ರಾಧಾ ಮಾಧವ!

ರಾಧಾ ಮಾಧವ!

 

“ ಮಾಧವ... “


ರಾಧೆಯ ಕರೆ!


ಅನ್ಯಮನಸ್ಕನಾಗಿ, “ಹುಂ, ಹೇಳು.” ಅಂದ ಕೃಷ್ಣ.


“ರಾಧೆ, ನೋಡು ಮೋಹಿನಿಗೆ ಹಸಿರು ಬಣ್ಣ ಎಷ್ಟು ಚೆನ್ನಾಗಿ ಒಪ್ಪುತ್ತದೆಯಲ್ಲವೆ?”


“ನೋಡೇ, ಅವಳ ವೇಣಿಯನ್ನು! ಅಬ್ಬಾ ಎಷ್ಟು ಉದ್ದವಾಗಿದೆ!”


’ಆಹಾ! ರತ್ನಳ ನಡಿಗೆಯನ್ನು ನೋಡು! ಏನು ಲಾಸ್ಯ! ಏನು ಲಾವಣ್ಯ!”


“ರಾಧಾ, ಅವಳ ಹೆಸರೇನೆ? ಅದೇ ಆ ನಾಗವೇಣಿಯ ಬಲಬದಿಯಲ್ಲಿ ನೀಲಿ ದಾವಣಿ ಉಟ್ಟವಳು! ನನಗವಳು ನಾಳೆ ಔತಣ ಕೂಟಕ್ಕೆ ಆಹ್ವಾನಿಸಿದ್ದಾಳೆ!”


ಕೈಯಲ್ಲಿದ್ದ ಕೊಳಲನ್ನು ನೆಲಕ್ಕೆ ಬಡಿದು ಅಲ್ಲಿಂದ ಹೊರಡನುವಾದಳು ರಾಧೆ!


“ಅರೇ, ನಿನಗೇಕೆ ಮುನಿಸೇ? ಅವರೆಲ್ಲ ನಿನ್ನ ಸಖಿಯರೇ ಕಣೇ!”


“ಹೌದೋ ಮಾಧವ! ಅವರೆಲ್ಲ ನನ್ನ ಪ್ರೀತಿಯ ಗೆಳತಿಯರು! ನೀನು ನನ್ನ ಜೀವದ ಗೆಳೆಯ! ನನ್ನ ನಲ್ಲ! ನನ್ನ ಸರ್ವಸ್ವ!”


“ಮತ್ತೇಕೆ ಈ ತಾಪ ರಾಧೆ?”


ಮುಗುಳ್ನಕ್ಕಳು ರಾಧೆ... “ಹೌದೋ ಮಾಧವ, ನೀನಾಡೋ ಆಟವನೆಲ್ಲ ನಾನಲ್ಲದೆ 

ಮತ್ತಾರು ಬಲ್ಲರೋ! ನಮ್ಮಿಬ್ಬರ ಒಲವಿನ ಕತೆ ಯುಗ ಯುಗದಲ್ಲೂ ಮಾದರಿ ಕಣೋ. ಎಲ್ಲ ಅರಿತರೂ ನಿನ್ನೀ ಒಲವಿಗಾಗಿ ನಾನು ಸಾಮಾನ್ಯ ಹೆಣ್ಣಿನಂತೇ ಪರಿತಪಿಸುವೆನೋ! ಎಲ್ಲಿ ನಿನ್ನನ್ನು ನನ್ನಿಂದ ಯಾರಾದರೂ ದೂರ ಮಾಡುವರೋ ಎಂದು ಒದ್ದಾಡುವೆನೋ! ನನಗೂ ತಿಳಿದಿದೆ, ನಮ್ಮಿಬ್ಬರ ನೆಂಟು ಇಷ್ಟೇ ಎಂದು. ಭವಿಷ್ಯವನು ನೀನು ಬಲ್ಲೆಯಾದರೂ ನನಗದು ಬೇಡ. ನಾನು ವರ್ತಮಾನದಲಿ ಬದುಕಲಿಚ್ಛಿಸುತ್ತೇನೆ. ಈಗ ನೀನು ನನ್ನವನು; ನನಗಷ್ಟೇ ಸಾಕು! ಉಳಿದದು ಗೌಣ್ಯವೆನಗೆ!”


“ನಾ ತಂತಿ, ನೀನು ವೈಣಿಕ! ನಾ ಮುರಳಿ, ನೀ ಮುರಳೀಧರ! ನಾ ರಾಧೆ, ನೀ ರಾಧಾಮಾಧವ! ನಮ್ಮೀ ಒಲವು ಅಮರ, ಅದಕ್ಕಿಲ್ಲ ಯಾವುದೇ ಬಂಧ! ಹೌದೋ, ನಾವು ಸಪ್ತಪದಿಯನ್ನು ತುಳಿದಿಲ್ಲ, ಅಗ್ನಿ ಸಾಕ್ಷಿಯಾಗಿ ಕೈ ಹಿಡಿದಿಲ್ಲ, ನಮ್ಮ ಒಲವಿಗೆ ಯಾವ ಮಂತ್ರಗಳೂ ಸಾಕ್ಷಿಯಾಗಿಲ್ಲ, ಆದರೂ ನಮ್ಮಿಬ್ಬರ ಆತ್ಮ ಒಂದಾಗಿದೆ.  ನಾನು ನೀನೆಂಬ ಭೇದ ದೂರವಾಗಿ ನಾವಾಗಿದ್ದೇವೆ. ನೀನೋ ಅವತಾರ ಪುರುಷ! ನಾನೋ ನಿನ್ನೊಲವನು ಪಡೆದ ಸಾಮಾನ್ಯ ಗೋಪಿಕೆ! ಪತ್ನಿಯಲ್ಲದಿದ್ದರೂ ಪತ್ನಿಯ ಎಲ್ಲಾ ಅಧಿಕಾರವ ನೀಡಿರುವೆ ನೀ ಎನಗೆ! ಹೆಚ್ಚೇನು ಬಯಸೆನು ಬರೇ ಬೇಡುವೆನು ನಿನ್ನೊಲವ ಸಾಕೆನಗೆ!”


ಬಿಗಿದಪ್ಪಿದನು ಮಾಧವ! ಮಾಧವನಲ್ಲಿ ನೆಲೆಯಾದಳು ರಾಧೆ! ಅಜರಾಮರವಾಯಿತು ಅವರ ಒಲವಿನ ಕತೆ!

 

Rating
No votes yet

Comments

Submitted by nageshamysore Sun, 05/05/2013 - 22:28

ಕೆ ಎಸ್ ನಾಯಕ್ ರವರೆ, ನಿರೀಕ್ಷೆಯಿಲ್ಲದ ಅಗಾಧ ಪ್ರೇಮ, ನಿಷ್ಕಶ್ಮಲ ಭಾವಸಂಭ್ರಮ, ಅನುರಾಗ ಸಂಗಮಗಳನ್ನು ಕೃಷ್ಣಾರಾಧೆಯರಲಲ್ಲದೆ ಇನ್ಯಾರಲ್ಲಿ ತಾನೆ ಕಾಣಲು ಸಾಧ್ಯ? ಚೆನ್ನಾಗಿದೆ. ಕಟ್ಟುಪಾಡುಗಳನ್ನು ನಿರ್ಲಕ್ಷಿಸಿ ಗಡಿ ಮೀರಿದ ಅವಸರಕ್ಕೂ ಬರಿ ಸಹಜ, ಭಕ್ತಿಪೂರ್ವಕ ಪ್ರೇಮವೆ ಪ್ರೇರಣೆಯಾಗುವುದು ಇವರಿಬ್ಬರ ಕೆಳೆಯ ಮಹಾನ್ ಸೋಜಿಗ. ಧನ್ಯವಾದಗಳು. ನಾಗೇಶ ಮೈಸೂರು, ಸಿಂಗಾಪುರದಿಂದ

Submitted by ksnayak Mon, 05/06/2013 - 19:04

In reply to by nageshamysore

ನಮಸ್ಕಾರ ನಾಗೇಶ್ ಮೈಸೂರು ಅವರೇ,
ರಾಧಾಮಾಧವರ ಪ್ರೀತಿಯ ಬಗ್ಗೆ ಬರೆದದಷ್ಟು ಕಮ್ಮಿಯೇ. ಕಾಮನೆಗಳನ್ನು ಮೀರಿ ಬೆಳೆದ ಅವರಿಬ್ಬರ ಒಲವು ಇಂದಿಗೂ ಪ್ರೇಮಿಗಳಿಗೆ ಆದರ್ಶ. ಅಂತೆಯೇ ಪಾರ್ವತಿ ಪರಮೇಶ್ವರರ ಮಾತು ಮತ್ತು ಅರ್ಥದಂತೆ ಬೆರೆತಿರುವ ಒಲವೂ ಆದರ್ಶವೆಮಗೆಲ್ಲ!
-ಶೀಲಾ

Submitted by ಗಣೇಶ Mon, 05/06/2013 - 00:10

>>>ಕೈಯಲ್ಲಿದ್ದ ಕೊಳಲನ್ನು ನೆಲಕ್ಕೆ ಬಡಿದು ಅಲ್ಲಿಂದ ಹೊರಡಲನುವಾದಳು ರಾಧೆ! ರಾಧೆಯ ಹೊಟ್ಟೆಕಿಚ್ಚು(?)ನಂತರದ ಸಮಾಧಾನ ಪ್ರೀತಿ ಎಲ್ಲವನ್ನೂ ಸುಂದರವಾಗಿ ವಿವರಿಸಿದ್ದೀರಿ ಶೀಲಾ ಅವರೆ. ನನಗೆ ಲಗಾನ್ ಚಿತ್ರದ "ರಾಧಾ ಕೈಸೆ ನ ಜಲೆ" ನೆನಪಾಯಿತು- http://www.glamsham.com/music/lyrics/lagaan/radha-kaise-na-jale/99/2564.htm http://www.youtube.com/watch?v=VmC86-uX7JE

Submitted by ksnayak Mon, 05/06/2013 - 19:08

In reply to by ಗಣೇಶ

ಇದು ಲೋಕಕ್ಕೆ ಕಾಣಿಸುವ ನಾಟಕ ಗಣೇಶ! ಅವರಿಬ್ಬರ ಆತ್ಮ ಒಂದಾಗಿದೆ, ಅಲ್ಲಿ ಅಸೂಯೆ, ಅಪನಂಬಿಕೆಗಳಿಗೆ ಯಾವ ಜಾಗವೂ ಇಲ್ಲ.
ತಮ್ಮ ಮೆಚ್ಚಿಗೆಗಾಗಿ ಧನ್ಯವಾದ! ನನ್ನ ನೆನಪಿದೆ ತಮಗೆ!!! ಬಹಳ ಸಮಯದ ನಂತರ ಸಂಪದದಲ್ಲಿ ಬರವಣಿಗೆ ಪ್ರಕಟಿಸಿದ್ದು! ಮುಂಚೆ ನಮ್ಮ ಹೆಸರೇ ಪ್ರಕಟವಾಗುತಿತ್ತು, ಈವಾಗ ನಮ್ಮ ಲೋಗ್ ಇನ್ ಐಡಿ! ಆದರೂ ತಾವು ಗುರುತು ಕಂಡುಹಿಡಿದಿರಿ! :-)