ರಾಮಗಾಗದ ಕಾರ್ಯ ಕಪಿಗಳಗುಂಪಿಗತಿ ಸುಲಭ!

Submitted by hamsanandi on Fri, 12/14/2012 - 06:51

ಇದರಲ್ಲೇನಿದೆ ಹೆಚ್ಚುಗಾರಿಕೆ ಅಂದ್ರಾ? ಸಮುದ್ರವನ್ನು ದಾಟಲು ವಾನರ ಸೈನ್ಯವೇ ತಾನೆ ಸೇತುವೆ ಕಟ್ಟಿದ್ದು ಹೊರತು ರಾಮ ಅಲ್ವಲ್ಲಾ ಅಂದಿರಾ? ಅದು ನಿಜವೇ. ಆದರೆ ಪದ್ಯಪಾನದ ಒಂದು ಹಳೆಯ ಪ್ರಶ್ನೆ ನೋಡಿದಾಗ ಇದನ್ನ ಬೇರೆತರಹ ಉತ್ತರಿಸಿದರೆ ಹೇಗೆ ಅಂತ ಯೋಚಿಸಿದಾಗ ಹೊಳೆದದ್ದಿದು.

ಸೀತೆ ರಾವಣನ ಬಂಧನದಿಂದ ಹೊರಬಂದು, ರಾಮನೊಡನೆ ಅಯೋಧ್ಯೆಗೆ ಮರಳಿದ್ದಾಳೆ. ವನವಾಸದಲ್ಲಿ ಏನು ಪೂಜೆ ಮಾಡಿದ್ದಳೋ ಇಲ್ಲವೋ ಪಾಪ,ಮಂಗಳಗೌರಿಗೆ ಲಕ್ಷಪೂಜೆಯನ್ನು ಮಾಡುವ ಹರಕೆ ಹೊತ್ತಿದ್ದಾಳೆ. ಆದರೆ ಲಕ್ಷ ಹೂಗಳನ್ನು ಕಿತ್ತಿ ಬಿಡಿಸುವುದೇನು ಸಾಮಾನ್ಯವೇ? ಆದರೆ ಸೀತೆಗೆ ಆ ಭಯವಿಲ್ಲ! ಯಾಕೆಂದರೆ ರಾಮನಿಗಾಗದಿದ್ದರೂ ವಾನರ ಸೈನ್ಯದ ಸಹಾಯವಿದೆಯಲ್ಲ ಅವಳಿಗೆ!

ನೇಮದಲಿ ಹಂಬಲಿಸೆ ಸೀತೆಯು
ಕಾಮ ವೈರಿಯ ಮಡದಿ ಮಂಗಳ
ಧಾಮೆ ಗೌರಿಯ ಲಕ್ಷ ಪೂಜೆಗೆ ವಾನರರ ಸೈನ್ಯ
ಆಮರೀಮರಕೆಲ್ಲ ನೆಗೆದಾ-
ರಾಮದಲಿ ಹೂಗಳನು ಬಿಡಿಸಿರೆ 
ರಾಮಗಾಗದ ಕಾರ್ಯ ಕಪಿಗಳಗುಂಪಿಗತಿ ಸುಲಭ!

ಇದಕ್ಕೆ ಬೇರೆ ಪದ್ಯಪಾನಿಗಳು ಬರೆದ ಉತ್ತರಗಳನ್ನು ಇಲ್ಲಿ ನೋಡಬಹುದು.

-ಹಂಸಾನಂದಿ


 
Rating
No votes yet