ರಾಮನವಮಿಯ ದಿನ ಬೇರೆಯದೊಂದು ಸ್ಮರಣೆ
ಕಳೆದ ಭಾನುವಾರ ರಾಮನವಮಿ ಇತ್ತು. ರಾಮ ಹುಟ್ಟಿದ ದಿನ ದಶರಥನ ಅರಮನೆಯ ಅಡುಗೆಮನೆಯಲ್ಲಿದ್ದ ದಿನಸಿ ಎಲ್ಲ ಖಾಲಿಯಾಗಿ, ಕಡೆಗೆ ಬಂದವರಿಗೆಲ್ಲ ಪಾನಕ, ನೀರುಮಜ್ಜಿಗೆ ಕೊಟ್ಟು ಕಳಿಸಿದ್ದ ಕಥೆ ಗೊತ್ತೇ ಇದೆ ಎಲ್ಲರಿಗೂ. ಅದಕ್ಕೇ ತಾನೇ, ನಾವೆಲ್ಲ ರಾಮನವಮಿಯಂದು ರಾಮನಾಮ ಸ್ಮರಣೆಯ ಜೊತೆ, ಪಾನಕ, ಮಜ್ಜಿಗೆ, ಕೋಸುಂಬರಿ ಗೊಜ್ಜವಲಕ್ಕಿ ಸೇವನೆಯ ಕಾರ್ಯಕ್ರಮವನ್ನೇ ಜೋರಾಗಿ ಇಟ್ಟುಕೊಳ್ಳುವುದು?
ರಾಮನವಮಿ ಎಂದರೆ ಅದರ ಜೊತೆಗೇ ನನಗೆ ರಾಮನವಮಿ ಸಂಗೀತೋತ್ಸವಗಳದ್ದೇ ನೆನಪು. ನನ್ನ ಶಾಲಾ-ಕಾಲೇಜು ದಿನಗಳಲ್ಲಿ ರಾಮನವಮಿ ಯಾಕಾದರೂ ಈ ಪರೀಕ್ಷೆಯ ಸಮಯದಲ್ಲಿ ಬರುತ್ತೋ ಅಂತ ಬೈದುಕೊಳ್ಳುತ್ತಿದ್ದೆ. ಯಾವಾಗಲೂ, ಒಳ್ಳೇ ಸಂಗೀತಗಾರರು ಬರುತ್ತಿದ್ದರೆ, ಅದರ ಮರುದಿನವೇ ಪರೀಕ್ಷೆ ಇದ್ದಿರಬೇಕೇ? ಹಾಗಿದ್ದರೂ, ಆದಷ್ಟೂ ತಪ್ಪಿಸದೇ ಹೋಗುತ್ತಿದ್ದವನು ನಾನು. ಅಂದಿನ ದಿನಗಳು ಚೆನ್ನಾಗಿದ್ದವು. ನಮ್ಮ ಊರಿನಲ್ಲಿ ಎಲ್ಲಿ ಸಂಗೀತ ಕಾರ್ಯಕ್ರಮ ನಡೆದರೂ, ಹತ್ತು ನಿಮಿಷಗಳೊಳಗೆ ಅಲ್ಲಿ ಹೋಗಿ ಸೇರಬಹುದಿತ್ತು. ನಾನು ಕೇಳಿದ ಹೆಚ್ಚಿನ ಕಚೇರಿಗಳು ಹೀಗೆ ರಾಮೋತ್ಸವದಲ್ಲಿ (ಅಥವಾ ಗಣೇಶೋತ್ಸವದಲ್ಲಿ) ಕೇಳಿದ್ದವೇ. ಆದರೆ, ಈಗ ಬೆಂಗಳೂರಿನಂತಹ ಊರುಗಳಲ್ಲಂತೂ ಇಂತಹದ್ದೇ ಕಡೆ ನಡೆಯುವ ಕಾರ್ಯಕ್ರಮಕ್ಕೆ ಹೋಗಬೇಕೆಂದರೆ, ಅರ್ಧ ದಿನವೆಲ್ಲ ರಸ್ತೆಯ ಮೇಲೇ ಇರಬಹುದಷ್ಟೆ. ಪುಣ್ಯಕ್ಕೆ ಎಲ್ಲಾ ಕಡೆ ಗುಡಿ ಗೋಪುರವಿದ್ದಲ್ಲೆಲ್ಲ ಒಂದಲ್ಲ ಒಂದು ಸಂಗೀತ ಕಾರ್ಯಕ್ರಮ ನಡೆಯುವುದರಿಂದ, ಆಸಕ್ತರಿಗೆ ಅಂತಹ ಖೋತಾ ಆಗಲಾರದು. ಆದರೂ, ಕೋಟೆ ಹೈಸ್ಕೂಲ್ ನಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಹೋಗಲು ಸಾಧ್ಯವಾದರೆ ಆ ಸೊಗಸೇ ಬೇರೆ.
ನಾನು ಬೆಂಗಳೂರಿನಲ್ಲಿದ್ದಾಗ ಇದ್ದ ಕಡೆಯೂ ಹತ್ತಿರದಲ್ಲೇ ಹಲವು ರಾಮನವಮಿ ಸಂಗೀತೋತ್ಸವಗಳಾಗುತ್ತಿದ್ದವು. ವೈಯಾಲಿಕಾವಲಿನ ಒಂದು ಚೌಕದಲ್ಲಂತೂ, ರಸ್ತೆಯ ನಡುವೇ ಶಾಮಿಯಾನಾ ಹಾಕಿ, ನಡುವೆ ಒಂದು ಕಟ್ಟೆ ಕಟ್ಟಿ ರಂಗ ಸಿದ್ಧವಾಗಿರುತ್ತಿತ್ತು. ಎಷ್ಟೋ ಪ್ರಸಿದ್ಧ ವಿದ್ವಾಂಸರನ್ನು ಅಲ್ಲಿ ಕೇಳಿದ್ದ ನೆನಪು ನನಗಿದೆ. ಅದೇ ಅಲ್ಲದೇ ಮಲ್ಲೇಶ್ವರದ ರಾಮಮಂದಿರವೊಂದರಲ್ಲೂ ಒಳ್ಳೇ ಕಾರ್ಯಕ್ರಮಗಳು ಇದ್ದೇ ಇರುತ್ತಿದ್ದವು. ಸ್ವಲ್ಪ ದೂರಕ್ಕೆ ಹೋದರೆ, ಶೇಷಾದ್ರಿಪುರದ ಹೈಸ್ಕೂಲಿನಲ್ಲಿ ನಡೆಯುವ ಸಂಗೀತೋತ್ಸವವಂತೂ ಬಹಳ ಹೆಸರಾದ್ದೇ. ಈಗ ಬೆಂಗಳೂರು ಆಗಿಗಿಂತ ಸಿಕ್ಕಾಪಟ್ಟೆ ಬೆಳೆದಿದೆ -- ಅಂತೆಯೇ ಇನ್ನೂ ಹತ್ತು ಹಲವು ಕಡೆ ಕಾರ್ಯಕ್ರಮಗಳಂತೂ ನಡೆಯುತ್ತವೆ. ನಿಮ್ಮ ಹತ್ತಿರದಲ್ಲಿ ನಡೆಯುವ ಸಂಗೀತೋತ್ಸವಕ್ಕೆ ಹೋಗಿ ಅನ್ನುವ ಸಲಹೆ ನನ್ನದು :೦)
ಇಲ್ಲಿ ರಾಮನವಮಿಯಂದು ಇನ್ನೊಂದರ ಹೊಸ ಹುಟ್ಟೂ ಆಯಿತು. ಸಿಲಿಕಾನ್ ಕಣಿವೆಯ ಕನ್ನಡಿಗರಲ್ಲಿ ಕೆಲವರು ಹುಮ್ಮಸ್ಸಿಗರು ಸೇರಿ, ಮಾತಿನ ಮಲ್ಲರ ಕೂಟವೊಂದನ್ನು ಆರಂಭಿಸಿದರು. ಟೋಸ್ಟ್ ಮಾಸ್ಟರ್ಸ್ ಛಾವಣಿಯಡಿ ಬರುವ ಈ ಹೊಸ ಕೂಟದ ಗೆಳೆಯರು ನಿಯಮಿತವಾಗಿ ಸೇರಿ, ಕನ್ನಡದಲ್ಲಿ ಉತ್ತಮ ಮಾತುಗಾರರಾಗುವ ಪಣತೊಟ್ಟು ನಿಂತಿದ್ದಾರೆ. ನನ್ನ ಅರಿವಿನ ಮಟ್ಟಿಗೆ, ಪೂರ್ತಿ ಕನ್ನಡದಲ್ಲೇ ನಡೆಯುವ ಮೊದಲ ಟೋಸ್ಟ್ ಮಾಸ್ಟರ್ಸ್ ಕ್ಲಬ್ ಇದಾಗಲಿದೆ. ಟೋಸ್ಟ್ ಮಾಸ್ಟರ್ಸ್ ಬಗ್ಗೆ ಹೆಚ್ಚಿಗೆ ತಿಳಿಯಬೇಕಾದರೆ, www.toastmasters.org ಗೆ ಹೋಗಿ ನೋಡಿ.
ಇನ್ನೂ ಈ ಮಾತಿನಮಲ್ಲರ ಚಾವಡಿಗೆ ರೂಪುರೇಷೆಗಳು ಸಿದ್ಧವಾಗುತ್ತಿವೆ. ಸಿಲಿಕಾನ್ ಕಣಿವೆಯ ಕನ್ನಡಿಗರು ಇದರ ಉಪಯೋಗ ಪಡೆಯುವರೆಂಬ ಆಸೆ ನಿಯೋಜಜರಿಗೆ ಇದೆ. ರಾಮನವಮಿಯ ದಿನದಲ್ಲಿ ನಡೆದ ಮೊದಲ ಕೂಟವು ’ರಘುನಂದನ’ರ ಮನೆಯಲ್ಲಿ ನಡೆದಿದ್ದು, ಭಾಷಣದವ ವಿಷಯ (ಮೊದಲ ಭಾಷಣ ನನ್ನದೇ!) ’ರಾಮ ಭಕ್ತಿ ಸಾಮ್ರಾಜ್ಯ’ ಅನ್ನುವುದು ಕಾಕತಾಳೀಯವಾಗಿದ್ದರೂ, ಎಲ್ಲರ ಗಮನಕ್ಕೆ ಬಂದ ಸಂಗತಿ.
-ಹಂಸಾನಂದಿ
Comments
ಉ: ರಾಮನವಮಿಯ ದಿನ ಬೇರೆಯದೊಂದು ಸ್ಮರಣೆ
In reply to ಉ: ರಾಮನವಮಿಯ ದಿನ ಬೇರೆಯದೊಂದು ಸ್ಮರಣೆ by kalpana
ಉ: ರಾಮನವಮಿಯ ದಿನ ಬೇರೆಯದೊಂದು ಸ್ಮರಣೆ
In reply to ಉ: ರಾಮನವಮಿಯ ದಿನ ಬೇರೆಯದೊಂದು ಸ್ಮರಣೆ by kalpana
ಉ: ರಾಮನವಮಿಯ ದಿನ ಬೇರೆಯದೊಂದು ಸ್ಮರಣೆ