ರಾಜ ಯೋಗ!

ರಾಜ ಯೋಗ!

“Dude, Shall we go?” ಸಹೋದ್ಯೋಗಿಯೊಬ್ಬ ಪ್ರತಿ 2 ಘಂಟೆಗೊಂದು ಬಾರಿ ನನ್ನನ್ನು ಕೆಲಸದ ಗುಂಗಿನಿಂದ ಎಚ್ಚರಿಸೋದು ಹೀಗೆ. ಈ ಐ ಟಿ ಉದ್ಯೋಗಿಗಳು ಕೆಲ್ಸ ಮಾಡಿ ದಬಾಕೋದು ಅಷ್ಟರಲ್ಲೇ ಇದ್ದರೂ, ವಿರಾಮ ಮಾತ್ರ ಎಗ್ಗಿಲ್ದೆ ತಗೋತಾರೆ. ಹೀಗೊಂದು ವಿರಾಮಕ್ಕೆ ಸಾಕ್ಷಿ ನಮ್ಮ ಮಾಮೂಲಿ ಅಡ್ಡಾ , ಮುಖ್ಯ ದ್ವಾರದ ಬಳಿ ಇರೋ ಟೀ ಅಂಗಡಿ. ಅಲ್ಲಿ ಆ ಜನರ ನಡುವೆ ಎರಡು ವಡೆ ಗಿಟ್ಟಿಸೋದು ಅಷ್ಟು ಸುಲಭದ ಮಾತಲ್ಲ. 3×7 ಅಡಿಯ ತಗಡಿನ ಅಂಗಡಿಯೊಳಗೆ ಈ ಮಟ್ಟಕ್ಕೆ ಗಿರಾಕಿಗಳನ್ನ ಕಲೆ ಹಾಕೋ ವಿಶೇಷತೆ ಏನಿದೆ ಅನ್ನೋದು ಗೊತ್ತಾಗಿದ್ದು ಅಲ್ಲಿ ವಡೆ ತಿಂದ ಮೇಲೇನೆ..
ಒಂದು ಪ್ಲೇಟ್ ವಡೆ, ಒಂದು ಟೀ ತಗೊಂಡು ಆಚೆ ಬರುವಷ್ಟರಲ್ಲಿ ನನಗೆ ಬೆವರಿಳಿದಿತ್ತು. ಬಿಸಿ ಬಿಸಿ ವಡೆ,ಎರಡು ಗುಟುಕು ಟೀ ಗಂಟಲಲ್ಲಿಳಿಯಲು, ಜೊತೆಯಲಿದ್ದವನು – ” ಏನೇ ಹೇಳು, ನಾವೆಲ್ಲಾ 12 ಘಂಟೆ ಚಾಕರಿ ಮಾಡಿದ್ರೂ, ಇವರ ದುಡಿಮೇಲಿ ಅರ್ಧ ಸಂಪಾದನೆ ಮಾಡಕ್ಕಾಗಲ್ಲ ” ಅಂತ ಏನೋ ಗೊಣಗುತ್ತಿದ್ದ.
ನಾನು – “ಹೌದಲ್ವ! ಈ ಅಂಗಡಿ ತಲೆ ಎತ್ತೋದು ಸಂಜೆ ನಾಲ್ಕರ ಸುಮಾರಿಗೆ. ಎಂಟೂವರೆ ವೇಳೆಗೆ ಪಾತ್ರೆಗಳೆಲ್ಲಾ ತೊಳೆಯ ಬಿದ್ದಿರುತ್ತವೆ. ಈ ನಾಲ್ಕು ಘಂಟೆಗಳ ಅವಧಿಯಲ್ಲಿ ಸುಮಾರು 200 ಜನ ಬಂದು ಹೋಗ್ತಾರೆ. ಒಬ್ಬನಿಂದ minimum 20₹ ಅಂದುಕೊಂಡರೂ, ಒಂದು ದಿನಕ್ಕೆ ಎಷ್ಟೂ…!!!!! ” ಅಂತ ಮನಸ್ಸಲ್ಲೇ ಲೆಕ್ಕಾಚಾರ ಹಾಕುವಷ್ಟರಲ್ಲಿ ಇನ್ನೆರಡು ವಡೆ ಪ್ಲೇಟ್ ಗೆ ಬಿದ್ದಿತ್ತು..
“ಏನು… ತುಂಬಾ deep ಆಗಿ ಯೋಚಿಸ್ತಾ ಇದ್ದಿ, ನಾಳೆಯಿಂದ ಟೀ ಅಂಗಡಿ ಶುರು ಮಾಡೋ ಯೋಜನೆ ಇದ್ದಂಗಿದೆ” sarcastic ಆಗಿ ಕೇಳಿದ ಜೊತೆಯಲಿದ್ದವ.
ನಾನು ” ಮಾಡಿದ್ರೂ ಆಶ್ಚರ್ಯ ಇಲ್ಲ, ಕಮ್ಮಿ ಅಂದ್ರೂ 3000₹ ಮನೆಗೆ ತಗೊಂಡು ಹೋಗ್ಬೋದು. ಅದೂ ಅಷ್ಟು ಕಮ್ಮಿ ಸಮಯದಲ್ಲಿ.. ಆ ಕಂಪ್ಯೂಟರ್ ಮುಂದೆ ದಿನವಿಡೀ ಸಾಯೋ ಬದ್ಲು 4 ಘಂಟೆ ಕಷ್ಟಪಟ್ರೆ , ಬಾಕಿ 20 ಘಂಟೆ ರಾಜನ ಹಾಗೆ ಬದುಕ್ಬೋದು ಅಲ್ವಾ! ” ಅಂತ ಉದ್ಗರಿಸಿದೆ.
ಅಷ್ಟರಲ್ಲಿ ಟೀ ಕುಡಿದ ಲೋಟ ಕೊಂಡೊಯ್ಯಲೆಂದು ಬಂದಿದ್ದ ಅಂಗಡಿ ಮಾಲೀಕ ನಮ್ಮ ಸಂಭಾಷಣೆ ಕೇಳಿಸಿಕೊಂಡಿದ್ದರು. “ಸಾರ್, ನಿಮಗ್ಯಾಕೆ ಈ ವನವಾಸ. ಅಷ್ಟೊಂದ್ ಓದಿದ್ದೀರಿ, ಈ ಎಂಜಲು ಲೋಟ ತೊಳ್ಯೋ ಪರಿಸ್ಥಿತಿ ಏನು ನಿಮ್ಗೆ.. ಏಸಿ ರೂಮಲ್ಲಿ ಆರಾಮಾಗಿ ಕೆಲ್ಸ ಮಾಡೋದನ್ನ ಬಿಟ್ಟು ಇಲ್ಲಿ ಕುದಿಯೋ ಎಣ್ಣೆ ಮುಂದೆ ಯಾಕೆ ಬೇಯೋ ಆಸೆ? ಇನ್ನೇನು ಪೊಲೀಸ್ ಬರ್ತಾನೆ, ವ್ಯಾಪಾರ ಆಗ್ಲಿ ಬಿಡ್ಲಿ, ಅವಂಗೆ 300 ರೂಪಾಯಿ ಕೊಡಬೇಕು, ಕಾರ್ಪರೇಷನ್ ಅವ್ರು ದುಡ್ಡು ಕೊಟ್ಟಿಲ್ಲ ಅಂದ್ರೆ ಕ್ಲೀನ್ ಮಾಡೋದೇ ಇಲ್ಲ, ಈರುಳ್ಳಿ ರೇಟ್ ಕೇಳಿ ಎಷ್ಟೋ ಸಲ ಅತ್ತಿದ್ದೀನಿ, ಇನ್ನು ಬೇರೆ ಐಟಂ ಬಗ್ಗೆ ಮಾತಾಡಂಗೇ ಇಲ್ಲ.. ನಮ್ಮಪ್ಪ ಓದಿಸದೇ ಹೋಟೆಲ್ನಲ್ಲಿ ಕೆಲ್ಸಕ್ಕೆ ಹಾಕ್ಬಿಟ್ರು, ಜೊತೆಗೆ ಮನೆ ಕಷ್ಟ ಎಲ್ಲ ಕಟ್ಬಿಟ್ರು, ಅನುಭವಿಸೋ ಹಂಗಿಲ್ಲ, ಬಿಡೋಕ್ಕು ಆಗಲ್ಲ, ಪುಟ್ಟ ತಂಗಿಯರು ಸಾರ್. ಬೆಳಗ್ಗೆ ಎದ್ದರೆ ಎಲ್ಲಾ ನಾನೇ ನೋಡ್ಬೇಕು, ಇದು ರಾಜನ ಜೀವ್ನನಾ??” ನೋವು ತುಂಬಿದ ನಗುವಿನಲ್ಲಿ ಹೇಳುತ್ತ, ಲೋಟವನ್ನ ಬಕೆಟ್ ಒಳಕ್ಕೆ ಹಾಕ್ಕೊಂಡ್ರು..
ಮುಂದುವರೆಸುತ್ತಾ, “ನಂಗೆ ಇದು ಬಿಟ್ರೆ ಬೇರೆ ಲೋಕ ಗೊತ್ತಿಲ್ಲ, ನಾನೂ ನಿಮ್ಮಂಗೆ ಸ್ವಲ್ಪ ಓದ್ಕೊಂಡಿದ್ರೆ ಈ ನರಕದಿಂದ ಆಚೆ ಬರ್ತಿದ್ನೋ ಏನೋ.. ನೀವೆಲ್ಲ ಪುಣ್ಯ ಮಾಡಿದ್ದೀರಿ, ನಿಮ್ಮ ಅಪ್ಪ ನಿಮ್ನ ಓದ್ಸಿ ನೆಲೆಗೆ ಒಂದು ದಾರಿ ಮಾಡ್ಕೊಟ್ಟಿದಾರೆ, ನಿಮ್ದು ಸಾರ್ ರಾಜ ಯೋಗ.. ಒಂದಂತು ನಿಜ, ನಾನಂತೂ ನೋಡಿಲ್ಲ, ಆದ್ರೆ ನನ್ನ ಮಗ ರಾಜನ ಜೀವ್ನ ಮಾಡೇ ಮಾಡ್ತಾನೆ” ಅಂತ ಹೇಳಿ ಹೊರಟಾಗ, ಪ್ರತಿ ತಂದೆಯ ಕನಸು ಅವರ ಕಣ್ಣಲ್ಲಿ ಕಂಡಿತ್ತು..
ತಕ್ಷಣವೇ ಅಪ್ಪನಿಗೊಂದು ಫೋನ್ ಮಾಡಿ  “Thanks ಅಪ್ಪ, ನಂಗೆ ರಾಜ ಯೋಗ ಕಲ್ಪಿಸಿದ್ದಕ್ಕೆ” ಎಂದು ಹೇಳುವ ಎನಿಸಿತ್ತು.. ನಾಲಿಗೆಗೆ ವಡೆಯ ಮೆಣಸಿನಕಾಯಿ ಸಿಕ್ಕಿ ಖಾರಕ್ಕೆ ಕಣ್ಣಲ್ಲಿ ನೀರು ತುಂಬಿತ್ತು !!

Rating
No votes yet