಸ್ವರ್ಗದ ತುಣುಕು -4....(ಬೀಕಾನೇರ್ ನೆಡೆಗೆ)
ಜಂತರ್ ಮಂತರ್ನಿಂದ ನೇರವಾಗಿ ಸರವನ್ ಕರೆದುಕೊಂಡು ಹೋಗಿದ್ದು, ಹಸ್ತಕಲೆಯ ಕರಕುಶಲ ಮಳಿಗೆಯೊಂದಕ್ಕೆ, ರಾಜಸ್ಥಾನಕ್ಕೆ ಭೇಟಿನೀಡುವ ಪ್ರವಾಸಿಗರನ್ನು ತಮ್ಮಲ್ಲಿ ಕರೆದುಕೊಂಡು ಬರುವಂತೆ ಒಳ ಒಪ್ಪೊಂದವೊಂದು ಈ ಟ್ರಾವೆಲಿಂಗ್ ಎಜೆನ್ಸಿಯವರಲ್ಲಿರುತ್ತದೆ ಎಂದು ಕಾಣುತ್ತದೆ. ನಮಗೂ ಆ ನೆಲದ ಕರಕುಶಲ ವಸ್ತುಗಳನ್ನು ನೋಡುವ ಇರಾದೆ ಇದ್ದುದರಿಂದ ಇದರಿಂದ ತೊಂದರೆಯೇನೂ ಆಗಲಿಲ್ಲ. ಒಂದೆರಡು ರಜಾಯಿಗಳು ಹಾಗೂ ಮಗಳಿಗೆ ಸರವೊಂದನ್ನು ಕೊಂಡು, ಇಳಿಸಂಜೆಯಾದುದರಿಂದ ನಹರಘೆರ ಕೋಟೆಯನ್ನು ನೋಡುವುದಾಗದೇ, ಹೋಟಲ್ಗೆ ಮರಳಿದೆವು. ಬೆಳಿಗ್ಗೆ ಬರಬೇಕಾದ ಹೊಟಲ್ಗೆ ಸಂಜೆ ಬಂದಿದ್ದೆವು. ಹೋಟೆಲ್ ನಿಜಕ್ಕೂ ತುಂಬಾ ಚನ್ನಾಗಿತ್ತು.. ಅಲ್ಲಿಯೇ ರಾಜಸ್ಥಾನೀ ಭೋಜನ ಸವಿದು, ನಿದ್ದೆಗೆ ಜಾರಿದೆವು. ಜೈಸಲ್ಮೇರ್ನ ಮರುಭೂಮಿಯೆಡೆ ಹೋಗಲಾರದ ಪ್ರವಾಸಿಗರು, ಅದರ ಹಾಡು, ಕುಣಿತಗಳ ಝಲಕ್ನ್ನು ಜೈಪುರದಲ್ಲಿ ರಾಮಭಾಗ್ ಹಾಗೂ ಚೋಕೀ ದಾನಿ ಎಂಬ ರಿಸಾರ್ಟಗಳಲ್ಲಿ ಪ್ರೋಗ್ರಾಮ್ನಂತೆ ನೋಡಬಹುದು ಎಂಬುದು ಅಲ್ಲಿ ತಿಳಿಯಿತು. ಹುಡುಕಿದರೆ ಇನ್ನಷ್ಟು ಇರಬಹುದು. . ಮರುದಿನ ಬೆಳಿಗ್ಗೆ ಒಂಭತ್ತು ಗಂಟೆಗೆ ರೆಡಿಯಾಗಿ ಬಿಕಾನೇರದೆಡೆ ಹೊರಟೆವು. ದಾರಿಯಲ್ಲಿ ರಸ್ತೆ ಬದಿ ಬಣ್ಣ ಬಣ್ಣದ ಪೇಟಾಗಳನ್ನು, ರಂಗು ರಂಗಿನ ಘೂಂಘಟ್ ಹೊದ್ದ ಮಹಿಳೆಯರು ಅಲ್ಲಲ್ಲಿ ಬರುವ ಹಳ್ಳಿಗಳಲ್ಲಿ ಗೊಂಬೆಗಳಂತೆ ಕಾಣುತ್ತಿದ್ದರು. ಒಂದು ಐವತ್ತು ಅರವತ್ತು ಕಿಮೀಗಳಷ್ಟು ಕ್ರಮಿಸಿರಬಹುದು, ಬರಬರುತ್ತ ಹಸಿರು ಮಾಯವಾಗತೊಡಗಿ, ಅಲ್ಲಲ್ಲಿ ಜಾಲಿ ಮರಗಳಷ್ಟೆ ಹೊಲಗಳಲ್ಲಿ ಕಾಣತೊಡಗಿದವು, ಹಾಗೆಯೇ ಮುಂದುವರೆದಂತೆ, ಬಿಸಿಲಿನಿಂದ ಒಣಗಿದ ಹುಲ್ಲಿನಂತಹ ನೆಲದಲ್ಲಿ ಅಲ್ಲಲ್ಲಿ ಜಾಲಿಗಳ ಮರಗಳಷ್ಟೆ ನಮ್ಮ ಎಡಬಲದಲ್ಲಿ, ಜೊತೆಯಲ್ಲಿ ಬರತೊಡಗಿತ್ತು, ಸ್ಥಬ್ಧ ಚಿತ್ರವೊಂದರಲ್ಲಿ ನಾವಷ್ಟೆ ಚಲಿಸುತ್ತಿರುವಂತೆ ಉದ್ದಕ್ಕೂ ಒಂದೇ ಚಿತ್ರ. ಅಲ್ಲಲ್ಲಿ ಕೆಲ ನೀರು ಇರುವ ಜಾಗದಲ್ಲಿ ಮಾತ್ರ ಸಾಸಿವೆ ಬೆಳೆಯು ತನ್ನ ಹಳದಿ ಬಣ್ಣದಿಂದ ತನ್ನ ಇರುವನ್ನು ತೋರಿಸುತ್ತಿತ್ತು.. ಇಲ್ಲಿಯ ಇನ್ನೊಂದು ಮುಖ್ಯ ಬೆಳೆ ಸಜ್ಜೆ. ಇದಕ್ಕೆ 'ಬಾಜರಾ' ಎನ್ನುವರು. ಇವರ ಭೋಜನದಲ್ಲಿ ತರ ತರಹದ ಸ್ವಾದಿಷ್ಟ ಬಾಜರಾ ರೋಟಿಗಳಿರುತ್ತವೆ. ಜೈಪುರ ಬಿಡುವಾಗ ಬೆಳಗಿನ ತಿಂಡಿ ಮಾಡಿರದ ಕಾರಣ, ಅಲ್ಲೊಂದು ದಾಭಾದಲ್ಲಿ ಪರೋಟಾ ತಿಂದೆವು, ಆಲೂ ಪರೋಟಾ ರುಚಿಯಾಗಿತ್ತು. ಸರವನ್ ಪಾಪ ಏನೂ ತಿನ್ನಲೇ ಇಲ್ಲ, ಇದನ್ನು ಗಮನಸಿ, ಅವನಿಗೆ ಯಾಕೆ ಏನೂ ತಿನ್ನಲಿಲ್ಲ, ಎಂದದ್ದಕ್ಕೆ, 'ಅವರು ಎಣ್ಣೆಯಲ್ಲಿ ಎಲ್ಲವನ್ನೂ ಮಾಡುತ್ತಾರೆ, ಅದಕ್ಕೆ' ಎಂದ. ಅರೆ! ಇದೆಳ್ಳೇ ಆಯ್ತಲ್ಲ, ಇನ್ನೆದರಲ್ಲಿ ಮಾಡಬೇಕಿತ್ತು, ಮತ್ತೆ' ಎಂದೆ. ' ವೋ ಕ್ಯಾ ಹೈ ಕಿ ಸರ್, ಹಮ್ ಲೋಗ್, ಬಚಪನ್ಸೆ ಹೀ ಘೀ ಸೆ ಬನಾಯಾ ಹುವಾ ಬಾಜರಾ ಔರ್ ಪರೋಟಾ ಖಾತೆ ಹೈಂ, ಉಸ್ ಹೋಟಲ್ ಮೆಂ ಘೀ ಸೆ ಪರಾಟಾ ನಹೀಂ ಬನಾತೇ, ಇಸ್ಕೇ ಲಿಯೆ' ಹಮ್ ನಹೀಂ ಖಾ ಸಕೇ' ('ಅದೇನಂದರೆ, ನಾವು ಚಿಕ್ಕಂದಿನಿಂದಲೂ ಪರಾಟಾವನ್ನು ತುಪ್ಪದಿಂದಲೇ ಮಾಡಿದ್ದನ್ನಷ್ಟೆ ತಿನ್ನುತ್ತೇವೆ. ಈ ಧಾಬಾದಲ್ಲಿ ಎಣ್ಣೆಯಿಂದ ಪರಾಟಾ ಮಾಡುತ್ತಿದ್ದರು, ಅದಕ್ಕೆ ಅಲ್ಲಿ ನಾನು ತಿಂಡಿ ತಿನ್ನಲಿಲ್ಲ ಸರ್ ) ಎಂದ. ಅಬ್ಬಾ ! ಸಖೇದಾಶ್ಚರ್ಯ..ತಿಳಿದಿದ್ದೇನಂದರೆ, ಈ ರಾಜಸ್ಥಾನಿಗಳು ತಮ್ಮ ದಿನನಿತ್ಯದ ಆಹಾರದಲ್ಲಿ ತುಪ್ಪವನ್ನು ಯಥೇಚ್ಛವಾಗಿ ಬಳಸುತ್ತಾರೆ, ಕೇವಲ ಕಲವೇ ಜನ ಮಾತ್ರ ಮನೆಗಳಲ್ಲಿ ಎಣ್ಣೆಯನ್ನು ಬಳಸುತ್ತಾರಂತೆ, ಬಲು ವಿಚಿತ್ರವೆನಿಸಿತು. . 'ಎ ಆಯಿಲ್ ಸೆ ಬನಾಯಾ ಹುವಾ ಖಾನಾ ಖಾಯೇತೊ, ಆಪ್ಕೋ ಹೈ ನಾ, ಐಸೆ ಪೇಠ್ ಆಜಾಯೇಗಾ, ಘೀ ಖಾಯೇತೋ ಐಸಾ ನಹೀಂ ಆತಾ, ಇಧರ ಆಪ್ ರಾಸ್ತೇ ಮೇಂ ಐಸೇ ಹೀ ಢೂಂಢೋ, , ಸೌ ಕಿಮೀ ತಕ್ ಆಪ್ ಮುಝೆ ಏಕ್ ಪೇಠವಾಲಾ ಆದಮೀ ಕೊ ದಿಖಾಯಿಯೆ, ಮೈಂ ಖುದ್ ಸೌ ರೂಪಾಯಿ ದೂಂಗಾ ಸರ್, ಏ ಮೇರಾ ವಾದಾ ಹೈ, ಔರ್ ಮುಝೆ ಯೆ ಭೀ ಮಾಲೂಮ್ ಹೈ, ಮೇರಾ ಪೈಸಾ ಮೇರೇ ಪಾಸ್ ಹೀ ರಹನೇವಾಲಾ ಹೈ' ಎಂದು ನಕ್ಕ... (ಎಣ್ಣೆಯನ್ನು ಉಪಯೋಗಿಸಿದ್ದನ್ನು ತಿಂದರೆ, ನಿಮಗೆ ಇದೆಯಲ್ಲ, ಹಾಗೆ ಬೊಜ್ಜು ಬಂದು ಬಿಡುತ್ತದೆ, ಇಲ್ಲಿ ನೂರು ಕಿಮೀ ಗಳ ವರೆಗೆ ನನಗೆ ಬೊಜ್ಜು ಇರುವ ಒಬ್ಬ ಮನುಷ್ಯನನ್ನಾದರೂ ತೋರಿಸಿದರೆ, ನಾನೇ ನೂರು ರೂಪಾಯಿ ಕೊಡುತ್ತೇನೆ ಎಂದು ನಕ್ಕು ಮುಂದುವರೆಸಿದ, ಈ ನೂರು ರೂಪಾಯಿ ನನ್ನ ಬಳಿಯೇ ಉಳಿಯುವುದು ಎಂದೂ ನನಗೆ ಗೊತ್ತಿದೆ ಸರ್') ಎಂದದ್ದು ನಿಜಕ್ಕೂ ಸೋಜಿಗವೆನಿಸಿತು. ಅವನ ಆತ್ಮವಿಶ್ವಾಸ ನೋಡಿಯೇ ದಂಗಾದೆ. ಕಣ್ಣುಗಳು ಹಾಗೆಯೇ ಹೊರಗೆ ಹುಡುಕಲು ಶುರುಮಾಡಿದ್ದವು, ನಿಜಕ್ಕೂ ಅನೇಕ ಸಣ್ಣ ದೊಡ್ಡ ಹಳ್ಳಿಗಳನ್ನು ನಾವು ದಾಟುತ್ತಿದ್ದೆವು, ಕೊನೆಗೂ ನಾನೇ ಸೋತಿದ್ದು ಅಚ್ಚರಿ ಮೂಡಿಸಿತು,. ಎಲ್ಲ ದೇಹಗಳು ತೆಳ್ಳಗೆ ಸರಾಸರಿ ಆರಾರು ಫೂಟು ಎತ್ತರ., ಎಲ್ಲಿಯೂ ಅವರು ಬೊಜ್ಜು ಸಾಕಿರಲಿಲ್ಲ. ಗುಡ್ ಆಬ್ಸರ್ವೇಶನ್ ಎಂದಳು ಮಗಳು. ಸರವನ್ ಎಂತಹ ಜಾದೂವಿನಂತಹ ಸತ್ಯವನ್ನು ಹೇಳಿಬಿಟ್ಟಿದ್ದ, ಹಾಗೆಯೇ ನಮ್ಮ ಊರುಗಳಲ್ಲಿಯ ರಾಜಸ್ಥಾನೀ ಜನರನ್ನು ನೆನೆಸಿಕೊಂಡೆ, ಯಾರಾದರೂ ಹೊಟ್ಟೆವಂತರಾಗಿದ್ದುದು ನೆನಪಗಲೇ ಇಲ್ಲ! ಹೈನೋದ್ಯಮ, ಆಡು, ಕುರಿಸಾಕಣೆ ಈ ರಾಜ್ಯದಲ್ಲಿ ಅತಿ ಹೆಚ್ಚಿನ ಹಾಗೂ ಜನಪ್ರಿಯ, ನಿರಾಯಾಸ ಉದ್ಯೋಗವೂ ಆಗಿದ್ದು, ಅದರ ಉತ್ಪನ್ನಗಳು ಹಳ್ಳಿಗಳಲ್ಲೂ ದೊರೆಯುವುದು ಬಹುಶ: ಈ ಪದ್ಧತಿ ಇರಲು ಕಾರಣವೇನೋ! ಏನಿದ್ದರೂ ಇದೊಂದು ಕೌತುಕದ ಸಂಶೋಧನೆಯ ವಸ್ತುವಾಗಬಹುದೇನೊ! ಅಲ್ಲಿ ಒಂಟೆಗಳು ಬಹು ಜನೋಪಯೋಗಿ ಜೀವಗಳು,. ತಮ್ಮ ದಿನನಿತ್ಯದ ಬದುಕಿನೊಂದಿಗೆ, ಅವುಗಳನ್ನು ಮದುವೆ ಮುಂಜಿವೆ, ಹಬ್ಬ ಹರಿದಿನಗಳಲ್ಲಿ ಶೃಂಗಾರ ಮಾಡಿ ಮೆರವಣಿಗೆಗಳಲ್ಲಿ ಉಪಯೋಗಿಸುವರು. ಮದುವೆಯೊಂದಕ್ಕಾಗಿ ಶೃಂಗಾರಗೊಂಡ ಒಂಟೆಯನ್ನು ಲಾರಿಯೊಂದರಲ್ಲಿ ಕರೆದೊಯ್ಯುತ್ತಿರುವುದನ್ನು ಕಂಡೆ. ಅದನ್ನು ಲಾರಿಯಲ್ಲಿ ಏರಿಸುವಾಗ, ಹೊರಸಿನ ಮೇಲೆ ಹತ್ತಿಸಿ, ನಂತರ ಲಾರಿಯಲ್ಲಿ ಹತ್ತಿಸುತ್ತಾರಂತೆ, ಅದನ್ನು ಇಳಿಸುವಾಗ ಕೂಡ ಹೊರಸು ಬೇಕಿರುವುದರಿಂದ ಲಾರಿಯಲ್ಲಿ ಅದನ್ನೂ ಹೇರಿಕೊಂಡಿದ್ದನ್ನು ಗಮನಿಸಬಹುದು. ಅದು ತನ್ನ ಮೂಗುನತ್ತನ್ನು ಹೇಗೆ ನೋಡಿಕೊಳ್ಳುತ್ತಿದೆ ನೋಡಿ! ಮುಂದೆ ಬರಬರುತ್ತ, ಎಲೆಗಳೇ ಮಾಯವಾದ ಜಾಲಿಯ ಗಿಡಗಳ ಒಣ ರೆಂಬೆಗಳಷ್ಟೆ ಇರುವ ಮರಗಳನ್ನು ಗಮನಿಸಿ ಸರವನ್ ಗೆ ಕೇಳಿದೆ. ಅದೇಕೆ ಹಾಗೆ ಎಂದು,.. ಅದಕ್ಕೆ ಇಲ್ಲಿ ಗಿಡ ಮರಗಳನ್ನು ಯಾರೂ ಕಡಿಯುವುದಿಲ್ಲ. ಅವುಗಳನ್ನು ಒಂಟೆಗಳಿಗೆ ಮೇಯಲು ಬಿಡುವರು. ಮತ್ತೆ ಸ್ವಲ್ಪ ದಿನಗಳಾದ ಮೇಲೆ ಮತ್ತೆ ಅವು ಚಿಗುರುತ್ತವೆ, ಪ್ರತಿಯೊಂದು ಹೊಲದಲ್ಲಿ ಕನಿಷ್ಟ ಹತ್ತಿಪ್ಪತ್ತು ಜಾಲಿಯ ಜಾತಿಯ ಮರಗಳು ಕಾಣಸಿಗುತ್ತಿದ್ದವು. ಅನಿವಾರ್ಯವಾಗಿ ಮರವೊಂದನ್ನು ಕಡಿಯಬೇಕಾದರೆ, ಪಂಚಾಯತಿಯ ಅನುಮತಿ ಅತ್ಯಗತ್ಯ. ಒಂಟೆಗಳ ಹಿತದೃಷ್ಟಿಯಿಂದ ಈ ಕಾನೂನನ್ನು ಉಲ್ಲಂಘಿüಸುವುದು ತೀರ ವಿರಳ ಎಂದ ಸರವನ್. ಏಕೆಂದರೆ ಅವರು ಒಂಟೆಗಳನ್ನು ತುಂಬಾ ಪ್ರೀತಿಸುತ್ತಾರೆ. ಒಂಟೆಯೇ ಅವರ ಸರ್ವಸ್ವ. ಸುಮ್ಮನೆ ಮಾತು ಅಲ್ಲಿಯ ಕಲ್ಚರ್ ಬಗ್ಗೆ ಹೊರಳಿತು. ಅಲ್ಲಿ ಹೆಣ್ಣುಮಕ್ಕಳನ್ನು ಬೇರೆ ಊರುಗಳಿಗೆ ಕೊಟ್ಟಲ್ಲಿ, ಮುಂದೆ ಕುಟುಂಬದಲ್ಲಿ ಏನಾದರೂ ಸಾವು, ಕೌಟುಂಬಿಕ ಕಲಹ, ಸಾಮಾಜಿಕ ತೊಂದರೆ ಸಂಭವಿಸಿದಾಗ, ಮರುಭೂಮಿಯಂತಹ ನೆಲದಲ್ಲಿ ಹಳ್ಳಿಗಳು ದೂರ ದೂgದÀಲ್ಲಿರುವುದರಿಂದ ಬೇಗ ಹೋಗಿ ಬರಲು ಹಿಂದಿನ ಕಾಲದಲ್ಲಿ ಇದು ಸುಮಾರು ವಾರಗಳ ಕ್ರಿಯೆ ತಾನೇ. ಅಕಸ್ಮಾತ್ ಮದುವೆಯಾದ ಹೆಣ್ಣುಮಗಳೊಬ್ಬಳೊಂದಿಗೆ, ಭಿನ್ನಾಭಿಪ್ರಾಯ ಉಂಟಾದರೆ ಅಥವಾ ಗಂಡ ತೀರಿಹೋಗಿ ಅಥವಾ ಇನ್ನಾವುದೇ ಕಾರಣಕ್ಕೆ ಅವಳು ತನ್ನ ತವರಿಗೆ ಮರಳಲು ಸುದ್ದಿ ಕಳುಹಿಸಿ, ನಂತರ ತವರಿನವರು ಬಂದು ಕರೆದುಕೊಂಡು ಹೋಗಲು, ಬಹಳಷ್ಟು ಸಮಯ ತೆಗೆದುಕೊಳ್ಳುವುದು ಸರಿಯಷ್ಟೆ. ಯಾವುದೇ ಕಾರಣಕ್ಕೆ ಅವಳು ಮನೆಯಿಂದ ಹೊರಗೆ ಇರಬೇಕಾಗಿ ಬಂದಲ್ಲಿ, ಗಂಡನ ಸಹೋದರರ ಇಲ್ಲವೇ ಸಹೋದರಿಯರ ಅಥವಾ ಇನ್ನಾರದೇ ಮನೆಯಲ್ಲಿ ಇರಲು ಅಲ್ಲಿಯ ಸಮಾಜ ವ್ಯವಸ್ಥೆ ಒಪ್ಪದು. ಇಂತಹ ಸಂದರ್ಭದಲ್ಲಿ ಅದೇ ಗ್ರಾಮದಲ್ಲಿಯೇ ಗ್ರಾಮದ ಒಬ್ಬ ಹಿರಿಯರು ಅವಳಿಗೆ ತಂದೆಯ ಪಾತ್ರವಹಿಸಿ ಮಗಳಂತೆ ಪಾ¯ನೆ ಮಾಡುವರು., ಅವಳ ಮನೆಯವರು ಬಂದು ಅವಳನ್ನು ಅವರಿಗೆ ಹಸ್ತಾಂತರಿಸುವವರೆಗೂ . ಅದು ಆ ಒಂದು ಹಳ್ಳಿಯ ಗೌರವದ ಪ್ರಶ್ನೆ. ಇದನ್ನು ಇಡೀ ರಾಜಸ್ಥಾನದಲ್ಲಿ ಆಚರಿಸುತ್ತಾರೆ. ಅಲಿಖಿತ ನಿಯಮವಿದು. ಇಲ್ಲದಿದ್ದರೆ ತನ್ನ ಗೌರವ ಉಳಿದೀತೆ ಎನ್ನುವದು ಅಲ್ಲಿಯ ಹಳ್ಳಿ! . ನಿಜಕ್ಕು ಉದಾತ್ತ ತತ್ವ. ವಿಚಿತ್ರವೂ ಅನಿಸುವುದು ಅಲ್ಲವೇ? ಮಗಳನ್ನು ಒಮ್ಮೆ ಮದುವೆ ಮಾಡಿಕೊಟ್ಟ ಮೇಲೆ ಅವಳ ಮನೆಗೆ ಹೋದರೂ ಅಪ್ಪನಾಗಲಿ, ಅಣ್ಣನಾಗಲಿ, ಸಹೋದರರಾಗಲಿ,, ಆ ತಂಗಿಗೆ 'ಛೋಟಿ' ಎನ್ನುವರು, ಈ ಛೋಟಿಯ ಮನೆಯಲ್ಲಿ ಒಂದು ಹನಿ ನೀರನ್ನೂ ಕುಡಿಯಲಾರರು. ಅಲ್ಲಿ ಆಕೆಯ ಮನೆಯಲ್ಲಿ ವಾಸ್ತವ್ಯ ಮಾಡಲಾರರು. ಅಲ್ಲಿಯ ಬೈಗುಳಗಳಲ್ಲಿ ' ತಂಗಿಯ ಮನೆಯ ಎಂಜಲು ತಿನ್ನುವವನೇ' ಎಂಬ ಬೈಗಳವೇ ಇದೆ. ಅಂದರೆ ತಂಗಿಯ ಮನೆಯ ಕೂಳು ಅದೆಷ್ಟು ಅವಮಾನವನ್ನು ತರುತ್ತದೆ ನೋಡಿ ಅವರಿಗೆ.. ಹೀಗಾಗಿ ಅಕಸ್ಮಾತ್ ಹೋದರೂ ಕೂಡ ಊಟ, ವಾಸ್ತವ್ಯ ಇನ್ನೊಬ್ಬರಲ್ಲಿಯೇ. . ಅನುಕೂಲವಿದ್ದಲ್ಲಿ ಹೋಟಲ್ಗಳಲ್ಲಿ ತಂಗುತ್ತಾರೆ. ಛೋಟಿಯ ಕುಟುಂಬಕ್ಕೆ ತಮ್ಮ ಶಕ್ತಿ ಮೀರಿ ಧನ ಧಾನ್ಯ ಸಹಾಯ ಮಾಡಿಯೇ ಮಾಡುತ್ತಾರೆ, ತಮ್ಮ ದುಡಿಮೆಯಲ್ಲಿ ಛೋಟಿ ಮತ್ತಿತರ ಸಹೋದರಿಯರಿಗಾಗಿಯೇ ತುಸು ಉಳಿಸುವ ರೂಢಿಯನ್ನು ಇಟ್ಟುಕೊಂಡಿದ್ದಾರೆ. ಉಳಿದ ಸಹೋದರಿಯರಿಗೂ ಈ ಸಹಾಯವನ್ನು ತಂದೆ ತಾಯಿಯಾಗಿ, ಸಹೋದರರೆಲ್ಲ, ಅವರು ಮನೆಯಿಂದ ಬೇರೆಯಾಗಿದ್ದರೂ, ತಲುಪಿಸುವುದು ಈಗಲೂ ಇದೆ. ಅನುಕರಣೀಯ ಸಂಪ್ರದಾಯ. ಕೌಟುಂಬಿಕ ಬಂಧನಗಳನ್ನು, ಸಂಬಂಧಗಳನ್ನು ಜತನವಾಗಿ ಸಾಕಿದೆ ರಾಜಸ್ಥಾನದ ಮಿಟ್ಟಿ. ಜೈಪುರದಿಂದ ಬಿಕಾನೇರ್ ಸುಮಾರು 330 ಕಿಮೀ ನಷ್ಟು ದೂರ ವಾಯುವ್ಯ ದಿಕ್ಕಿನಲ್ಲಿದೆ. ಅಲ್ಲಿಗೆ ತಲುಪಿದ ಕೂಡಲೇ ಮೊದಲು ಬಿಕಾನೇರ್ನ ಜುನಾಗಢ ಫೋರ್ಟಗೆ ತೆರಳಿದೆವು. ಈಗಲೂ ಗಟ್ಟಿಮುಟ್ಟಾಗಿರುವ ಅರಮನೆ ಇದು. ಮಹಾರಾಜ ಬೀಕಾರಾವ್ ಮೊದಲ ದೊರೆ, ನಂತರ 1478 ರಿಂದ 1947 ರ ವರೆಗೆ 17 ಮಹಾರಾಜರು ಇದನ್ನು ಆಳಿದ್ದು ಗೊತ್ತಾಯಿತು. ಮಹಾರಾಜ ಸಾದುಲ್ ಸಿಂಗ್ ಕೊನೆಯ ರಾಜ. ವೈಭವಯುತವಾಗಿರುವ ಅರಮನೆ ಇನ್ನಿತರ ಭವ್ಯ ಮಹಲುಗಳು, ಬೆಳ್ಳಿಯ ಬಾಗಿಲುಗಳು, ಇನ್ನೂ ನೆನ್ನೆ ಮೊನ್ನೆ ನಿರ್ಮಿಸಿದಂತಿವೆ. ಅಂದಿನ ಕಾಲದ ಸಲಕರಣೆ, ಉಪಕರಣ, ಸರಂಜಾಮುಗಳ ದೊಡ್ಡ ಮ್ಯೂಜಿಯಂ ಇದೆ. ಬೇರೆ ಬೇರ ಉಪಯೋಗವನ್ನು ಸೂಚಿಸುವ ದೀವಾನ್ ಎ ಖಾಸ್, ದೀವಾನ್ ಎ ಆಮ್, ಶೀಶ್ ಮಹಲ್ಗಳು, ರಾಣಿವಾಸಗಳ ಮಂದಿಗೆ ಸುಂದರ ಕುಸುರಿ ಕಲೆಗಳ ಜಾಲರಿಗಳ ಕಿಟಕಿಗಳು ಹೊರಗಿನ ಆಗುಹೋಗುಗಳನ್ನು ಪರದಾ ಪದ್ಧತಿಯಿಂದಲೇ ತೋರಿಸುತ್ತವೆ. ಹಂಗಳೆಯರ ಕಣ್ಣುಗಳಿವು. ಈಗಲೂ ಅಲ್ಲಿ ಪ್ರತಿಯೊಂದು ಕಿಟಕಿಯಲ್ಲೂ ರಾಣಿಯರ ನಜರುಗಳು ಬರುಹೋಗುವ ಪ್ರವಾಸಿಗರ ಮೇಲೆ ಇವೆಯೇನೋ ಎಂಬ ಭಾವ ಕಿಟಕಿಯೆಡೆ ವೀಕ್ಷಿಸುತ್ತಿರುವಂತೆ ಅನಿಸುತ್ತದೆ. ಇಡೀ ಅರಮನೆಯನ್ನು ನೋಡಲು ತಾಸುಗಳೇ ಬೇಕು, ಪ್ರತಿಯೊಂದು ಕಡೆಗೂ ಆರ್ಕಿಯಾಲಜಿ ಇಲಾಖೆಯಿಂದ ಅನುಮತಿಸಿದ ಗೈಡ್ಗಳಿರುತ್ತಾರೆ. ಅವರು ವರ್ಣಿಸುವಾಗ, ಗುಲ್ಜಾರರ ‘ಮ್ಯೂಜಿಯಂ’ ಕವನದ ಸಾಲುಗಳು, ''ಕಹತೇ-ಕಹತೇ ಹುಜೂಮ್ ಕೊ ಲೇಕರ್ ಬಢ ಗಯಾ ಮಿಕ್ನಾತೀಸ್ ಕಾ ಟುಕ್ಡಾ'' ‘ಕತೆಗಳ ಹೇಳುತ್ತ ಸಂದಣಿಯೊಂದಿಗೆ ಚಲಿಸುತ್ತಿತ್ತು ಚುಂಬಕದ ತುಣುಕೊಂದು ಮುಂದೆ ' ಮುಂದೆ ಮುಂದೆ ಚುಂಬಕವು ಚಲಿಸಿದಂತೆ, ಗೈಡ್ನ ಹಿಂದೆ ಹಿಂದೆ ಕಿವಿಯಾಗಿ ನಡೆದಿದ್ದೆವು. ಎಷ್ಟೊಂದು ವಿಶಾಲ ವಿಶಾಲ ಅರಮನೆಗಳು, ಮಹಲುಗಳು, ಯಾಕೋ, ಆ ಕತೆಗಳ ಪಾತ್ರಗಳಾಗಿ ಬರುವ, ಕಾರಸ್ಥಾನಗಳು, ಕೂಟಗಳು, ಬರ್ಬರತೆಗಳು, ಎಷ್ಟೊಂದು ‘ಮಾಸೂಮ್’ಗಳ ನೆತ್ತರು ಹರಿಸಿರಬೇಕು , ಏಸೊಂದು ಬಡಜೀವಗಳು ಇದರಡಿ ಮುದುಡಿ ಮಲಗಿರಬಹುದು ಎಂದೆಲ್ಲ ಭಾವಗಳು , ..ಈ ಮಹಲಿನ ಕಲ್ಲು ಕಲ್ಲುಗಳಲ್ಲಿ ಹೇಳಲಾರದ, ಹಾಡಾಗದ, ಹೂವಾಗದ ಮೌನಗಳೆಷ್ಟು ಅಡಗಿವೆಯೋ ಎಂಬ ಯೋಚನಾ ಲಹರಿಗಳ ತರಂಗಗಳು ಮೂಡಿ ಮರೆಯಾಗುತ್ತಿದ್ದವು. ಹಾಗೆಯೇ ಅರಮನೆಯ ಒಳಗಿನ ಬದುಕೂ ಅಷ್ಟು ಸಲೀಸಾಗಿರಲಿಲ್ಲ, ಆ ವೈಭವೋಪೇತ ಬದುಕುಗಳೂ ಕೂಡ ಮಗ್ಗುಲು ಮುಳ್ಳುಗಳನ್ನು ಹೊಂದಿ, ಅವರ ಗದ್ದುಗೆÉ ಸದಾ ಆತಂಕದಲ್ಲಿರುತ್ತಿತ್ತು , ..ಅದೊಂದು ಮುಳ್ಳಿನ ಹಾಸಿಗೆಯಂತೆಯೇ.. ಜಂಜಾಟಗಳು, ಕಾರಸ್ಥಾನಗಳು, ಕುಟಿಲತೆಗಳು, ಕುತಂತ್ರಗಳು,, ತಂತ್ರ, ಪ್ರತಿತಂತ್ರ ಏನೆಲ್ಲಾ...ಆದರೆ ಇವೆಲ್ಲವುಗಳ ನಡುವೆ ನಮಗೆ ನೀಡಿದ್ದಾರಲ್ಲ ನಮ್ಮ ಇತಿಹಾಸ ಪುರುಷರು ಈ ಕಲಾ ಮರಗು, ಅದ್ಭುತ ಕಣ್ರೀ. ಅದ್ಭುತ. ಅವುಗಳನ್ನು ವರ್ಣಿಸಲು ಎಲ್ಲಾ ಪದಗಳೂ ಕ್ಷೀಷೆ ಎನಿಸುತ್ತವೆ. .. ಅಲ್ಲಿನ ನಮ್ಮ ಕಲಾವಂತಿಕೆಯ ಶ್ರೀಮಂತಿಕೆ, ಕಲೆಯು ಅಲೆಅಲೆಯಾಗಿ ಅರಳಿದ ಪರಿ ಅದ್ಭುತ ಮಾರಾಯರೇ. ಎಲ್ಲ ಕಡೆಯೂ ಎಷ್ಟೊಂದು ನೀಟಾದ ಒಳ ಅಲಂಕಾರಗಳು, ಸುಂದರಾತಿ ಸುಂದರ ಕಲಾಕೃತಿಗಳು, ಇಲ್ಲಿ ಪ್ರತಿ ಮೂಲೆಯ ಕಲ್ಲು ಮೇಣಕ್ಕಿಂತಲೂ ಮೃದುವಾಗಿದೆ, ಕಲ್ಲರಳಿ ಹೂವಾಗಿದೆ. ನಮ್ಮ ಶಿಲ್ಪಿಗಳ ಕೈಯಲ್ಲಿ. ಅವುಗಳ ಭವ್ಯತೆಗಳನ್ನು, ಕಲೆಯ ಶ್ರೀಮಂತಿಕೆಯನ್ನು ನೋಡಿಯೇ ಅನುಭವಿಸಬೇಕು. ಭಾರತೀಯ ಕಲೆ ಜಾಗತಿಕವಾಗಿ ಅಷ್ಟೊಂದು ಅನನ್ಯ ಏಕೆ ಅನ್ನುವುದು ಮನಗಾಣುತ್ತದೆ ಇಂತಹ ಸ್ಥಳಗಳಲ್ಲಿ. ಎಲ್ಲವೂ ಭವ್ಯ ದಿವ್ಯ. ನಿಜಕ್ಕೂ ಸಾರ್ಥಕತೆಯ ಭಾವದಲ್ಲಿ ಮಿಂದೆದ್ದಿತು ಮನಸ್ಸು. ಬಿಕಾನೇರ್ದಲ್ಲಿ 'ನ್ಯಾಶನಲ್ ರಿಸರ್ಚ ಸೆಂಟರ್ಆನ್ ಕ್ಯಾಮೆಲ್' ಎಂಬ ಒಂಟೆಗಳ ಸಂಶೋಧನಾ ಕೇಂದ್ರವಿದೆ. ಇಲ್ಲಿ ಒಂಟೆಗಳ ತಳಿ ಅಭಿವೃದ್ಧಿ ಮಾಡಲಾಗುತ್ತದೆ. ಇದು ಭಾರತೀಯ ಮಿಲಿಟರಿಯಿಂದ ಸ್ಥಾಪಿಸಲ್ಪಟ್ಟಿದೆ. ನಾವು ಹೋದಾಗ ಅಲ್ಲಿ ಒಟ್ಟು 293 ಒಂಟೆಗಳಿದ್ದವು. ಭಾರತೀಯ ಒಂಟೆಗಳಲ್ಲಿ ಒಟ್ಟು ನಾಲ್ಕು ಉಪಜಾತಿಗಳಿವೆ. ಬಿಕಾನೇರಿ, ಜೈಸಲ್ಮೇರಿ, ಕಚ್ಛ, ಹಾಗು ಮಾರವಾ ಉಪಜಾತಿಗಳು., ಅಪರೂಪಕ್ಕೊಮ್ಮೆ ಬಿಳಿ ಒಂಟೆಗಳೂ ಜನಿಸುತ್ತವೆ., ಈ ಎಲ್ಲ ಒಂಟೆಗಳೂ ಇಲ್ಲಿವೆ. ಇಲ್ಲಿಯೇ ಪ್ರವಾಸಿಗರಿಗೆ ಒಂಟೆಯ ಹಾಲು , ಒಂಟೆ ಹಾಲಿನ ಚಾಯ್ ಕುಡಿಯಲು ಸಿಕ್ಕರೆ, , ಹಾಲಿನ ಬರ್ಫಿ ಮುಂತಾದ ಅದರ ಉತ್ಪನ್ನಗಳು ಮಾರಾಟಕ್ಕೆ ಸಿಗುತ್ತವೆ. ಹೆಣ್ಣು ಒಂಟೆಗಳು, ಗಂಡು ಒಂಟೆಗಳು, ಬೆದೆ ಬಂದ ಒಂಟೆಗಳು, ಗರ್ಭಿಣಿ ಒಂಟೆಗಳು, ಮಕ್ಕಳೊಂದಿಗಿನ ಒಂಟೆಗಳು ಹೀಗೆ ಅವುಗಳನ್ನು ವಿಂಗಡಿಸಿ, ಬೇರೆ ಬೇರೆ ಆವರಣಗಳಲ್ಲಿ ಇಡಲಾಗಿದೆ. . ಅಂದೇ ಜನಿಸಿದ, , ಎರಡೇ ದಿನದ, ಮೂರು ದಿನಗಳ, ವಾರದ, ಹದಿನೈದು ದಿನಗಳ, ತಿಂಗಳ ಒಂಟೆ ಮರಿಗೆಳು ನೋಡಲು ಅತಿ ಸುಂದರ. ನಮಗೆ ನಾಲ್ಕೂ ತರಹದ ಒಂಟೆಗಳನ್ನು ಗೈಡ್ ಒಮ್ಮೆ ವಿವರಿಸಿದ ಮೇಲೆ ನಾವೇ ಅವು ಯಾವ ಉಪಜಾತಿಯವುಗಳೆಂದು ಗುರುತು ಹಿಡಿಯತೊಡಗಿದೆವು. ಇಲ್ಲಿ ಒಂಟೆ ಸಫಾರಿಯನ್ನು ಕ್ಯಾಮೆಲ್ ರಿಸರ್ಚ ಸೆಂಟರ್ನ ಆವರಣದೊಳಗೆ ಮಾಡಿಸುವ ವ್ಯವಸ್ಥೆ ಇದೆ, ಆಸಕ್ತರು ಸಫಾರಿ ಮಾಡಬಹುದು.. ದೇಶದಲ್ಲಿಯೇ ಇದೊಂದೇ ಇಂತಹ ಒಂಟೆಗಳ ರಿಸರ್ಚ ಸೆಂಟರ್. ಇದೊಂದು ರೀತಿ ಒಂಟೆಗಳ ನರ್ಸರಿಯೂ ಹೌದು, ಕೇವಲ ಒಂದೋ ಎರಡೋ ಒಂಟೆಗಳನ್ನು ಮಾತ್ರ ನೋಡಿದ್ದ ನಾನು ಒಂಟೆಗಳ ಸೈನ್ಯವನ್ನೇ ನೋಡಿದಂತೆನಿಸಿ ಖುಷಿಪಟ್ಟೆ. ಅದರ ಚರ್ಮ, ಮೂಳೆಗಳಿಂದ ಮಾಡಿದ ಕರಕುಶಲ ವಸ್ತುಗಳ ಅಂಗಡಿಗಳು ಆವರಣದಲ್ಲಿವೆ. ಒಂಟೆಗಳ ಮಾಹಿತಿಯು ಅಪೂರ್ವವೆನಿಸಿತು.. ನಮ್ಮ ಮಿಲಿಟರಿಗೆ ಒಂಟೆಗಳನ್ನು ಒದಗಿಸುವ ಮೂಲ ನೆಲೆ ಇದು. ಒಂಟೆಗಳಿಂದ ಬಿಡುಗಡೆಗೊಂಡು ನಾವು ತೆರಳಿದ್ದು, ಜಗತ್ತಿನಲ್ಲಿಯೇ ಅಪರೂಪದಲ್ಲಿ ಅಪರೂಪವೆನ್ನಬಹುದಾದ ಕರ್ಣಿಮಾತಾ ಮಂದಿರ. ಬೀಕಾನೇರ್ದಿಂದ ಸುಮಾರು 30 ಕಿಮೀ ದೂರದ ದೇಶ್ನೋಯಿ ಎಂಬ ಪುಟ್ಟ ಗ್ರಾಮದಲ್ಲಿ ಈ ಕರ್ಣಿಮಾತಾ ಮಂದಿರವಿದೆ. ಇಲಿಗಳನ್ನು ಆರಾಧಿಸುವ ಜಗತ್ತಿನ ಏಕೈಕ ಮಂದಿರವಿದು. 'ಇಲಿಗಳ ಮಂದಿರ' ವೆಂದೇ ಜಗತ್ಪ್ರಸಿದ್ಧ . ಮಾತಾ ಕರ್ಣಿ ಐತಿಹಾಸಿಕ ವ್ಯಕ್ತಿ., 1387 ರಿಂದ 1538 ರ ವರೆಗೆ ಬದುಕಿದ್ದಳೆಂದು ತಿಳಿದು ಸಖೇದಾಶ್ಚರ್ಯ ನನಗೆ. ಸುಮಾರು 151 ವರ್ಷ ಜೀವಿಸಿದ ಸಂತಳವÀಳು. ಬಿಕಾನೇರ ಹಾಗೂ ಜೋಧಪುರ ಮಹಾರಾಜರು ಅವಳ ಆರಾಧಕರಾಗಿದ್ದರು. ಜೋಧಪುರ ಹಾಗೂ ಬೀಕಾನೇರ್ ಅರಮನೆಗಳಲ್ಲಿ ಕೆಲವನ್ನು ಮಾತಾ ಕರ್ಣಿಯಿಂದ ಶಿಲಾನ್ಯಾಸ ಕೈಗೊಳ್ಳಲಾಗಿದೆ. ಅನೇಕ ವಿರೋಧಿ ರಾಜಮನೆತನಗಳ ನಡುವೆ ಮದುವೆ ಸಂಬಂಧಗಳನ್ನು ಏರ್ಪಡಿಸಿದ್ದು ಸಂತಳೊಬ್ಬಳ ದೂರದೃಷ್ಟಿ ಹಾಗೂ ಸೌಹಾರ್ದತೆ, ಶಾಂತಿಯ ಸೂತ್ರಗಳನ್ನು ಬೋಧಿಸಿದ ಸಮಾಜ ಸುಧಾರಕ ನಡೆಗೆ ನಮಿಸಿತು ಮನ. . ಅವಳ ಜೀವಿತ ಕಾಲದಲ್ಲಿಯೇ ಅವಳ ಮಂದಿರಗಳಿದ್ದುವೆಂದರೆ ಮಾತಾ ಕರ್ಣಿಯ ಪ್ರತೀತಿಯನ್ನು ಅಳೆಯಬಹುದು. ಅಲೆಮಾರಿ ಬದುಕಿನೊಂದಿಗೆ ಊರೂರು ಸುತ್ತುತ್ತಿದ್ದ, ಕರ್ಣಿಯೊಂದಿಗೆ ಒಂದು ಕುರಿಮಂದೆಯೂ ಇತ್ತು,. ಊರೂರು ತಿರುಗುತ್ತ ಸಂಜೆಯಾದೊಡನೆ, ಅಲ್ಲಿಯೇ ಆ ದಿನ ಕಳೆಯುವುದು ವಾಡಿಕೆ. ಹೀಗೆ ಒಂದೂರಿನಲ್ಲಿ ರಾವ್ ಕನ್ಹಾ ಎಂಬ ಪಾಳೆಯಗಾರ ಇವಳ ಕುರಿಮಂದೆಗೆ ಮತ್ತು ಇವರಿಗೆ ನೀರು ಒದಗಿಸಲು ನಿರಾಕರಿಸಿದ್ದಕ್ಕೆ, ಅವನನ್ನೇ ಬದಲಿಸಿ ಇನ್ನೊಬ್ಬನಿಗೆ ಪಾಳೆಯಗಾರಿಕೆ ವಹಿಸಿ ದೇಶ್ನೋಯಿಗೆ ಬಂದಳು. ಅವಳ ಮೇಲೆ ಸಿಟ್ಟಾಗಿ ರಾವ್ ಇವಳ ಮೇಲೆ ಎರಗಿ ಬಂದಾಗ ತಾನೇ ತಾನಾಗಿ ಅಸು ನೀಗಿದ್ದು ಸೋಜಿಗ ಸಂಗತಿ. ಸಂತ ಕರ್ಣಿಯ ಅನೇಕ ಪವಾಡಗಳ ಕುರಿತು ಅವಳ ಆರಾಧಕರು ನಂಬುತ್ತಾರೆ. ತನ್ನ 151 ನೆಯ ವಯಸ್ಸಿನಲ್ಲಿ ಸಂಜೆ ತಂಗಿದ್ದಾಗ ಇದ್ದಕ್ಕಿದ್ದಂತೆ ಮರೆಯಾಗಿದ್ದುದನ್ನೂ ಕೂಡ ಉಲ್ಲೇಖಿಸಿ, ಅವಳೊಬ್ಬ ಅತೀಂದ್ರಿಯ ಶಕ್ತಿಯ ದೇವತೆಯಾಗಿದ್ದಳೆಂದು ತಮ್ಮ ಭಕ್ತಿ ಗಾಯನದಲ್ಲಿ ಹಾಡಿ ಧೇನಿಸುತ್ತಾರೆ. ಮಂದಿರದಲ್ಲಿ ಯಾವುದೇ ಸಮಯದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಎಲ್ಲಿ ಬೇಕೆಂದಲ್ಲಿ ಇಲಿಗಳಿವೆ. ಹಾಲು, ಬೂಂದಿ, ಖಾರಾ ಮಂಡಕ್ಕಿ, ಕಡಲೆ ಮುಂತಾದ ತಿನಿಸುಗಳನ್ನು ದೇವರ ನೈವೇದ್ಯಕ್ಕಿಂತ ಇಲಿಗಳಿಗೆ ಆಹಾರವೆಂದೇ ಒಳಗೆ ಒಯ್ಯುವುದನ್ನು ಯಾರೂ ಮರೆಯುವುದಿಲ್ಲ. ಅದೇ ಆಹಾರವನ್ನು ದೇವರಿಗೆ ನೈವೇದ್ಯ ನೀಡಿ, ಉಳಿದಿದ್ದನ್ನು ಇಲಿಗಳಿಗೆ ತಿನಿಸುತ್ತಾರೆ. ಕರ್ಣಿ ಮಾತಾಗೆ ಮದ್ಯ ನೈವೇದ್ಯೆ ನೀಡುವುದು ಕೂಡ ವಾಡಿಕೆ. . ದೇವರ ಮುಂದಿನ ಪಾತ್ರೆಗೆ ತಂದ ಮದ್ಯವನ್ನು ಅರ್ಪಿಸಿ, ತಮ್ಮ ಭಕ್ತಿ ತೋರ್ಪಡಿಸುವುದು ಸೋಜಿಗವೆನಿಸಿತು. ಇಲಿಗಳನ್ನು ಕೊಲ್ಲುವುದಾಗಲಿ, ಅವುಗಳಿಗೆ ಓಡಿಸುವುದಾಗಲಿ ಏನನ್ನೂ, ಮಾಡಲಾರರು. . ಅವುಗಳು ಕಾಲುಗಳ ಮೇಲೂ ಓಡಾಡಿದರೆ ಬಲು ಮುಜುಗುರ ಎನಿಸಿದರೂ, ಅವೂ ಕೂಡ ಬಲು ನಿರುಪದ್ರವಿ ಜೀವಿಗಳು ಎಂದು ತಿಳಿದು ದಿಙ್ಮೂಢನಾದೆ. ಸಹಸ್ರಾರು ಕಪ್ಪು ಇಲಿಗಳ ಮಧ್ಯೆ ಕೆಲವೇ ಕೆಲವು ಬಿಳಿ ಇಲಿಗಳೂ ಇಲ್ಲಿವೆ. ಇವುಗಳು ಕಾಣುವುದು ಅಪರೂಪ. ಬಿಳಿ ಇಲಿಯ ದರ್ಶನವೆಂದರೆ ಸಾಕ್ಷಾತ್ ಕರ್ಣಿ ಮಾತಾ ದರ್ಶನ ಲಭಿಸಿದಂತೆ ಎನ್ನುವುದು ಭಕ್ತರ ನಂಬಿಕೆ. ಇದಕ್ಕಾಗಿಯೇ ತಾಸುಗಟ್ಟಲೇ ಕಾಯುತ್ತಾರೆ. ನಮಗೂ ಕೂಡ ಬಿಳಿ ಇಲಿಗಳ ದರ್ಶನ ಲಭಿಸಿತು.. ಧನ್ಯತೆಯ ಖುಷಿಯ ಹೆಜ್ಜೆಗಳಲ್ಲಿ ಹೊರಬಂದೆವು.
Comments
ಉ: ರಾಜಸ್ಥಾನವೆಂಬ ಸ್ವರ್ಗದ ತುಣುಕು -4....(ಬೀಕಾನೇರ್ ನೆಡೆಗೆ) -...
ಇಟ್ನಾಳರೆ ನಮಸ್ಕಾರ.. ಪ್ರವಾಸ ಕಥನ ಎನ್ನುವುದಕ್ಕಿಂತ ಒಂದು ರಂಜನೀಯ ಕಥೆ ಹೇಳಿದಂತಿದೆ ನಿಮ್ಮ ಜಬರದಸ್ತು ವಿವರಣಾ ಶೈಲಿ! ಚಿಕಿತ್ಸಕ ಮನದ ದೃಷ್ಟಿ , ಕವಿ ಮನದ ಸೃಷ್ಟಿ ಎರಡೂ ಒಟ್ಟಾಗಿ ಸೇರಿದರೆ ಆಗುವ ಸಾಹಿತ್ಯ ನಳಪಾಕದ ರಸದೌತಣ ಇಲ್ಲಿ ಅನಾವರಣ. ಮುಂದುವರೆಯಲಿ ಸ್ವಾರಸ್ಯಪೂರ್ಣ ಲಾಸ್ಯ :-)
In reply to ಉ: ರಾಜಸ್ಥಾನವೆಂಬ ಸ್ವರ್ಗದ ತುಣುಕು -4....(ಬೀಕಾನೇರ್ ನೆಡೆಗೆ) -... by nageshamysore
ಉ: ರಾಜಸ್ಥಾನವೆಂಬ ಸ್ವರ್ಗದ ತುಣುಕು -4....(ಬೀಕಾನೇರ್ ನೆಡೆಗೆ) -...
ನಾಗೇಶರೇ ನಮಸ್ಕಾರ, ತಮ್ಮ ಎಂದಿನ ಪ್ರೇರೇಪಣೆಗೆ ನಮನ, ರಾಜಸ್ಥಾನದ ಪ್ರವಾಸ ಸಾಹಿತ್ಯಕ್ಕೆ ಸುಂದರ ಪ್ರತಿಕ್ರಿಯೆಗೆ ವಂದನೆಗಳು ಸರ್,..ತಾವೂ ಒಮ್ಮೆ ಅಲ್ಲಿಗೆ ಹೋಗಿ ಬನ್ನಿ ಸರ್, ಅದೊಂದು ವಿಸ್ಮಯ ನಾಡು..ಒಂದೊಂದು ಊರು ಕೂಡ ಅನೇಕ ನಿಗೂಢಗಳನ್ನು ಒಳಗೊಂಡಿದೆ..ಧನ್ಯವಾದಗಳು ಸರ್ ಮತ್ತೊಮ್ಮೆ..
ಉ: ರಾಜಸ್ಥಾನವೆಂಬ ಸ್ವರ್ಗದ ತುಣುಕು -4....(ಬೀಕಾನೇರ್ ನೆಡೆಗೆ) -...
ಇಟ್ನಾಳರೆ,
>>>ಎ ಆಯಿಲ್ ಸೆ ಬನಾಯಾ ಹುವಾ ಖಾನಾ ಖಾಯೇತೊ, ಆಪ್ಕೋ ಹೈ ನಾ, ಐಸೆ ಪೇಠ್ ಆಜಾಯೇಗಾ, ಘೀ ಖಾಯೇತೋ ಐಸಾ ನಹೀಂ ಆತಾ, ಇಧರ ಆಪ್ ರಾಸ್ತೇ ಮೇಂ ಐಸೇ ಹೀ ಢೂಂಢೋ, , ಸೌ ಕಿಮೀ ತಕ್ ಆಪ್ ಮುಝೆ ಏಕ್ ಪೇಠವಾಲಾ ಆದಮೀ ಕೊ ದಿಖಾಯಿಯೆ, ಮೈಂ ಖುದ್ ಸೌ ರೂಪಾಯಿ ದೂಂಗಾ ಸರ್, ಏ ಮೇರಾ ವಾದಾ ಹೈ, ಔರ್ ಮುಝೆ ಯೆ ಭೀ ಮಾಲೂಮ್ ಹೈ, ಮೇರಾ ಪೈಸಾ ಮೇರೇ ಪಾಸ್ ಹೀ ರಹನೇವಾಲಾ ಹೈ' ಎಂದು ನಕ್ಕ...
-ಓದಿ ಬಹಳ ಖುಷಿಯಾಯಿತು. ತುಪ್ಪ ಬೆಣ್ಣೆ ತಿಂದ ದೇಹಕ್ಕೆ ಈ ವಾಸನೆ ರುಚಿ ಏನೂ ಇರದ ಸನ್ಫ್ಲವರ್ ಆಯಿಲ್ ಮೆಚ್ಚುತ್ತಿರಲಿಲ್ಲ. ಆದರೆ ಈ ಕೊಲೆಸ್ಟ್ರಾಲ್ ಭೂತಕ್ಕೆ ಹೆದರಿ ಉಪಯೋಗಿಸುತ್ತಿದ್ದೆ. ಮನೆಯಾಕೆಗೂ ಈ ಲೇಖನ ತೋರಿಸಿದೆ. ಇನ್ನು ತುಪ್ಪ ಇನ್-ಸನ್ಫ್ಲವರ್ ಔಟ್ :)http://timesofindia.indiatimes.com/life-style/food/food-reviews/amp39Ghe...?
*********
ತಂಗಿ ಮನೆ ಕೂಳು...ಅರಮನೆ ವೈಭವ ವಿವರ...ಒಟ್ಟಿನಲ್ಲಿ ಎಲ್ಲಾ ಚೆನ್ನಾಗಿತ್ತು.
******
(ರಾಜಸ್ಥಾನ......೩ ಓದಿದ್ದೆ, ಪ್ರತಿಕ್ರಿಯೆ ಬರೆಯಲು ನೋಡಿದರೆ ಮಾಯ!)
In reply to ಉ: ರಾಜಸ್ಥಾನವೆಂಬ ಸ್ವರ್ಗದ ತುಣುಕು -4....(ಬೀಕಾನೇರ್ ನೆಡೆಗೆ) -... by ಗಣೇಶ
ಉ: ರಾಜಸ್ಥಾನವೆಂಬ ಸ್ವರ್ಗದ ತುಣುಕು -4....(ಬೀಕಾನೇರ್ ನೆಡೆಗೆ) -...
ಸುಂದರ ಅನುಭವಗಳನ್ನು ಹಂಚಿಕೊಳ್ಳುವ ಪರಿ ವಿಶಿಷ್ಟವಾಗಿದೆ. ಅಭಿನಂದನೆಗಳು. ತುಪ್ಪದ ವಿಚಾರದಲ್ಲಿ ನನ್ನ ಸಹಮತವಿದೆ.
In reply to ಉ: ರಾಜಸ್ಥಾನವೆಂಬ ಸ್ವರ್ಗದ ತುಣುಕು -4....(ಬೀಕಾನೇರ್ ನೆಡೆಗೆ) -... by kavinagaraj
ಉ: ರಾಜಸ್ಥಾನವೆಂಬ ಸ್ವರ್ಗದ ತುಣುಕು -4....(ಬೀಕಾನೇರ್ ನೆಡೆಗೆ) -...
ಹಿರಿಯರಾದ ಕವಿನಾಗರಾಜ್ ಸರ್, ...ತಮ್ಮ ಮೆಚ್ಚುಗೆಗೆ ವಂದನೆಗಳು ಸರ್...ತುಪ್ಪದ ವಿಚಾರಕ್ಕೆ ಸಂಬಂಧಿಸಿದಂತೆ ಗಣೇಶ ಜಿ, ಒಂದು ಲಿಂಕನ್ನೂ ಕೊಟ್ಟಿದ್ದು, ನನ್ನ ಪ್ರವಾಸದಲ್ಲಿ ಕಂಡುಕೊಂಡ ಈ ವಿಚಾರವು ಇನ್ನೂ ಹಲವರಿಗೆ ಉಪಯುಕ್ತವಾಗಲೆಂಬ ಹಾರೈಕೆ....ನಮ್ಮ ಹಿರಿಯರು ಇದನ್ನು ಯಥೇಚ್ಛವಾಗಿ ಬಳಸುತ್ತಿದ್ದುದು ಎಷ್ಟೊಂದು ಸರಿ ಅಲ್ಲವೇ ಸರ್...ವಂದನೆಗಳು ಸರ್.
In reply to ಉ: ರಾಜಸ್ಥಾನವೆಂಬ ಸ್ವರ್ಗದ ತುಣುಕು -4....(ಬೀಕಾನೇರ್ ನೆಡೆಗೆ) -... by ಗಣೇಶ
ಉ: ರಾಜಸ್ಥಾನವೆಂಬ ಸ್ವರ್ಗದ ತುಣುಕು -4....(ಬೀಕಾನೇರ್ ನೆಡೆಗೆ) -...
ಗಣೇಶ ಜಿ ನಮಸ್ಕಾರ...ತಾವು ಈ ಆಯಿಲ್ ಸೆ.....ಮಾತನ್ನು ಮನೆಯವರಿಗೂ ಹೇಳಿ ಅದನ್ನು ಒಪ್ಪಿದ್ದು, ಖುಷಿಯಾಯಿತು,.. ಈಗ ತುಪ್ಪವನ್ನು ಯಥೇಚ್ಛವಾಗಿ ಬಳಸುತ್ತಿದ್ದೇನೆ. ತಾವು ಅಂತಹ ಲೇಖನವೊಂದರ ಲಿಂಕ್ ಕೊಟ್ಟಿದ್ದಕ್ಕೆ ಧನ್ಯ ಸರ್.. ಅಲ್ಲಿನ ಜನರ ಪರಂಪರೆಗೆ, ಜೀವನ ಶೈಲಿಗೆ ಇನ್ನಷ್ಟು ಪುಷ್ಟಿ ನೀಡಿದಂತಾಗಿದೆ, ತಮ್ಮ ಪ್ರೀತಿಪೂರ್ವಕ ಪ್ರತಿಕ್ರಿಯೆಗೆ ವಂದನೆಗಳು ಸರ್