ರಾಮದಾಸ್ - ಇನ್ನೆಲ್ಲಿ ಆ ತಾಪ... ಆ ಬೆಳಕು!
ಇನ್ನೆಲ್ಲಿ ಆ ತಾಪ... ಆ ಬೆಳಕು!
ಕರ್ನಾಟಕದ ಪ್ರತಿಭಟನೆಯ ಧ್ವನಿ ಉಡುಗಿ ಹೋಗಿದೆ. ಪ್ರೊ|| ಕೆ ರಾಮದಾಸ್ ಇನ್ನಿಲ್ಲ. ಕಳೆದ 40 ವರ್ಷಗಳಿಂದ ಸತತವಾಗಿ ರಾಜ್ಯದಲ್ಲಿ ಎಲ್ಲ ರೀತಿಯ 'ಪ್ರಭುತ್ವ'ಗಳ ವಿರುದ್ಧ ಸಮರ ಸಾರಿದ್ದ ರಾಮದಾಸ್, ಅನ್ಯಾಯಗಳ ವಿರುದ್ದ ಪ್ರತಿಭಟನೆಗಳನ್ನು ರೂಪಿಸಬೇಕಿದ್ದ ಸಂಘಟನೆಗಳು ಇತ್ತೀಚಿನ ವರ್ಷಗಳಲ್ಲಿ ಜಾಗತೀಕರಣದ ಒತ್ತಡಗಳಿಗೆ ಸಿಕ್ಕಿ ಉಸಿರು ಕಳೆದುಕೊಳ್ಳುತ್ತಿದ್ದಂತೆ, ಒಂಟಿದನಿಯಾಗಿಯೇ ತಮ್ಮ ಸಮರವನ್ನು ಮುಂದುವರೆಸಿದ್ದರು. ಆ ಸಮರವೂ ಈಗ ನಿಲುಗಡೆಗೆ ಬಂದಂತಾಗಿದೆ.
ರಾಮದಾಸರನ್ನು ನಾನು ಮೊದಲು ನೋಡಿದ್ದು, 1977ರ ಚುನಾವಣೆಗಳ ನಂತರ ಜನತಾ ಸರ್ಕಾರ ಅಧಿಕಾರ ಸ್ವೀಕರಿಸಿ, ರಾಷ್ಟ್ರ ಸರ್ವಾಧಿಕಾರದ ಆತಂಕದಿಂದ ಬಿಡುಗಡೆಗೊಂಡು ನಿಟ್ಟುಸಿರು ಬಿಡುತ್ತಿದ್ದ ಹೊತ್ತಿನಲ್ಲಿ. ಬೆಂಗಳೂರಿನ ಗಾಂಧಿ ಭವನದಲ್ಲಿ ಸೇರಿದ್ದ ಕರ್ನಾಟಕದ ಪಕ್ಷಾತೀತ ಸಮಾಜವಾದಿಗಳ ಸಭೆಯಲ್ಲಿ ಪ್ರೊ|| ನಂಜುಂಡ ಸ್ವಾಮಿಯವರ ವಿರುದ್ಧ ತಮ್ಮ ಕಂಚಿನ ಕಂಠದಲ್ಲಿ ವಾಕ್ಸಮರದಲ್ಲಿ ತೊಡಗಿದ್ದ ಅವರು, ಅಂದು ಒಬ್ಬ ನುರಿತ ಚರ್ಚಾಪಟುವಿನಂತಷ್ಟೇ ನನಗೆ ಗೋಚರಿಸಿದ್ದರು. ಅಲ್ಲೇ ನನಗೆ ಆಗ ಹಿರಿಯ ಸಮಾಜವಾದಿಗಳೆನಿಸಿದ್ದ ರಾಚಪ್ಪ ಬೆಟ್ಸೂರ್, ರಾಚಪ್ಪ ಹಡಪದ್, ಕಡಿದಾಳು ಶಾಮಣ್ಣ, ಕೆ.ಎಂ. ಶಂಕರಪ್ಪರಿಂದ ಹಿಡಿದು ಆಗ ತಾನೇ ಸಮಾಜವಾದಿ ಚಳುವಳಿಗೆ ಕಣ್ಣು ಬಿಡುತ್ತಿದ್ದ ರವಿ ವರ್ಮಕುಮಾರ್, ಮಂಜುನಾಥ ದತ್ತ, ವೆಂಕಟೇಶ ಮೂರ್ತಿ, ರಾಜೇಗೌಡ ಮುಂತಾದವರ ಪರಿಚಯವಾದದ್ದು. ಆಗ ಉದ್ಯೋಗ ನಿಮಿತ್ತ ದೆಹಲಿಯಲ್ಲಿ ವಾಸವಿದ್ದ ಕಾರಣದಿಂದಾಗಿ ಉತ್ತರ ಭಾರತದ ಮಣ್ಣಿನ ವಾಸನೆಯ ದಟ್ಟ ದರಿದ್ರಾವಸ್ಥೆಯ ಸಮಾಜವಾದಿಗಳನ್ನಷ್ಟೇ ಕಂಡಿದ್ದ ನನಗೆ, ಕರ್ನಾಟಕದ ಈ ಮಧ್ಯಮ ವರ್ಗದ ನಾಜೂಕಿನ ಸಮಾಜವಾದಿಗಳನ್ನು ಕಂಡು ಸ್ವಲ್ಪ ಆಶ್ಚರ್ಯವೂ, ಸ್ವಲ್ಪ ಕುತೂಹಲವೂ ಉಂಟಾಯಿತು. ಮುಂದೆ ನನಗೆ ರಾಮದಾಸ್ ಈ ಮಧ್ಯಮ ವರ್ಗದ ಸಮಾಜವಾದಿಗಳ ವಿಶಿಷ್ಟ ಮಾದರಿಯಂತೆಯೇ ಕಾಣಲಾರಂಭಿಸಿದ್ದರೆ, ಅವರ ಈ ಮೊದಲ ದರ್ಶನ ಸಂದರ್ಭವೇ ಕಾರಣವಾಗಿರಬಹುದು.
ರಾಮದಾಸ್ ಅವರನ್ನು ನಾನು ಮೊದಲ ಬಾರಿಗೆ ಹತ್ತಿರದಿಂದ ಕಂಡದ್ದು, 1978ರಲ್ಲಿ ಹಾಸನದಲ್ಲಿ ಏರ್ಪಡಿಸಲಾಗಿದ್ದ 'ತರುಣ ಲೋಹಿಯಾವಾದಿಗಳ ಸಮ್ಮೇಳನ'ದಲ್ಲಿ. ಕಿಷನ್ ಪಟ್ನಾಯಕ್, ಪ್ರೊ|| ನಂಜುಂಡಸ್ವಾಮಿ, ತೇಜಸ್ವಿಯವರು ಹಾಜರಿದ್ದ ಆ ಸಮ್ಮೇಳನದಲ್ಲಿ ಸಮಾಜವಾದಿ ತತ್ವವನ್ನು ಸಾರಸಂಗ್ರಹವಾಗಿ ಹೀರಿಕೊಂಡಂತೆ, ಕಟು ಬದ್ಧತೆಯಿಂದ ನಿಷ್ಠುರವಾಗಿ ಮಾತನಾಡಿ ನನ್ನ ಗಮನ ಸೆಳೆದವರೆಂದರೆ ಈ ಕೆ. ರಾಮದಾಸರೇ. ಅಲ್ಲದೆ, ಸಮಾಜವಾದಿ ಯುವಜನ ಸಭಾವನ್ನು ಪುನರುಜ್ಜೀವನಗೊಳಿಸಲು ಅಲ್ಲಿ ಸೇರಿದ್ದ ಪ್ರತಿಯೊಬ್ಬರೂ ಪ್ರತಿ ತಿಂಗಳು ತಮ್ಮ ಮಾಸಿಕ ಆದಾಯದ ಶೇ.5ರಷ್ಟನ್ನು ಅದರ ಹೊಸ ಸಂಚಾಲಕರಿಗೆ ಕಳಿಸಿಕೊಡಬೇಕೆಂಬ ತೀರ್ಮಾನಕ್ಕೆ ಬದ್ಧರಾದವರು ರಾಮದಾಸ್ ಮತ್ತು ನಾನು ಮಾತ್ರ ಆಗಿದ್ದೆವು! ಅಂದಿನಿಂದ ಆರಂಭವಾದ ನಮ್ಮ ಪರಸ್ಪರ ಗೌರವದ ಗೆಳೆತನ ಹಲವು ಬಾರಿ ವೈಯುಕ್ತಿಕ ಭಿನ್ನಾಭಿಪ್ರಾಯಗಳಿಂದುಂಟಾದ ಘರ್ಷಣೆಗಳ ಕಹಿಯ ಹೊರತಾಗಿಯೂ, ಅವರ ಸಾವಿನ ದಿನದವರೆಗೂ ನಿರಂತರವಾಗಿ ಮುಂದುವರಿದುಕೊಂಡು ಬರಲು ಸಾಧ್ಯವಾದದ್ದು, ಮತ್ತೆ ಅವರ ಆಳದ ಸಮಾಜವಾದಿ ಬದ್ಧತೆಯಿಂದಾಗಿ.
ರಾಷ್ಟ್ರ ಮಟ್ಟದಲ್ಲಿ ಡಾ|| ರಾಮಮನೋಹರ ಲೋಹಿಯಾ ಹಾಗೂ ರಾಜ್ಯ ಮಟ್ಟದಲ್ಲಿ ಶಾಂತವೇರಿ ಗೋಪಾಲ ಗೌಡರ ನೇತೃತ್ವದಲ್ಲಿ ರೂಪುಗೊಂಡಿದ್ದ ಸಮಾಜವಾದಿ ಚಳುವಳಿಯಿಂದ ಪ್ರಭಾವಿತರಾಗಿದ್ದ ರಾಮದಾಸ್, ಈ ಇಬ್ಬರು ನಾಯಕರ ಅಕಾಲಿಕ ಮರಣದಿಂದಾಗಿ ಆ ಚಳುವಳಿ ದಿಕ್ಕು ತಪ್ಪಿದಾಗ, ರಾಜ್ಯ ಮಟ್ಟದಲ್ಲಿ ಪಕ್ಷಾತೀತ ಸಮಾಜವಾದಿ ಚಳುವಳಿಯನ್ನು ಸಂಘಟಿಸಿದವರಲ್ಲಿ ಪ್ರಮುಖರು. ಮುಖ್ಯವಾಗಿ, ಪ್ರೊ|| ನಂಜುಂಡಸ್ವಾಮಿ, ತೇಜಸ್ವಿ, ಕಡಿದಾಳು ಶಾಮಣ್ಣ ಹಾಗೂ ದೇವನೂರ ಮಹಾದೇವ ಅವರೊಂದಿಗೆ, ಹಿರಿಯ ಸಮಾಜವಾದಿ ಕಿಷನ್ ಪಟ್ನಾಯಕರ ಮಾರ್ಗದರ್ಶನದಲ್ಲಿ 'ಸಮಾಜವಾದಿ ಯುವಜನಸಭಾ'ವನ್ನು ರಾಜ್ಯಾದ್ಯಂತ ಪ್ರಭುತ್ವದ ಅನ್ಯಾಯಗಳ ವಿರುದ್ಧ ಧ್ವನಿಯೆತ್ತುವ ವೇದಿಕೆಯನ್ನಾಗಿ ರೂಪಿಸಿದ ಅವರು, ಅದರ ಪ್ರಮುಖ ವಕ್ತಾರರೂ ಆದರು.
ಎಪ್ಪತ್ತರ ದಶಕದಲ್ಲಿ ರಾಜ್ಯಾದ್ಯಂತ ಆರಂಭವಾದ ಜಾತಿ ವಿರೋಧಿ ಆಲೋಚನಾ ಲಹರಿಗೂ, ಅಂತರ್ಜಾತಿ ವಿವಾಹಗಳ ಚಳುವಳಿಗೂ ಪ್ರೇರಣೆ ನೀಡಿದ ಜಾತಿ ವಿನಾಶ ಸಮ್ಮೇಳನ, 'ನವ್ಯ'ದ ಹೆಸರಿನಲ್ಲಿ ಸಾಮಾಜಿಕವಾಗಿ ಸಂಕುಚಿತಗೊಳ್ಳುತ್ತಿದ್ದ ಕನ್ನಡ ಸಾಹಿತ್ಯಕ್ಕೆ ಹೊಸ ದಿಕ್ಕು ನೀಡಿದ ಅಖಿಲ ಕರ್ನಾಟಕ ಕಲಾವಿದರ ಹಾಗೂ ಬರಹಗಾರರ ಒಕ್ಕೂಟ, ನಂತರ ಜೆ.ಪಿ. ನೀಡಿದ 'ಸಂಪೂರ್ಣ ಕ್ರಾಂತಿ'ಯ ಕರೆಗೆ ಬೆಂಬಲವಾಗಿ ಕರ್ನಾಟಕದಲ್ಲಿ ಆರಂಭವಾದ 'ನವನಿರ್ಮಾಣ' ಚಳುವಳಿ; ಈ ಚಳುವಳಿ ಹಳಿ ತಪ್ಪಿದಾಗ ರೂಪುಗೊಂಡ ದಲಿತ ಹಾಗೂ ರೈತ ಚಳುವಳಿ; ತದನಂತರದ 'ಲಂಕೇಶ್ ಪತ್ರಿಕೆ'ಯ ಆರಂಭ, ಗೋಕಾಕ್ ಚಳುವಳಿ, 'ಪ್ರಗತಿರಂಗ'-ಹೀಗೆ ಕಳೆದ ನಲವತ್ತು ವರ್ಷಗಳಲ್ಲಿ ಕರ್ನಾಟಕ ಕಂಡ ಎಲ್ಲ ಸಾಮಾಜಿಕ-ಸಾಂಸ್ಕೃತಿಕ ವಿದ್ಯಮಾನ-ಚಳುವಳಿಗಳ ಮುಂಚೂಣಿಯಲ್ಲಿರುತ್ತಿದ್ದ ರಾಮದಾಸ್, ತಾವು ನೆಲೆಸಿದ್ದ ಮೈಸೂರಿನ ಸಾಮಾಜಿಕ ವಾತಾವರಣವನ್ನು ಹದಗೆಡಿಸುತ್ತಿದ್ದ ವಿಶ್ವವಿದ್ಯಾಲಯದ ರಾಜಕಾರಣ, ಮತೀಯವಾದಿಗಳ ಹುನ್ನಾರ, ಪ್ರತಿಷ್ಠಿತರ ದಬ್ಬಾಳಿಕೆಗಳ ವಿರುದ್ಧವೂ ಬೀದಿಗಿಳಿಯುತ್ತಿದ್ದ ಸ್ಥಳೀಯ ಹೋರಾಟಗಾರರೂ ಆಗಿದ್ದರು.
ಮಲೆನಾಡಿನ ಅಜ್ಞಾತ ಮೂಲೆಯೊಂದರ ಅಜ್ಞಾತ ಜಾತಿಗೆ ಸೇರಿದ್ದ ರಾಮದಾಸ್ ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡು, ನರ್ಸ್ ಉದ್ಯೋಗದಲ್ಲಿದ್ದ ತಾಯಿ ಮಂಜಮ್ಮನವರ ಹಠದಿಂದಾಗಿ ಬಡತನದ ಸಂಕಷ್ಟಗಳ ಮಧ್ಯೆಯೂ ಅಧ್ಯಯನಕ್ಕಾಗಿ ಮೈಸೂರಿನವರೆಗೆ ಬಂದವರು ಮತ್ತು ಅಲ್ಲೇ ಉದ್ಯೋಗ ಪಡೆದು ನೆಲೆಸಿದವರು. ತಮ್ಮ ಬಾಲ್ಯದಲ್ಲೇ ಲೋಹಿಯಾ ದರ್ಶನ ಮಾಡಿ, ಸಮಾಜವಾದಿ ಚಳುವಳಿಯ ಪ್ರಭಾವಕ್ಕೊಳಗಾಗಿದ್ದ ರಾಮದಾಸ್ ಅದು ಕಲಿಸಿಕೊಟ್ಟ ಸ್ವಾಭಿಮಾನ ಹಾಗೂ ದಿಟ್ಟತನಗಳ ಮೂಲಕ ಬದುಕು ಕಟ್ಟಿಕೊಂಡವರು. ನಮ್ಮ ಪ್ರಜಾಪ್ರಭುತ್ವದ ವೈಫಲ್ಯಗಳ ಬಗ್ಗೆ ಯಾರೇ ಏನೇ ಹೇಳಲಿ, ಅದು ರಾಮದಾಸರಂತಹ ಅಲಕ್ಷಿತ ಸಮುದಾಯಗಳ ಪ್ರತಿನಿಧಿಗಳಿಗೆ ಅವಕಾಶ ಹಾಗೂ ಆತ್ಮವಿಶ್ವಾಸಗಳ ಎದೆ ಹಾಲು ನೀಡಿ ಪೊರೆದ ಕೀರ್ತಿಗಂತೂ ಭಾಜನವಾಗಿದೆ. ಹಾಗಾಗಿಯೇ ರಾಮದಾಸರು ಪ್ರಜಾಪ್ರಭುತ್ವದ ಯಾವುದೇ ಮೌಲ್ಯಕ್ಕೆ ಧಕ್ಕೆ ಒದಗಿದರೂ, ಅದು ಸಾವು ಬದುಕುಗಳ ಪ್ರಶ್ನೆಯೆಂಬಷ್ಟು ತೀವ್ರವಾಗಿ ಪ್ರತಿಭಟನೆಗೆ ಸಜ್ಜಾಗುತ್ತಿದ್ದರು.
ಕುವೆಂಪುರಿಂದ ಹಿಡಿದು ದೇವನೂರು ಮಹದೇವ ಅವರವರೆಗೆ ನಮ್ಮ ಕಾಲದ ಅತ್ಯುತ್ತಮ ಮನಸ್ಸುಗಳೊಂದಿಗೆ ತಮ್ಮ ವಿಶಿಷ್ಟ ನಿಷ್ಠುರತೆಯೊಂದಿಗೆ ಸಂವಾದ ಮಾಡಿದ ರಾಮದಾಸ್, ಒಮ್ಮೊಮ್ಮೆ ತಮ್ಮ ವೈಚಾರಿಕ ಕಟಿ ಬದ್ಧತೆಗೆ ತಾವೇ ಮಾರು ಹೋಗಿ ಇತರ ಸಾಮಾನ್ಯರ ಮೇಲೆ ಅನಗತ್ಯವಾಗಿ ಹರಿಹಾಯುತ್ತಿದ್ದುದೂ ಉಂಟು! ಲಂಕೇಶರ ಪತ್ರಿಕೋದ್ಯಮದ ಆರಂಭದ ಅತ್ಯುತ್ತಮ ವರ್ಷಗಳಲ್ಲಿ ಅವರ ಆತ್ಮೀಯ ಸಖನಾದ ರಾಮದಾಸ್, ಆ ಪತ್ರಿಕೋದ್ಯಮದ ಅವನತಿಯ ಕೊನೆಯ ವರ್ಷಗಳಲ್ಲೂ ಬರಿ ಸಖನಾಗಿಯೇ ಮುಂದುವರಿದು ಆಶ್ಚರ್ಯ ಹುಟ್ಟಿಸಿದ್ದರು. ವೈಯುಕ್ತಿಕ ನೆಲೆಯಲ್ಲಿ ಇಂತಹ ವೈರುಧ್ಯಗಳಿಗೆ ಆಗಾಗ್ಗೆ ಬಲಿಯಾಗುತ್ತಿದ್ದ ಅವರು, ಅದರಿಂದಾಗಿಯೋ ಏನೋ ಸದಾ ಆಂತರಿಕವಾಗಿ ಅಶಾಂತರಾಗಿ ಚಡಪಡಿಕೆಯಲ್ಲಿರುತ್ತಿದ್ದರು. ವಿಚಾರವಾದ ಹಾಗೂ ಸಮಾಜವಾದಗಳ ಕಲಸುಮೇಲೋಗರದ ಚಡಪಡಿಕೆಯದು.
ಅನ್ಯಾಯದ ವಿರುದ್ಧ ಪ್ರತಿಭಟಿಸದವನು ಅನ್ಯಾಯದಲ್ಲಿ ಪಾಲುದಾರನೇ ಎಂಬ ಲೋಹಿಯಾ ಅವರ ಮಾತಿನಲ್ಲಿ ಅಚಲ ನಂಬಿಕೆಯಿಟ್ಟಿದ್ದ ರಾಮದಾಸ್, ತಮ್ಮ ಬದುಕಿನುದ್ದಕ್ಕೂ ತಮ್ಮ ಸುತ್ತಮುತ್ತ ಯಾವುದೇ ಅನ್ಯಾಯ ನಡೆಯಲಿ, ಅಲ್ಲಿ ಹಾಜರಿರುತ್ತಿದ್ದರು. ಒಮ್ಮೊಮ್ಮೆ ಅವರ ಪ್ರತಿಭಟನೆಯ ತೀವ್ರತೆ ಔಚಿತ್ಯ ಮೀರಿ ಪ್ರಕಟವಾಗುತ್ತಿದ್ದ ಸಂದರ್ಭಗಳಲ್ಲಿ ಅವರ ಗೆಳೆಯರಿಗೆ ಮುಜುಗರವಾಗುತ್ತಿದ್ದುದೂ ಉಂಟು. ಇದರ ಬಗ್ಗೆ ಕ್ರುದ್ಧರಾಗುತ್ತಿದ್ದ ರಾಮದಾಸ್ ತಮ್ಮ ಆಪ್ತ ಗೆಳೆಯರ ಮೇಲೂ ಯದ್ವಾ ತದ್ವಾ ಹರಿಹಾಯಲೂ ಹಿಂಜರಿಯುತ್ತಿರಲಿಲ್ಲ. ಹೀಗಾಗಿ ಕ್ರಮೇಣ ಗೆಳೆಯರಿಂದ ದೂರವಾಗುತ್ತಾ ಹೋದ ಅವರು, ತಮ್ಮ ಕೊನೆಯ ವರ್ಷಗಳಲ್ಲಿ ಒಂಟಿತನದ ಹತಾಶೆಯಲ್ಲಿ ದಿಕ್ಕೆಟ್ಟಂತಿದ್ದರು. ಆದರೆ ಇದೇ ಹೊತ್ತಿಗೆ ಕಾಣಿಸಿಕೊಂಡ ಪತ್ನಿ ನಿರ್ಮಲಾ ಅವರ ತೀವ್ರ ಅನಾರೋಗ್ಯ ಅವರಿಗೆ ಸಹನೆ-ಸಂಯಮಗಳನ್ನು ಕಲಿಸತೊಡಗಿತ್ತು. ಗೆಳೆಯರು ಮತ್ತೆ ಬರಲಾರಂಬಿಸಿದ್ದರು. ತಮ್ಮ ಕೊನೆಯ ದಿನಗಳಲ್ಲಿ ಕ್ರೋಧದ ಕಹಿ ಕಳೆದುಕೊಂಡಂತೆ ಸದಾ ಪ್ರೀತಿ ಸೂಸುತ್ತಿದ್ದ ರಾಮದಾಸ್ ಬದುಕಿನ ಮೂಲಪಾಠ ಕಲಿತು ಲೋಕ ತ್ಯಜಿಸಿದ ಅದೃಷ್ಟವಂತ.
. ರಾಮದಾಸರನ್ನು ಅವರ ಗೆಳೆಯರು ಸಮಾಜವಾದಿ, ವಿಚಾರವಾದಿ, ನಿಷ್ಠುರವಾದಿ, ಹಠವಾದಿ, ಜಗಳಗಂಟ ಎಂದೆಲ್ಲ ಗುರುತಿಸಿದ್ದುಂಟು. ಆದರೆ ಇವೆಲ್ಲ ಸೇರಿದಂತೆ, ಅವರ ವ್ಯಕ್ತಿತ್ವಕ್ಕೊಪ್ಪುವ ಅಭಿದಾನವೆಂದರೆ, a permanent non-conformist(ನಿರಂತರ ಬಂಡುಕೋರ). ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿರುವ ಮತೀಯತೆ, ಜಾತೀಯತೆ, ಮೌಢ್ಯಾಚರಣೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಯುವಜನರ ನಿಷ್ಕ್ರಿಯತೆಗಳ ಬಗ್ಗೆ ಚಿಂತಿತರಾಗಿದ್ದ ರಾಮದಾಸ್, ಕಳೆದ ಶತಮಾನದಲ್ಲಿ ವಿದ್ಯೆ ಪಡೆದು ಆತ್ಮವಿಶ್ವಾಸ ಗಳಿಸಿಕೊಂಡ ಅನೇಕ ಅನಾಮಿಕ ಅಲ್ಪಸಂಖ್ಯಾತ ಜಾತಿಗಳ ಧೀರ ಪ್ರತಿನಿಧಿಯಾಗಿ ಇದನ್ನೆಲ್ಲ ವಿಷಾದದಿಂದ ನೋಡುತ್ತಾ, ಸರಿಮಾಡಲಾಗದ ಸಂಕಟದಲ್ಲಿ ನಮ್ಮನ್ನಗಲಿ ಹೋಗಿದ್ದಾರೆ. ತಮ್ಮ ವಿದ್ಯಾ ಗುರು ಜಿ.ಎಸ್.ಎಸ್. ಅವರ ಅಭಿನಂದನ ಗ್ರಂಥಕ್ಕೆ ಬರೆದ ಲೇಖನವೊಂದರಲ್ಲಿ ಅವರು, ತಮ್ಮ ಗುರುಗಳು ಕತ್ತಲಲ್ಲಿ ದೀಪ ಹಿಡಿದು ಹೊರಟಿದ್ದರೆ, ತಾವು ಪಂಜು ಹಿಡಿದು ಹೊರಟಿರುವುದಾಗಿ ತಮ್ಮನ್ನು ತಾವೇ ವರ್ಣಿಸಿಕೊಂಡಿದ್ದರು. ರಾಮದಾಸ್ರಿಗೆ ಇದಕ್ಕಿಂತ ಸರಿಯಾದ ವರ್ಣನೆ ಮತ್ತೊಂದಿರಲಾರದು!
ಆ ಪಂಜು ಇಂದು ಆರಿ ಹೋಗಿದೆ. ಇನ್ನೆಲ್ಲಿ ಅಂಥ ಆ ತಾಪ, ಆ ಬೆಳಕು?